549 ಸ್ವಚ್ಛತಾ ಕಾರ್ಮಿಕರ ಹುದ್ದೆಗಳಿಗೆ 7,000 ಇಂಜಿನಿಯರ್‌ಗಳು, ಪದವೀಧರರಿಂದ ಅರ್ಜಿ !
ಕೊಯಮತ್ತೂರು, ನ.28: ಕೊಯಮತ್ತೂರು ಮಹಾನಗರ ಪಾಲಿಕೆಯಲ್ಲಿನ 549 ಸ್ವಚ್ಛತಾ ಕಾರ್ಮಿಕರ ಹುದ್ದೆಗಳಿಗೆ 7,000 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದು, ಹೆಚ್ಚಿನವರು ಇಂಜಿನಿಯರ್‌ಗಳು,ಪದವೀಧರರು ಮತ್ತು ಡಿಪ್ಲೋಮಾ ವಿದ್ಯಾಭ್ಯಾಸ ಹೊಮದಿರುವವರು 549 ಗ್ರೇಡ್-1 ಸ್ಯಾನಿಟರಿ ಹುದ್ದೆಗಳಿಗೆ ಮೂರು ದಿನಗಳ ಸಂದರ್ಶನ ಬುಧವಾರದಿಂದ ಆರಂಭಗೊಂಡಿದೆ.
ಅರ್ಜಿ ಸಲ್ಲಿಸಿರುವವರಲ್ಲಿ ಕನಿಷ್ಠ ಶೇ.70ರಷ್ಟು ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆಯಾದ ಎಸ್‌ಎಸ್‌ಎಲ್‌ಸಿಯನ್ನು ಪೂರ್ಣಗೊಳಿಸಿದ್ದು, ಅವರಲ್ಲಿ ಹೆಚ್ಚಿನವರು ಇಂಜಿನಿಯರ್‌ಗಳು, ಪದವೀಧರರು,ಸ್ನಾತಕೋತ್ತಕ ಪದವೀಧರರು ಮತ್ತು ಡಿಪ್ಲೋಮಾಧರರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೆಲವು ಅರ್ಜಿದಾರರು ಈಗಾಗಲೇ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಮಾಸಿಕ 15,700 ರೂ.ಗಳ ಆರಂಭಿಕ ವೇತನದ ಸರಕಾರಿ ಉದ್ಯೋಗವು ಅವರನ್ನು ಆಕರ್ಷಿಸಿದೆ. ಮಹಾನಗರ ಪಾಲಿಕೆಯಲ್ಲಿ ಕಳೆದ 10 ವರ್ಷಗಳಿಂದ ಸ್ವಚ್ಛತಾ ಕಾರ್ಮಿಕರಾಗಿ ಗುತ್ತಿಗೆಯಾಧಾರದಲ್ಲಿ ಕೆಲಸ ಮಾಡುತ್ತಿರುವವರೂ ಈ ಕಾಯಂ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಹೆಚ್ಚಿನ ಪದವೀಧರ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳಿಂದ ವಂಚಿತರಾಗಿದ್ದಾರೆ ಮತ್ತು ಆರರಿಂದ ಏಳು ಸಾವಿರ ರೂ.ವೇತನಕ್ಕೆ ಖಾಸಗಿ ಸಂಸ್ಥೆಗಳಲ್ಲಿ ದಿನಕ್ಕೆ 12 ಗಂಟೆಗಳ ಕಾಲ ದುಡಿಯುತ್ತಿದ್ದಾರೆ,ಅವರಿಗೆ ಉದ್ಯೋಗ ಭದ್ರತೆಯೂ ಇಲ್ಲ. ಇನ್ನೊಂದೆಡೆ ಸ್ವಚ್ಛತಾ ಕಾರ್ಮಿಕರ ಹುದ್ದೆ ಮಾಸಿಕ ಸುಮಾರು 20,000 ರೂ.ಗಳನ್ನು ನೀಡುತ್ತದೆ,ಕೆಲಸದ ಅವಧಿ ಬೆಳಿಗ್ಗೆ ಮೂರು ಗಂಟೆ ಮತ್ತು ಸಂಜೆ ಮೂರು ಗಂಟೆಗಳಾಗಿವೆ. ಹೀಗಾಗಿ ವಿರಾಮದ ಅವಧಿಯಲ್ಲಿ ಇತರ ಯಾವುದಾದರೂ ಚಿಲ್ಲರೆ ಕೆಲಸ ಮಾಡಿ ಇನ್ನಷ್ಟು ಆದಾಯ ಗಳಿಸಲು ಅವರಿಗೆ ಅವಕಾಶವಿದೆ ಎಂದು ಮೂಲಗಳು ತಿಳಿಸಿದವು.
ಕೊಯಮತ್ತೂರು ಮಹಾನಗರ ಪಾಲಿಕೆಯಲ್ಲಿ ಹಾಲಿ 2,000 ಕಾಯಂ ಮತ್ತು 500 ಗುತ್ತಿಗೆ ಸ್ವಚ್ಛತಾ ಕಾರ್ಮಿಕರಿದ್ದಾರೆ.