2020ರಿಂದ ವಾಟ್ಸ್‌ಆ್ಯಪ್ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ

Update: 2019-12-11 11:33 GMT

ಹೊಸದಿಲ್ಲಿ,ಡಿ.11: ಇನ್ನು ಕೆಲವೇ ವಾರಗಳ ಬಳಿಕ ವಾಟ್ಸ್‌ಆ್ಯಪ್ ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಕಂಪನಿಯು 2020,ಫೆಬ್ರವರಿ 1ರಿಂದ ಕೆಲವು ಹಳೆಯ ಮೊಬೈಲ್ ಪ್ಲಾಟ್‌ಫಾರ್ಮ್ ಗಳಿಗೆ ಬೆಂಬಲವನ್ನು ಸ್ಥಗಿತಗೊಳಿಸಲಿದೆ,ಹೀಗಾಗಿ ಹಲವಾರು ಆ್ಯಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳಲ್ಲಿ ಈ ಆ್ಯಪ್ ಕಾರ್ಯ ನಿರ್ವಹಿಸದಿರಬಹುದು.

ವಾಟ್ಸ್‌ಆ್ಯಪ್‌ನ ‘ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ ’ವಿಭಾಗದಲ್ಲಿ ನೀಡಿರುವ ಮಾಹಿತಿಯಂತೆ ಆ್ಯಂಡ್ರಾಯ್ಡ್ 2.3.7 ಮತ್ತು ಅದಕ್ಕಿಂತ ಹಳೆಯ ಆಪರೇಟಿಂಗ್ ಸಿಸ್ಟಮ್ ಆಧರಿಸಿ ಕಾರ್ಯಾಚರಿಸುತ್ತಿರುವ ಆ್ಯಂಡ್ರಾಯ್ಡ್ ಪೋನ್‌ಗಳು ಮತ್ತು ಐಒಎಸ್ 8ರಲ್ಲಿ ಕಾರ್ಯಾಚರಿಸುತ್ತಿರುವ ಮತ್ತು ಅದಕ್ಕಿಂತ ಹಳೆಯ ಆವೃತ್ತಿಗಳ ಐಒಎಸ್ ಫೋನ್‌ಗಳು ಮುಂದಿನ ವರ್ಷದಿಂದ ವಾಟ್ಸ್‌ಆ್ಯಪ್‌ನಿಂದ ವಂಚಿತವಾಗಲಿವೆ. ಅಲ್ಲದೆ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ಗಳ ಈ ಹಳೆಯ ಆವೃತ್ತಿಗಳು 2020,ಫೆ.1ರಿಂದ ಹೊಸ ಖಾತೆಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಮತ್ತು ಹಾಲಿ ಇರುವ ಖಾತೆಗಳನ್ನು ಮರುದೃಢೀಕರಿಸಲೂ ಸಾಧ್ಯವಾಗುವುದಿಲ್ಲ.

 ಇದರ ಜೊತೆಗೆ 2019,ಡಿ.31ರಿಂದ ಎಲ್ಲ ವಿಂಡೋ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಸ್ಥಗಿತಗೊಳ್ಳಲಿದೆ ಮತ್ತು ಇದೇ ತಿಂಗಳಲ್ಲಿ ಮೈಕ್ರೋಸಾಫ್ಟ್ ತನ್ನ ವಿಂಡೋಸ್ 10 ಮೊಬೈಲ್ ಒಎಸ್‌ಗಳಿಗೆ ಬೆಂಬಲವನ್ನು ನಿಲ್ಲಿಸಲಿದೆ. 2019,ಜು.1ರ ನಂತರ ಆ್ಯಪ್ ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಲಭ್ಯವಿರುವುದಿಲ್ಲ ಎಂದೂ ಕಂಪನಿಯು ತಿಳಿಸಿದೆ.

ಆದರೆ ನೀವು ವಿಂಡೋಸ್ ಸ್ಮಾರ್ಟ್ ಫೋನ್ ಹೊಂದಿದ್ದರೆ ಮತ್ತು 2019,ಡಿ.31ಕ್ಕೆ ನಿಮ್ಮ ಎಲ್ಲ ಚಾಟ್‌ಗಳು ಹಾಗೂ ಮಾಹಿತಿಯನ್ನು ಕಳೆದುಕೊಳ್ಳದಿರಲು ಬಯಸಿದ್ದರೆ ನಿಮ್ಮ ಚಾಟ್‌ಗಳನ್ನು ಉಳಿಸಿಕೊಳ್ಳುವ ಪರ್ಯಾಯ ಮಾರ್ಗವೊಂದು ಇಲ್ಲಿದೆ.

ನೀವು ಎಕ್ಸ್‌ಪೋರ್ಟ್ ಮಾಡಲು ಬಯಸಿರುವ ಚಾಟ್‌ನ್ನು ತೆರೆದು ‘ಗ್ರುಪ್ ಇನ್ಫೋ’ವನ್ನು ಟ್ಯಾಪ್ ಮಾಡಿ. ಈಗ ‘ಎಕ್ಸ್‌ಪೋರ್ಟ್ ಚಾಟ್’ನ್ನು ಟ್ಯಾಪ್ ಮಾಡಿದರೆ ಮೀಡಿಯಾದೊಂದಿಗೆ ಅಥವಾ ಮೀಡಿಯಾರಹಿತವಾಗಿ ಚಾಟ್‌ನ್ನು ಡೌನ್‌ಲೋಡ್ ಮಾಡುವ ಆಪ್ಷನ್ ನಿಮಗೆ ದೊರೆಯುತ್ತದೆ. ನಿಮ್ಮ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ಎಲ್ಲ ಚಾಟ್‌ಗಳನ್ನು ಎಕ್ಸ್‌ಪೋರ್ಟ್ ಮಾಡಿ.

ಜಿಯೊ ಫೋನ್ ಮತ್ತು ಜಿಯೊ ಫೋನ್ 2 ಸೇರಿದಂತೆ kaios +OS ಹೊಂದಿರುವ ಆಯ್ದ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಕಾರ್ಯಾಚರಣೆ ಮುಂದುವರಿಯಲಿದೆ.

ಆ್ಯಂಡ್ರಾಯ್ಡ್ ಒಎಸ್ 4.0.3 +,ಐಫೋನ್ ಐಒಎಸ್ 9+,ಜಿಯೊ ಫೋನ್ ಮತ್ತು ಜಿಯೊ ಫೋನ್ 2 ಸೇರಿದಂತೆ KaiOS2.5.1+OS ಹೊಂದಿರುವ ಅಪ್‌ಡೇಟೆಡ್ ಡಿವೈಸ್‌ಗಳನ್ನು ಬಳಸುವಂತೆ ವಾಟ್ಸ್‌ಆ್ಯಪ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News