ವಾಹನ ಮಾಲಕರ ಕಿಸೆಗೆ ಕನ್ನ ಹಾಕಲಿರುವ ಫಾಸ್ಟ್‌ಟ್ಯಾಗ್...!
ಇದೇ ಡಿಸೆಂಬರ್ ಒಂದನೇ ತಾರೀಕಿನಿಂದ ದೇಶದಾದ್ಯಂತದ ಎಲ್ಲಾ ಟೋಲ್‌ಬೂತುಗಳು ಕ್ಯಾಶ್‌ಲೆಸ್ ಆಗಲಿವೆ. ಆದುದರಿಂದ ಮೂರಕ್ಕಿಂತ ಹೆಚ್ಚಿನ ಚಕ್ರಗಳ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ನೋಂದಣಿ ಮಾಡಬೇಕು. ಇಲ್ಲವಾದರೆ ದುಪ್ಪಟ್ಟು ಟೋಲ್ ಕಟ್ಟಿ ಟೋಲ್‌ಗಳ ಮೂಲಕ ವಾಹನ ಚಲಾಯಿಸಬೇಕು.
ಇದು ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಸರಕಾರ ವಾಹನ ಮಾಲಕರ ಕಿಸೆಗೆ ಹಾಕ ಹೊರಟಿರುವ ಕನ್ನ ಎಂಬ ಬಗ್ಗೆ ಸಂಶಯವೇ ಬೇಡ..
ಎಲ್ಲಕ್ಕಿಂತ ಹೆಚ್ಚಾಗಿ ಟೋಲ್ ವಸೂಲಿಯೇ ಅಪ್ರಜಾಸತ್ತಾತ್ಮಕ. ಯಾಕೆಂದರೆ ಯಾವುದೇ ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಮತ್ತು ರಸ್ತೆ ಇವಿಷ್ಟು ಕನಿಷ್ಠ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಪ್ರಭುತ್ವದ ಜವಾಬ್ದಾರಿ.
ನಾವು ವಾಹನ ಖರೀದಿಸುವಾಗ ರಸ್ತೆ ತೆರಿಗೆ, ನೋಂದಣಿ ಶುಲ್ಕ ಮತ್ತು ತೆರಿಗೆ, ವಿಮೆ ಇವನ್ನು ಭರಿಸಿಯೇ ನಮ್ಮ ವಾಹನವನ್ನು ರಸ್ತೆಗಿಳಿಸುವುದು. ಮತ್ತು ವಾಹನದ ಪ್ರತೀ ಒಂದು ಬಿಡಿಭಾಗದ ಖರೀದಿಯಲ್ಲೂ ನಾವು ತೆರಿಗೆ ಪಾವತಿಸುತ್ತೇವೆ. ಪ್ರತಿನಿತ್ಯ ಇಂಧನ ತುಂಬಿಸುವಾಗಲೂ ಅದರ ತೆರಿಗೆ ತೆತ್ತೇ ತುಂಬಿಸುತ್ತೇವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ರಸ್ತೆಗಳನ್ನು ಯಾವುದೇ ಸರಕಾರವೂ ಅವರ ಸ್ವಂತ ದುಡ್ಡಿನಿಂದ ನಿರ್ಮಿಸುವುದಲ್ಲ, ನಮ್ಮದೇ ತೆರಿಗೆ ದುಡ್ಡಿನಿಂದ...
ಇವಿಷ್ಟರ ಮೇಲೆ ಮತ್ತೆ ಹೆದ್ದಾರಿಯಲ್ಲಿ ಚಲಿಸಬೇಕಾದರೆ ಟೋಲ್ ಎಂಬ ಅವೈಜ್ಞಾನಿಕ ಶುಲ್ಕ ತೆರಬೇಕೆನ್ನುವುದೇ ಹಗಲು ದರೋಡೆ.
ಸರಿಯಪ್ಪಾ ಟೋಲ್ ಕಟ್ಟೋಣ, ಇಂದಿಗೂ ದೇಶದಾದ್ಯಂತ 75% ಶೇಕಡಾಕ್ಕಿಂತಲೂ ರಸ್ತೆಗಳು ಸಂಚಾರ ಯೋಗ್ಯವಾಗಿಲ್ಲ. ರಸ್ತೆಗಿಂತ ಹೆಚ್ಚು ಹೊಂಡಗಳೇ ಇವೆ. ಎಲ್ಲಾ ಬಿಡಿ ಬಹುತೇಕ ಟೋಲ್‌ಗಳಿಂದ ಒಂದು ಕಿಲೋ ಮೀಟರ್ ಹಿಂದೆ ಮತ್ತು ಒಂದು ಕಿಲೋ ಮೀಟರ್ ಮುಂದೆ ಮತ್ತೆ ಅದೇ ಗುಜಿರಿ ರಸ್ತೆಗಳು. ಕೆಲವು ಟೋಲ್ ಸಂಗ್ರಹಿಸುವ ಸ್ಥಳಗಳೂ ಹೊಂಡಗಳೇ ಆಗಿವೆ. ಇನ್ನು ಅನೇಕ ಟೋಲ್‌ಬೂತ್‌ಗಳಿಂದ ನಾಲ್ಕೈದು ಕಿಲೋ ಮೀಟರ್ ಮುಂದೆ ಮತ್ತು ಹಿಂದೆ ಮತ್ತೆ ತೀರಾ ಅಗಲವಿಲ್ಲದ ರಸ್ತೆಗಳು. ನ್ಯಾಯಾಲಯದ ಆದೇಶದಂತೆ ರಸ್ತೆ ಕಾಮಗಾರಿ ಪೂರ್ತಿಗೊಳಿಸದೇ ಟೋಲ್ ವಸೂಲಿ ಮಾಡುವಂತೆಯೇ ಇಲ್ಲ. ಇಂದು ದೇಶದಾದ್ಯಂತ ಟೋಲ್ ವಸೂಲಿ ಮಾಡುವ ರಸ್ತೆಗಳಲ್ಲಿ 50% ಕ್ಕಿಂತಲೂ ಹೆಚ್ಚಿನ ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡಿಲ್ಲ.
ಮಾತ್ರವಲ್ಲದೇ ರಸ್ತೆ ಕಾಮಗಾರಿ ಮುಗಿದು ಇಂತಿಷ್ಟು ವರ್ಷಗಳವರೆಗೆ ಮಾತ್ರ ಟೋಲ್ ಸಂಗ್ರಹಿಸಬೇಕೆಂಬ ನಿಯಮಾವಳಿಯೂ ಇದೆ. ಕೆಲವು ಕಡೆಯಂತೂ ಇಂತಹ ನಿಯಮಾವಳಿಗಳನ್ನು ಗಾಳಿಗೆ ತೂರಿ ಟೋಲ್ ಸಂಗ್ರಹಿಸಲಾಗುತ್ತಿದೆ. ಇದೀಗ ಅಂತಹ ಸುಲಿಗೆಗೊಂದು ಹೊಸ ವಿಧಾನವಾಗಿ ಫಾಸ್ಟ್ ಟ್ಯಾಗ್ ಜಾರಿಗೆ ತರಲಾಗುತ್ತಿದೆ.
ಫಾಸ್ಟ್ ಟ್ಯಾಗ್ ಎಂದರೇನು?
ಇನ್ನು ಮುಂದೆ ಟೋಲ್ ಕಟ್ಟಲು ನೀವು ನಗದು ಪಾವತಿಸಬೇಕಿಲ್ಲ. ನಿಮ್ಮ ತ್ರಿಚಕ್ರಕ್ಕಿಂತ ಹೆಚ್ಚಿನ ಚಕ್ರಗಳ ವಾಹನಗಳನ್ನು ಫಾಸ್ಟ್ ಟ್ಯಾಗ್ ನೋಂದಣಿ ಮಾಡಬೇಕು. ಫಾಸ್ಟ್‌ಟ್ಯಾಗ್‌ಗೆಂದೇ ಪ್ರತ್ಯೇಕ ಖಾತೆಯನ್ನು ತೆರೆಯಬಹುದು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ನಿಮ್ಮ ಖಾತೆಗೆ ಫಾಸ್ಟ್‌ಟ್ಯಾಗ್ ನೋಂದಣಿ ಮಾಡಬೇಕು. ನೋಂದಣಿ ಮಾಡಿದರೆ ನಿಮ್ಮ ವಾಹನಕ್ಕೆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್‌ವೊಂದನ್ನು ಅಂಟಿಸುತ್ತಾರೆ. ಅದಕ್ಕೊಂದು ಕೋಡ್ ಸಂಖ್ಯೆ ಕೊಡುತ್ತಾರೆ. ಅದಕ್ಕೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಕೋಡ್ ಎನ್ನಲಾಗುತ್ತದೆ. ಟೋಲ್ ಗೇಟ್‌ಗಳಲ್ಲಿ ನಿಮ್ಮ ವಾಹನ ಹಾದು ಹೋಗುವಾಗ ಅಲ್ಲಿನ ಕ್ಯಾಮೆರಾ ನಿಮ್ಮ ಫಾಸ್ಟ್‌ಟ್ಯಾಗನ್ನು ಸೆರೆಹಿಡಿಯುತ್ತದೆ. ಹಾಗೆ ಸೆರೆಹಿಡಿಯುವಾಗ ನಿಮ್ಮ ಕೋಡ್ ನಂಬರ್ ಅವರ ಕಂಪ್ಯೂಟರ್‌ನಲ್ಲಿ ದಾಖಲಾಗಿ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯಿಂದ ಟೋಲ್ ಶುಲ್ಕವನ್ನು ಕಡಿಯಲಾಗುತ್ತದೆ.
ನೀವು ಫಾಸ್ಟ್‌ಟ್ಯಾಗ್ ಖಾತೆ ತೆರೆಯದಿದ್ದರೆ ತೆರೆಯುವಂತೆ ನಿಮ್ಮ ಮೇಲೆ ಒಂದು ವಿಧದಲ್ಲಿ ದಬ್ಬಾಳಿಕೆ ಮಾಡಿ ಪರೋಕ್ಷ ಒತ್ತಡ ಹಾಕಲಾಗುತ್ತದೆ. ಅದು ಹೇಗೆಂದರೆ ಫಾಸ್ಟ್‌ಟ್ಯಾಗ್ ಖಾತೆ ತೆರೆಯದವರಿಗಾಗಿ ಒಂದು ಪ್ರತ್ಯೇಕ ಗೇಟು ಎಲ್ಲಾ ಟೋಲ್‌ಗಳಲ್ಲೂ ಇರುತ್ತವೆ. ಆ ಗೇಟ್ ಮೂಲಕ ಹಾದು ಹೋಗುವವರು ಈಗಿರುವ ಹಳೆಯ ಟೋಲ್‌ನ ದುಪ್ಪಟ್ಟು ಶುಲ್ಕ ತೆರಬೇಕು.
ಫಾಸ್ಟ್ ಟ್ಯಾಗ್ ಉದ್ದೇಶವೇನು..?
ಹೆದ್ದಾರಿ ಪ್ರಾಧಿಕಾರವು ಹೇಳುವಂತೆ
►ಫಾಸ್ಟ್ ಟ್ಯಾಗ್‌ನಿಂದ ಇಂಧನ ಉಳಿತಾಯವಾಗುತ್ತದೆ.
►ವಾಹನ ದಟ್ಟಣೆ ಕಡಿಮೆಯಾಗುತ್ತದೆ.
►ಪ್ರಯಾಣಿಕರ ಸಮಯ ವ್ಯರ್ಥವಾಗುವುದು ತಪ್ಪುತ್ತದೆ.
►ಟೋಲ್ ಗೇಟ್‌ಗಳಲ್ಲಿನ ಜಗಳ ಕೊನೆಯಾಗುತ್ತದೆ.
►ಟೋಲ್‌ಗಳು ಅಂತರಾಷ್ಟ್ರೀಯ ಗುಣಮಟ್ಟಕ್ಕೇರುತ್ತದೆ
ಹೌದು ಇವಿಷ್ಟು ಅಂಶಗಳಲ್ಲಿ ಕೊನೆಯ ಅಂಶವನ್ನು ಹೊರತುಪಡಿಸಿ ಉಳಿದೆಲ್ಲವೂ ಸತ್ಯ. ಆದರೆ ಇದರಿಂದ ವಾಹನ ಮಾಲಕನನ್ನು ಲೂಟಿ ಮಾಡಲಾಗುತ್ತದೆ ಎಂಬ ಸತ್ಯವನ್ನು ಮಾತ್ರ ಹೇಳಲಾಗುವುದಿಲ್ಲ.
ಫಾಸ್ಟ್ ಟ್ಯಾಗ್ ಮೂಲಕ ಹೇಗೆ ಲೂಟಿ ಮಾಡಲಾಗುತ್ತದೆ..?
►ಈಗ ಅಸ್ತಿತ್ವದಲ್ಲಿರುವ (ಹಳೆಯ) ಟೋಲ್ ನಿಯಮಾವಳಿಯಂತೆ ಅಪ್ ಎಂಡ್ ಡೌನ್ ಟೋಲ್ ಶುಲ್ಕವನ್ನು ಒಂದೇ ಬಾರಿ ಪಾವತಿಸುವಾಗ 25% ರಿಯಾಯಿತಿ ಇರುತ್ತದೆ. ಆದರೆ ಫಾಸ್ಟ್‌ಟ್ಯಾಗ್ ಮೂಲಕ ಪಾವತಿಸುವ ಟೋಲ್ ನಲ್ಲಿ ಅಂತಹ ರಿಯಾಯಿತಿ ಇರುವುದಿಲ್ಲ. ನೀವು ಎಷ್ಟು ಟೋಲ್‌ಗೇಟು ಮೂಲಕ ಹಾದು ಹೋಗುತ್ತೀರೋ ಅಷ್ಟು ಬಾರಿಯೂ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯಿಂದ ಶುಲ್ಕವನ್ನು ಕಡಿಯಲಾಗುತ್ತದೆ.
►ಈಗ ಅಸ್ತಿತ್ವದಲ್ಲಿರುವ (ಹಳೆಯ) ಟೋಲ್ ನಿಯಮಾವಳಿಯಂತೆ ಟೋಲ್ ಸಮೀಪದ ನಿವಾಸಿಗಳು ತಮ್ಮ ಸ್ಥಳೀಯತೆಯ ಗುರುತು ಚೀಟಿ ತೋರಿಸಿದರೆ ಉಚಿತವಾಗಿ ಸಾಗಬಹುದಿತ್ತು. ಫಾಸ್ಟ್‌ಟ್ಯಾಗ್ ನಲ್ಲಿ ಇಂತಹ ಯಾವ ರಿಯಾಯಿತಿಯೂ ಇರುವುದಿಲ್ಲ. ಆತ ದಿನಕ್ಕೆ ಹತ್ತು ಬಾರಿ ಟೋಲ್‌ಗೇಟ್ ಮೂಲಕ ಹಾದುಹೋದರೆ ಹತ್ತು ಬಾರಿಯೂ ಫಾಸ್ಟ್‌ಟ್ಯಾಗ್ ಖಾತೆಯಿಂದ ಟೋಲ್ ಶುಲ್ಕ ಕಡಿತವಾಗುತ್ತದೆ.
►ಕೆಲವು ಟೋಲ್‌ಗೇಟ್‌ಗಳಲ್ಲಿ ಒಮ್ಮೆ ಟೋಲ್ ಪಾವತಿಸಿ ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಕಾಲ ಎಷ್ಟು ಬಾರಿಯೂ ಹಾದು ಹೋಗಬಹುದು. ಫಾಸ್ಟ್‌ಟ್ಯಾಗ್ ಜಾರಿಗೆ ಬಂದ ಮೇಲೆ ಇದಕ್ಕೆ ಅವಕಾಶವಿಲ್ಲ. ನೀವು ಹೆಚ್ಚಿನ ಹೆದ್ದಾರಿಗಳಲ್ಲಿ ಮುನ್ನೂರು ಕಿಲೋ ಮೀಟರ್ ಚಲಿಸುವಾಗ ಸರಾಸರಿ ಆರು ಟೋಲ್‌ಗೇಟ್‌ಗಳಲ್ಲಿ ಶುಲ್ಕ ಪಾವತಿಸಬೇಕು.
►2015ರ ವಾಹನ ಗಣತಿಯ ಪ್ರಕಾರ ಭಾರತದಲ್ಲಿ ಇಪ್ಪತ್ತೊಂದು ಕೋಟಿ ವಾಹನಗಳಿತ್ತು. ಅದರಲ್ಲಿ ಹತ್ತು ಕೋಟಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಾಗಿತ್ತು. ಉಳಿದ ಹನ್ನೊಂದು ಕೋಟಿ ತ್ರಿಚಕ್ರಕ್ಕಿಂತ ಹೆಚ್ಚಿನ ಚಕ್ರದ ವಾಹನಗಳಾಗಿತ್ತು. (ಈಗ ಆ ಸಂಖ್ಯೆ ಬಹಳಷ್ಟು ಹೆಚ್ಚಿರಬಹುದು)
ಫಾಸ್ಟ್‌ಟ್ಯಾಗ್ ನಿಯಮಾವಳಿಯಂತೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ನೂರು ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು. ಹೀಗೆ ಹನ್ನೊಂದು ಕೋಟಿ ವಾಹನ ಮಾಲಕರು ನೂರು ರೂಪಾಯಿಯಂತೆ ಮಿನಿಮಮ್ ಬ್ಯಾಲೆನ್ಸ್ ಇಟ್ಟರೆ ಅದು ಹನ್ನೊಂದು ಸಾವಿರ ಕೋಟಿ ರೂಪಾಯಿಗಳಾಗುತ್ತದೆ. ಈ ದುಡ್ಡನ್ನು ಈಗಾಗಲೇ ಭಾರತದ ಆರ್ಥಿಕತೆಯನ್ನು ದಿವಾಳಿಯಂಚಿಗೆ ತಳ್ಳಿರುವ ಪ್ರಭುತ್ವ ಮತ್ತಷ್ಟು ಜನತೆಯ ದುಡ್ಡನ್ನು ಲೂಟಿ ಮಾಡುವುದಿಲ್ಲ ಎನ್ನುವ ಖಚಿತತೆ ಈ ದೇಶದ ಬಹುಸಂಖ್ಯಾತರಿಗೆ ಖಂಡಿತಾ ಇಲ್ಲ.
►ಫಾಸ್ಟ್‌ಟ್ಯಾಗ್‌ನಿಂದ ನಮ್ಮ ಟೋಲ್‌ಗೇಟ್‌ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ನಿರ್ಮಾಣವಾಗುತ್ತದೆ ಎಂದು ಹೆದ್ದಾರಿ ಪ್ರಾಧಿಕಾರ ಫಾಸ್ಟ್‌ಟ್ಯಾಗನ್ನು ಸಮರ್ಥಿಸುತ್ತದೆ. ಅಂತರಾಷ್ಟ್ರೀಯ ಗುಣಮಟ್ಟ ಎಂದರೆ ಏನು..?
ಅಂತಾರಾಷ್ಟ್ರೀಯ ಗುಣಮಟ್ಟ ಎಂದಲ್ಲ ಸಾಮಾನ್ಯ ಗುಣಮಟ್ಟವಾದರೂ ಟೋಲ್ ವಸೂಲಿ ಮಾಡುವಾಗ ಟೋಲ್ ಪಾವತಿಸಿದವನಿಗೆ ಕನಿಷ್ಠ ಅನುಕೂಲತೆಗಳನ್ನಾದರೂ ಮಾಡಬೇಕು.
ನಮ್ಮ ಅನೇಕ ಟೋಲ್‌ಗೇಟ್‌ಗಳಲ್ಲಿ ಸರ್ವಿಸ್ ರಸ್ತೆಗಳಿಲ್ಲ.
ಅಂಡರ್ ಪಾಸ್ ಅಥವಾ ಓವರ್‌ಬ್ರಿಡ್ಜ್ ಅತೀ ಅಗತ್ಯವಿರುವ ಟೋಲ್‌ಗೇಟ್ ಗಳಲ್ಲೂ ಸಾರ್ವಜನಿಕರು ವಾಹನದಟ್ಟಣೆಯಿರುವ ರಸ್ತೆಗಳಲ್ಲೇ ನಡೆದಾಡುವುದನ್ನು ಅನೇಕ ಟೋಲ್‌ಗೇಟ್ ಬಳಿ ಕಾಣಲು ಸಾಧ್ಯ.
►ಹೆಚ್ಚಿನ ಯಾವ ಟೋಲ್‌ಗೇಟ್‌ಗಳಲ್ಲೂ ಕನಿಷ್ಠ ತುರ್ತು ಆರೋಗ್ಯ ಸೇವೆಗಳೂ ಲಭ್ಯವಿಲ್ಲ.
►ಟೋಲ್ ಪಾವತಿಸುವ ವಾಹನದ ಮಾಲಕನ ವಾಹನ ಕೆಟ್ಟಾಗ ಅದಕ್ಕೆ ಸಹಾಯವೊದಗಿಸುವ ಮೆಕ್ಯಾನಿಕ್‌ಗಳೂ ಟೋಲ್‌ಗೇಟ್‌ಗಳಲ್ಲಿ ಲಭ್ಯವಿಲ್ಲ.
►ಹೆಚ್ಚಿನ ಯಾವ ಟೋಲ್‌ಗೇಟ್‌ಗಳಲ್ಲೂ ಪ್ರಯಾಣಿಕರಿಗಾಗಿ ಸುಸಜ್ಜಿತ ಶೌಚಾಲಯಗಳೂ ಇಲ್ಲ.
►ರಸ್ತೆಗೆ ತಡೆಗೋಡೆ ಅಗತ್ಯ ಇರುವ ಹೆಚ್ಚಿನ ಟೋಲ್ ರಸ್ತೆಗಳಲ್ಲಿ ರಸ್ತೆಯ ಬದಿಗೆ ತಡೆಗೋಡೆಗಳೂ ಇಲ್ಲ.
ಇವಿಷ್ಟು ಕನಿಷ್ಠ ಅಗತ್ಯಗಳನ್ನೂ ಪೂರೈಸಲಾಗದೇ ಅಂತರಾಷ್ಟ್ರೀಯ ಗುಣಮಟ್ಟದ ಬಗ್ಗೆ ಮಾತನಾಡಿ ಗಿಟ್ಟಿಸಿಕೊಳ್ಳಲು ಬಹುಶಃ ಭಾರತದಲ್ಲಿ ಮಾತ್ರ ಸಾಧ್ಯ..
ಒಂದೇ ಹೆದ್ದಾರಿಯಲ್ಲಿ ಐವತ್ತು ಕಿಲೋ ಮೀಟರ್ ಅಂತರದ ಟೋಲ್ ಶುಲ್ಕದಲ್ಲಿ ಬಾರೀ ವ್ಯತ್ಯಾಸವಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಟೋಲ್‌ಗಳು ಬಲು ದುಬಾರಿ. ಇನ್ನು ಮಹಾರಾಷ್ಟ್ರಕ್ಕೆ ಹೋದರೆ ಮತ್ತೂ ದುಬಾರಿ.. ಹೀಗ್ಯಾಕೆ..?
ಒಟ್ಟಿನಲ್ಲಿ ಫಾಸ್ಟ್‌ಟ್ಯಾಗ್ ಎನ್ನುವುದು ಹೆದ್ದಾರಿ ಪ್ರಾಧಿಕಾರ ಸುಲಿಗೆಗೆ ಕಂಡು ಹಿಡಿದ ಹೊಸ ವಿಧಾನವೇ ಹೊರತು ಬೇರೇನಲ್ಲ.