ಶಿಶುಮನದ ಮಹಾಮಾರಿ

Update: 2019-12-15 10:41 GMT

 ಸಿಡಿಮಿಡಿ

ಮಕ್ಕಳು ಸಣ್ಣ ಸಣ್ಣ ವಿಷಯಗಳಿಗೆ ಸಿಡಿಮಿಡಿ ಗೊಳ್ಳುತ್ತಿದ್ದರೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಯಾವಾಗಲಾದರೂ ಒಮ್ಮೆ ನನಗೆ ಬೋರಾಗುತ್ತಿದೆ, ಇರಿಟೇಟ್ ಆಗುತ್ತಿದೆ ಎಂದರೆ ತತ್ಕಾಲದ ಕಾರಣವೋ ಅಥವಾ ಆ ಹೊತ್ತಿನ ವಾತಾವರಣದ ಪ್ರಭಾವ ಎಂದು ಸುಮ್ಮನಾಗಬಹುದು. ಆದರೆ ಸಣ್ಣ ಸಣ್ಣ ಸಂಗತಿಗಳಿಗೆಲ್ಲಾ ತನಗೆ ಹಿಂಸೆಯಾಗುತ್ತದೆ, ಕೋಪ ಬರುತ್ತದೆ ಅಥವಾ ಸಹಿಸಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದರೆ ಎಚ್ಚೆತ್ತುಕೊಳ್ಳಬೇಕಾದ ಅಗತ್ಯ ಇದೆ. ಸಾಮಾನ್ಯವಾಗಿ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಇರುವವರು ತಾವು ಇರುವ ವಾತಾವರಣದಲ್ಲಿ ಸಣ್ಣದಾದ ಬದಲಾವಣೆಯಾದರೂ ಭಯಂಕರ ಸಿಡಿಮಿಡಿಗೊಳ್ಳುತ್ತಾರೆ. ವಾಹನದಲ್ಲಿ ಹೋಗುವಾಗ ಹಾರ್ನ್ ಮಾಡುತ್ತಿದ್ದರೆ, ಸ್ವಲ್ಪ ಯಾರಾದರೂ ನೇರವಾಗಿ ದೃಷ್ಟಿಸಿದರೆ, ಅಥವಾ ಸ್ವಲ್ಪ ಮುಟ್ಟಿದರೂ ಸಿಡಿಮಿಡಿಗೊಳ್ಳುತ್ತಾರೆ. ಸದಾ ಸಿಡಿಮಿಡಿಗೊಳ್ಳುವುದು, ಅದರಲ್ಲೂ ಗಾಢವಾದ ಕಾರಣವಿಲ್ಲದೇ ಇದ್ದರಂತೂ ಮಾನಸಿಕ ಸಮಸ್ಯೆಯೇನೋ ಇರುವುದಂತೂ ನಿಜವೆಂದು ತಿಳಿಯಬೇಕು. ಅದು ಬಾರ್ಡರ್ ಲೈನ್ ಡಿಸಾರ್ಡರ್ ಹೌದೋ, ಅಲ್ಲವೋ ಪರೀಕ್ಷಿಸಿಕೊಳ್ಳಬೇಕು. ಕೆಲವು ಮನೆಯಲ್ಲಿ ಮಕ್ಕಳ ಸುತ್ತಲೂ ಇರುವ ಹಿರಿಯರಿಗೇ ಇಂತಹ ಸಮಸ್ಯೆ ಇರುವಾಗ ತುಂಬಾ ಕಷ್ಟ. ಇಡೀ ಮನೆಯ ವಾತಾವರಣವೇ ಯಾವಾಗಲಾದರೂ ಭುಗಿಲೇಳಲು ಸಿದ್ಧವಾಗಿರುತ್ತದೆ. ಉದಾಹರಣೆಗೆ ತಂದೆಯೊಬ್ಬ ಆ ರೀತಿ ಸಮಸ್ಯೆ ಇರುವವರೆಂದರೆ, ತಾಯಿ, ಮಕ್ಕಳು ಮತ್ತು ಇತರ ಹಿರಿಯ ಸದಸ್ಯರು ಸದಾ ಜಾಗರೂಕವಾಗಿ ಇರಬೇಕು. ನಡೆಯುವಾಗ, ನುಡಿಯುವಾಗ, ಅಡುಗೆ ಇತ್ಯಾದಿಗಳನ್ನು ಮಾಡುವಾಗ, ಊಟ ಬಡಿಸುವಾಗ, ಟಿವಿ ಹಾಕಲು, ತಾನು ಹೊರಗೆ ಹೋಗುತ್ತೇನೆ, ತಡವಾಗಿ ಬರುತ್ತೇನೆ ಎಂದು ಹೇಳಲು ಕಷ್ಟಪಡುತ್ತಿರಬೇಕು. ಒಡೆದು ಚೂರಾಗಿರುವ ಗಾಜಿನ ಚೂರುಗಳ ದಾರಿಯಲ್ಲಿ ಎಚ್ಚರಿಕೆಯಿಂದ ನಡೆಯುವಂತಿರುತ್ತದೆ. ಒಂದು ಚೂರು ಹೆಚ್ಚುಕಮ್ಮಿಯಾದರೆ, ಮನೆಯಲ್ಲಿನ ಟಿವಿ ಒಡೆಯಬಹುದು, ಕನ್ನಡಿ ಚೂರಾಗಬಹುದು, ಊಟ ಅಥವಾ ತಿನಿಸುಗಳು ಚೆಲ್ಲಾಡಬಹುದು. ಯಾವ ವಸ್ತುಗಳು ಯಾರ ಮೇಲೆ ಬೀಳಬಹುದು. ಇಂತಹ ವಾತಾವರಣದಲ್ಲಿ ಬೆಳೆಯುವ ಮಗು ತಾನು ಬಲಿಷ್ಠನಾದಾಗ ಮತ್ತು ಸ್ವತಂತ್ರನಾದಾಗ ಇದನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದು. ಅಷ್ಟೇ ಅಲ್ಲ ತಾನು ಯಾರಲ್ಲಿ ಈ ಗುಣಗಳನ್ನು ನೋಡುತ್ತಿದ್ದನೋ ಅವರ ಮೇಲೆಯೇ ಪ್ರಯೋಗಿಸಲು ಪ್ರಾರಂಭಿಸುತ್ತಾನೆ. ಬಹಳಷ್ಟು ಕುಟುಂಬಗಳಲ್ಲಿ ತಂದೆ ಆ ರೀತಿ ಇದ್ದರೆ ಗಂಡು ಮಗು ಆ ಗುಣಗಳನ್ನು ಹೆಕ್ಕುವ ಸಾಧ್ಯತೆಗಳಿರುತ್ತವೆ. ಅವನು ಬೆಳೆದಾದ ಮೇಲೆ ಸಾಮಾನ್ಯವಾಗಿ ಬಹಳ ಒತ್ತಡದಲ್ಲಿ ಸಿಕ್ಕಿಬೀಳುವವರು ತಾಯಂದಿರು. ತಂದೆ ಮತ್ತು ಮಗನ ಜಗಳದ ಹಾಗೂ ಸಮಸ್ಯಾತ್ಮಕ ವರ್ತನೆಗಳ ಅಡಿಗತ್ತರಿಯಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಇಬ್ಬರೂ ಒಬ್ಬರನ್ನೊಬ್ಬರು ದೂರುತ್ತಿರುತ್ತಾರೆ. ಆಕೆಗೆ ಯಾರ ಪರವಾಗಿಯೂ ಮಾತನಾಡಲಾಗುವುದಿಲ್ಲ, ಇನ್ನು ವಿರೋಧವಾಗಿ ಮಾತಾಡುವುದಂತೂ ದೂರವೇ ಉಳಿಯಿತು. ಅದೇ ರೀತಿ ತಾಯಿ ಮತ್ತು ಮಗಳ ನಡುವಿನ ಸಂಘರ್ಷದಲ್ಲಿ ಅಪ್ಪ ಅಪ್ಪಚ್ಚಿಯಾಗುತ್ತಾನೆ. ಇನ್ನು ಈ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಇರುವವರಿಗೆ ತೀವ್ರವಾದ ದುಃಖ, ಭಯ, ಆತಂಕ, ತಿರಸ್ಕಾರ, ಮೋಸ ಅಥವಾ ಅವಮಾನವೇನಾದರೂ ಆದರೆ ತೀರಿತು. ಇವೆಲ್ಲದರ ಜೊತೆಗೆ ಮತ್ತೂ ತೀವ್ರವಾದಂತಹ ಒಂದು ಸಮಸ್ಯೆ ಇರುತ್ತದೆ. ಅದೇನೆಂದರೆ, ಸಾಮಾನ್ಯವಾದ ದೃಷ್ಟಿಗೆ ಯಾವುದೋ ಒಂದು ಸಂಗತಿ ಅಪಮಾನ ಎಂದೇನೂ ಅನಿಸದಿರಬಹುದು. ಆದರೆ ಆ ನಿರ್ದಿಷ್ಟ ವ್ಯಕ್ತಿ ಅದನ್ನು ಅಪಮಾನವೆಂದುಕೊಳ್ಳಬಹುದು. ಅವರು ಯಾವುದನ್ನು ಅಪಮಾನ, ಮೋಸ, ತಿರಸ್ಕಾರವೆಂದು ಗ್ರಹಿಸುತ್ತಾರೆ ಎಂದು ತಿಳಿಯುವುದೇ ದೊಡ್ಡ ಸಾಹಸವಾಗುತ್ತದೆ. ಉದಾಹರಣೆಗೆ, ನೀವು ಕುಳಿತ ಕಡೆಯಿಂದ ಆ ವ್ಯಕ್ತಿಗೆ ಕಾರಿನ ಕೀಯನ್ನು ಕ್ಯಾಚ್ ಹಾಕುತ್ತೀರಿ. ಅವರು ಅದನ್ನು ನನ್ನ ಮುಖದ ಮೇಲೆ ಎಸೆದು ಅಪಮಾನಿಸಿದರು ಎಂದು ಭಾವಿಸಬಹುದು. ನೀವು ಮೇಲೆ ಏಳುವ ಬದಲು, ಎದ್ದು ಹೋಗುವ ಅಗತ್ಯವಿಲ್ಲವೆಂದು ಹಾಗೂ ಕೀ ಎಸೆಯುವಂತಹ ಮತ್ತು ಬಿದ್ದರೆ ಒಡೆಯದಂತಹ ವಸ್ತುವೆಂದು ನೀವು ಸಹಜವಾಗಿ ಭಾವಿಸಬಹುದು. ಆದರೆ ಆ ದಿಕ್ಕಿನಲ್ಲಿ ಅವರು ಯೋಚಿಸುವುದೇ ಇಲ್ಲ. ಅದನ್ನು ವ್ಯಕ್ತಿಗತವಾಗಿ ತನ್ನ ಗುರಿಯಾಗಿಸಿ, ಉದ್ದೇಶಿತ ಅಪಮಾನ ಅಥವಾ ತನ್ನ ಮೇಲೆ ತಿರಸ್ಕಾರದ ಭಾವನೆ ಹೊಂದಿದ್ದಾರೆ ಎಂದೇ ಭಾವಿಸುವರು. ಇನ್ನು ಅದನ್ನು ಹೇಳಿಬಿಟ್ಟರೆ ತೀರಿತು. ನೀವು ಕ್ಷಮೆ ಕೇಳಿ ನನ್ನ ಉದ್ದೇಶ ಅದಲ್ಲ ಎಂದು ಹೇಳಬಹುದು. ಆದರೆ ಕೆಲವರು ಅದನ್ನು ಬಾಯ್ಬಿಟ್ಟು ಹೇಳದೆಯೇ ಅಲ್ಲಿಂದ ಹೊರಟು ಏಕಾಂತದಲ್ಲಿ ಆಕ್ರೋಶ, ಕ್ಷೋಭೆಯನ್ನು ಅನುಭವಿಸುತ್ತಾರೆ. ನಡೆಯುವಾಗಲೂ, ಬೇರೆ ಕೆಲಸ ಮಾಡುವಾಗಲೂ ಅದನ್ನೇ ಆಲೋಚಿಸುತ್ತಿರುತ್ತಾರೆ. ಅದರ ಬಗ್ಗೆ ಚಿಂತಿಸಿದಷ್ಟೂ ಅವರು ವ್ಯಗ್ರವಾಗುತ್ತಿರುತ್ತಾರೆ. ಅದರ ಉಗ್ರ ಸ್ವರೂಪದ ಪ್ರತಿಫಲನ ಎಲ್ಲಾದರೂ ಆಗಬಹುದು, ಯಾರ ಮೇಲಾದರೂ ಆಗಬಹುದು. ಕೆಲವೊಂದು ದೇಶಗಳಲ್ಲಿ ಈ ಸಮಸ್ಯೆ ಹೆಂಗಸರಲ್ಲಿ ಹೆಚ್ಚಿದ್ದರೆ, ಕೆಲವು ದೇಶಗಳಲ್ಲಿ ಗಂಡಸರಲ್ಲಿ ಹೆಚ್ಚಿದೆ. ಆದರೆ ನಮ್ಮ ದೇಶದಲ್ಲಿ ನಾನು ಗಮನಿಸಿದಂತೆ ಗಂಡಸರು ಹೆಂಗಸರು ಎಂಬ ಭೇದಭಾವವಿಲ್ಲದೇ ಹೆಚ್ಚೂಕಡಿಮೆ ಸಮನಾಗಿ ಹಂಚಿಕೊಂಡಿದ್ದು, ಶಾಲೆಗಳಲ್ಲಿ ಓದುವ, ಆಟದ ಮೈದಾನಗಳಲ್ಲಿ ಆಡುವ, ರಸ್ತೆಯಲ್ಲಿ ಅಡ್ಡಾಡುತ್ತಿರುವ ಬೆಳೆದ ಮಕ್ಕಳಲ್ಲೂ, ಪಾರ್ಕಿನಲ್ಲಿ ಆಡುತ್ತಿರುವ ಸಣ್ಣಸಣ್ಣ ಮಕ್ಕಳಲ್ಲೂ ಈ ಸಮಸ್ಯೆಗಳನ್ನು ಗುರುತಿಸಿದ್ದೇನೆ.

ಸೈತಾನನ ಸ್ನೇಹಿತರು

ಈ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ಜೊತೆ ಜೊತೆಗೆ ಖಿನ್ನತೆ, ಕ್ರಮಬದ್ಧತೆ ಇಲ್ಲದಿರುವುದು, ಸರಿಯಾಗಿ ತಿನ್ನದಿರುವುದು, ನಿದ್ರಿಸದಿರುವುದು, ಜನರೊಂದಿಗೆ ಬೆರೆಯದಿರುವುದು, ಜೂಜಾಡುವುದರಲ್ಲಿ ವಿಶೇಷ ಒಲವು, ಕ್ರೌರ್ಯ, ಹಿಂಸೆ, ವಿಧ್ವಂಸಕವಾದ ವಿನ್ಯಾಸಗಳನ್ನುಳ್ಳ ವೀಡಿಯೊಗೇಮ್‌ಗಳನ್ನು ಬಿಡದೇ ಆಡಿಕೊಂಡಿರುವುದು ಕೂಡಾ ಸೇರಿಕೊಂಡಿರುತ್ತದೆ. ಈ ಸಮಸ್ಯೆಯು ಆತ್ಮಘಾತುಕ ಮಾತ್ರವಲ್ಲ, ಸಮಾಜಘಾತುಕವೂ ಆಗುವ ಸಾಧ್ಯತೆಗಳಿರುವುದರಿಂದ ಮಾನಸಿಕ ಸಮಸ್ಯೆಗಳ ಬಗ್ಗೆ ಅತೀ ಎಚ್ಚರ ವಹಿಸಬೇಕು. ಹಾಗೆಂದು ಮಾನಸಿಕ ಸಮಸ್ಯೆಯ ಬಗ್ಗೆ ಅತೀ ಎಚ್ಚರ ವಹಿಸುವಂತಹ ಮಾನಸಿಕ ಸಮಸ್ಯೆಗೆ ಒಳಗಾಗಬಾರದು. ಎಷ್ಟೋ ಜನರಿಗೆ ಏನೋ ರೋಗ ಇದೆ ಎಂದು ಅಂದುಕೊಳ್ಳುತ್ತಿರುವುದೇ ಒಂದು ದೊಡ್ಡ ರೋಗವಾಗಿರುತ್ತದೆ. ಹಾಗೆಯೇ ಏನೋ ಮಾನಸಿಕ ಸಮಸ್ಯೆ ತನ್ನಲ್ಲಿ ಇದೆ ಎಂದೋ, ಇತರರಲ್ಲಿ ಇದೆ ಎಂದೋ ಸದಾ ನೋಡುತ್ತಿರುವುದೇ ಗೀಳಾದರೆ ಅದೊಂದು ಬಗೆಯ ಮನೋರೋಗವಾಗಿರುತ್ತದೆ. ಗಮನವಿರಲಿ, ಎಚ್ಚರವಿರಲಿ ಎಂದರೆ ಸದಾ ಅದರ ಬಗ್ಗೆ ಚಿಂತಿಸುವುದಲ್ಲ.

ಸೂಕ್ಷ್ಮ ಲಕ್ಷಣಗಳು

ಮಕ್ಕಳಲ್ಲಿ ಈ ಸಮಸ್ಯೆ ಯಾವಾಗಲೇ ಪ್ರಾರಂಭವಾದರೂ ಅದು ಪರೀಕ್ಷಿಸಲು ಸಾಧ್ಯವಾಗುವಂತೆ ಢಾಳಾಗಿ ತನ್ನ ಲಕ್ಷಣಗಳನ್ನು ತೋರುವುದು ಕಿಶೋರಾವಸ್ಥೆಯ ಕೊನೆಯಲ್ಲಿ ಅಥವಾ ಅಡಲೋಸೆಂಟ್ ಅಥವಾ ಹರೆಯದ ಪ್ರಾರಂಭದಲ್ಲಿ. ಎಷ್ಟೋ ಬಾರಿ ಮಕ್ಕಳ ಮನೆಯವರಿಗೆ ಇದರ ಸುಳಿವೇ ಸಿಕ್ಕಿರುವುದಿಲ್ಲ. ಕುರುಹನ್ನು ಗುರುತಿಸಲೇ ಸಾಧ್ಯವಾಗದಷ್ಟು ಸೂಕ್ಷ್ಮವಾಗಿದ್ದು, ಒಮ್ಮೆಲೇ ಕಾಣಿಸಿಕೊಳ್ಳುತ್ತದೆ. ಎಷ್ಟೋ ತಂದೆ ತಾಯಿಯರು ಚಿಕ್ಕ ಮಗುವಾಗಿದ್ದಾಗ ಅಥವಾ ಶಾಲೆಗೆ ಹೋಗುತ್ತಿರುವಾಗ ಏನೂ ಸಮಸ್ಯೆ ಇರಲಿಲ್ಲ. ಕಾಲೇಜಿಗೆ ಹೋಗಲು ಶುರು ಮಾಡಿದ ಮೇಲೆ ಹೀಗಾಡುತ್ತಿದ್ದಾನೆ ಅಥವಾ ಆಡುತ್ತಿದ್ದಾಳೆ ಎನ್ನುವರು. ಆದರೆ ವಿಷಯ ಅದಲ್ಲ. ಇದ್ದಕ್ಕಿದ್ದಂತೆ ಅಲ್ಲೇನೂ ಆಗಿರುವುದಿಲ್ಲ. ಸೂಕ್ಷ್ಮ ಸ್ವರೂಪದಲ್ಲಿದ್ದ ಲಕ್ಷಣಗಳನ್ನು ಅವರಿಗೆ ಗುರುತಿಸಲಾಗಿರಲಿಲ್ಲ ಅಥವಾ ನಿರ್ಲಕ್ಷ ತೋರಿದ್ದಿರಬಹುದು. ಆದ್ದರಿಂದಲೇ ಶಿಶುಮನದ ಮಹಾಮಾರಿಗಳನ್ನು ಆಗಲೇ ಗುರುತಿಸುವಷ್ಟು ತಿಳುವಳಿಕೆ ನಮಗೆ ಬೇಕು. ಮುಂದೆ ತಿಳಿಯುವುದು ಮತ್ತಷ್ಟು ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News