ತೆಂಕನಿಡಿಯೂರಿನ ಕುಳುವಾರಿಗಳು

Update: 2019-11-23 19:33 GMT

ಹಿಂದೊಮ್ಮೆ, ನಿಂಜೂರರ ಚಾಮುಂಡೇಶ್ವರಿ ಭವನ ಓದಿಯಾದ ಮೇಲೆ, ಊರಿನಲ್ಲಿದ್ದ ನಾನು ಕೆಮ್ಮಣ್ಣಿನ ಅದೇ ಭವನವನ್ನು ಸಂದರ್ಶಿಸಿ, ಕಾದಂಬರಿಯಲ್ಲಿ ಮೆರೆದ ವಾಸುಭಟ್ಟರನ್ನೂ ಇತರ ಮಹಾಶಯರನ್ನೂ ಮಾತಾಡಿಸಿ, ವರದಿ ಮಾಡಿದ್ದುಂಟು. ಹಾಗೆಯೇ, ಈಗ ಅವರ ತೆಂಕನಿಡಿಯೂರಿನ ಕುಳುವಾರಿಗಳು ಕಾದಂಬರಿಯನ್ನು ಓದಿದ ಮೇಲೆ, ಆ ಕುಳುವಾರಿಗಳನ್ನು ಖುದ್ದಾಗಿ ಭೇಟಿಯಾಗುವ ಮನಸ್ಸಾಯಿತು. ಅದಕ್ಕೆ ಪ್ರಶಸ್ತವಾದ ಜಾಗವೆಂದರೆ ತೆಂಕನಿಡಿಯೂರಿನ ತಟಿ ಹೊಟೇಲಲ್ಲದೆ ಮತ್ಯಾವುದು? ಆದರೇನು, ಊರಿಗೆ ಹೋಗುವ ಯಾವ ಜಂಬರವೂ ಇರಲಿಲ್ಲ; ಹೋಗಲಿಕ್ಕೆ ಪುರುಸೊತ್ತೂ ಆಗಲಿಲ್ಲ.

ಹೀಗಿರುವಾಗ, ನಾಲ್ಕೈದು ದಿವಸಗಳ ಕೆಳಗೆ ನಾನು ಫೋರ್ಟಿನ ವೆಲ್ಕಮ್ ಹೊಟೇಲಿನ ಎದುರು ಹಾದುಹೋಗುತ್ತಿದ್ದೆ. ಇಷ್ಟು ದೂರ ಬಂದು ಇಲ್ಲಿ ನಾನು ಚಾ ಕುಡಿಯದೆ ಹೋದರೆ ಪ್ರಮಾದವಾದೀತು ಎಂದುಕೊಂಡು, ಹೊಟೇಲ್ ಹೊಕ್ಕಿದೆ. ಕುರ್ಚಿಯಲ್ಲಿ ಕೂತು, ಆರ್ಡರ್ ಮಾಡಿದ ಚಾ ಕುಡಿಯುವ ಹೊತ್ತಿಗೆ, ಹತ್ತಿರದಲ್ಲಿ ಏನೋ ಬಿಸಿ ಚರ್ಚೆಯಾಗುತ್ತಿತ್ತು- ತುಳುವಿನಲ್ಲಿ. ಮುಂಬೈಯಲ್ಲಿ ತುಳುಮಾತು ಕೇಳುವುದೇನೂ ವಿಶೇಷವಲ್ಲ ಅಂತ ಮಾಡುವ. ಆದರೆ ಇದು ಹಿಂದಿ-ಭೂಯಿಷ್ಟ ಮುಂಬೈ ತುಳುವಾಗಿರಲಿಲ್ಲ - ಅಪ್ಪಟ ಊರಿನ ತುಳು. ನಾನು ಸ್ವಲ್ಪ ದಿಟ್ಟಿಸಿ ನೋಡಿರ ಬೇಕು; ಚರ್ಚಾ ಕೂಟದ ಮಾತು ನಿಂತು, ಅದರ ಮೂರು ಸದಸ್ಯರು ನನ್ನತ್ತ ದೃಷ್ಟಿ ಹೊರಳಿಸಿದರು. ಪೇಚಾಟವಾಯ್ತು. ಇದನ್ನು ಪರಿಹರಿಸಲಿಕ್ಕೆ, ಎಲ್ಲಿ ಆಯ್ತು ನಿಮಗೆ? ಎಂದು ಕೇಳಿಯೇ ಬಿಟ್ಟೆ. ಪ್ರಶ್ನೆಗಳ ಮೇಲೆ ಪ್ರಶ್ನೆಗಳಾಗಿ, ಈ ಮೂರು ಜನ ತೆಂಕನಿಡಿಯೂರಿನವರೆಂದು ತಿಳಿದು ಸಂತೋಷವಾದರೆ, ಅವರ ಹೆಸರುಗಳನ್ನು ಕೇಳಿದಾಗ ನಿಂಜೂರರ ಕಾದಂಬರಿ ಯ ಕುಳುವಾರಿಗಳೇ- ಅರ್ಥಾತ್ - ಶಿವರಾಮ ಭಟ್ಟರು, ಕಿಟ್ಟಪ್ಪು ಮತ್ತು ಜಿಲ್ಲ ನಾಯ್ಕ -ಎಂದಾದಾಗ ಮಾತ್ರ ನಾನು ಆಶ್ಚರ್ಯದಲ್ಲಿ ಹೌಹಾರಿದೆ.

ಏನು ಯೋಗಾನುಯೋಗ, ಶಿವರಾಮ ಭಟ್ಟರೆ! ನಿಮ್ಮೆಲ್ಲರನ್ನು ಭೇಟಿಯಾಗಲು ನಾನೇ ತೆಂಕನಿಡಿಯೂರಿಗೆ ಬರುವವನಿದ್ದೆ ಎಂದು ಉದ್ಗರಿಸಿದೆ. ಎಲ್ಲಿ ಉಳಿದು ಕೊಂಡಿದ್ದೀರಿ? ಎಂದು ಕೇಳಿದಾಗ, ಜಿಲ್ಲ ಹೇಳಿದ, ಮತ್ತೆಲ್ಲಿ, ಡಾಕ್ಟ್ರ ಮನೆಯಲ್ಲೇ. ಶಂಭು ಮನೆಯಲ್ಲಿ ಇರುವಾಂತ ಹೋದ್ರೆ ಅಂವ ಊರಿನಲ್ಲಿ ಗಚ್ಚ ಕೂತಿದ್ದಾ ನಂತ ಗೊತ್ತಾಯ್ತು. ಆ ಮೇಲೆ ನಮ್ಮ ನಿಂಜೂರರ ಮನೆಗೆ ಹೋಗಿ, - ಡಾಕ್ಟ್ರೇ, ಮುಂಬೈಗೆ ಬರಲಿಕ್ಕೆ ಪುಸಲಾಯಿಸಿದ್ದು ನೀವೇ. ಹಾಗಾಗಿ ನಿಮ್ಮ ಮನೆಯಲ್ಲೇ ಮೊಕ್ಕಾಂ - ಎಂದು ಬಿಟ್ಟೆವು. ಅವರೇನು ಬೇಡ ಹೇಳುವವರಲ್ಲ. ಅವರ ಬಳಿಯೇ ಸದ್ಯಕ್ಕೆ ಬಿಡಾರ, ಎಂದೆಲ್ಲಾ ವಿವರಣೆ ಕೊಟ್ಟ.

ಇಷ್ಟೆಲ್ಲಾ ಆದ ಮೇಲೆ ಸ್ವಲ್ಪ ಸಲುಗೆ ಹುಟ್ಟಿ, ಏನು ಮುಂಬೈ ಪುಡಿಮಾಡಲು ನೀವು ಮೂರುಜನ ಹೊರಟದ್ದೋ- ಏನು ಕತೆ? ಎಂದು ಕುಶಾಲು ಮಾಡಿದೆ. ಮೂರು ಜನರು ಏಕ ಕಾಲದಲ್ಲಿ, ಛೆ..ಛೆ, ಹಾಗೇನೂ ಇಲ್ಲ ಎಂದು ನುಡಿದರೂ, ಕುಶಾಲನ್ನು ಸ್ವಲ್ಪ ಮುಂದುವ ರಿಸುವ ಇರಾದೆಯಿಂದ, ಭಟ್ಟರೆ, ನಿಮ್ಮ ರಂಗು-ರಂಗಿನ ಮುಂಬೈ ಕನಸುಗಳು ನನಸಾದವೇ? ಎಂದು ಕೇಳಿದೆ.

ಶಿವರಾಮ ಭಟ್ಟರಿಗೆ ನನ್ನ ಪ್ರಶ್ನೆಯಿಂದ ಕಿರಿಕಿರಿಯಾ ಗಿದ್ದು ಸ್ಪಷ್ಟವಾಗಿತ್ತು, ಸ್ವಲ್ಪ ಬಿಸಿಯಾಗಿಯೇ, ನೀವೆಂಥ ಮಾರಾಯ್ರೆ, ಮಾಷ್ಟ್ರು ಬರೆದದ್ದನ್ನೆಲ್ಲಾ ನಂಬುವುದಾ? ಎಂದರು.

ಆದ್ರೆ, ನೀವು ಅವರ ಹತ್ರ ಈ ಬಗ್ಗೆ ವಿಚಾರಿಸಿ ದ್ದುಂಟೋ ಇಲ್ಲವೋ, ಹೇಳಿ ಎಂದು ಮರುಸವಾಲು ಹಾಕಿದಾಗ, ಸ್ವಲ್ಪ ತಣ್ಣಗಾದ ಭಟ್ಟರು, ಇರಬಹುದು, ಆದ್ರೆ ಮುಂಬೈಯ ಈ ರಂಗು-ರಂಗನ್ನು ನನ್ನ ಮಂಡೆಗೆ ತುಂಬಿಸಿದ್ದು ಯಾರಂತೀರಿ? ಈ ಡಾಕ್ಟ್ರು ಸಾಧಾರಣ ಇಲ್ಲ. ತನ್ನ ಸಂಭಾವಿತತನಕ್ಕೆ ಧಕ್ಕೆ ಬರಬಾರದ ಹಾಗೆ, ಅವರ ಕತೆಗಳಲ್ಲಿ ಮನೋರಂಜನೆ ಸಪ್ಲೈ ಮಾಡಲಿಕ್ಕೆ ನನ್ನಂಥ ಪಾಪದವರೇ ಸೈ ಎಂದು ನಿಟ್ಟಿಸಿರು ಬಿಟ್ಟು, ಆದಷ್ಟು ಪಾಪದವರಂತೆ ಕಾಣುವ ಪ್ರಯತ್ನಮಾಡಿದರು. ಆಗಲಿ, ಭಟ್ಟರೆ ನೀವು ಹೇಳಿದ್ದನ್ನು ಒಪ್ಪಿಕೊಳ್ಳುವಾ, ಆದರೆ ಇದೆಲ್ಲಾ ಲೋಕದಲ್ಲಿ ಆಗದ ಸಂಗತಿ ಏನೂ ಅಲ್ಲ. ಹಾಗಾಗಿ ಅವರು ಬರೆದಿದ್ದರೂ, ನೀವು ಸ್ವಲ್ಪ ಕಿತಾಪತಿ ಮಾಡಿದ್ದರೂ, ಅದೇನೂ ತಲೆಹೋಗುವ ವ್ಯಾಪಾರವೇನು ಅಲ್ಲ ಎಂದು ವಿಷಯಾಂತರ ಮಾಡಲು, ಕಿಟ್ಟಪ್ಪುವನ್ನು ನೋಡಿ, ನಿಂಜೂರರ ಕಾದಂಬರಿ ಓದಿದ್ದಿಯಾ? ಎಂದು ಕೇಳಿದೆ. ಇದು ಏನೂ ಅಲ್ಲ ಎಂಬ ಧಾಟಿಯಲ್ಲಿ ಕಿಟ್ಟಪ್ಪು ಹೇಳಿದ -ಓದಿ ಮುಗಿಸಿ, ಅದರ ವಿಮರ್ಶೆ ಬರೆದು ಪೇಪರಿಗೆ ಕಳಿಸಿದ್ದೇನೆ.

ನನಗೆ ಆಶ್ಚರ್ಯವಾಯ್ತು; ವಿಮರ್ಶೆಯಲ್ಲಿ ಕಿಟ್ಟಪ್ಪು ಇಷ್ಟು ಪರಿಣಿತನಾಗಿದ್ದಾನೆಂಬುದಿರಲಿ, ಅವನು ಬರಹಗಾರನಾಗಿರುವ ಸುದ್ದಿಯೇ ನನ್ನನ್ನು ಮುಟ್ಟಿರಲಿಲ್ಲ. ಬಿಗು ಮುಖಮಾಡಿಕೊಂಡು ಅವನು ಹೇಳಿದ ನಮೂನೆಯಲ್ಲಿ, ನಿಂಜೂರರ ಕಾದಂಬರಿಯ ಕಟು ಟೀಕೆಯ ಸೂಚನೆ ಕಾಣುತ್ತಿದೆ ಅಂದುಕೊಂಡೆ, ಆದರೆ ಉಪಚಾರಕ್ಕೆ, ಅರೆ, ನೀನು ಬರೆಯುವ ವಿಷಯ ಗೊತ್ತೇ ಇರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.

 ಅದೆಲ್ಲ ಡಾಕ್ಟ್ರು ಬರೆದರಲ್ಲಾ ನಿಮಗೆ ಗೊತ್ತಾಗುವುದು. ಮೀರಾ ಮತ್ತು ನನ್ನ ಮಧ್ಯದ ಲವ್ ಬಗ್ಗೆ ಬರೆದಿದ್ದಾರೆ. ಆದ್ರೆ ಅದೇ ವಿಷಯದಲ್ಲಿ ನಾನು ಬರೆದ ಮೌನ ಪ್ರೀತಿ, ಪ್ರೀತಿಗೆ ಮಾತೆಲ್ಲಿ? ಮುಂತಾದ ಕವನಗಳ ಬಗ್ಗೆ ಅವರು ಏನಾದರೂ ಬರೆದಿದ್ದಾರಾ ಹೇಳಿ? ... ತಮಗೆ ಬೇಕಾಗಿದ್ದನ್ನು ಮಾತ್ರ ಬರೆದಿದ್ದಾರೆ ಎಂದು ಇನ್ನಷ್ಟೂ ಮುಖ ಬೀಗಿಸಿ ಕೊಂಡ. ತನ್ನನ್ನು ಲೇಖಕನೆಂದು ಗುರುತಿಸದೆ ಇದ್ದದ್ದು ಅವನ ನೋವಿಗೆ ಕಾರಣ ಎಂಬುದು ವಿದಿತವಾಗಿತ್ತು. ನಿಂಜೂರರ ಪುಸ್ತಕದಲ್ಲಿ ಬಂದ ಕುಳುವಾರಿಗಳು ತಮ್ಮ ಬಗ್ಗೆ ಕಾದಂಬರಿಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಂದ ತೀರಾ ಅಸಂತುಷ್ಟರಾಗಿದ್ದಾರೆ ಎನ್ನುವುದು ನನಗೆ ಈಗಾಗಲೆ ಸ್ಪಷ್ಟವಾಗಿತ್ತು.

ಆದ್ರೆ ಕಿಟ್ಟಪ್ಪು, ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಉತ್ತಮ ಅಭಿಪ್ರಾಯ ಇರುವುದು ಸ್ವಾಭಾವಿಕ. ಬೇರೆಯವರು ಆ ವ್ಯಕ್ತಿಯನ್ನು ತಮ್ಮದೇ ಆದ, ಪೂರ್ವಾಗ್ರಹ ಪೀಡಿತ ಕಪ್ಪು-ಬಿಳುಪು ದೃಷ್ಟಿಯಲ್ಲಿ ನೋಡಿಯಾರು. ಒಬ್ಬ ವಸ್ತುನಿಷ್ಠ ಬರಹಗಾರ ಮಾತ್ರ ತಾನೇ ಸೃಷ್ಟಿಸಿದ ಪಾತ್ರವನ್ನೂ ಕೂಡಾ ನಿಷ್ಪಕ್ಷಪಾತವಾದ ರೀತಿಯಲ್ಲಿ ಅಳೆದು ನೋಡಿ ಆ ಪಾತ್ರಗಳನ್ನು ಜೀವಂತವಾಗಿಸುತ್ತಾನೆ. ಇಲ್ಲವಾದರೆ ಕತೆಯ ಪಾತ್ರಗಳು ನೀತಿಬೋಧನೆಯ ಕತೆಗಳಲ್ಲಿಯ ಸುಬುದ್ಧಿ-ದುರ್ಬುದ್ಧಿ ಪಾತ್ರಗಳಂತೆ, ಕತೆಗಾಗಿ ಸೃಷ್ಟಿಸಿದ, ಕತೆಗಳೊಳಗೇ ಉಳಕೊಳ್ಳುವ ಪಾತ್ರಗಳಾಗುತ್ತವೆ. ಆ ದೃಷ್ಟಿಯಲ್ಲಿ ನಿಂಜೂರರ ಕಾದಂಬರಿಯ ಪಾತ್ರಗಳು ಹಾಗಿಲ್ಲವಲ್ಲ, ಕಪ್ಪು ಬಿಳುಪು ಮಧ್ಯದ ಎಲ್ಲಾ ಛಾಯೆಗಳೂ ಇವರ ಪಾತ್ರಗಳಲ್ಲಿ ಕಾಣ್ತಾವಲ್ಲ- ಅದು ವಿಶೇಷ. ಎಂದೆ.

ಕಿಟ್ಟಪ್ಪು ಸ್ವಲ್ಪ ಮೆತ್ತಗಾದ, ನಾನೇನು ಅವರ ಕಾದಂಬರಿ ಬೂಸು ಅಂತ ಹೇಳಿದ್ನಾ? ನನ್ನ ವಿಷಯ ಬರ್ದದ್ದು ಬಿಟ್ಟು ಬೇರೆ ಮಾತಾಡುವಾ. ಒಂದೂಂದ್ರೆ, ನಮ್ಮ ಊರಿನ ಚಿತ್ರಣಗಳು; ಯಾಕಂದ್ರೆ ಇದು ಬರೇ ತೆಂಕನಿಡಿಯೂರಿದ್ದು ಮಾತ್ರ ಅಲ್ಲ, ನಮ್ಮ ಅವಳಿ-ಜಿಲ್ಲೆಗಳ ಎಲ್ಲಾ ಊರುಗಳನ್ನು ಪ್ರತಿನಿಧಿಸುವ ಚಿತ್ರಣವೂ ಹೌದು. ನಮ್ಮ ಊರಿನ- ಕಂಬಳ, ಕೋಲ, ಬಯಲಾಟ, ಹಬ್ಬಗಳು, ಕೋಳಿ ಅಂಕ -ಎಲ್ಲದರ ಕಣ್ಣಿಗೆ ಕಟ್ಟುವ ಹಾಗಿನ ವರ್ಣನೆಗಳು ಈ ಕಾದಂಬರಿಯ ದೊಡ್ಡ ಆಕರ್ಷಣೆ.

ಕಿಟ್ಟಪ್ಪು ಹೆಚ್ಚಿದ ಉಮೇದಿನಿಂದ ಮುಂದುವರಿಸಿದ, ಮತ್ತೆ ನಮ್ಮ ಊರಿನ ಆಡು ಭಾಷೆ - ಏನು ಹೇಳ್ತೀರಿ ಮಾರಾಯ್ರೆ- ಪಟ್ಟಕ್ಕೇ ಏರಿಸಿ ಬಿಟ್ಟಿದ್ದಾರೆ.. ಧಾರವಾಡ, ಬೆಂಗಳೂರು ಕನ್ನಡ ಎಲ್ಲ ಕೇಳಿ, ನಮ್ಮ ಕನ್ನಡವನ್ನ ಪುಸ್ತಕದ ಭಾಷೆ, ಚಪ್ಪೆ ಅಂತ ತಮಾಶೆ ಮಾಡ್ತಾರಲ್ಲ. ಈಗ ಇಲ್ಲಿ ನೋಡಿ, ನಮ್ಮ ಆಡು ಭಾಷೆ ಇಷ್ಟು ಚಂದ ಉಂಟು ಅಂತ ಈ ಕಾದಂಬರಿ ಓದುವಾಗ್ಲೆ ಗೊತ್ತಾಗಿದ್ದು.

ಕಿಟ್ಟಪ್ಪೂ ಇನ್ನೂ ಹೇಳುವುದರಲ್ಲಿದ್ದ. ಆದರೆ, ಈ ಮಾಣಿಗೆ ಹೀಗೆ ಬಿಟ್ಟುಕೊಟ್ಟರೆ ನನಗೆ ಮತ್ತೆ ಛಾನ್ಸ್ ಸಿಕ್ಕಲಿಕ್ಕಿಲ್ಲ ಅಂದುಕೊಂಡು, ನಾನು ಮಧ್ಯ ಬಾಯಿ ಹಾಕಿದೆ, ಚಾಮುಂಡೇಶ್ವರಿ ಭವನದಲ್ಲೂ ನಮ್ಮ ಆಡು ಭಾಷೆ ರೈಸಿತ್ತು, ನಾನು ಮೊದಲೇ ಹೇಳಿದ್ದೆ. ಶಿವರಾಮ ಕಾರಂತರೂ ನಮ್ಮ ಆಡು-ಭಾಷೆಯನ್ನ ಸ್ವಲ್ಪ ಬಳಸ್ತಿದ್ರು, ಆದ್ರೆ ಅದನ್ನು ಹೆಚ್ಚು ಉಪಯೋಗಿಸುದನ್ನು ವಿರೋಧಿಸ್ತಾ ಇದ್ರು -ಕರ್ನಾಟಕದ ಬೇರೆ ಪ್ರದೇಶದವರಿಗೆ ತೊಡಕಾಗ್ತದೆ ಅಂತ. ಅದೂ ಹೌದೂಂತ ಮಾಡುವಾ. ಆದ್ರೆ, ಬೇರೆ ಪ್ರದೇಶದವ್ರ ತಮ್ಮ ಆಡು ಭಾಷೆಗಳನ್ನು ಬಳಸಿ ಉಳಿದ ಪ್ರದೇಶದವರಿಗೆ ಅಭ್ಯಾಸ ಮಾಡಿಸಿ ಬಿಟ್ಟಿದ್ದಾರಲ್ಲ. ಈಗ ಅವ್ರೂ ನಮ್ಮ ಆಡು ಭಾಷೆಯನ್ನು ಸ್ವಲ್ಪ ಅಭ್ಯಾಸ ಮಾಡಿ ಕೊಳ್ಳಲಿ

ಜಿಲ್ಲ ನಾಯ್ಕ ಹೇಳಿದ, .. ಹೌದು, ಮಾಡಿ ಕೊಳ್ಳಲಿ. ನನ್ಗೆ ಭಟ್ಟರೇ ಪುಸ್ತಕ ಓದಿ ಹೇಳಿದ್ದುಂತ ಮಾಡುವಾ. ಆದ್ರೂ, ನಮ್ಮ ಆಡು ಭಾಷೆ ಕೇಳುವಾಗ, ವಾಟೀಸ್‌ನೊಟ್ಟಿಗೆ ಹುರ್ದ ಮೀನು ಕಚ್ಚಿಕೊಂಡ ಹಾಗೆ ಆಗ್ತಿತ್ತು, ಮಾರಾಯ್ರೆ ಏಯ್! ನಿನ್ಗೆ ಬೇರೆ ಯಾವ ಹೋಲಿಕೆ ಸಿಕ್ಲಿಲ್ವಾ? ಎಂದು ಶಿವರಾಮ ಭಟ್ರು ಗದರಿದರು. ಆ ಮೇಲೆ ಕಿಟ್ಟಪ್ಪುವನ್ನು, ಈ ಕಾದಂಬರಿಯ ಒಂದು ದೊಡ್ಡ ಮಹತ್ವ ಹೇಳು ಎಂದು ಕೇಳಿದಾಗ, ಶಿವರಾಮ ಭಟ್ರು, ನಾನು ಹೇಳ್ತೇನೆ ಕೇಳಿ- ಹಾಸ್ಯ ಎಂದರು.

 ಸರಿ ಹೇಳಿದ್ರಿ. ಹಾಸ್ಯ ಪ್ರಸಂಗಳಿರುವ ಕಾದಂಬರಿಗಳು ಕನ್ನಡದಲ್ಲಿ ಇದ್ದಾವೆ, ಆದ್ರೆ ಈ ರೀತಿ ಭಾಷೆ ಮತ್ತೆ ಪ್ರಸಂಗಗಳು ಎರಡೂ ಸೇರಿ, ಉದ್ದಕ್ಕೂ ಓದುಗರನ್ನು ನಗಿಸಿಕೊಂಡು ಹೊಗುವ ಕಾದಂಬರಿ ಕನ್ನಡದಲ್ಲಿ ಬಂದಿದ್ರೆ ನನಗೆ ಗೊತ್ತಿಲ್ಲ. ಇಂಗ್ಲಿಷಿನಲ್ಲಾದರೆ ಮಾರ್ಕ್ ಟ್ವೈನ್, ವುಡ್‌ಹೌಸ್ ರಂಥಾ, ಹಾಸ್ಯದ ಭಾಷೆಯನ್ನೇ ಬಳಸಿಕೊಂಡು ಬರೆದ ಹಲವಾರು ಕಾದಂಬರಿಕಾರರು ಇದ್ದಾರೆ, ಕನ್ನಡದಲ್ಲಿ ಹಾಗೆ ಯಾರೂ ಇಲ್ಲಂದ್ರೆ ನಡೀತದೆ. ಹಾಗಾಗಿ ನಿಂಜೂರರ ಚಾಮುಂಡೇಶ್ವರಿ ಭವನ ಮತ್ತೀಗ ತೆಂಕನಿಡಿಯೂರಿನ. ಕುಳವಾರಿಗಳು ಎರಡೂ ಸೇರಿ ಕನ್ನಡದಲ್ಲಿ ಒಂದು ಹೊಸ ಪ್ರಾಕಾರವನ್ನೇ ಆರಂಭಿಸಿವೆ- ಏನ್ ಹೇಳ್ತ್ರಿ? ಎಂದಾಗ ಎಲ್ಲರೂ ತಲೆಯಾಡಿಸಿದ್ದು ಕಂಡಿತು.

ಮತ್ತೆ ಲಾಗಾಯ್ತಿನಿಂದ ಬಂದ ಒಂದು ಪದ್ಧತಿಯ ಹಾಗೆ, ಅಂದರೆ ಕಾರಂತರು, ಬಲ್ಲಾಳರು ಮುಂತಾದವರು ಬರೆದಿದ್ದ ಕೆಲವು ಕಾದಂಬರಿಗಳ ಹಾಗೆ, ಇಲ್ಲೂ ಊರಿನಲ್ಲಿ ಸುರುವಾದ ನಿರೂಪಣೆಗಳು ಮುಂಬೈಯಲ್ಲಿ ಕೊನೆಗೊಳ್ಳುತ್ತವೆ. ಆದರೆ ಬೇಸರವೆಂದರೆ ತೆಂಕನಿಡಿಯೂರಿನ ಪ್ರಸಂಗಗಳಲ್ಲಿರುವ ಕುಶಾಲು ಮುಂಬೈಯ ಪ್ರಸಂಗಗಳಲ್ಲಿ ಇಲ್ಲ. ಅಷ್ಟೇ ಅಲ್ಲ ತೆಂಕನಿಡಿಯೂರಿನ ಹಿನ್ನೆಲೆಯಲ್ಲಿ ಬರುವ ಪಾತ್ರಗಳು, ಕಥಾನಕ, ಚಿತ್ರಣಗಳು- ಇವಲ್ಲಿರುವ ನೈಜತೆ, ಸತ್ವ, ಆಕರ್ಷಣೆಗಳು ಇವೆಲ್ಲಾ ಮುಂಬೈಯ ಹಿನ್ನೆಲೆಯಲ್ಲಿ ಬಲವಾಗಿ ಬಂದಿಲ್ಲ. ಊರಿನ ದುರುಳತನ, ದ್ವೇಷ, ಜಗಳ ಎಲ್ಲಕ್ಕೂ ಹಾಸ್ಯದಿಂದಾಗಿ ಏನೋ ಅಮಾಯಕತೆಯ ಲೇಪವಿದ್ದರೆ, ಮುಂಬೈಯಲ್ಲಿ ಅವು ನೂರಾರು ನಿಯಾನ್ ಲೈಟುಗಳ ಪ್ರಕಾಶದಲ್ಲೆಂಬಂತೆ ವಿಕೃತವಾಗಿ, ವಿಕಾರವಾಗಿ ಕಾಣುತ್ತವೆ. ಅದು ಈ ಮಹಾನಗರದ ನಿಷ್ಟುರತೆಯ ಗುಣದಿಂದಾಗಿಯೂ ಇರಬಹುದು. ಅಂತೂ, ತೆಂಕನಿಡಿಯೂರಿನ ಮತ್ತು ಮುಂಬೈಯ- ಹೀಗೆ ಎರಡು ಕಥಾನಕಗಳಿದ್ದು, ಅವು ಎಣ್ಣೆ-ನೀರಿನಂತೆ ಬೇರೆಯಾಗಿಯೇ ಉಳಿದಂತಿವೆ; ಒಂದೇ ಪುಸ್ತಕದಲ್ಲಿ ಎರಡು ಕಾದಂಬರಿಗಳಿದ್ದ ಹಾಗೆ. ಅಲ್ವಾ? ಮತ್ತೆ, ಹಾಸ್ಯದ ಬಗ್ಗೆ ಹೇಳುವುದಾದರೆ, ಜಿಲ್ಲ ನಾಯ್ಕರೆ,- ನೀವೊಂದೆ ಸಾಕು ಮಾರಾಯ್ರೆ, ನಗಿಸಿ ನಗಿಸಿ ನಮ್ಮನ್ನು ಸಾಯಿಸ್ಲಿಕ್ಕೆ ಎಂದು ಮುಗಿಸಿದೆ.

ಜಿಲ್ಲನ ಮುಖ ಕಪ್ಪಿಟ್ಟು ಕೊಂಡಿತು, ಏನೊ ಒಂದಿವ್ಸ ಅಪ್ಪಿ-ತಪ್ಪಿ ಸ್ಪಲ್ಪ ಹೆಚ್ಚು ಸುರಿದುಕೊಂಡು, ಒಂದೆರಡು ತಪ್ಪು ಹೇಳಿದ್ದಕ್ಕೆ ಮಾಸ್ಟ್ರು ನನ್ನನ್ನು ಹಾಗೆ ಗಾಳಿಗೆ ಹಿಡಿಯುವುದಾ? ನಾನವರ ಪುಸ್ತಕ ಓದಲಿಕ್ಕಿಲ್ಲಾಂತ ಅವರಿಗಿದ್ದಿರಬೇಕು. ಆದ್ರೆ ಇದು ಸರಿಯಾ? ನನಗೆ ಏನು ಗೊತ್ತಿಲ್ಲ ಹೇಳಿ. ರಾಮಾಯಣ ಮತ್ತೆ ಮಹಾಭಾರತ ಸ್ವಲ್ಪ ಮಿಕ್ಸರ್ ಆದ್ರೆ ತಲೆಮೇಲೆ ಪಾತಾಳ ಬೀಳ್ತದಾ? ಅದಕ್ಕೆ ಮಾಸ್ಟ್ರು ಈ ನಮೂನೆ ಮಕ್ಕರು ಮಾಡ್‌ಬೌದಾ ಮಾರಾಯ್ರೆ? ಎಂದವನು, ನಾನೇ ತಪ್ಪಿತಸ್ಥನೆಂಬಂತೆ ನನ್ನನ್ನು ದುರುಗುಟ್ಟಿ ನೋಡಿದ. ಭಟ್ರು ನಕ್ಕು ಅವನ ಹೇಳಿಕೆಯನ್ನು ಸರಿಮಾಡ ಹೊರಟರು, ಮಾರಾಯ! ಪಾತಾಳ ನಮ್ಮ ಕೆಳಗೆ ಇರುವಾಗ ನಮ್ಮ ತಲೆ ಮೇಲೆ ಹೇಗೆ ಬೀಳ್ತದೆ?... ನೀನು ಹೇಳುವುದು ಆಕಾಶ ಅಲ್ವಾ?

ಜಿಲ್ಲ ಹೌದೌದು .. ಗೊತ್ತಾಯ್ತು, ಆಕಾಶದ ಬದ್ಲು ಪಾತಾಳ, ಏನಾಯ್ತು? ಎಂದ.

ನೀನಿನ್ನು ಸ್ವರ್ಗ ಮತ್ತು ನರಕಗಳನ್ನ ಒಂದು ಮಾಡ್ದಿದ್ರೆ ಸಾಕು ಎಂದು ಕೊಳ್ಳುತ್ತಾ ಭಟ್ರು ಜಿಲ್ಲನನ್ನು ಸರಿಮಾಡುವ ಸಾಹಸವನ್ನು ಬಿಟ್ಟರು. ಚಹಾ ಕುಡಿದು, ನಮ್ಮ ಚರ್ಚೆ ಮುಗಿದು, ತೆಂಕನಿಡಿಯೂರಿನ ಮೂರು ಕುಳುವಾರಿಗಳಿಗೆ ವಿದಾಯ ಹೇಳಿ ಹೊರಡುವ ಹೊತ್ತಿಗೆ, ನಿಮಗೆ ನಿಂಜೂರರ ಕಾದಂಬರಿಯಲ್ಲಿ ನ್ಯಾಯ ದೊರೆಯದಿದ್ದ ಬಗ್ಗೆ ಬೇಸರ ಇರುವುದು ಅರ್ಥವಾಗ್ತದೆ. ಇದಕ್ಕೆ ಒಂದೇ ಉಪಾಯ. ಅವ್ರ ಇನ್ನೊಂದು ಕಾದಂಬರಿ ಬರೀತಾ ಇದ್ದಾರೆ ಅಂತ ಸುದ್ದಿ ಸಿಕ್ಕಿದೆ. ಅದರಲ್ಲಾದರೂ ನಿಮಗೆ ನ್ಯಾಯ ಸಿಕ್ಬೇಕೂಂತ ಅವರನ್ನು ಒತ್ತಾಯಿಸಿ,- ಬೇಕಿದ್ರೆ ಜಗಳವೇ ಮಾಡಿ ನೋಡುವಾ ಎಂಬ ಗಂಭೀರ ಸಲಹೆ ಕೊಟ್ಟು ಹೊಟೇಲ್‌ನಿಂದ ಹೊರಬಿದ್ದೆ.

Writer - ವೆಂಕಟ್‌ರಾಜ ಯು. ರಾವ್

contributor

Editor - ವೆಂಕಟ್‌ರಾಜ ಯು. ರಾವ್

contributor

Similar News