ಧಾರವಾಡದ ಇಕೋ ವಿಲೇಜ್ರೂವಾರಿ ಪಿ.ವಿ.ಹಿರೇಮಠ
ಧಾರವಾಡದಿಂದ ದಾಂಡೇಲಿ ಕಡೆಗೆ ಹೋಗುವ ರಸ್ತೆಯಲ್ಲಿ 13 ಕಿ.ಮೀ. ದೂರ ಹೋದರೆ ನಿಮಗೆ ಸಿಗುವುದು ನೇಚರ್ ಫಸ್ಟ್ ಇಕೋ ವಿಲೇಜ್. ನಮ್ಮ ದಿನ ನಿತ್ಯ ಪಟ್ಪಣ ಬದುಕಿನ ಜಂಜಾಟದಿಂದ ಹೊರಬಂದು ಇಲ್ಲಿಯ ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ.
ನೇಚರ್ ಫಸ್ಟ್ ಇಕೋ ವಿಲೇಜ್ ಕಿರಿಯರಿಗೆ-ಹಿರಿಯರಿಗೆ ಬರೀ ಮನರಂಜನಾ ತಾಣವಾಗಿರದೆ, ಒಂದು ನೈಸರ್ಗಿಕ ಕಲಿಕೆ ಮತ್ತು ಪ್ರಕೃತಿ ಸಂಶೋಧನಾ ಕೇಂದ್ರವಾಗಿದೆ. ಪ್ರವಾಸಿಗರು ಈ ಪ್ರದೇಶದ ಸಂಪತ್ತು, ಜೀವವೈವಿಧ್ಯತೆಯ ಮಹತ್ವ, ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಅವಶ್ಯಕತೆ, ಪಕ್ಷಿ ವೀಕ್ಷಣೆ, ಪಶ್ಚಿಮ ಘಟ್ಟದ ಅಪರೂಪದ ಔಷಧೀಯ ಮತ್ತು ಹಣ್ಣಿನ ಸಸ್ಯಗಳು, ತೋಟಗಾರಿಕೆಯ ವಿವಿಧ ಮಾದರಿಗಳು, ನೀರಿನ ಕೊಯ್ಲು ಬಗ್ಗೆ ವಿಸ್ತಾರವಾದ ಮಾಹಿತಿ ಸಿಗುತ್ತದೆ. ಈ ಕೇಂದ್ರದ ರೂವಾರಿ ನಮ್ಮ ಧಾರವಾಡದ ಪರಿಸರ ಪ್ರೇಮಿ, ಪ್ರಕೃತಿ ಪ್ರಿಯ ಪಿ ವಿ ಹಿರೇಮಠರವರು.'ಪ್ರಕೃತಿ ಎನ್ನ ಉಸಿರ್ದಾಣಂ' ಎನ್ನುವುದು ಅವರ ನಿತ್ಯ ಮಂತ್ರವಾಗಿದೆ.
ಸೇವಾ ಕೆಫೆ ಹೆಸರಿನ ಕೆಫೆಟೇರಿಯಾ ಆಸಕ್ತಿದಾಯಕ ವಾಗಿದೆ. ಹಸಿರಿನ ಮಧ್ಯೆ ಸುತ್ತುವರಿಯಲ್ಪಟ್ಟ ಇದು ತಂಪಾದ ಮತ್ತು ಆತ್ಮಾನಂದ ಸ್ಥಳವಾಗಿದೆ. ಹತ್ತಿರದ ಹಳ್ಳಿಗಳಿಂದ ಸುಮಾರು ಮಹಿಳೆಯರಿಗೆ ಉದ್ಯೋಗ ನೀಡುವ ಈ ಅಡುಗೆಮನೆಯು ಏಕಕಾಲಕ್ಕೆ ನೂರಾರು ಜನರಿಗೆ ಅಡಿಗೆ ತಯಾರು ಮಾಡುತ್ತದೆ. ಪೂರೈಸುತ್ತದೆ. ಈ ಕೆಫೆ ಗ್ರಾಮೀಣ ಮಹಿಳೆಯರಿಗೆ ಆಹಾರ ತಯಾರಿಸಲು ಉದ್ಯೋಗ, ತರಬೇತಿ ಮತ್ತು ಪ್ರೋತ್ಸಾಹ ನೀಡುವ ಮೂಲಕ ಸಾಂಪ್ರದಾಯಿಕ, ಸಾವಯವ ಆಹಾರಗಳನ್ನು ಉತ್ತೇಜಿಸುತ್ತದೆ. ನೇಚರ್ ಫಸ್ಟ್ ಇಕೋ ವಿಲೇಜ್ ತನ್ನ ಸೊಗಸಾದ ಮಾದರಿಗಳಾದ ಮೇಲ್ಮಹಡಿ ತೋಟ, ಮನೆ ತೋಟ ಮತ್ತು ಹಿತ್ತಲ ತೋಟ ಮತ್ತು ಅಷ್ಟಮಂಡಲ ಎಂಬ ಪ್ರಾಯೋಗಿಕ ಶಿಕ್ಷಣವನ್ನು ಒದಗಿಸುತ್ತದೆ.
ಗ್ರಾಮೀಣ ಸೊಗಡು, ದೇಸಿಯತೆಯ ಘಮಲು ನೇಚರ್ ಫಸ್ಟ್ ಇಕೋ ವಿಲೇಜ್‌ನ ಶ್ರೀಮಂತಿಕೆಯಾಗಿದೆ. ಕುಟುಂಬ ಸಮೇತ ನೀವು ಒಮ್ಮೆ ಭೇಟಿ ನೀಡಬಹುದು, ಪಿ.ವಿ.ಹಿರೇಮಠ ಅವರ ಪರಿಸರ ಪ್ರೇಮಕ್ಕೆ ಹ್ಯಾಟ್ಸಾಫ್ ಹೇಳಿ.