ಬೆಣ್ಣೆಯ ತೂಕ
ಕುಗ್ರಾಮದಲ್ಲೊಬ್ಬ ಮುಗ್ಧ ರೈತನಿದ್ದ. ಹಸು-ಎಮ್ಮೆ, ಕುರಿ-ಕೋಳಿಗಳೊಡನೆ ಬದುಕನ್ನು ಸಾಗಿಸುತ್ತಿದ್ದ ಅವನು ನಗರದ ದೊಡ್ಡ ಬೇಕರಿಯೊಂದಕ್ಕೆ ಬೆಣ್ಣೆ ಮಾರಾಟ ಮಾಡುತ್ತಿದ್ದ. ಇದು ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು. ಒಂದು ದಿನ ಬೇಕರಿಯ ಮಾಲಕನಿಗೆ ರೈತ ಕೊಡುತ್ತಿದ್ದ ಬೆಣ್ಣೆಯ ತೂಕದ ಬಗ್ಗೆ ಅನುಮಾನ ಬಂತು. ಅಂದಿನಿಂದ ಅನುಮಾನದ ಹುಳ ಅವನ ತಲೆಯನ್ನು ಕೊರೆಯ ತೊಡಗಿತು. ದಿನದಿಂದ ದಿನಕ್ಕೆ ಇದು ಅತಿಯಾಗಿ ರೈತನನ್ನು ಅನುಮಾನಾಸ್ಪದವಾಗಿಯೇ ನೋಡ ತೊಡಗಿದ. ರೈತ ಕೊಡುವ ಬೆಣ್ಣೆಯಿಂದ ತನಗೆ ಮೋಸವಾಗುತ್ತಿದೆಯೆಂದು ಅವನು ಭಾವಿಸಿದ. ಕೂಡಲೇ ಅದನ್ನು ಪರಿಹರಿಸಿಕೊಳ್ಳಲು ರೈತ ತಂದು ಕೊಟ್ಟ ಬೆಣ್ಣೆಯನ್ನು ಒಮ್ಮೆ ತೂಕ ಮಾಡಿದ. ಅವನ ಅನುಮಾನ ನಿಜವಾಗಿತ್ತು. ಬೆಣ್ಣೆ ತೂಕ ಕಡಿಮೆ ಬಂತು. ಇದರಿಂದ ಬೇಕರಿ ಮಾಲಕನಿಗೆ ಎಲ್ಲಿಲ್ಲದ ಸಿಟ್ಟು ಬಂತು. ಅವನು ರೈತನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ.
ಬೇಕರಿ ಮಾಲಕ ಮಾಡಿದ ಇಂತಹ ಆರೋಪದಿಂದ ರೈತನಿಗೆ ಬಹಳ ಬೇಸರವಾಯಿತು. ಚಿಂತೆಗೀಡಾದ ಅವನು, ‘‘ನನ್ನ ಜೀವಮಾನದಲ್ಲಿ ಯಾರೊಬ್ಬರಿಗೂ ನಾನು ಮೋಸ ಮಾಡಿದವನಲ್ಲ. ಕೆಟ್ಟದ್ದು ಮಾಡಿ ಬದುಕಿದವನಲ್ಲ. ನನ್ನಂತವನನ್ನು ಮೋಸಗಾರ ಅಂದು ಬಿಟ್ಟನಲ್ಲಾ ಬೇಕರಿ ಮಾಲಕ. ಒಂದು ಚೂರೂ ಚೌಕಾಸಿ ಮಾಡದೆ ಕೊಟ್ಟದ್ದು ತೆಗೆದುಕೊಂಡು ನಮ್ಮ ತಾತನ ಕಾಲದಿಂದಲೂ ನ್ಯಾಯವಾಗಿ ವ್ಯಾಪಾರ ಮಾಡಿಕೊಂಡು ಬರುತ್ತಿರುವ ನನಗೆ ಎಂಥಾ ಅವಮಾನ? ಛೆ...! ಅದೂ ನ್ಯಾಯಾಲಯದ ಮೆಟ್ಟಿಲನ್ನು ಹತ್ತುವ ಮಟ್ಟಕ್ಕೆ ಅವನು ಹೋದನೆಂದರೆ ನನ್ನಂತಹ ಪ್ರಾಮಾಣಿಕ ರೈತರಿಗೆ ಬೆಲೆಯೇನು ಬಂತು? ಇದರಿಂದ ನಾನು ತಲೆಯೆತ್ತಿ ಬದುಕುವುದಾದರೂ ಹೇಗೆ? ಎಲ್ಲರೂ ನನ್ನನ್ನು ಮೋಸಗಾರರೆಂದು ತಿಳಿದು ಬಿಟ್ಟರೆ ಇಂತಹ ಅಪಮಾನದ ಸ್ಥಿತಿಯಿಂದ ಪಾರಾಗುವುದಾದರೂ ಹೇಗೆ? ನ್ಯಾಯ ದೇವತೆಯೇ ನನ್ನನ್ನು ಕಾಪಾಡಬೇಕು ಎಂದು ರಾತ್ರಿಯಿಡೀ ಯೋಚನೆ ಮಾಡಿ ಕೊರಗಿದ.
ಚಿಂತಾಕ್ರಾಂತನಾಗಿದ್ದ ರೈತನಿಗೆ ರಾತ್ರಿ ನಿದ್ರೆ ಬರಲೇ ಇಲ್ಲ. ಮುಂಜಾನೆ ಆಗಸದಲ್ಲಿ ಸೂರ್ಯ ಮೂಡುತ್ತಿದ್ದಂತೆಯೇ ಮಲಗಿದ್ದ ರೈತ ಎದ್ದವನೇ ಬೆಳಗಿನ ತನ್ನ ನಿತ್ಯ ಕಾರ್ಯಗಳನ್ನು ಮುಗಿಸಿದ. ಹಸು, ಕರು, ಎಮ್ಮೆ, ಕುರಿ, ಕೋಳಿಗಳಿಗೆಲ್ಲಾ ಮೇವು ಹಾಕಿದ. ಅವನ ಕೈಗಳು ಕೆಲಸ ಮಾಡುತ್ತಿದ್ದರೂ ಮನಸ್ಸು ಮಾತ್ರ ಬೇಕರಿ ಮಾಲಕ ತನ್ನನ್ನು ಮೋಸಗಾರನೆಂದು ಹೇಳಿ ನ್ಯಾಯಾಲಯದಲ್ಲಿ ದೂರು ನೀಡಿದ್ದ ವಿಚಾರಣೆ ಅಂದು ಇದ್ದುದರಿಂದ ಅದು ಏನಾಗುತ್ತದೋ ಎಂಬ ಆತಂಕದಿಂದ ಯೋಚಿಸುತ್ತಿತ್ತು. ತನ್ನ ಬದುಕಿಗೆ ಆಧಾರ ಸ್ತಂಭವಾಗಿದ್ದ ಮೇವು ಮೇಯುತ್ತಿದ್ದ ತನ್ನ ಪ್ರೀತಿಯ ಸಾಕು ಪ್ರಾಣಿಗಳನ್ನು ಒಮ್ಮೆ ಅಷ್ಟೇ ಪ್ರೀತಿಯಿಂದ ನೋಡಿದ. ಮನುಷ್ಯರಿಗಿಂತ ಈ ಮೂಕ ಪ್ರಾಣಿಗಳೇ ವಾಸಿಯೆಂದು ಮನಸ್ಸಿನಲ್ಲೇ ಅಂದು ಕೊಂಡ ಅವನು ‘‘ಏನಾದರೂ ಆಗಲಿ ಎಲ್ಲವನ್ನೂ ನಮ್ಮವ್ವ ನ್ಯಾಯದೇವತೆ ನೋಡಿಕೊಳ್ಳುತ್ತಾಳೆ’’ ಎನ್ನುತ್ತಲೇ ನ್ಯಾಯಾಲಯದತ್ತ ನಡೆದ.
ನ್ಯಾಯಾಲಯದ ಕಟಕಟೆಯಲ್ಲಿ ಬಂದು ನಿಂತ ರೈತನನ್ನು ‘‘ನೀನು ಬೆಣ್ಣೆಯನ್ನು ತೂಕ ಮಾಡಲು ಯಾವ ಮಾಪನ ಬಳಸುತ್ತಿದ್ದೀಯಾ? ಯಾವ ರೀತಿ ನೀನು ಬೆಣ್ಣೆಯನ್ನು ತೂಕ ಮಾಡುತ್ತೀಯ?’’ ಎಂದು ನ್ಯಾಯಾಧೀಶರು ಕೇಳಿದರು. ಆಗ ಅವರ ಪ್ರಶ್ನೆಗಳಿಗೆ ಅಷ್ಟೇ ಮುಗ್ಧವಾಗಿ ರೈತ ‘‘ಮಹಾಸ್ವಾಮಿಗಳೇ, ನಾನೊಬ್ಬ ಸಾಮಾನ್ಯ ಬಡ ರೈತ. ನನ್ನ ಬಳಿ ಸರಿಯಾದ ಅಳತೆ ಮಾಪನ ಯಾವುದೂ ಇಲ್ಲ. ಆದರೆ ನನ್ನದೇ ಆದ ತೂಕದ ಪದ್ಧತಿ ಇದೆ. ಇದರಿಂದಲೇ ನಾನು ಬೆಣ್ಣೆಯನ್ನು ಅಳತೆ ಮಾಡಿ ಕೊಡುತ್ತಿದ್ದೇನೆ’’ ಎಂದು ಉತ್ತರಿಸಿದ. ಆಗ ನ್ಯಾಯಾಧೀಶರು ‘‘ಅದು ಹೇಗೆ ನೀನು ನಿನ್ನದೇ ಆದ ಪದ್ಧತಿಯಲ್ಲಿ ಬೆಣ್ಣೆ ತೂಕ ಮಾಡುತ್ತೀಯಾ? ಸರಿಯಾಗಿ ಬಿಡಿಸಿ ಹೇಳು’’ ಎಂದರು.
ತಕ್ಷಣವೇ ರೈತ ‘‘ನೋಡಿ ಮಹಾಸ್ವಾಮಿಗಳೇ, ಬೇಕರಿಯ ಮಾಲಕ ನನ್ನ ಬಳಿ ಬೆಣ್ಣೆಯನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲಿನಿಂದಲೂ ನಾನು ಅವರ ಹತ್ತಿರ ಬ್ರೆಡ್ ಕೊಂಡು ಕೊಳ್ಳುತ್ತಿದ್ದೇನೆ. ಅವರು ಒಂದು ಪೌಂಡ್ ಬ್ರೆಡ್ಡು ತಂದುಕೊಟ್ಟಾಗ ಅದನ್ನು ನಾನು ತಕ್ಕಡಿಯಲ್ಲಿ ಒಂದು ಕಡೆ ಇಟ್ಟು ಮತ್ತೊಂದು ಕಡೆ ಅದಕ್ಕೆ ಸಮನಾಗಿ ಬೆಣ್ಣೆಯನ್ನಿಟ್ಟು ಕೊಡುತ್ತಿದ್ದೆ. ಆದ್ದರಿಂದ ಒಂದು ಪಕ್ಷ ತಪ್ಪು ತೂಕವೇನಾದರೂ ಬಂದಿದ್ದರೆ ಅದಕ್ಕೆ ಕಾರಣ ನನ್ನ ಮೇಲೆ ಮೊಕದ್ದಮೆ ಹಾಕಿರುವ ಬೇಕರಿಯ ಮಾಲಕರೇ ಹೊರತು ನಾನಲ್ಲ ಎಂದ. ರೈತನ ಮುಗ್ಧ ಮಾತುಗಳಿಂದ ಬೇಕರಿಯ ಮಾಲಕನೇ ಕಡಿಮೆ ತೂಕದ ಬ್ರೆಡ್ಡು ಕೊಟ್ಟು ಜನರನ್ನು ಮೋಸ ಮಾಡುತ್ತಿದ್ದುದ್ದು ನ್ಯಾಯಾಲಯದಲ್ಲಿ ಎಲ್ಲರೆದುರು ಬಯಲಾಯಿತು. ಅಂತಿಮವಾಗಿ ನ್ಯಾಯಾಧೀಶರು, ರೈತ ತಪ್ಪಿತಸ್ಥನಲ್ಲವೆಂದು’’ ಹೇಳಿದರು. ಮೊಕದ್ದಮೆ ಹೂಡಿದ್ದ ಬೇಕರಿ ಮಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.