ಜಾತಿ ಸಂಕೋಲೆ ಎಂಬ ಕಾಲಾಪಾನಿ!

Update: 2019-11-23 14:59 GMT

19ನೇ ಶತಮಾನಕ್ಕಿಂತ 2019ರಲ್ಲಿ ಭಾರತದ ಜಾತಿ ವ್ಯವಸ್ಥೆ ಮತ್ತಷ್ಟು, ಮಗದಷ್ಟು ಕಠಿಣವಾಗಿ, ಸಂಕೀರ್ಣವಾಗಿ ನಡೆಯುತ್ತಿದೆ. ಜಾತಿವ್ಯವಸ್ಥೆ ಮಹಾನ್ ಭಾರತವನ್ನು ನಿಧಾನವಾಗಿ ಇಬ್ಭಾಗ ಮಾಡುತ್ತಿದೆ. ಅಂದು ಕಾಲಾಪಾನಿ ಎನ್ನುವುದರ ಮೂಲಕ ಜಾತಿ ಭ್ರಷ್ಟತೆ ಅನುಭವಿಸಿದರೂ ಸಹ ಅದು ಒಂದು ಸಮಾನತೆಗೆ ಮತ್ತು ವಿಮೋಚನೆಯ ಮಾರ್ಗವಾಗಿತ್ತು. ಆದರೆ ಇಂದು ಹೆಚ್ಚಿನ ವಿದ್ಯಾವಂತ ಜನರು ಜಾತೀಯತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವಿಮಾನದ ಮೂಲಕ ಕ್ಷಣಮಾತ್ರದಲ್ಲಿ ಕಾಲಾಪಾನಿಯನ್ನು ಕಾಣದಂತೆ ದಾಟಿ ಜಾತಿಯ ಭೂತವನ್ನು ಬೇರೆ ಖಂಡಗಳಿಗೂ ಹರಡುತ್ತಿದ್ದಾರೆ!

ಕಾಲಾಪಾನಿ ಎಂಬ ಶಬ್ದವು ಬ್ರಿಟಿಷರಿಂದ ಜನಮಾನಸದಲ್ಲಿ ಉಳಿದು ಹೋಗಿರುವ ಕಠಿಣ ಪದ. ಅಂದು ಬ್ರಿಟಿಷರು ಸ್ವಾತಂತ್ರ ಹೋರಾಟಗಾರರನ್ನು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸ್ಥಾಪಿಸಿದ್ದ ಸೆಲ್ಯೂಲರ್ ಜೈಲಿಗೆ ಕಳಿಸುತ್ತಿದ್ದರು. ಇದನ್ನು ಅಂದಿನ ಭಾಷೆಯಲ್ಲಿ ಕಾಲಾಪಾನಿ ಶಿಕ್ಷೆ ಎಂದು ಜನಪ್ರಿಯವಾಗಿತ್ತು. ಆದರೆ ಇಲ್ಲಿಗೆ ತಲುಪಲು ಹಡಗಿನಲ್ಲಿ ಸಮುದ್ರವನ್ನು ದಾಟಬೇಕಾಗಿತ್ತು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಸಮುದ್ರವನ್ನು ದಾಟುವುದು ಎಂದರೆ ಅದು ಒಂದು ರೀತಿಯ ಜಾತಿ ಭ್ರಷ್ಟತೆ. ಅಂತಹವರು ಅವರ ಮೂಲ ಜಾತಿಯಿಂದ ಹೊರಗುಳಿಯಬೇಕಾಗಿತ್ತು ಮತ್ತು ಸಾಮಾಜಿಕವಾಗಿ ಹೊರಗುಳಿಯುವಂತೆ ಮಾಡುತ್ತಿತ್ತು. ಹಾಗಾಗಿ ಅಂದಿನ ಸಮಯದಲ್ಲಿ ಹಿಂದೂ ಸ್ವಾತಂತ್ರ ಹೋರಾಟಗಾರರಿಗೆ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ಮುಖ್ಯವಾಗಿ ಸಮುದ್ರ ಪ್ರಯಾಣವನ್ನು ಕೈಗೊಳ್ಳುವುದರ ಮೂಲಕ ಜಾತಿ ಹೀನರಾಗುತ್ತಿದ್ದೇವೆ ಎಂಬ ಮಾನಸಿಕ ಹಿಂಸೆ ಅತಿಯಾಗಿತ್ತು.

ಸುಮಾರು ಕ್ರಿ.ಶ. 1830 ಆಸುಪಾಸಿನಲ್ಲಿ ಲಕ್ಷಾಂತರ ಭಾರತೀಯರು ಇದೆ ಕಾಲಾಪಾನಿ ಅಂದರೆ ಅಂಡಮಾನ್ ಸಮುದ್ರದ (ಹಿಂದೂ ಮಹಾಸಾಗರ) ಮೂಲಕ ಹಾದು ಕೃಷಿ, ಸಕ್ಕರೆ, ಗಣಿ ಮತ್ತು ರೈಲ್ವೆ ಕ್ಷೇತ್ರಗಳಲ್ಲಿ ಆಫ್ರಿಕಾ ಮತ್ತು ಯುರೋಪಿನ ರಾಷ್ಟ್ರಗಳಲ್ಲಿ ಕೆಲಸ ಮಾಡಲು ಮಹಾನ್ ವಲಸೆಹೋದರು ಎನ್ನುತ್ತದೆ ಇತಿಹಾಸ. ಆಫ್ರಿಕಾದಲ್ಲಿ ಜೀತ ವ್ಯವಸ್ಥೆ 1830 ರದ್ದಾದ ನಂತರ ಈ ರೀತಿಯ ವಲಸೆ ಹೋದ ಭಾರತೀಯರಿಗೆ ಅಲ್ಲಿ ಕೆಲಸದ ಅವಕಾಶಗಳು ತುಂಬ ಹೆಚ್ಚಾಗಿತ್ತು. ಅಂದಿಗೆ ಸುಮಾರು 12,50,000 ಭಾರತೀಯರನ್ನು ಫಿಜಿ, ಮಾರಿಷಸ್, ವೆಸ್ಟ್ ಇಂಡೀಸ್, ಡಚ್ ಮತ್ತು ಫ್ರೆಂಚ್ ಕಾಲನಿಗಳಲ್ಲಿ ಕೆಲಸಮಾಡಲು ಕರೆದೊಯ್ಯಲಾಗಿತ್ತು ಎನ್ನುತ್ತದೆ ಕೆಲವು ಐತಿಹಾಸಿಕ ದಾಖಲೆಗಳು. ಮುಂದೆ ಕ್ರಿ.ಶ. 1890ರಲ್ಲಿ ದಕ್ಷಿಣ ಆಫ್ರಿಕಾದ ನಟಾಲ್‌ನಲ್ಲಿ ಇಂತಹ ಭಾರತೀಯ ಕೂಲಿ ಕಾರ್ಮಿಕರ ಪರವಾಗಿ ಗಾಂಧೀಜಿ ಅಂದು ಸತ್ಯಾಗ್ರಹ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಒಂದು ಮಹಾನ್ ವಲಸೆಯನ್ನು ಇಂದು ನಾವು ಉಳಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಅಂದು ಭಾರತದ ಲಕ್ಷಾಂತರ ಜನರು ಹಸಿವು, ಸಾಲ, ಬಡತನ, ಜಾತಿ ತಾರತಮ್ಯ, ಸಾಮಾಜಿಕ ಹೊರಗುಳಿಯುವಿಕೆ, ನಿರುದ್ಯೋಗ, ಕಾಯಿಲೆಗಳು ಬರ, ಇತ್ಯಾದಿ ಕಾರಣಗಳಿಂದ ನೊಂದು-ಬೆಂದು ತಾವು ಹುಟ್ಟಿ ಬೆಳೆದ ನೆಲವನ್ನು, ಮಕ್ಕಳನ್ನು, ಸಂಬಂಧಿಕರನ್ನು ಶಾಶ್ವತವಾಗಿ ಬಿಟ್ಟು ಕಾಣದ ಊರಿಗೆ ಪ್ರಯಾಣಿಸಲು ಸಿದ್ಧವಾಗಿ ನಿಂತಿದ್ದರು. ಅವರು ಮತ್ತೆ ಭಾರತಕ್ಕೆ ಬರುವ ಸಾಧ್ಯತೆ ತಿರಾ ಕಡಿಮೆ ಇತ್ತು. ಇಂತವರನ್ನು ಹುಡುಕಿ ಕರೆದೊಯ್ಯಲು ಅಂದು ಬ್ರಿಟಿಷ್ ಸರಕಾರವು ಕೆಲವು ಸ್ಥಳೀಯ ಏಜೆಂಟುಗಳನ್ನು ಸಹ ನೇಮಕ ಮಾಡಿತ್ತು.

ಈ ಏಜೆಂಟುಗಳು ಹಳ್ಳಿಹಳ್ಳಿಗೆ ಸುತ್ತಿ ಜನರನ್ನು (ಸ್ವ-ಇಚ್ಚೆ ಮತ್ತು ಬಲವಂತ) ಹಡಗಿನಲ್ಲಿ ಬೇರೆ ದೇಶಗಳಿಗೆ ಸಾಗಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಅವರನ್ನು ಅಕ್ಷರಸಹ ಕಿಡ್ನಾಪ್ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿ ಹಡಗಿನ ಮೂಲಕ ಸಾಗಿಸಲಾಗುತ್ತಿತ್ತು. ಹೆಚ್ಚಿನವರು ಬಿಹಾರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದರು. ಅಲ್ಲಿನವರಿಗೆ ನಾವು ಯಾವ ದೇಶಕ್ಕೆ ಹೋಗುತ್ತಿದ್ದೇವೆ? ಹೇಗೆ ಹೋಗುತ್ತಿದ್ದೇವೆ? ಎಂಬುದರ ಅರಿವಿರಲಿಲ್ಲ. ಅವರೆಲ್ಲರನ್ನು ಒಂದು ಹಡಗಿನಲ್ಲಿ ತುಂಬಿಸಿ ಅಂಡಮಾನ್ ಸಮುದ್ರ (ಕಾಲಾಪಾನಿ) ಮೂಲಕ ಕರೆದೊಯ್ಯಲಾಗುತ್ತಿತ್ತು. ಇಂತಹ ಹಡಗಿನಲ್ಲಿ ಮೇಲು-ಕೀಳು, ಮೇಲು ಜಾತಿ, ಕೀಳು ಜಾತಿ ಎಂಬ ಭಾವವೇ ಬರುತ್ತಿರಲಿಲ್ಲ. ಅಲ್ಲಿ ಎಲ್ಲರೂ ಒಂದಾಗಿದ್ದರು. ಬ್ರಾಹ್ಮಣರು ಮತ್ತು ಶೂದ್ರರು ಒಂದೇ ಹಡಗಿನಲ್ಲಿ ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದರು. ಓರ್ವ ಇತಿಹಾಸ ಪ್ರಸಿದ್ಧ ಲೇಖಕರು ಸಂದರ್ಭವನ್ನು ಧೋಣಿ ಬ್ರಾಹ್ಮಣರು ಎಂದು ಕರೆಯುತ್ತಾರೆ.

ಅಂದಿನ ಕಾಲದಲ್ಲಿ ಹಡಗಿನಲ್ಲಿ ಪ್ರಯಾಣ ಮಾಡುವುದರಿಂದ ತಮ್ಮ ಮೂಲ ಜಾತಿಯು ಭ್ರಷ್ಟ ವಾಗುವುದು ಎಂಬ ನಂಬಿಕೆ ಇದ್ದುದರಿಂದ ಪ್ರಯಾಣ ಮಾಡುವಾಗ ಜನರು ತಮ್ಮ ಮೂಲ ಜಾತಿಯನ್ನು ಒಬ್ಬರಿಗೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. ತಮಗೆ ಯಾರಾದರೂ ಪರಿಚಯಸ್ಥರು ಈ ಗುಂಪಿನಲ್ಲಿ ಇದ್ದಾರೋ ಇಲ್ಲವೋ ಎಂಬುದನ್ನು ಮನನ ಮಾಡಿಕೊಂಡು ನಂತರ ತಮ್ಮ ಮೂಲ ಜಾತಿ ಮತ್ತು ನಾಮವನ್ನು ಹೇಳುತ್ತಿದ್ದರು ಕೆಲವರು ಪ್ರಯಾಣದ ಉದ್ದಕ್ಕೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಆತ್ಮೀಯರಿಗೆ ಪರಿಚಯ ಸಿಗದಂತೆ ಮಾಡುತ್ತಿದ್ದರು ಎನ್ನುತ್ತಾರೆ ಇತಿಹಾಸಕಾರರು. ಈ ಕಾರಣದಿಂದ ಈ ಮೂರು ತಿಂಗಳ ಪ್ರಯಾಣದಲ್ಲಿ ಎಷ್ಟೋ ಹೊಸ ಹೊಸ ಬ್ರಾಹ್ಮಣ ಜಾತಿಗಳು ಮತ್ತು ಶೂದ್ರ ಜಾತಿಗಳು ಹಡಗಿನಲ್ಲಿ ಹುಟ್ಟಿಕೊಂಡವು ಎನ್ನಬಹುದು. ಇಲ್ಲಿ ಕೆಲವರು ರಾತ್ರೋರಾತ್ರಿ ಹೊಸದಾಗಿ ಬ್ರಾಹ್ಮಣರಾಗಿದ್ದರು ಇನ್ನು ಕೆಲವರು ರಾತ್ರೋರಾತ್ರಿ ಶೂದ್ರರಾಗಿದ್ದರು! ಹೀಗೆ ಬೇರೆ ದೇಶಗಳಿಗೆ ವಲಸೆ ಹೋದ ಕಾರ್ಮಿಕರ ಗುತ್ತಿಗೆ ಅವಧಿ ಐದು ವರ್ಷವಾಗಿತ್ತು. ಹೆಚ್ಚಿನ ಜನರು ತಮ್ಮ ಗುತ್ತಿಗೆ ಅವಧಿ ಮುಗಿದ ನಂತರ ಭಾರತಕ್ಕೆ ಹಿಂದಿರುಗಲು ಯತ್ನಿಸುತ್ತಿದ್ದರು. ಆದರೆ ಅದು ಸಾಧ್ಯವಾಗುತ್ತಿರಲಿಲ್ಲ. ಕೆಲವರಿಗೆ ಜಾತಿಯ ಕೂಪವಾಗಿದ್ದ ತಮ್ಮ ಹುಟ್ಟೂರು ಬೇಡವಾಗಿತ್ತು. ಇನ್ನು ಕೆಲವರಿಗೆ ಹೊಸ ಪ್ರದೇಶ ಹೊಸ ಜನರ ಸಂಸ್ಕೃತಿ ಆಚಾರ-ವಿಚಾರಗಳ ಹೊಂದಿಕೊಳ್ಳಲು ಕೊನೆಗೂ ಸಾಧ್ಯವಾಗಲಿಲ್ಲ. ಇನ್ನು ಕೆಲವರಿಗೆ ನಾವು ಮರಳಿ ಬಂದ ನಂತರ ತಮ್ಮನ್ನು ಸಂಬಂಧಿಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ. ಏಕೆಂದರೆ ಕಾಲಾಪಾನಿ ಅಥವಾ ಅಂಡಮಾನ್ ಸಮುದ್ರವನ್ನು ದಾಟಿರುವ ನಾವು ನಮ್ಮ ಮೂಲ ಜಾತಿಯಿಂದ ಹೊರಬಂದಂತೆ ಎಂದು ಭಾವಿಸಿದ್ದರು. ಧೈರ್ಯ ಮಾಡಿ ವಾಪಸ್ ಭಾರತಕ್ಕೆ ಬಂದಂತಹ ಕೆಲವು ಕಾರ್ಮಿಕರು ಇತರರಿಗೆ ಅಸ್ಪರಾಗಿದ್ದರು. ಏಕೆಂದರೆ ಅವರಿಗೆ ಅಂದಿನ ಜಾತಿ ಮತ್ತು ವರ್ಣ ಆಧಾರಿತ ಮಹಾನ್ ಭಾರತದಲ್ಲಿ ಪುನಃ ಪ್ರವೇಶ ಇರಲಿಲ್ಲ

. ಅಂದು ಒಂದೇ ಹಡಗಿನಲ್ಲಿ ಎಲ್ಲಾ ಜಾತಿಯವರು ವಲಸೆ ಹೋದಾಗ ಹಡಗಿನಲ್ಲಿ ಒಂದು ರೀತಿಯ ಸಾಮಾಜಿಕ ಸಮಾನತೆ/ಸಾಮಾಜಿಕ ಇಂಜಿನಿಯರಿಂಗ್ ಉಂಟಾಗಿತ್ತು.ಅಂದು ಈ ರೀತಿ ವಲಸೆ ಹೋದವರ ಸಂಬಂಧಿಕರು ಮತ್ತು ಮಕ್ಕಳು ಇಂದು ನಮ್ಮ ದೇಶದಲ್ಲಿ ಗಣನೀಯವಾಗಿ ಹೆಚ್ಚಾಗಿದ್ದಾರೆ. ಈಗ ಇವರದು ಅಸ್ಮಿತೆಯೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕಿಂತ ಮುಖ್ಯ ಸಮಸ್ಯೆ ಎಂದರೆ ಅಂದು ಈ ರೀತಿ ವಲಸೆ ಹೋದ ಲಕ್ಷಾಂತರ ಭಾರತೀಯ ಕಾರ್ಮಿಕರ ಕುರಿತು ಭಾರತ ಮತ್ತು ಆಫ್ರಿಕಾದ ಯಾವುದೇ ಬರಹಗಾರರು ದಾಖಲಿಸದೇ ಇರುವುದು. ಈ ಕಾರಣದಿಂದ ಅಂದಿನ ವಲಸೆಗಾರರ ಭಾವನೆ, ಪಡುತ್ತಿರುವ ಸಂಕಷ್ಟಗಳು, ನೋವು-ನಲಿವು, ಭವಿಷ್ಯದ ಕನಸುಗಳು, ತಮ್ಮ ಸಂಬಂಧಿಕರ ಬಗ್ಗೆ ವ್ಯಾಕುಲತೆ ಪ್ರೀತಿ, ಇವು ಯಾವು ಸಹ ಇತಿಹಾಸದಲ್ಲಿ ಕೊನೆಗೂ ದಾಖಲಾಗಲಿಲ್ಲ. ಇಂಥ ಪತ್ರಗಳ ಬಗ್ಗೆ ಇದೀಗ ಕೋಲ್ಕತಾ ಮತ್ತು ಲಂಡನ್‌ನಿನಲ್ಲಿ ಹೊಸ ಸಂಶೋಧನೆಗಳು ಆರಂಭವಾಗಿದೆ. ಇತಿಹಾಸ ತಜ್ಞರಿಗೆ ಸಿಕ್ಕಿರುವ ಪತ್ರಗಳನ್ನು ಇದೀಗ ವೆಜ್ಞಾನಿಕ ತಂತ್ರವನ್ನು ಬಳಸಿ ಭಾಷಾಂತರಿಸಲಾಗಿದೆ ಮತ್ತು ಡಿಜಿಟಲೀಕರಣ ಗೊಳಿಸಲಾಗುತ್ತಿದೆ.

ಸಿಕ್ಕಿರುವ ಕೆಲವು ಪತ್ರಗಳಲ್ಲಿ ತಾವು ಇನ್ನೆಂದಿಗೂ ಭಾರತವನ್ನು ಹೆಂಡತಿ ಮಕ್ಕಳನ್ನು ನೋಡುವುದಿಲ್ಲ ಎಂಬ ಭಯವನ್ನು ಪಟ್ಟಿದ್ದಾರೆ. ಇನ್ನು ಕೆಲವು ಪತ್ರಗಳಲ್ಲಿ ತಾವು ಭಾರತ ಬಿಟ್ಟು ಬರುವಾಗ ತಮಗಿದ್ದ ಆಸ್ತಿಪಾಸ್ತಿಗಳು ಸಂಬಂಧಿಕರು ಇತ್ಯಾದಿಗಳ ಕುರಿತು ಕೊನೆಯದಾಗಿ ಬರೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನವರು ತಮ್ಮ ಪತ್ರಗಳಲ್ಲಿ ತಾವು ಸಮುದ್ರವನ್ನು ದಾಟಿರುವುದರಿಂದ ಜಾತಿ ಭ್ರಷ್ಟ ಆಗಿರುವುದರಿಂದ ನಾವು ಭಾರತಕ್ಕೆ ಬಂದಲ್ಲಿ ಅದರಿಂದ ಹೊಸ ಸಮಸ್ಯೆಗಳು ಎದುರಾಗುತ್ತವೆ ಎಂದು ತಮ್ಮ ಸಂಬಂಧಿಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪತ್ರಗಳು ಬೇರೆ ದೇಶಗಳಿಂದ ಇಲ್ಲಿಗೆ ಬರುತ್ತಿತ್ತೆ ಹೊರತು ಇಲ್ಲಿಂದ ಸಂಬಂಧಿಕರು ಅವರಿಗೆ ಪುನಃ ಪತ್ರ ಬರೆಯುವ ಹಾಗಿರಲಿಲ್ಲ. ಹೆಚ್ಚಿನ ಜನರು ಹೊಸ ಹೆಸರನ್ನು ಇಟ್ಟುಕೊಂಡಿದ್ದರು. ಜಾತಿರಹಿತ ಸಮಾಜದಲ್ಲಿ ಖುಷಿಯಿಂದ ಬದುಕುವ ಆಸೆಯನ್ನು ಕಂಡಿದ್ದರು. ಆದರೆ ಆ ದೇಶಗಳಲ್ಲಿ ಇನ್ನೊಂದು ರೀತಿ ಸಮಸ್ಯೆಯನ್ನು ಇವರು ಅನುಭವಿಸಬೇಕಾಗಿತ್ತು ಎಂಬುದು ಅವರ ಪತ್ರಗಳಿಂದ ತಿಳಿದುಬರುತ್ತದೆ ಎನ್ನುತ್ತಾರೆ ಸಂಶೋಧಕರು.ಸಹ ಕಾರ್ಮಿಕರು ಒಂದೊಮ್ಮೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಬರಬೇಕಾದಲ್ಲಿ ಇಂತಿಷ್ಟು ಹಣವನ್ನು ಮಾಲಕರಿಗೆ ಕಟ್ಟಬೇಕಾಗಿತ್ತು. ಆದರೆ ಅಷ್ಟು ಹಣ ಕಾರ್ಮಿಕರ ಬಳಿ ಇರುತ್ತಿರಲಿಲ್ಲ. ಹಾಗಾಗಿ ಅವರು ಭಾರತಕ್ಕೆ ಪುನಃ ಮರಳಿ ಬರಲು ಕೊನೆಯವರೆಗೂ ಸಾಧ್ಯವಾಗಲಿಲ್ಲ. ಆದರೆ ವಲಸೆ ಹೋದವರು ತಮ್ಮ ಭಾವನೆಗಳನ್ನು ಆಗಾಗ್ಗೆ ಅಕ್ಷರಗಳ ರೂಪದಲ್ಲಿ ಭಾರತದಲ್ಲಿರುವ ಅವರ ಸಂಬಂಧಿಕರಿಗೆ ತಲುಪಿಸುತ್ತಿದ್ದರು.

ಇಂತಹ ಪತ್ರಗಳ ಸಂಶೋಧನೆಯಿಂದ ಅಂದಿನ ವಲಸಿಗರು ಮತ್ತು ಅವರ ಕುಟುಂಬಗಳ ಆರ್ಥಿಕ ಸಮಸ್ಯೆ, ಜಾತಿ ವ್ಯವಸ್ಥೆ, ಹೊರಗುಳಿಯುವಿಕೆ, ವಲಸೆಯ ಪರಿಸ್ಥಿತಿಗಳು, ಕೆಲಸ ಮತ್ತು ವೇತನ, ಸಾಮಾಜಿಕ ಸಂಬಂಧಗಳು, ರಾಜಕೀಯ ಮಾತೃ ದೇಶದೊಂದಿಗಿನ ಬಾಂಧವ್ಯದ ಇತ್ಯಾದಿ ಕುರಿತು ವ್ಯಾಖ್ಯಾನಿಸುವುದು ಮತ್ತು ಐತಿಹಾಸಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದ ಮತ್ತು ಒಳನೋಟಗಳನ್ನು ಪಡೆಯುವುದು ಹೊಸ ಸಂಶೋಧನೆಯ ಉದ್ದೇಶವಾಗಿದೆ. ಈ ಅಕ್ಷರಗಳಲ್ಲಿ ವ್ಯಕ್ತವಾಗಿರುವ ಆಕಾಂಕ್ಷೆಗಳು ಮತ್ತು ಭಾವನೆಗಳ ದೃಷ್ಟಿಕೋನ ಯಾರಿಗೂ ನಿಲುಕದಾಗಿತ್ತು. ಆದರೆ ಅಂದು ಈ ರೀತಿಯ ಪತ್ರಗಳು ಭಾರತದಲ್ಲಿನ ಅವರ ಸಂಬಂಧಿಕರಿಗೆ ತಲುಪುವುದನ್ನು ಉದ್ದೇಶಪೂರ್ವಕವಾಗಿ ಬ್ರಿಟಿಷ್ ಸರಕಾರ ತಡೆಯುತ್ತಿತ್ತು. ಮುಖ್ಯವಾಗಿ ಬ್ರಿಟಿಷ್ ಸರಕಾರಕ್ಕೆ ಈ ರೀತಿ ವಲಸೆ ಹೋದ ಕಾರ್ಮಿಕರು ತಮ್ಮನ್ನು ಬೇರೆ ದೇಶಗಳಲ್ಲಿ ನಡೆಸಿಕೊಳ್ಳುತ್ತಿರುವುದರ ಬಗ್ಗೆ ತಮ್ಮ ಸಂಬಂಧಿಕರಿಗೆ ಪತ್ರ ಬರೆದು ತಿಳಿಸಿ ಸ್ಥಳೀಯವಾಗಿ ಇವರು ಭಾರತದಲ್ಲಿ ದಂಗೆಗಳನ್ನು ಮಾಡಬಹುದು ಎಂಬ ಭಯ ಬ್ರಿಟಿಷರಿಗಿತ್ತು. ಹಾಗಾಗಿ ಇಂಥ ಪತ್ರಗಳನ್ನು ಅದು ವಿಳಾಸ ತಲುಪುವ ಮುಂಚಿತವಾಗಿ ಅದನ್ನು ಹರಿದು ಹಾಕಲಾಗುತ್ತಿತ್ತು ಎನ್ನುತ್ತದೆ ಇತಿಹಾಸ.ಈ ಕುರಿತಾಗಿ ಇದುವರೆಗೆ ಯಾವುದೇ ವಿದ್ವಾಂಸರು, ಇತಿಹಾಸ ತಜ್ಞರು, ವಿಶ್ವವಿದ್ಯಾನಿಲಯಗಳು ಸರಿಯಾದ ಸಂಶೋಧನೆಯನ್ನು ನಡೆಸದಿರುವುದು ಬೇಸರದ ಸಂಗತಿ ಎನ್ನುತ್ತಾರೆ ತಜ್ಞರು.

ವಲಸೆ ಹೋದವರು ಹೆಚ್ಚಾಗಿ ಅನಕ್ಷರಸ್ಥರಾಗಿದ್ದರು. ಹಾಗಾಗಿ ಅವರು ಇನ್ನೊಬ್ಬರ ಸಹಾಯವನ್ನು ಪಡೆದು ತಮ್ಮ ಸಂಬಂಧಿಕರಿಗೆ ಪತ್ರವನ್ನು ಬರೆಯುತ್ತಿದ್ದರು. ಕೆಲವೊಮ್ಮೆ ಆ ಪತ್ರ ತಲುಪುವ ಮುಂಚೆ ಭಾರತದಲ್ಲಿ ಅವರ ಸಂಬಂಧಿಕರು ಮರಣ ಹೊಂದಿರುತ್ತಿದ್ದರು. ಇನ್ನೂ ಕೆಲವು ಸಂದರ್ಭಗಳಲ್ಲಿ ಭಾರತದಲ್ಲಿ ಬದುಕಿದ್ದ ಅವರ ಪತ್ನಿ, ಮಕ್ಕಳು, ಸಂಬಂಧಿಕರುಗಳು ಪತ್ರದ ಸಾರಾಂಶ ತಿಳಿದುಕೊಳ್ಳುವುದು ತುಂಬ ದೊಡ್ಡ ಸಾಹಸವಾಗಿತ್ತು. ಕೊನೆಯದಾಗಿ ಹೇಳುವುದಾದರೆ ಹೆಚ್ಚಿನ ಕಾರ್ಮಿಕರು ಭಾರತಕ್ಕೆ ಮರಳಲು ಇಚ್ಛಿಸುತ್ತಿದ್ದರು. ಆದರೆ ಅದೆಂದಿಗೂ ಸಾಧ್ಯವಾಗುತ್ತಿರಲಿಲ್ಲ. ಮಾತೃಭೂಮಿಯ ಬಗ್ಗೆ ಅವರಿಗಿರುವ ಆಕರ್ಷಣೆ ಎಂಥದೆಂಬುದು ಕೊನೆಗೂ ಹೊರಪ್ರಪಂಚಕ್ಕೆ ತಿಳಿಯಲೇ ಇಲ್ಲ. ಮುಖ್ಯವಾಗಿ ಜಾತಿಯನ್ನು ಕಳೆದುಕೊಂಡ ನಾನು ಪುನಃ ನೆಮ್ಮದಿಯಾಗಿ ಇಲ್ಲಿ ಬದುಕಲು ಅಸಾಧ್ಯ ಎಂಬುವುದು ಅವರ ನಂಬಿಕೆಯಾಗಿತ್ತು ಇದರ ಬಗ್ಗೆ ಯಾವ ಬರಹಗಾರರು ದಾಖಲು ಮಾಡಲೇ ಇಲ್ಲ.

ಆದರೆ ಇಂದು ಹೆಚ್ಚು ಜನಗಳು ಭಾರತವನ್ನು ಬಿಟ್ಟು ಸ್ವಇಚ್ಛೆಯಿಂದ ಬೇರೆ ಕಡೆ ಹೋಗುತ್ತಿದ್ದಾರೆ. 19ನೇ ಶತಮಾನಕ್ಕಿಂತ 2019ರಲ್ಲಿ ಭಾರತದ ಜಾತಿ ವ್ಯವಸ್ಥೆ ಮತ್ತಷ್ಟು, ಮಗದಷ್ಟು ಕಠಿಣವಾಗಿ, ಸಂಕೀರ್ಣವಾಗಿ ನಡೆಯುತ್ತಿದೆ. ಜಾತಿವ್ಯವಸ್ಥೆ ಮಹಾನ್ ಭಾರತವನ್ನು ನಿಧಾನವಾಗಿ ಇಬ್ಭಾಗ ಮಾಡುತ್ತಿದೆ. ಅಂದು ಕಾಲಾಪಾನಿ ಎನ್ನುವುದರ ಮೂಲಕ ಜಾತಿ ಭ್ರಷ್ಟತೆ ಅನುಭವಿಸಿದರೂ ಅದು ಒಂದು ಸಮಾನತೆಗೆ ಮತ್ತು ವಿಮೋಚನೆಯ ಮಾರ್ಗವಾಗಿತ್ತು. ಆದರೆ ಇಂದು ಹೆಚ್ಚಿನ ವಿದ್ಯಾವಂತ ಜನರು ಜಾತೀಯತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವಿಮಾನದ ಮೂಲಕ ಕ್ಷಣಮಾತ್ರದಲ್ಲಿ ಕಾಲಾಪಾನಿಯನ್ನು ಕಾಣದಂತೆ ದಾಟಿ ಜಾತಿಯ ಭೂತವನ್ನು ಬೇರೆ ಖಂಡಗಳಿಗೂ ಹರಡುತ್ತಿದ್ದಾರೆ!

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News