​ಬಾಲಾಪರಾಧ ಕಾರಣಕ್ಕೆ ಸರ್ಕಾರಿ ಉದ್ಯೋಗ ನಿರಾಕರಿಸಬಹುದೇ ?

Update: 2019-11-30 03:49 GMT

ಹೊಸದಿಲ್ಲಿ : ಬಾಲ್ಯದಲ್ಲಿ ಮಾಡಿದ್ದ ಅಪರಾಧದ ಕಾರಣಕ್ಕಾಗಿ ವಯಸ್ಕನಾದಾಗ ಆತನಿಗೆ ಸರ್ಕಾರಿ ಉದ್ಯೋಗ ಅಥವಾ ಇತರ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಗುವಾಗಿದ್ದಾಗ ಮಾಡಿದ ಆಪರಾಧ ಆತ ವಯಸ್ಕನಾದ ಬಳಿಕ ಆತನಿಗೆ ತಡೆಯಾಗಬಾರದು ಎಂದು ಸ್ಪಷ್ಟಪಡಿಸಿದೆ.

"ಕೆಲ ವಿಶೇಷ ಪರಿಸ್ಥಿತಿಯನ್ನು ಹೊರತುಪಡಿಸಿ, ಮಗುವಿನ ಅಪರಾಧ ದಾಖಲೆಯನ್ನು ಅಳಿಸಿಹಾಕಬೇಕು. ಹಿಂದಿನ ಹೊರೆ ಇಲ್ಲದೇ ಹೊಸ ಬದಕು ಆರಂಭಿಸಲು ಅವಕಾಶ ಮಾಡಿಕೊಡಬೇಕು" ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ವಿನೀತ್ ಸರನ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಅಪರಾಧ ದಾಖಲೆಗಳಿರುವವರಿಗೆ ನಿರಾಕರಿಸಲ್ಪಡುವ ಸರ್ಕಾರಿ ಉದ್ಯೋಗ ಪಡೆಯಲು ಈ ತೀರ್ಪು ಅವಕಾಶ ಮಾಡಿಕೊಡಲಿದೆ.
ಇಂಥ ವ್ಯಕ್ತಿಗಳ ಅಪರಾಧ ಹಿನ್ನೆಲೆ ಕಾರಣದಿಂದ ಸರ್ಕಾರಿ ಉದ್ಯೋಗ ನೀಡಲಾಗದು ಎಂಬ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದರೂ, ಅಪರಾಧ ಹಿನ್ನೆಲೆ ಇದೆ ಎಂಬ ಕಾರಣಕ್ಕಾಗಿ ಮಾಜಿ ಬಾಲಾಪರಾಧಿಯೊಬ್ಬನಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಸಬ್ ಇನ್‌ಸ್ಪೆಕ್ಟರ್ ಹುದ್ದೆ ನಿರಾಕರಿಸಲಾಗಿತ್ತು. ಹದಿಹರೆಯದಲ್ಲಿದ್ದಾಗ ಬಾಲಕಿಯೊಬ್ಬಳನ್ನು ಚುಡಾಯಿಸಿದ ಆರೋಪ ಈತನ ಮೇಲಿತ್ತು.

ಬಾಲ್ಯದ ಅಪರಾಧ ಹಿನ್ನೆಲೆಯ ಕಳಂಕ ಆತನ ಬದುಕಿನಲ್ಲಿ ಮುಂದುವರಿಯಲು ಅವಕಾಶ ನೀಡಬಾರದು. ಅದನ್ನು ಅಳಿಸಿದ ಅಧ್ಯಾಯ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಸರನ್ ಹೇಳಿದ್ದಾರೆ. ಇದು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ಸಂರಕ್ಷಣೆ) ಕಾಯ್ದೆಯ ಮೂಲ ಆಶಯವೂ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News