ನಮ್ಮ ಹಕ್ಕುಗಳನ್ನು ಸರಿಯಾಗಿ ಚಲಾಯಿಸೋಣ
ಜಾಗತಿಕ ಮಾನವ ಹಕ್ಕುಗಳ ಘೋಷಣೆಗೆ (UDHR) 1948 ಡಿಸೆಂಬರ್ 23ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಒಪ್ಪಿಗೆ ನೀಡಿತು. ಅದು ತನ್ನ ಸದಸ್ಯ ರಾಷ್ಟ್ರಗಳಿಗೆ ಹಲವಾರು ನಾಗರಿಕ, ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳಿಗೆ ಉತ್ತೇಜನ ನೀಡಬೇಕೆಂದು ಆಗ್ರಹಿಸುತ್ತದೆ. ಅದು ಈ ಹಕ್ಕುಗಳನ್ನು ಜಗತ್ತಿನಲ್ಲಿ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯ ಬುನಾದಿ ಎಂದು ಹೇಳಿದೆ. ಈ ಘೋಷಣೆಯು ತನ್ನ ಸದಸ್ಯ ರಾಷ್ಟ್ರಗಳ ನಾಗರಿಕರಿಗೆ ಸಂಬಂಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಆ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಮೊದಲ ಅಂತರ್‌ರಾಷ್ಟ್ರೀಯ ನ್ಯಾಯ ಸಮ್ಮತ ಪ್ರಯತ್ನವಾಗಿದೆ.
ಮಾನವ ಹಕ್ಕುಗಳ ವ್ಯಾಖ್ಯಾನ: 1993ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳು ರಕ್ಷಣೆಯ ಕಾಯ್ದೆಯ ಸೆಕ್ಷನ್ 2(ಡಿ)ಯಲ್ಲಿ ಮಾನವ ಹಕ್ಕು ಅಂದರೆ ಓರ್ವ ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾಭಿಮಾನ (ಗೌರವ)ಕ್ಕೆ ಸಂಬಂಧಿಸಿದ ಹಕ್ಕುಗಳು ಎಂದು ವ್ಯಾಖ್ಯಾನಿಸಿದೆ.
ಭಾರತದಲ್ಲಿ ಮಹಿಳೆಯರಿಗಾಗಿ ಮಾನವ ಹಕ್ಕುಗಳು:
ಮಹಿಳೆಯರ ಕಲ್ಯಾಣ ಮತ್ತು ರಕ್ಷಣೆಗಾಗಿ ದೇಶದ ಪ್ರತಿಯೊಂದು ರಾಜ್ಯಗಳು ಆಯೋಗಗಳನ್ನು ರಚಿಸಿವೆ. ಈ ಆಯೋಗಗಳು ಪುರುಷರಿಗೆ ನೀಡಿದಷ್ಟೆ ಸಮಾನ ಹಕ್ಕುಗಳನ್ನು ಮಹಿಳೆಯರಿಗೂ ನಿಡಬೇಕೆಂದು ಸ್ಪಷ್ಟಪಡಿಸಿದೆ. ಭಾರತದ ಸಂವಿಧಾನದ 14ನೇ ಪರಿಚ್ಛೇದವು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುತ್ತದೆ. ನಮ್ಮ ಸಂವಿಧಾನದ 42ನೇ ಪರಿಚ್ಛೇದವು ಮಹಿಳೆಯರಿಗೆ ಸಮಾನತೆ, ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಹಾಗೂ ಹೆರಿಗೆ ಭತ್ತೆ ನೀಡಬೇಕೆಂದು ತಿಳಿಸಿದೆ. ಸತಿ ಕಾನೂನನ್ನು ರದ್ದುಗೊಳಿಸಲಾಗಿದೆ ಮತ್ತು ಬಾಲ್ಯ ವಿವಾಹವನ್ನು ನಿರ್ಬಂಧಿಸಲಾಗಿದೆ. ಮದುವೆಯಾಗುವ ಬಾಲಕಿಗೆ 18 ವರ್ಷಗಳಾಗಿರಬೇಕು ಮತ್ತು ಮದುವೆಗೆ ಅವಳ ಒಪ್ಪಿಗೆ ಪಡೆಯಬೇಕಾಗಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಇದನ್ನು 1993ರ ಅಕ್ಟೋಬರ್ 12ರಂದು ರಚಿಸಲಾಯಿತು. ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಸಂಬಂಧಿಸಿದಂತೆ ಭಾರತದ ನಾಗರಿಕರ ಕಳಕಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರೂಪುಕೊಡುತ್ತದೆ.
ಮಾನವ ಹಕ್ಕುಗಳ ಕಾಯ್ದೆಯನ್ನು ‘1993 ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ’ ಎಂದು ಕರೆಯಲಾಗುತ್ತದೆ. ಈ ಕಾಯ್ದೆಯನ್ನು ಇಡೀ ಭಾರತಕ್ಕೆ ವಿಸ್ತರಿಸಲಾಗಿದೆ.
ಆಯೋಗದ ಕಾರ್ಯಗಳು:
ರಾಜಕೀಯ ಹಕ್ಕುಗಳು, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳು ಮತ್ತು ಸಮೂಹ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಆಯೋಗವು ಅನೇಕ ಜವಾಬ್ದಾರಿಗಳನ್ನು ಹೊಂದಿದೆ. ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ಸರಕಾರಿ ಸೇವಕನು ಈ ಹಕ್ಕುಗಳನ್ನು ಉಲ್ಲಂಘಿಸಿದಾಗ, ಕೋರ್ಟ್‌ನಲ್ಲಿ ಬಾಕಿ ಉಳಿದ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಯಾವುದೇ ಪ್ರಕರಣದ ಕುರಿತು ಅಂತಹ ನ್ಯಾಯಾಲಯಗಳ ಅನುಮತಿಯೊಂದಿಗೆ ಕಲಾಪದಲ್ಲಿ ಮಧ್ಯ ಪ್ರವೇಶಿಸುವುದು, ಜೈಲಿನಲ್ಲಿರುವ ಕೆೈದಿಗಳ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಿ, ಶಿಫಾರಸುಗಳನ್ನು ಸಲ್ಲಿಸಲು ಕಾರಾಗೃಹಗಳಿಗೆ ಭೆೇಟಿ ನೀಡುವುದು, ಸಂವಿಧಾನ ಅಥವಾ ಯಾವುದೇ ಕಾನೂನಿನಲ್ಲಿ ತಿಳಿಸಲಾದ ನಿಯಮಗಳ ಪರಿಶೀಲನೆ ನಡೆಸುವುದು ಮತ್ತು ಇವುಗಳ ಪರಿಣಾಮಕಾರಿ ಜಾರಿಗೆ ಕೈಗೊಳ್ಳುವ ಕ್ರಮಗಳ ಕುರಿತು ಶಿಫಾರಸು ಮಾಡುವುದು, ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವುದು ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವುದು. ಮಾನವ ಹಕ್ಕುಗಳ ಕ್ಷೇತ್ರದಲ್ಲಿ ದುಡಿಯುತ್ತಿರುವ ಸರಕಾರೇತರ ಸಂಘಟನೆಗಳು ಮತ್ತು ಸಂಸ್ಥೆಗಳ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವುದು ಇವೆಲ್ಲಾ ಆಯೋಗದ ಮುಖ್ಯ ಜವಾಬ್ದಾರಿಗಳಾಗಿವೆ.
ಮಾನವ ಹಕ್ಕುಗಳು ನ್ಯಾಯೋಚಿತ ವಿಚಾರಣೆಯ ಹಕ್ಕು, ಗುಲಾಮಗಿರಿಯ ವಿರುದ್ಧ ರಕ್ಷಣೆ, ಜನಾಂಗ ಹತ್ಯೆ, ಅಭಿವ್ಯಕ್ತಿ ಸ್ವಾತಂತ್ರ ಮತ್ತು ಶಿಕ್ಷಣದ ಹಕ್ಕನ್ನು ಒಳಗೊಂಡಂತೆ ವಿವಿಧ ಹಕ್ಕುಗಳನ್ನು ಒಳಗೊಳ್ಳುತ್ತವೆ ಎಂಬ ಬಗ್ಗೆ ಒಮ್ಮತವಿದೆ. ಮಾನವ ಹಕ್ಕುಗಳ ಸಾಮಾನ್ಯ ಚೌಕಟ್ಟಿನೊಳಗೆ ಯಾವ ನಿರ್ದಿಷ್ಟ ಹಕ್ಕುಗಳನ್ನು ಸೇರಿಸಬೇಕು ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿದೆ. ಕೆಲವೊಂದು ಚಿಂತಕರು ಸೂಚಿಸುವ ಪ್ರಕಾರ, ಮಾನವ ಹಕ್ಕುಗಳ ದುರುಪಯೋಗವನ್ನು ತಪ್ಪಿಸಬೇಕಾಗಿದೆೆ.
ಮಾನವ ಹಕ್ಕುಗಳ ಚಳವಳಿಯ ಅನೇಕ ಮೂಲಭೂತ ವಿಚಾರಗಳು ಎರಡನೇ ಜಾಗತಿಕ ಯುದ್ಧದ ನಂತರ ಮತ್ತು ಹತ್ಯಾಕಾಂಡದ ಘಟನೆಗಳ ಬೆಳವಣಿಗೆಯಲ್ಲಿ ಅಭಿವೃದ್ಧಿ ಹೊಂದಿದವು. ಪ್ಯಾರಿಸ್‌ನಲ್ಲಿ ಅದು ಅಂಗೀಕರಿಸಲ್ಪಟ್ಟಿತ್ತು. 1948ರ ಹಿಂದಿನ ಜನರಿಗೆ ಸಾರ್ವತ್ರಿಕ ಮಾನವ ಹಕ್ಕುಗಳ ಆಧುನಿಕ ಕಲ್ಪನೆಯಿರಲಿಲ್ಲ. ಮಾನವ ಹಕ್ಕುಗಳ ಸಂವಾದದ ನಿಜವಾದ ಮುಂಚೂಣಿಯು ಮಧ್ಯಕಾಲೀನ ನೈಸರ್ಗಿಕ ಕಾನೂನು.
ಆಧುನಿಕ ಮಾನವ ಹಕ್ಕುಗಳ ವಾದಗಳು 20ನೇ ಶತಮಾನದ ಉತ್ತರಾರ್ಧದಲ್ಲಿ ಗುಲಾಮಗಿರಿ, ಚಿತ್ರಹಿಂಸೆ, ನರಹತ್ಯೆ ಮತ್ತು ಯುದ್ಧದ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿ ಹೊರಹೊಮ್ಮಿತು. ಮಾನವನಲ್ಲಿ ಅಂತರ್ಗತವಾಗಿರುವ ದೌರ್ಬಲ್ಯವನ್ನು ಮೀರಿ ಮುನ್ನಡೆವಂತೆ ಮತ್ತು ಸಮಾಜಮುಖಿಯಾಗಿ ಬದುಕುವಂತೆ ಮಾನವ ಹಕ್ಕುಗಳ ಯುನಿವರ್ಸಲ್ ಡಿಕ್ಲರೇಷನ್‌ಗೆ ಪ್ರಸ್ತಾವನೆಯ ಮೊದಲ ವಾಕ್ಯ ‘‘ಎಲ್ಲಾ ಮಾನವರು ಮುಕ್ತವಾಗಿ, ಘನತೆ ಮತ್ತು ಹಕ್ಕುಗಳಲ್ಲಿ ಸಮಾನವಾಗಿ ಇರಬೇಕು.’’
ಮಾನವ ಹಕ್ಕುಗಳ ನ್ಯಾಯಾಲಯಗಳು: ಮಾನವ ಹಕ್ಕುಗಳ ಉಲ್ಲಂಘನೆಯಿಂದ ಸಂಭವಿಸುವ ಅಪರಾಧಗಳ ಕುರಿತು ತ್ವರಿತ ವಿಚಾರಣೆ ನಡೆಸಲು ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾುಮೂರ್ತಿಗಳ ಅನುಮತಿಯೊಂದಿಗೆ ಪ್ರತಿಯೊಂದು ಜಿಲ್ಲೆಯಲ್ಲೂ ಮಾನವ ಹಕ್ಕುಗಳ ನ್ಯಾಯಾಲಯ ಸ್ಥಾಪಿಸಲು ಆದೇಶ ಹೊರಡಿಸಿದೆ.
ಭಾರತ ದೇಶದ ಪ್ರಜೆಗಳಾದ ನಾವು ನಮ್ಮ ಹಕ್ಕುಗಳನ್ನು ಸರಿಯಾಗಿ ಚಲಾಯಿಸಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಗೆ ಬುನಾದಿ ಹಾಕೋಣ.