ಗುಂಪು ಥಳಿತ ನಿಯಂತ್ರಣಕ್ಕೆ ಕಾನೂನು ತಿದ್ದುಪಡಿ ಸಲಹೆಗೆ ಸಮಿತಿ ರಚನೆ: ಅಮಿತ್ ಶಾ

Update: 2019-12-04 12:51 GMT

ಹೊಸದಿಲ್ಲಿ: ಗುಂಪು ಥಳಿತ ಹಾಗೂ ಹತ್ಯೆ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ದಂಡ ಸಂಹಿತೆ ಹಾಗೂ ಕ್ರಿಮಿನಲ್ ದಂಡ ಸಂಹಿತೆಯಲ್ಲಿ ಸೂಕ್ತ ತಿದ್ದುಪಡಿಗಳನ್ನು ತರುವ ಕುರಿತಂತೆ ಸಲಹೆ ನೀಡಲು ಸರಕಾರ ಸಮಿತಿಯನ್ನು ರಚಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, ತಾನು ಈಗಾಗಲೇ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರುಗಳಿಗೆ ಪತ್ರ ಬರೆದು ಅವರ ಸಲಹೆಗಳನ್ನು ಕೇಳಿರುವುದಾಗಿ ತಿಳಿಸಿದರು. ಅನುಭವಿ ತನಿಖಾಧಿಕಾರಿಗಳನ್ನು ಹಾಗೂ ಸಾರ್ವಜನಿಕ ಅಭಿಯೋಜಕರನ್ನೂ ಈ ಕುರಿತಂತೆ ಸಂಪರ್ಕಿಸಲಾಗಿದೆ ಎಂದವರು ಮಾಹಿತಿ ನೀಡಿದರು.

ಸಮಿತಿಯನ್ನು ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಅಧೀನದಲ್ಲಿ ಸ್ಥಾಪಿಸಲಾಗಿದೆ, ತಿದ್ದುಪಡಿ ಶಿಫಾರಸು ಮಾಡುವ ವೇಳೆ ಸುಪ್ರೀಂ ಕೋರ್ಟ್ ಆದೇಶಗಳನ್ನು ಗಮನದಲ್ಲಿರಿಸಲಾಗುವುದು ಎಂದು ಶಾ ಹೇಳಿದರು.

ಗುಂಪು ಥಳಿತ, ಹತ್ಯೆ ಪ್ರಕರಣಗಳನ್ನು ತಡೆಯಲು ಪರಿಣಾಮಕಾರಿ ಹೊಸ ಕಾನೂನು ಜಾರಿಗೊಳಿಸುವ ಕುರಿತಂತೆ ಸಂಸತ್ತು ಪರಿಗಣಿಸಬೇಕು ಎಂದು ಈ ವರ್ಷದ ಜುಲೈ 17ರಂದು ನೀಡಿದ ತೀರ್ಪಿನಲ್ಲಿ  ಸುಪ್ರೀಂ ಕೋರ್ಟ್ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News