ವಿದ್ಯಾಲಯಗಳಲ್ಲಿ ಬೇಟೆಯಾಡುವ ಜಾತಿದೆವ್ವಗಳು
ನಿಝಾಮ್ ಅನ್ಸಾರಿ ಕಲ್ಲಡ್ಕ
ಆತ್ಮಹತ್ಯೆಯು ಒಂದು ತಾತ್ಕಾಲಿಕ ಸಮಸ್ಯೆಗೆ ಇರುವ ಶಾಶ್ವತವಾದ ಪರಿಹಾರವಾಗಿದೆ ಎಂಬ ಜಾನ್ ಗ್ರೀನ್ ಅವರ ಪ್ರಸ್ತಾವನೆಯನ್ನು ಐ.ಐ.ಟಿ ಮದ್ರಾಸಿನ ಮಾನವಿಕ ವಿಭಾಗದ ನಿಷ್ಕರುಣ ಫಾಕಲ್ಟಿಯ ಕ್ರೂರವಾದ ಮಾನಸಿಕ ಕಿರುಕುಳಕ್ಕೆ ಗುರಿ ಯಾಗಿ ಪ್ರಾಣತ್ಯಜಿಸಿದ ಫಾತಿಮಾ ಲತೀಫ್ ಎಂಬ ಸುಜಾಣೆ ಹುಡುಗಿ ಓದಿರಬಹುದೇ? ಅದೋ ಆತ್ಮಾಹುತಿ ಮಾಡಲೆಂದು ಹತ್ತನೇ ಮಹಡಿಯಿಂದ ಜಿಗಿದು, ಏಳನೇ ಅಂತಸ್ತು ತಲುಪಿದಾಗ ಮನಃಪರಿವರ್ತನೆಗೊಂಡ ಉಂಬರ್ಟೊ ಇಕೊ ಅವರ ಕಥಾ ಪಾತ್ರಧಾರಿಯ ಅನುಭವದಂತೆ ಆಗಿತ್ತೇ ಅವಳದ್ದು?
ಈ ಪ್ರಶ್ನೆಗಳಿಗೆ ನಮಗೆಂದೂ ಉತ್ತರ ಸಿಗದು. ಆದರೆ ಒಂದು ಸತ್ಯ ವಿದೆ. ಜಾನ್ ಗ್ರೀನ್ ಹೇಳಿದಂತೆ ತಾತ್ಕಾಲಿಕವಾದ ಒಂದು ಸಮಸ್ಯೆಯ ಒಬ್ಬಂಟಿ ಬಲಿಪಶುವಲ್ಲ ಫಾತಿಮಾ ಲತೀಫ್. ಜಾತೀಯತೆ ಮತ್ತು ಕೋಮುವಾದದ ಅಪಚಯ ರೇಖೆಗಳು ಕಾಲದುದ್ದಕ್ಕೂ ನಮ್ಮ ದೇಶದ ವಿದ್ಯಾಭ್ಯಾಸದ ಅಸ್ತಿತ್ವಕ್ಕೆ ಕಳಂಕವನ್ನು ತಂದೊಡ್ಡಿದೆ. ಏಕಲವ್ಯನ ಬೆರಳು ಗುರುದಕ್ಷಿಣೆಯಾಗಿ ಕೇಳಿದ ದ್ರೋಣಾಚಾರ್ಯರಿಗಿಂತಲೂ ಮೀರಿದ ಅಪಮಾನಕ್ಕೊಳಪಡಿಸುವಂತಹ ಈ ಕಥೆಯು ಕೇವಲ ವೇಮುಲಾನಿಂದಲೋ, ಫಾತಿಮಾಳಿಂದಲೋ ಅಂತ್ಯ ಕಾಣುತ್ತದೆ ಎಂದು ಭಾವಿಸುವುದು ಮೌಢ್ಯತೆಯಾಗಿದೆ.
ಮುಸ್ಲೀಮ್‌ನಾದ ಅಧ್ಯಾಪಕನೊಬ್ಬ ಸಂಸ್ಕೃತ ಪಾಠ ಮಾಡಿದರೆ, ಆಕಾಶವೇ ಕಳಚಿ ಬಿದ್ದು ಬಿಟ್ಟೀತು ಎಂಬಂತೆ ವೈಭವೀಕರಿಸಿ ಪ್ರತಿಭಟನೆ ನಡೆಸುವ ಬನಾರಸ್ ವಿದ್ಯಾಲಯದ ವಿದ್ಯಾರ್ಥಿಗಳ ಮನೋಭಾವ, ವೇದವನ್ನು ಕೇಳಿದ ಶೂದ್ರನ ಶ್ರವಣದೊಳಗೆ ಕಾದ ಸೀಸ ಸುರಿಯಬೇಕೆಂದು ಹೇಳಿದ ಪ್ರಾಚೀನ ಮನುಶಾಸನವೇ ಹೊರತು ಬೇರೇನಲ್ಲ. ಪರಿಣಾಮಗಳ ದುರ್ಗಮ ಹಾದಿಗಳನ್ನು ಹಿಮ್ಮೆಟ್ಟಿ, ವಾನರನಿಂದ ಆದಿಮ ಮನುಷ್ಯನೆಡೆಗೂ, ಕೊನೆಗೆ ಹೋಮೋಸೆಪಿಯನ್ನರ ಉತ್ತುಂಗತೆಯ ದಾಖಲಿಸುವ ಭಾರತೀಯ ಬ್ರಾಹ್ಮಣನೆಡೆಗೂ ತಲುಪಿದಂತಹ ಜೆನಟಿಕ್ ಮ್ಯುಟೇಶನ್( ವಂಶವಾಹಿಗಳ ಮಾರ್ಪಾಟು)ನಲ್ಲಿ ಆರ್ಜಿತಗೊಂಡ ಅನನ್ಯ ಸಾಧಾರಣವಾದ ಒಂದು ಜೈವ ಸಿದ್ಧಿಯಾಗಿದೆ ಈ ಕಠಿಣತೆಯ ಅಪರ ವಿರೋಧ ಮತ್ತು ಉತ್ಕಟವಾದ ಸ್ವಪ್ರಶಂಸೆ ಎಂಬುದು.
ಚರಿತ್ರೆಯ ವರ್ತಮಾನ
ಪ್ರತಿಭಾನ್ವಿತರಾದ ಅಂಬೇಡ್ಕರ್ ವಿದ್ಯಾರ್ಥಿಯಾಗಿದ್ದಾಗ ಎದುರಿಸಿದ ಕ್ರೂರತೆಗಳು, ದೌರ್ಜನ್ಯಗಳು ಬಹಳಷ್ಟು ವಿವರಿಸಲ್ಪಟ್ಟಿದೆ. ಅದರಲ್ಲೂ ಗಮನಿಸಬೇಕಾದುದೆಂದರೆ ಮೇಲ್ಜಾತಿಯವರು ಕಲಿಯುತ್ತಿದ್ದ ಶಿಕ್ಷಣಾಲಯಗಳಲ್ಲಿ ಬೆಂಚಲ್ಲಿ ಕೂರಲೂ ಬಿಡದ ಕಾರಣ, ಹರಿದ ಗೋಣಿ ಚೀಲವೊಂದನ್ನು ಜೊತೆಯಲ್ಲಿಟ್ಟುಕೊಂಡು ಅವರು ಶಾಲೆಗೆ ಹೋಗಿದ್ದರು ಎಂಬ ವಿಚಾರ. ಒಮ್ಮೆ ಗಣಿತದ ಒಂದು ಪ್ರಶ್ನೆಗೆ ಉತ್ತರ ಗೊತ್ತಿದ್ದ ಒಬ್ಬನೇ ಒಬ್ಬ ವಿದ್ಯಾರ್ಥಿ ಅವರಾಗಿದ್ದರು. ಅಧ್ಯಾಪಕರು ಬೋರ್ಡ್ ಮೇಲೆ ಅದನ್ನು ಮಾಡಿ ತೋರಿಸು ಎಂದಾಗ, ತರಗತಿಯಲ್ಲಿದ್ದ ಇತರ ಜನಿವಾರಧಾರಿಗಳು ಕೇಕೆ ಹಾಕಿದರು. ಒಬ್ಬ ಕೆಳಜಾತಿಯವನು ಬೋರ್ಡ್‌ನ ಬಳಿ ಹೋದರೆ ಅದರ ಹಿಂದೆ ಇಟ್ಟ ಅವರ ಹೆಜ್ಜೆಯು ಮಲಿನಗೊಳ್ಳುತ್ತದೆ ಎಂಬುದಾಗಿತ್ತು ಅವರ ಗದ್ದಲ. ಭವಿಷ್ಯದಲ್ಲಿ ಭಾರತದ ಸಂವಿಧಾನವನ್ನು ಬರೆದ ಆ ಹುಡುಗನ ಕೈಲಿದ್ದ ಚಾಕ್ ಪೀಸ್, ನೆಲಕ್ಕುರುಳಿತು. ಗದ್ಗದಿತನಾದ ಆ ಹುಡುಗ ಮತ್ತದೇ ಗೋಣಿ ಚೀಲದ ಮೇಲೆ ಅಡ್ಡಗಾಲು ಹಾಕಿ ಕುಳಿತುಕೊಂಡ.
ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ಮುಗಿಸಿ ಹಿಂದಿರುಗಿದ ನಂತರ ಕಾಲೇಜು ಅಧ್ಯಾಪಕ ನಾಗಿ ವೃತ್ತಿ ಆರಂಭಿಸಿದಾಗಲೂ, ಅಂಬೇಡ್ಕರ್‌ರಿಗೆ ಉಂಟಾದ ಕಹಿ ಅನುಭವಗಳು ಧಾರಾಳವಾಗಿತ್ತು. ಅವರ್ಣನಾದ ಅಧ್ಯಾಪಕ ತರಗತಿಗೆ ಕಾಲಿಟ್ಟ ಮಾತ್ರಕ್ಕೆ, ಸವರ್ಣೀಯರಾದ ವಿದ್ಯಾರ್ಥಿಗಳು ತರಗತಿಗೆ ಬಹಿಷ್ಕಾರ ಹಾಕಿ, ಕ್ಲಾಸಿನಿಂದ ಹೊರನಡೆದರು. ಆದರೆ ಜಾತಿ ರಾಕ್ಷಸರ ಅಟ್ಟಹಾಸಗಳು, ಬೆದರಿಕೆಗಳು ಅಂಬೇಡ್ಕರರ ನಿಶ್ಚಯದಾರ್ಢ್ಯದ ಎದುರು ಮೇಣದ ಬತ್ತಿಯಂತೆ ಕರಗಿ ಹೋದವು.
ಸಂವಿಧಾನ ಬರೆಯಲು ಸಿಕ್ಕ ಅವಕಾಶದ ಕುರಿತು ಒಮ್ಮೆ ಆ ಮಹಾನುಭಾವ ಹೀಗೆ ಹೇಳಿದರು ಸವರ್ಣೀಯನಿಗೆ ಒಂದು ವೇದಮ ಬೇಕಾದಾಗ ಅವನು ಅವರ್ಣನಾದ. ವ್ಯಾಸನ ಮುಂದೆ ತಲೆಬಾಗಿದ. ಅದೇ ಸವರ್ಣನಿಗೆ ಒಂದು ಇತಿಹಾಸವನ್ನು ರಚಿಸಬೇಕೆಂದೆನಿಸಿದಾಗ ಅವನು ವಾಲ್ಮೀಕಿಯ ಬಳಿ ತಲುಪಿದ. ಅವನಿಗೆ ಒಂದು ಸಂವಿಧಾನ ಬೇಕೆಂದೆನಿಸಿದಾಗ ನನ್ನ ಬಳಿ ಬಂದ.
ಆದರೆ ಅಂಬೇಡ್ಕರ್ ಸಂವಿಧಾನ ರಚಿಸಿದ ನಂತರದ ಸ್ವತಂತ್ರ ಭಾರತದಲ್ಲೂ ದಲಿತ ವಿದ್ಯಾರ್ಥಿಗಳ ಅನುಭವ ವೇನೂ ಮೊದಲಿಗಿಂತ ಭಿನ್ನವಾಗಿರಲಿಲ್ಲ. ಗಂಟೆ ಬಾರಿಸುವ ಮುನ್ನ ವಿಶಾಲವಾದ ವಿದ್ಯಾಲಯ ಮತ್ತು ಪರಿಸರವನ್ನೂ ಗುಡಿಸಿ ಶುಚಿಗೊಳಿಸಬೇಕಾದ ಕೆಲಸ ಪ್ರಾಂಶುಪಾಲರು ದಲಿತನಾದ ತನ್ನ ಮೇಲೆ ಹೇರಿದುದರ ಯಾತನೆಗಳು ಓಂ ಪ್ರಕಾಶ್ ವಾಲ್ಮೀಕಿ ತನ್ನ ಆತ್ಮಕಥೆಯಲ್ಲಿ ವಿವರಿಸುತ್ತಾರೆ. ಒಬ್ಬ ಸವರ್ಣನಿಗೆ ದಲಿತ ಸ್ತ್ರೀಯಿಂದ ಹುಟ್ಟಿದ ಅರೆಜಾತಿಯವನಾದುದರಿಂದಲೇ ವಿದ್ಯಾಲಯದಲ್ಲಿ ಎದುರಿಸಿದ ಮಾನಸಿಕ ಪೀಡನೆಗಳ ಕುರಿತು ಶರಣ್‌ಕುಮಾರ್ ಲಿಂಬಾಲರು ಬರೆಯುತ್ತಾರೆ. ಕಲಿಕಾ ಪ್ರವಾಸದ ವೇಳೆಯಲ್ಲೂ ಕೂಡ ಜಾತಿಯಾಧಾರದಲ್ಲಿ ವಿದ್ಯಾರ್ಥಿಗಳನ್ನು ವಿಭಜಿಸಿ, ಆಹಾರ ಸೇವನೆ ಮತ್ತು ಆಟವಾಡಲು ಷರತ್ತು ವಿಧಿಸಿದ ಅಂದಿನ ಆ ಅಧ್ಯಾಪಕರು, ಚೆನ್ನೈ ಐಐಟಿಯ ಸುದರ್ಶನ್ ಅವರಂತೆ ಸರ್ವ ಬಿರುದಾಂಕಿತರಾಗಿರದಿದ್ದರೂ, ಮನಸ್ಸಿನಲ್ಲಿ ಅದೇ ಕಿರಾತಕ ಜಾತಿಪ್ರೇತಗಳಿಗೆ ರಹಸ್ಯಮಾರ್ಗಗಳನ್ನು ತೆರೆದುಕೊಟ್ಟವರಾಗಿದ್ದರು.
ಲಕ್ಷಣ ಹೊತ್ತ ಬಲಿ:
ಹೈಡ್ರಾಹೆಡ್ ಟ್ರಾವೆಲಿಂಗ್ ಸರ್ಕಸ್ ಎಂದು ಅರುಂಧತಿ ರಾಯ್ ಹೇಳಿದಂತೆ ಹಿಂದುತ್ವದ ಅಭೂತಪೂರ್ವವಾದ ಬೆಳವಣಿಗೆಯ ಮೂಲಕ, ಭಾರತದಲ್ಲಿ ಜಾತಿದೆವ್ವಗಳಿಗೆ ಇನ್ನೂ ಹೆಚ್ಚಿನ ಲಕ್ಷಣಗಳನ್ನು ಹೊಂದಿದ ಬಲಿಗಳನ್ನು ಬಹುಬೇಗನೆ ಪತ್ತೆ ಹಚ್ಚಲು ಸಾಧ್ಯವಾಯಿತು ಎಂಬುದು ವಿಧಿಯ ಒಂದು ನೈಸರ್ಗಿಕ ಪರಿಣಾಮವಾಗಿತ್ತು. ಒಂದು ಕಾಲದಲ್ಲಿ ಕರಿಯರು ಮತ್ತು ಅಮೆರಿಕದ ನಾಗರಿಕರು ಅನುಭವಿಸುತ್ತಿದ್ದ ಕ್ರೂರತೆಗಳು ಹಾಗೂ ವಿವೇಚನೆಗಳು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಸ್ಲಾಮೋಫೋಬಿಯದ ರೂಪವು ಊರ್ಜಿತಗೊಳ್ಳುವುದರ ಕುರಿತು ಡೇವಿಡ್ ತಿಯೋಗೋಲ್ಬರ್ಗ್‌ರಂತಹವರು ಬೋಧಿಸಿದ್ದಾರೆ. ಭಾರತದ ಬ್ರಾಹ್ಮಣ್ಯವೂ ಅದರ ನವ ಯೌವನ ದಲ್ಲಿ ಕಣ್ಣಿಟ್ಟಿರುವುದೂ ಇದೇ ಬಲಿಯನ್ನೇ ಎಂಬುದಕ್ಕೆ ಸಾಕ್ಷ್ಯಗಳು ಧಾರಾಳ.
ಮುಸ್ಲಿಂ ವಿದ್ಯಾರ್ಥಿಗಳು ವಿದ್ಯಾಲಯಗಳಲ್ಲಿ ಎದುರಿಸುವ ಮತಸ್ಪರ್ಧಾ ಪೈಪೋಟಿಯ ಕುರಿತಾಗಿ ‘ದಿ ಹಿಂದೂ’ ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ (17-11-2019) ವಿಶ್ಲೇಷಣಾತ್ಮಕ ಚರ್ಚೆ ನಡೆಸಲಾಗಿದೆ. ಕ್ಲಾಸಿನ ಇನ್ನೊಬ್ಬ ವಿದ್ಯಾರ್ಥಿ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಆ ಲೇಖನದಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಪರಕೀಯರಂತೆ ಕಾಣುವ ವಿದ್ಯಮಾನಗಳನ್ನು ನೇರ ಪುರಾವೆಗಳ ಮೂಲಕ ಅರ್ಚನ ನಾಥನ್ ವಿವರಿಸುತ್ತಾರೆ. ಕೆಲವು ಉದಾಹರಣೆಗಳು ಹೀಗಿವೆ: ಒಂಬತ್ತನೇ ಹರೆಯದ ಸೋಯಯೊಂದಿಗೆ ಸಹಪಾಠಿಯೊಬ್ಬಳು ಕೇಳಿದ ಪ್ರಶ್ನೆಯು ನಿಷ್ಕಳಂಕವಾಗಿತ್ತು. ನಿನ್ನ ತಂದೆಗೆ ಮನೆಯಲ್ಲಿ ಬಾಂಬ್ ತಯಾರಿಸುವ ಕೆಲಸವೇ? ಸೋಯಾಳ ತಂದೆಯ ಗಡ್ಡ ಬಿಟ್ಟ ಫೋಟೊವೊಂದನ್ನು ನೋಡಿಯಾಗಿತ್ತು ಅವಳ ಪ್ರಶ್ನೆ. ಆದರೆ ಆ ವಿಷಯ ಅಲ್ಲಿಗೇ ಮುಗಿಯಲಿಲ್ಲ. ಸೋಯಾಳ ಸಹಪಾಠಿಗಳು ಅವಳ ಹತ್ತಿರ ಕುಳಿತು ಆಹಾರ ಸೇವಿಸಲು ಹಿಂದೇಟು ಹಾಕಿದರು. ಬೀಫ್ ತಿನ್ನುವವಳೊಂದಿಗೆ ಹೇಗೆ ಫ್ರೆಂಡ್‌ಶಿಪ್ ಮಾಡಿಕೊಳ್ಳೋದು ಎಂದು ಗಾಬರಿ. ತರಗತಿಯೊಳಗಿನ ನಿರಂತರವಾದ ಜನಾಂಗೀಯತೆಯ ಸಣ್ಣ ಹರೆಯದವರ ಮೇಲಿನ ಪ್ರಯೋಗಗಳೂ ಅದೆಷ್ಟೋ ಮುಸ್ಲಿಂ ವಿದ್ಯಾರ್ಥಿಗಳನ್ನು ಡಿಪ್ರೆಶನ್‌ನತ್ತ ತಳ್ಳಿಹಾಕುತ್ತಿರುವುದಾಗಿಯೂ, ಹಲವರು ಮನಃಶಾಸ್ತ್ರ ಕ್ಲಿನಿಕ್‌ಗಳಲ್ಲಿ ಅಭಯ ಯಾಚಿಸಿ ಹೋಗುವುದಾಗಿಯೂ ಲೇಖಕಿ ಹೇಳುತ್ತಾರೆ.
ಖ್ಯಾತ ಲೇಖಕಿ ನತಾಷಾ ಭದ್ವರಿನ ಅಭಿಪ್ರಾಯದಂತೆ, ಮಕ್ಕಳ ನಡುವೆ ಇಸ್ಲಾಮೋಫೋಬಿಯಾ ಅದರ ವ್ಯಾಪ್ತಿ ವಿಸ್ತರಣೆಗೊಳ್ಳಲು ಕಾರಣ, ದಿನಕಳೆದಂತೆ ಶಕ್ತಿಯಾರ್ಜಿಸುತ್ತಿರುವ ಕಾಶ್ಮೀರ, ಪಾಕ್, ಬಾಂಗ್ಲಾದೇಶದ ವಿರುದ್ಧದ ಮನೋಭಾವನೆ ಗಳು ಮತ್ತು ಹೇಳಿಕೆಗಳಾಗಿವೆ. ಮುಸ್ಲಿಮನಾದ ಗಂಡನಿಗೆ ಹುಟ್ಟಿದ ಮಗಳು ಸಹರಿಗೆ ಉಂಟಾದ ಅನುಭವವನ್ನು ಭದ್ವರ್ ವಿವರಿಸುತ್ತಾರೆ. ತಾನು ಪಾಕಿಸ್ತಾನದವಳಾ ಎಂದು ಹಲವು ಬಾರಿ ಅವಳೊಂದಿಗೆ ಸಹಪಾಠಿಗಳು ಕೇಳುತ್ತಾರಂತೆ. ಹೊಸ ಪಠ್ಯಪುಸ್ತಕಗಳಲ್ಲಿ ಸೇರಿಕೊಂಡ ಇಸ್ಲಾಂ ವಿರೋಧವು ಮುಸ್ಲಿಂ ವಿದ್ಯಾರ್ಥಿಗಳು ಎದುರಿಸುತ್ತಿರುವಂತಹ ವಿವೇಚನೆಗೆ ಹೆಚ್ಚಿನ ಪುಷ್ಠಿ ನೀಡುವಂತಹದ್ದಾಗಿದೆ ಎಂದು ಅರ್ಚನಾ ನಾಥನ್ ಹೇಳುತ್ತಾರೆ. ಟಿಪ್ಪುವನ್ನು ಓರ್ವ ಮತಾಂಧನಾಗಿ ಆರೋಪಿಸುವ ರಾಜ್ಯ ಸರಕಾರ ಅವರ ಕುರಿತ ಎಲ್ಲಾ ಪಾಠಗಳನ್ನೂ ಪಠ್ಯಪುಸ್ತಕಗಳಿಂದ ತೆಗೆದು ಹಾಕಲು ನಿರ್ಧರಿಸಿದೆ. ಮುಸ್ಲಿಂ ಇತಿಹಾಸದ ಪಿಶಾಚೀಕರಣದೊಂದಿಗೆ ನಡೆಯುವ ಹಿಂದುತ್ವ ನೇತಾರರ ಮೂರ್ತೀಕರಣವು ಅಲ್ಪ ಸಂಖ್ಯಾತರಿಗೆ ಅಪಾಯ ಸೂಚನೆಗಳನ್ನು ನೀಡುವಂತಹದ್ದಾಗಿದೆ.
ಚರಿತ್ರೆಯ ವಾಸ್ತವಗಳು ಇಲ್ಲಿ ಅಳಿಸಿ ಹಾಕಲ್ಪಟ್ಟು, ಬದಲಿಗೆ ಕಟ್ಟು ಕಥೆಗಳನ್ನು ವಾಸ್ತವಗಳಾಗಿ ಚಿತ್ರೀಕರಿಸುವ ಹುನ್ನಾರಗಳು ನಡೆಯುತ್ತಿವೆ. 1568 ರಲ್ಲಿ ನಡೆದ ಹಲ್ದಿಘಾಟಿ ಕದನದಲ್ಲಿ ಮೊಗಲ್ ಸೈನ್ಯದೊಂದಿಗೆ ಸಮರ ಸಾರಿದ ರಾಜಪೂತರ ರಾಜನಾಗಿದ್ದ ರಾಣಾ ಪ್ರತಾಪ್ ಸಿಂಗ್ ಸೋತು ಓಡಿ ಹೋದುದು ನಿಜವಾದ ಇತಿಹಾಸ. ಆದರೆ ಇಂದು ರಾಜಸ್ಥಾನದಲ್ಲಿ ಕಲಿಸಲಾಗುವ ಪಠ್ಯಪುಸ್ತಕಗಳಲ್ಲಿ ಹೇಳುವಂತೆ ಗೆಲುವು ಸಾಧಿಸಿದ್ದು ರಾಣಾ ಪ್ರತಾಪ್ ಸಿಂಗ್ ಎಂಬುದಾಗಿದೆ. ಕಾರಣ ಗಾಯಗೊಂಡರೂ ರಾಣಾ ಸಿಂಗ್ ಓಡಿ ರಕ್ಷಣೆ ಪಡೆದಿದ್ದನಲ್ಲವೇ? ರಜಪುತ್ರ ಧೀರತೆ ಎಂಬ ಮಿಥ್ಯವನ್ನು ಮತ್ತೊಮ್ಮೆ ವೈಭವೀಕರಿಸುವ ಶ್ರಮವೆನ್ನುವುದಕ್ಕಿಂತಲೂ ಮಿಗಿಲಾಗಿ ಅಪರರನ್ನು ಸಂಪೂರ್ಣವಾಗಿಯೂ ನಿರ್ವೀರ್ಯ ಗೊಳಿಸಬೇಕು ಎಂಬುದಾಗಿದೆ ಈ ರೀತಿಯ ನಕಲಿ ಇತಿಹಾಸದ ನಿರ್ಮಾಣಗಳ ಪ್ರಧಾನ ಉದ್ದೇಶ. ಇದಿಷ್ಟು ಅಖ್ಯಾನಗಳು ರಂಗೇರುವ ಒಂದು ಸಮಾಜದಲ್ಲಿ ಜಾತಿ-ಮತ- ಪಥ ಪಂಥ ಗಳ ಬಿಗಿಯಾದ ಹಿಡಿತದಿಂದ ಪಾರಾಗಲಾಗದೆ, ಈ ಭಾರವ ಹೊರಲಾಗದೆ ರೋಹಿತ್ ವೇಮುಲಾ, ಫಾತಿಮಾ ರಂತಹ ಒಂದಿಬ್ಬರು ಆತ್ಮಹತ್ಯೆ ಮಾಡಿಕೊಳ್ಳದಿದ್ದರೇನೇ ಅದ್ಭುತ ಬಿಡಿ.
ಭಾರತದ ಒಂದು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಥೀಸಿಸ್ (ಪ್ರೌಢ ಪ್ರಬಂಧ) ಸಮರ್ಪಿಸಿದ ಬಳಿಕ ಮೇಲ್ವಿಚಾರಕರೊಂದಿಗೆ, ತನ್ನ ಅಧ್ಯಯನದ ವಲಯದಲ್ಲಿ ನಿಪುಣರಾದ ಪರೀಕ್ಷಕರ ಹೆಸರುಗಳಿಗಾಗಿ ಅವರು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಬಹಳ ಪ್ರಸಿದ್ಧರೆನಿಸಿದ ಓರ್ವ ಅಧ್ಯಾಪಕರ ಪ್ರೊಫೈಲನ್ನು ನೋಡಿದಾಗ ಅವರನ್ನು ಕಲಮಿನಲ್ಲಿ ಸೇರಿಸಿಕೊಳ್ಳಬಹುದೇ ಎಂದು ಜಾತ್ಯತೀತನಾಗಿದ್ದ ಮೇಲ್ವಿಚಾರಕರೊಂದಿಗೆ ಅವರು ಕೇಳಿದರು. ಆಗ ಒಬ್ಬ ಮುಸ್ಲಿಂ ಸಂಶೋಧಕನಿಗೆ ಮುಸ್ಲಿಮನೇ ಆದ ಪರೀಕ್ಷಕ ಲಭಿಸುವುದೆಂದರೆ ಅದಕ್ಕೆ ಡೈರೆಕ್ಟರ್ ಅನುಮತಿ ನೀಡಲಾರರು ಎಂದಾಗಿತ್ತು ಮೇಲ್ವಿಚಾರಕನ ಉತ್ತರ. ಭಾರತದಲ್ಲಿ ಐಐಟಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸವರ್ಣ ಕುಲದಲ್ಲಿ ಹುಟ್ಟಿದವರಾಗಿದ್ದಾರೆ. ಅವರ ಮೇಲ್ವಿಚಾರಕರು ಮತ್ತು ಪರೀಕ್ಷಕರು ಅದೇ ಕುಲದಿಂದಲೇ ಬಂದವರು. ಆದರೆ ಅದ್ಯಾವುದೂ ಯಾವ ಡೈರೆಕ್ಟರ್‌ಗಳಿಗೂ ವಿಷಯವೇ ಅಲ್ಲ.