ಕುಸಿಯುತ್ತಲೇ ಇರುವ ಆರ್ಥಿಕತೆ
ಆರ್ಥಿಕ ಇಳಿಕೆಯಿಂದಾಗಿ ಅಸಂಘಟಿತ ಕ್ಷೇತ್ರದ ಮೇಲೆ ತೀವ್ರವಾದ ಹೊಡೆತ ಬಿದ್ದಿರುವುದು ನಿಜವಾದರೂ ಅಧಿಕೃತ ಅಂಕಿಅಂಶಗಳು ಆ ವಲಯದ ವಾಸ್ತವತೆಯನ್ನು ಸಾಕಷ್ಟು ಪ್ರತಿಫಲಿಸುವುದಿಲ್ಲ. ಕಾರ್ಮಿಕ ಮಾರುಕಟ್ಟೆಯೂ ಸಹ ಈ ಆರ್ಥಿಕ ಇಳಿಮುಖತೆಯಿಂದ ಪೆಟ್ಟು ತಿಂದಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ಪ್ರಕಾರ ನಿರುದ್ಯೋಗದ ದರವು ಅಕ್ಟೋಬರ್ ತಿಂಗಳಲ್ಲಿ ಶೇ. 8.45ಕ್ಕೆ ತಲುಪಿತ್ತು ಮತ್ತು ಅದು ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚಿನದಾಗಿತ್ತು.
ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡರೂ ಸಹ ಭಾರತದ ಆರ್ಥಿಕತೆಯ 2019ರ ಜುಲೈ-ಸೆಪ್ಟ್ಟಂಬರ್ ಅವಧಿಯಲ್ಲಿ ಮತ್ತಷ್ಟು ತೀವ್ರವಾಗಿ ಇಳಿಕೆಯಾಗಿದೆ. 2019-20ರ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಭಾರತದ ಒಟ್ಟಾರೆ ದೇಶೀಯ ಉತ್ಪನ್ನವು (ಜಿಡಿಪಿ) ಶೇ.5ರ ಅಭಿವೃದ್ಧಿ ದರದಿಂದ ಶೇ.4.5ಕ್ಕೆ ಕುಸಿದಿದೆ. ಹೀಗಾಗಿ ಅಭಿವೃದ್ಧಿ ದರವು ಸತತವಾಗಿ ಆರು ತ್ರೈಮಾಸಿಕಗಳಲ್ಲೂ ನಿರಂತರವಾಗಿ ಇಳಿಕೆಯಾಗುತ್ತಲೇ ಇದ್ದು ಈ ಅವಧಿಯಲ್ಲಿ ಒಟ್ಟಾರೆಯಾಗಿ ಶೇ.3.6ರಷ್ಟು ಕುಸಿತವಾಗಿದೆ. 2013ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರವು ಶೇ.4.3ರಷ್ಟು ಕುಸಿತವಾಗಿದ್ದನ್ನು ಬಿಟ್ಟರೆ ಹೊಸ ಲೆಕ್ಕಾಚಾರದ ಜಿಡಿಪಿ ಸರಣಿ ಪ್ರಾರಂಭವಾದ ಮೇಲೆ ಈ ತ್ರೈಮಾಸಿಕದ ಶೇ.4.5ರ ದರವೇ ಅತ್ಯಂತ ಕನಿಷ್ಠಮಟ್ಟದ್ದಾಗಿದೆ.
ಸರಕಾರಿ ವೆಚ್ಚದಲ್ಲಿ ಹೆಚ್ಚಳವಾಗಿದ್ದರೂ ಆರ್ಥಿಕ ಸನ್ನಿವೇಶವು ಹೆಚ್ಚೆಚ್ಚು ಹದಗೆಡುತ್ತಿರುವುದು ಖಾಸಗಿ ಬೇಡಿಕೆಯಲ್ಲಿ ಯಾವುದೇ ಸುಧಾರಣೆ ಕಂಡುಬರದಿರುವುದನ್ನು ಸೂಚಿಸುತ್ತವೆ. ಬಳಕೆಯು ಹೆಚ್ಚದಿರುವುದರಿಂದ ಮತ್ತು ಖಾಸಗಿ ಹೂಡಿಕೆಯು ಸ್ಥಗಿತಗೊಂಡಿರುವುದರಿಂದ ಇದು ಸಂಭವಿಸಿದೆ. ವಾರ್ಷೀಕರಣಗೊಂಡ ಸರಣಿ ಅನುಕ್ರಮಾನುಸಾರ ನೋಡಿದಲ್ಲಿ ಜಿಡಿಪಿ ಅಭಿವೃದ್ಧಿ ದರವು ಶೇ.3.6 ಮಾತ್ರ ಆಗಿದೆ. ಇನ್ನು ಖಾಸಗಿ ಅಂತಿಮ ಬಳಕೆ ವೆಚ್ಚದ ಧೋರಣೆಯನ್ನು ಗಮನಿಸಿದಲ್ಲಿ ಮೊದಲ ತ್ರೈಮಾಸಿಕದಲ್ಲಿ ಶೇ.3.1ರಷ್ಟಿದ್ದದ್ದು ಎರಡನೇ ತ್ರೈಮಾಸಿಕದಲ್ಲಿ ಶೇ.5ಕ್ಕೆ ಏರಿಕೆಯಾಗಿದೆ. ಆದರೆ ಈ ಅಂಕಿಅಂಶವು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಬಳಕೆ ವೆಚ್ಚವು ಕುಸಿತಗೊಂಡಿರುವ ಬಗ್ಗೆ ಬರುತ್ತಿರುವ ವರದಿಯ ವಾಸ್ತವಕ್ಕೆ ತದ್ವಿರುದ್ಧವಾಗಿದೆ. ಅಲ್ಲದೆ ಒಟ್ಟಾರೆ ಸ್ಥಿರ ಬಂಡವಾಳ ಸಂಚಯ(ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಷನ್)ವು ಮೊದಲ ತ್ರೈಮಾಸಿಕದಲ್ಲಿ ಶೇ.4ರಷ್ಟಿದ್ದದ್ದು ಎರಡನೇ ತ್ರೈಮಾಸಿಕದಲ್ಲಿ ಶೇ.1ಕ್ಕೆ ಕುಸಿದಿದೆ. ಆದರೆ ಸರಕಾರದ ಅಂತಿಮ ಬಳಕೆ ವೆಚ್ಚ ಮಾತ್ರ ಮೊದಲ ತ್ರೈಮಾಸಿಕದಲ್ಲಿ ಶೇ.8.8ರಷ್ಟಿದ್ದದ್ದು ಎರಡನೇ ತ್ರೈಮಾಸಿಕದಲ್ಲಿ ಶೇ. 15.6ಕ್ಕೆ ಏರಿದೆ. ಕಾರ್ಪೊರೇಟ್‌ಗಳ ಹೆಚ್ಚುತ್ತಿರುವ ಋಣಭಾರ, ಹಣಕಾಸೇತರ ಬ್ಯಾಂಕಿಂಗ್ ಕಂಪೆನಿಗಳಲ್ಲಿನ ಬಿಕ್ಕಟ್ಟು, ಯಾವುದೇ ರಿಸ್ಕು ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಬ್ಯಾಂಕುಗಳು ..ಇತ್ಯಾದಿಗಳೆಲ್ಲವೂ ಒಟ್ಟು ಸೇರಿ ಹೂಡಿಕೆಯ ಬೇಡಿಕೆಯನ್ನು ಕಡಿತಗೊಳಿಸಿದೆ. ಭಾರತವು ಎದುರಿಸುತ್ತಿರುವ ಕುಸಿತಕ್ಕೆ ಇತರ ಜಾಗತಿಕ ಕಾರಣಗಳ ಜೊತೆಜೊತೆಗೆ ಬಂಡವಾಳ ಹೂಡಿಕೆಯ ಸಾಲದ ಬಿಕ್ಕಟ್ಟೆಂಬ ಸರಬರಾಜು ವಲಯದ ಸಮಸ್ಯೆಯೂ ಸೇರಿಕೊಂಡಿದೆ. ಸುದೀರ್ಘ ಕಾಲದಿಂದ ಮುಂದುವರಿಯುತ್ತಿರುವ ಬೇಡಿಕೆಯ ಇಳಿಕೆಯ ಕಾರಣದಿಂದ ಕೈಗಾರಿಕೆಗಳು ತಮ್ಮ ಉತ್ಪಾದನಾ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಉತ್ಪಾದನೆ ಮಾಡುವ, ಹೂಡಿಕೆಯ ವರ್ತುಲದಲ್ಲಿ ವಿಳಂಬವಾಗುವ ಧೋರಣೆಗಳು ಮತ್ತು ಒಟ್ಟಾರೆ ಅಭಿವೃದ್ಧಿ ದರದ ಕುಸಿತವೂ ಸಹ ದೀರ್ಘ ಕಾಲ ಮುಂದುವರಿಯಬಹುದು.
ಇನ್ನು ಒಟ್ಟಾರೆ ಮೌಲ್ಯ ಸಂಚಯ (ಗ್ರಾಸ್ ವ್ಯಾಲ್ಯೂ ಆಡೆಡ್ (ಜಿವಿಎ)ದ ಲೆಕ್ಕಾಚಾರದಲ್ಲಿ ನೋಡುವುದಾದಲ್ಲಿ ಅದು ಕಳೆದ ತ್ರೈಮಾಸಿಕದಲ್ಲಿ ಶೇ.4.9 ಇದ್ದದ್ದು ಹಾಲಿ ತ್ರೈಮಾಸಿಕದಲ್ಲಿ ಶೇ.4.3ಕ್ಕೆ ಕುಸಿದಿದೆ. ಹಲವು ಉತ್ಪಾದಕಾ ಕ್ಷೇತ್ರಗಳು ಕುಸಿತವನ್ನು ದಾಖಲಿಸಿದ್ದು ಕಳವಳಕಾರಿಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಶೇ.2ರಷ್ಟಿದ್ದ ಕೃಷಿಯ ಅಭಿವೃದ್ಧಿಯು ಈ ಎರಡನೇ ತ್ರೈಮಾಸಿಕದಲ್ಲಿ ಶೇ.2.1ರಷ್ಟಾಗಿದ್ದರೆ, ಗಣಿಗಾರಿಕೆಯು ಶೇ.2.7ರ ಅಭಿವೃದ್ಧಿ ದರದಿಂದ ಶೇ. 0.1ಕ್ಕೆ ಕುಸಿದಿದೆ. ಉತ್ಪಾದಕಾ ಕ್ಷೇತ್ರವು ಮೊದಲ ತ್ರೈಮಾಸಿಕದಲ್ಲಿ ಶೇ.0.6ರಷ್ಟು ಹೆಚ್ಚಳವನ್ನು ದಾಖಲಿಸಿದ್ದರೆ ಹಾಲಿ ತ್ರೈಮಾಸಿಕದಲ್ಲಿ ಶೇ.1ರಷ್ಟು ಕುಸಿತವನ್ನೇ ದಾಖಲಿಸಿದೆ. ವಿದ್ಯುತ್ ಮತ್ತಿತರ ಸಾರ್ವಜನಿಕ ಬಳಕೆ ಮೂಲ ಸೌಕರ್ಯಗಳು ಮೊದಲ ತ್ರೈಮಾಸಿಕದಲ್ಲಿ ಶೇ.8.6ರಷ್ಟು ಹೆಚ್ಚಳವನ್ನು ದಾಖಲಿಸಿದ್ದರೆ ಎರಡನೇ ಅವಧಿಯಲ್ಲಿ ಅದು ಶೇ. 3.6ಕ್ಕೆ ಕುಸಿದಿದೆ. ನಿರ್ಮಾಣ ಕ್ಷೇತ್ರದ ಅಭಿವೃದ್ಧಿ ಮೊದಲ ಅವಧಿಯಲ್ಲಿ ಶೇ. 5.7ರಷ್ಟಿದ್ದದ್ದು ಎರಡನೇ ಅವಧಿಯಲ್ಲಿ ಶೇ.3.3ಕ್ಕೆ ಇಳಿದಿದೆ. ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂಪರ್ಕ ಕ್ಷೇತ್ರಗಳ ಅಭಿವೃದ್ಧಿಯು ಮೊದಲ ಅವಧಿಯಲ್ಲಿ ಶೇ.7.1ರಷ್ಟಿದ್ದದ್ದು ಎರಡನೇ ಅವಧಿಯಲ್ಲಿ ಶೇ.4.8ಕ್ಕೆ ಕುಸಿದಿದೆ. ಹಣಕಾಸು ಕ್ಷೇತ್ರವು ಮೊದಲ ತ್ರೈಮಾಸಿಕದಲ್ಲಿ ಶೇ.5.9ರಷ್ಟು ಅಭಿವೃದ್ಧಿಯನ್ನು ದಾಖಲಿಸಿದ್ದರೆ ಎರಡನೇ ಅವಧಿಯಲ್ಲಿ ಶೇ.5.8ಕ್ಕೆ ಇಳಿದಿದೆ. ಸರಕಾರದ ವೆಚ್ಚವನ್ನು ಆಧರಿಸುವ ಸಾರ್ವಜನಿಕ ಆಡಳಿತ, ರಕ್ಷಣೆ ಇನ್ನಿತರ ವಲಯಗಳು ಮೊದಲ ಅವಧಿಯಲ್ಲಿ ಶೇ.8.5ರಷ್ಟಿದ್ದದ್ದು ಈಗ ಶೇ.11.6ರಷ್ಟು ಏರಿಕೆಯನ್ನು ದಾಖಲಿಸಿವೆ.
ಆರ್ಥಿಕ ಇಳಿಕೆಯಿಂದಾಗಿ ಅಸಂಘಟಿತ ಕ್ಷೇತ್ರದ ಮೇಲೆ ತೀವ್ರವಾದ ಹೊಡೆತ ಬಿದ್ದಿರುವುದು ನಿಜವಾದರೂ ಅಧಿಕೃತ ಅಂಕಿಅಂಶಗಳು ಆ ವಲಯದ ವಾಸ್ತವತೆಯನ್ನು ಸಾಕಷ್ಟು ಪ್ರತಿಫಲಿಸುವುದಿಲ್ಲ. ಕಾರ್ಮಿಕ ಮಾರುಕಟ್ಟೆಯೂ ಸಹ ಈ ಆರ್ಥಿಕ ಇಳಿಮುಖತೆಯಿಂದ ಪೆಟ್ಟು ತಿಂದಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ಪ್ರಕಾರ ನಿರುದ್ಯೋಗದ ದರವು ಅಕ್ಟೋಬರ್ ತಿಂಗಳಲ್ಲಿ ಶೇ. 8.45ಕ್ಕೆ ತಲುಪಿತ್ತು ಮತ್ತು ಅದು ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚಿನದಾಗಿತ್ತು. ನಿರುದ್ಯೋಗದ ದರವು ಆಗಸ್ಟ್‌ನಲ್ಲಿ ಶೇ.8.19ರಷ್ಟು ಮತ್ತು ಸೆಪ್ಟಂಬರ್‌ನಲ್ಲಿ ಶೇ.7.16ರಷ್ಟೂ ದಾಖಲಾಗಿತ್ತು. ಸಿಎಂಐಇ ನಡೆಸುವ ಕನ್ಸ್ಯೂಮರ್ ಪಿರಮಿಡ್ಸ್ ಹೌಸ್‌ಹೋಲ್ಡ್ ಸರ್ವೇ ಪ್ರಕಾರ 2019ರ ನವೆಂಬರ್ ವೇಳೆಗೆ ಶ್ರಮಶಕ್ತಿಯ ಭಾಗೀದಾರಿಕೆಯು 77 ಅಂಶಗಳಷ್ಟು ಕುಸಿತವಾಗಿ ಶೇ.42.37ಕ್ಕೆ ತಲುಪಿತ್ತು. ಇದು ಕಳೆದ ಮೂರು ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಸಿಎಂಐಇ ಅಧ್ಯಯನ ಮಾಡಿದ 25 ರಾಜ್ಯಗಳಲ್ಲಿ 15 ರಾಜ್ಯಗಳ ಕಾರ್ಮಿಕ ಶಕ್ತಿಯ ಭಾಗೀದಾರಿಕೆ ಅಂಶಗಳು ಅಕ್ಟೋಬರ್‌ಗಿಂತ ನವೆಂಬರ್‌ನಲ್ಲಿ ಹೆಚ್ಚು ಸಂಕುಚಿತಗೊಂಡಿತ್ತು. ಉದ್ಯೋಗ ಮತ್ತು ಆದಾಯದ ನಷ್ಟಗಳು ಬಳಕೆ ವೆಚ್ಚವನ್ನು ಕಡಿತಗೊಳಿಸಿದೆ ಮತ್ತು ಇದಕ್ಕೆ ಪ್ರಧಾನ ಕಾರಣ ಗ್ರಾಮೀಣ ಬಿಕ್ಕಟ್ಟೇ ಆಗಿದೆ.
ಮೊದಲ ತ್ರೈಮಾಸಿಕದ ಅಂಕಿಅಂಶಗಳು ಬಿಡುಗಡೆಯಾದಾಗಲೇ ಆರ್ಥಿಕತೆಯ ಪುನಶ್ಚೇತನಕ್ಕೆ ಅಗತ್ಯವಾಗಿದ್ದ ಬೇಡಿಕೆಯನ್ನು ಸೃಷ್ಟಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಅದು ಈಗಲೂ ನಡೆದಿಲ್ಲ. ಆದ್ದರಿಂದಲೇ ಗ್ರಾಮೀಣ ಕ್ಷೇತ್ರದ ಪುನಶ್ಚೇತನವನ್ನು ಆದ್ಯತೆಯ ಮೇಲೆ ಮಾಡಬೇಕಿದೆ. ಆದರೆ ಪಿಎಮ್-ಕಿಸಾನ್ ಯೋಜನೆಯನ್ನೂ ಸರಿಯಾಗಿ ಜಾರಿ ಮಾಡುತ್ತಿಲ್ಲ. ನರೇಗಾ ಯೋಜನೆಯ ಬಾಕಿ ಹಣವನ್ನು ಬಿಡುಗಡೆ ಮಾಡುತ್ತಿಲ್ಲ. ಅದರ ಬಾಕಿ ಮೊತ್ತವೇ ಈಗ 25,000 ಕೋಟಿ ರೂಪಾಯಿಗಳನ್ನು ಮೀರುತ್ತಿದೆ. ಈ ಸುಳಿಯಿಂದ ಹೊರಬರಬೇಕೆಂದರೆ ಬಳಕೆ ಮತ್ತು ಆದಾಯವನ್ನು ಒದಗಿಸುವ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು. ಆದರೆ ಅದು ಅಷ್ಟು ತ್ವರಿತವಾಗಿಯೆೀನೂ ಸಂಭವಿಸುವ ವಿದ್ಯಮಾನವಲ್ಲ.
ಸುಲಭವಾದ ದೇಶೀಯ ಹಣಕಾಸು ಪರಿಸ್ಥಿತಿಗಳು, ಸಕಾರಾತ್ಮಕ ವಿತ್ತೀಯ ಸೂಚನೆಗಳು ಹಾಗೂ ಸರಬರಾಜಿನಲ್ಲಿರುವ ತೊಡಕುಗಳನ್ನು ನಿವಾರಿಸುವ ಮೂಲಕ ಮಾತ್ರ ಆರ್ಥಿಕತೆಯಲ್ಲಿ ಹುರುಪನ್ನು ಹುಟ್ಟಿಸಲು ಸಾಧ್ಯ. ಸುಗಮವಾದ ಪರಿವರ್ತನಾ ಪ್ರಕ್ರಿಯೆಗಳು ಜಾರಿಯಲ್ಲಿದ್ದಾಗ ವರ್ತುಲ ಸ್ವರೂಪದ ಆರ್ಥಿಕ ಇಳಿಕೆಯನ್ನು ಮ್ಯಾಕ್ರೋ ಹಣಕಾಸು ನೀತಿಗಳ ಮೂಲಕ ಸುಧಾರಿಸಬಹುದು. ಆದರೆ ಹಣಕಾಸು ವ್ಯವಸ್ಥೆಯು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಇಂದಿನ ಸಂದರ್ಭದಲ್ಲಿ ಆರ್ಥಿಕತೆಗೆ ಹೆಚ್ಚಿನ ಹಣಕಾಸನ್ನು ಒದಗಿಸುವುದರಿಂದ ಆರ್ಥಿಕತೆಯ ಮೇಲೆ ಯಾವುದೇ ವಾಸ್ತವಿಕ ಪರಿಣಾಮಗಳು ಆಗುವುದಿಲ್ಲ. ಆದ್ದರಿಂದ ವಿಸ್ತರಣಾತ್ಮಕ ವಿತ್ತೀಯ ನೀತಿಗಳ ಮೂಲಕ ಮಾತ್ರ ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ. ಆದರೆ ಆರ್ಥಿಕತೆಯಲ್ಲಿ ಪುನಶ್ಚೇತನ ತರುವ ಸಲುವಾಗಿ ಕಳೆದ 9 ತಿಂಗಳಿಂದ ಸತತವಾಗಿ ಪಾಲಿಸಿ ರೆಪೋ ದರಗಳನ್ನು 135 ಮೂಲಾಂಶಗಳಷ್ಟು ಇಳಿಸಿದ್ದ ರಿಸರ್ವ್ ಬ್ಯಾಂಕು ಹಣದುಬ್ಬರ ಹೆಚ್ಚಾಗಬಹುದೆಂಬ ಆತಂಕದಿಂದ ಎಲ್ಲರ ನಿರೀಕ್ಷೆಗಳಿಗೆ ತದ್ವಿರುದ್ಧವಾಗಿ ಡಿಸೆಂಬರ್ 5ರಂದು ರೆಪೋ ದರದಲ್ಲಿ ಯಾವುದೇ ಇಳಿಕೆಯನ್ನು ಮಾಡಲಿಲ್ಲ. ಅಲ್ಲದೆ ಅದು 2020ರ ಸಾಲಿನ ಭಾರತದ ಒಟ್ಟಾರೆ ವಾರ್ಷಿಕ ಜಿಡಿಪಿ ಅಭಿವೃದ್ಧಿ ದರವನ್ನು ಶೇ. 6.1ರಿಂದ ಶೇ. 5ಕ್ಕೆ ಇಳಿಸಿದೆ ಮತ್ತು ಚಿಲ್ಲರೆ ಹಣದುಬ್ಬರ ದರದ ಬಗ್ಗೆ ಮೊದಲಿದ್ದ ಅಂದಾಜಾದ ಶೇ.3.5- 3.7 ಅನ್ನು ಶೇ. 5.1-4.7ಕ್ಕೇರಿಸಿದೆ. ಅಕ್ಟೋಬರ್ ಕೊನೆಯ ವೇಳೆಗಾಗಲೇ ಭಾರತದ ವಿತ್ತೀಯ ಕೊರತೆಯು ಹಾಕಿಕೊಳ್ಳಲಾಗಿದ್ದ ಮಿತಿಯ ಶೇ.100ರಷ್ಟನ್ನು ದಾಟಿಯಾಗಿತ್ತು. ಇಂದಿನ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ಸರಕಾರವು ತಾನು ವಿಧಿಸಿಕೊಂಡಿರುವ ಶೇ.3.3ರ ವಿತ್ತೀಯ ಕೊರತೆಯ ಮಿತಿಯನ್ನು ಸಡಿಲಿಸುವುದು ಒಳ್ಳೆಯದು. ಏಕೆಂದರೆ ಅದನ್ನು ಪಾಲಿಸಬೇಕೆಂದರೆ ಸರಕಾರವು ತನ್ನ ವೆಚ್ಚಗಳ ಮೇಲೆ ನಿರ್ಬಂಧವನ್ನು ಹೇರಿಕೊಳ್ಳಬೇಕಾಗುತ್ತದೆ. ಆದರೆ ಅದು ಆರ್ಥಿಕತೆಯಲ್ಲಿ ಇಂದು ಅತ್ಯಗತ್ಯವಾಗಿರುವ ಬೇಡಿಕೆಯನ್ನು ಮತ್ತಷ್ಟು ಕುಗ್ಗಿಸುತ್ತದೆ.