ಅಗ್ಗದ ಜೀವಗಳು, ದುಬಾರಿ ವ್ಯವಹಾರಗಳು

Update: 2019-12-18 18:32 GMT

ಡಿಸೆಂಬರ್ 8ರ ಬೆಂಕಿ ದುರಂತ ಸಂಭವಿಸಿದ ಕೂಡಲೇ ರಾಜಕಾರಣಿಗಳು ಮತ್ತು ಪಕ್ಷಗಳು ನಗದು ಪರಿಹಾರ ಘೋಷಿಸುವ ಮತ್ತು ಪರಸ್ಪರರನ್ನು ದೂಷಿಸುವ ಸ್ಪರ್ಧೆಯನ್ನು ಪ್ರಾರಂಭಿಸಿವೆ. ಇದು ಸಾರ್ವಜನಿಕ ಅನಾಹುತ ಮತ್ತು ಅವಘಡಗಳು ಸಂಭವಿಸಿದಾಗಲೆಲ್ಲಾ ನಡೆಯುವ ರೂಢಿಗತ ವಿದ್ಯಮಾನವೇ ಆಗಿಬಿಟ್ಟಿದೆ. ಚುನಾವಣಾ ಸಮಯದಲ್ಲಿ ಇದೇ ಪಕ್ಷಗಳೇ ಅನಧಿಕೃತ ಕೊಳೆಗೇರಿಗಳು ಮತ್ತು ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಬೇಕೆಂದು ಹುಯಿಲಿಡುತ್ತವೆ. ಆದರೆ ಅಗ್ನಿ ಶಾಮಕ ವಾಹನಗಳ ಮತ್ತು ಉಪಕರಣಗಳಂಥ ಸುರಕ್ಷತಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಷಯದ ಬಗ್ಗೆ ಮಾತ್ರ ಯಾವ ಗಮನವನ್ನೂ ವಹಿಸುವುದಿಲ್ಲ.

ಭಾರತದ ಹಲವಾರು ನಗರಗಳಲ್ಲಿ ತುಂಬಾ ಭೀಕರವಾದ ಅಗ್ನಿ ದುರಂತಗಳು ಸಂಭವಿಸಿವೆ. ಕೆಲವಂತೂ ಸುರಕ್ಷತೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಅತ್ಯಂತ ಹೆಚ್ಚಿನ ಜಾಗರೂಕತೆಯನ್ನು ವಹಿಸಲಾಗಿರುತ್ತದೆ ಎಂದು ನಿರೀಕ್ಷಿಸಲಾಗುವ ಆಸ್ಪತ್ರೆಗಳಲ್ಲೇ ಸಂಭವಿಸಿವೆ. ಹಲವಾರು ಪ್ರಾಣಹಾನಿಗಳಿಗೆ ಮತ್ತು ಸಾಕಷ್ಟು ಆಸ್ತಿ-ಪಾಸ್ತಿ ನಷ್ಟಗಳಿಗೆ ಕಾರಣವಾಗಿರುವ ಭೀಕರ ಬೆಂಕಿ ಅವಘಡಗಳು ಸಂಭವಿಸಿರುವ ಜಾಗಗಳೆಂದರೆ ರಂಗುರಂಗಿನ ರೆಸ್ಟೋರೆಂಟ್‌ಗಳು, ಪಬ್‌ಗಳು, ಸಣ್ಣ ಸಣ್ಣ ಹೋಟೆಲ್‌ಗಳು. ಪಟ್ಟಿ ಉದ್ದಕ್ಕಿದೆ. ಆದರೆ ಸುರಕ್ಷತೆ ಮತ್ತು ಪರಿಸರ ರಕ್ಷಣೆಯ ಬಗೆಗಿನ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರುವ ಶೀಘ್ರಗತಿಯ ನಗರೀಕರಣದ ಪ್ರತಿಪಾದಕರು ಮಾತ್ರ ಅದ್ಯಾವುದರ ಪರಿವೂ ಇಲ್ಲದಂತೆ ತಮ್ಮ ವಾದಗಳನ್ನು ಮುಂದುವರಿಸಿದ್ದಾರೆ. ವಾಸ್ತವದಲ್ಲಿ ‘‘ಸುಲಭವಾಗಿ ವ್ಯವಹಾರ ನಡೆಸುವ ವಾತಾವರಣವು’’ ಎಲ್ಲಕ್ಕಿಂತ ಮುಖ್ಯವಾಗುತ್ತಿದ್ದು ಕೆಲಸಗಾರರು ಕೆಲಸ ಮಾಡುವ ಪರಿಸ್ಥಿತಿ ಹೇಗೇ ಇದ್ದರೂ ಉದ್ಯೋಗ ಸಿಕ್ಕಿದ್ದಕ್ಕೆ ಋಣಿಯಾಗಿರಬೇಕೆಂದು ನಿರೀಕ್ಷಿಸಲಾಗುತ್ತಿದೆ. ಉದ್ಯೋಗದಾತರಿಗೆ ಕಾರ್ಮಿಕ ಹಿತರಕ್ಷಣೆಯ ಕಾನೂನುಗಳ ಮೂಲಕ ಪೀಡಿಸಿದರೆ ಕಾರ್ಮಿಕರು ಉದ್ಯೋಗವನ್ನೇ ಕಳೆದುಕೊಳ್ಳುತ್ತಾರಾದ್ದರಿಂದ ಹಾಗೆ ಮಾಡಬಾರದೆಂಬುದೇ ಇದರ ಹಿಂದಿನ ಆಲೋಚನೆಯಾಗಿದೆ.

ವಿಪರ್ಯಾಸವೆಂದರೆ ನಗರ ಹಾಗೂ ಪಟ್ಟಣಗಳಲ್ಲಿ ವಾಸಿಸುವ ಭಾರತದ ಬಡ ಹಾಗೂ ಕಾರ್ಮಿಕ ವರ್ಗಕ್ಕೆ ಎಂಥ ದುರ್ಭರ ಪರಿಸ್ಥಿತಿಗಳಲ್ಲೂ ಜೀವಿಸಬಲ್ಲ, ಕೆಲಸ ಮಾಡಬಲ್ಲ ಮತ್ತು ಓಡಾಡಬಲ್ಲ ಸಾಮರ್ಥ್ಯವಿದೆಯೆಂದು ಮೆಚ್ಚಿಕೊಳ್ಳಲಾಗುತ್ತದೆ. ಅವರ ‘‘ಸಹಿಸಿಕೊಂಡು ಮುನ್ನಡೆಯುವ’’ ಗುಣವೇ ಮುಂಬೈ ಮತ್ತು ದಿಲ್ಲಿಯಂಥ ನಗರಗಳ ಅದಮ್ಯ ಜೀವಂತಿಕೆಗೆ ಕಾರಣವೆಂದೂ ಸಹ ಕೊಂಡಾಡಲಾಗುತ್ತದೆ. ಆದರೆ 2019ರ ಡಿಸೆಂಬರ್ 8ರಂದು ದಿಲ್ಲಿಯ ಅನಾಜ್ ಮಂಡಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಉಸಿರುಗಟ್ಟಿ ಜೀವ ಬಿಟ್ಟ ಆ 43 ಕಾರ್ಮಿಕರು ನಗರಗಳನ್ನು ಅಭಿವೃದ್ಧಿ ಮತ್ತು ಉದ್ಯೋಗಗಳ ಮೂಲ ಕೇಂದ್ರವೆಂದು ಸಂಭ್ರಮಿಸುವ ವ್ಯವಸ್ಥೆಗೆ ಬಲಿಯಾದರೇ? ಆದರೆ ಇನ್ನೂ ಪ್ರಮುಖವಾದ ಪ್ರಶ್ನೆಯೆಂದರೆ ಬಡ ಕಾರ್ಮಿಕರು ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರಿಗೆ ತಮ್ಮ ಯಾವುದೇ ಸುರಕ್ಷತೆ ಅಥವಾ ವಿರಾಮಗಳ ಬಗ್ಗೆ ಯೋಚನೆಯನ್ನೂ ಮಾಡದೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡಬೇಕಾದ ವ್ಯವಸ್ಥೆಯ ಭಾಗವಾಗುವುದನ್ನು ಬಿಟ್ಟು ಬೇರೆ ಆಯ್ಕೆಯಿತ್ತೇ? ಈ ಬೆಂಕಿ ದುರಂತದಲ್ಲಿ ಪ್ರಾಣ ಕಳೆದುಕೊಂಡ ಬಹುಪಾಲು ಜನರು ಉತ್ತರಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದ ಕಾರ್ಮಿಕರೇ ಆಗಿದ್ದರು. ಆ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಜಾಗದಲ್ಲಿಯೇ ವಾಸಿಸಿದ್ದರು. ಕೈ ಚೀಲ, ಟೋಪಿ ಮತ್ತು ಉಡುಪುಗಳನ್ನು ಸಹ ತಯಾರಿಸುತ್ತಿದ್ದರು. ಈ ಘಟಕವು ದೇಶದ ರಾಜಧಾನಿಯ ಅತ್ಯಂತ ಇಕ್ಕಟ್ಟಾದ ಜನವಸತಿ ಪ್ರದೇಶದಲ್ಲಿತ್ತು.

ಭಾರತದ ನಗರ ಪ್ರದೇಶಗಳ ಬಡ ಮತ್ತು ವಲಸೆ ಕಾರ್ಮಿಕರ ‘‘ಅದಮ್ಯ ಜೀವಂತಿಕೆ’’ಗಳಿಗೆ ಬೇರೆಬೇರೆ ಅರ್ಥಗಳೇ ಇವೆ. ಹಾಗೆಂದರೆ ಅವರು ಕೆಲಸ ಮಾಡುವ ಜಾಗಗಳು ವಾಣಿಜ್ಯ ಉದ್ಯಮಗಳೇ ಆಗಿದ್ದರೂ ಅತ್ಯಂತ ಅಸುರಕ್ಷಿತ ಮತ್ತು ಅಪಾಯಕಾರಿ ಕಟ್ಟಡಗಳಲ್ಲಿರುತ್ತವೆಂದರ್ಥ. ಕೆಲಸ ಕಳೆದುಕೊಳ್ಳುವ ಭಯದಿಂದ ಅಲ್ಲಿನ ಕಾರ್ಮಿಕರು ಊಹಿಸಲಸಾಧ್ಯವಾದಷ್ಟು ವೇಳೆ ಕೆಲಸ ಮಾಡುತ್ತಾರೆ ಮತ್ತು ಈ ಎಲ್ಲಾ ಅಕ್ರಮಗಳನ್ನು ಬೆಸೆಯುವುದು ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಸುರಕ್ಷತೆ ಮತ್ತು ಪರಿಸರ ಸಂಬಂಧಿ ಕಾನೂನುಗಳ ಜಾರಿಯ ಬಗ್ಗೆ ಅವರಲ್ಲಿರುವ ಅಪಾರ ತಿರಸ್ಕಾರಗಳು. ಆ ಕಾರ್ಖಾನೆಯ ಮಾಲಕರು ಮತ್ತು ವ್ಯವಸ್ಥಾಪಕರು ಎಲ್ಲಾ ನಿಯಮ ಹಾಗೂ ಕಾನೂನುಗಳನ್ನು ಗಾಳಿಗೆ ತೂರಿದ್ದಂತೆ ಕಂಡುಬರುತ್ತದೆ. ಜೀವವು ಅಗ್ಗವಾಗಿದೆ. ಅದರಲ್ಲೂ ವಲಸೆ ಕಾರ್ಮಿಕರ ಜೀವವೂ ಇನ್ನಷ್ಟು ಅಗ್ಗವಾಗಿಬಿಟ್ಟಿದೆ. ಕಾನೂನುಗಳು ತುಂಬಾ ಗೋಜಲಾಗಿದ್ದು ಸಣ್ಣ ಉದ್ಯಮಗಳು ಅದನ್ನು ಜಾರಿಗೆ ತರಲು ಅಸಮರ್ಥವಾಗಿವೆ.

ಮತ್ತೊಂದು ಕಡೆ ‘‘ಸಮೃದ್ಧಿ’’ಯಾಗುತ್ತಿರುವ ನಗರಗಳು ಅದಾಯ ಸೃಷ್ಟಿ ಮತ್ತು ನಿಯಮ ಪಾಲನೆಗಳೆರಡು ಜೊತೆಗೆ ಸಾಗಲು ಕಷ್ಟವೆಂದು ಭಾವಿಸುತ್ತವೆ. ವಾಸ್ತವದಲ್ಲಿ ಈ ಎಲ್ಲಾ ಅಂಶಗಳೂ ದಿಲ್ಲಿಯ ಅನಾಜ್ ಮಂಡಿಯಲ್ಲಿದ್ದ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಸಾಬೀತುಗೊಂಡಿವೆ. ಶೀಘ್ರಗತಿಯಲ್ಲಿ ಬೆಳೆಯುವ ಮತ್ತು ಆಯೋಜಿತವಾದ ನಗರೀಕರಣಕ್ಕೆ ಮತ್ತು ಅವುಗಳ ರಾಜಕೀಯ ಆರ್ಥಿಕತೆಗೆ ಬಡವರು ಬೆಲೆಯನ್ನು ತೆರಬೇಕಾಗಿದೆ. ಕಾರ್ಮಿಕರಿಗೆ ಕೊಡುವ ಅಗ್ಗದ ಕೂಲಿಯಿಂದಾಗಿಯೇ ಈ ಘಟಕಗಳ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ. ಮೂಲಭೂತವಾಗಿ ಇದರ ಅರ್ಥವೇನೆಂದರೆ ಜನವಸತಿ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯ ಮಾಡದ ಗೃಹ ಕೈಗಾರಿಕೆಗಳನ್ನು ಮಾತ್ರ ನಡೆಸಬೇಕು. ಆದರೆ ಅಧಿಕಾರಿ ವರ್ಗದವರ ಜಾಣಕುರುಡಿನಿಂದಾಗಿ ಭಾರತದ ಬಹುಪಾಲು ಕಾನೂನುಗಳು ಕೇವಲ ಕಾಗದದ ಮೇಲೆ ಉಳಿದುಕೊಳ್ಳುತ್ತವೆ. ಅನಾಜ್ ಮಂಡಿಯಲ್ಲಿದ್ದ ಘಟಕವು ‘‘ಕಾನೂನು ಬಾಹಿರ’’ವಾಗಿದ್ದರಿಂದ ಕೈಗಾರಿಕಾ ಮತ್ತು ಕಾರ್ಮಿಕ ಇಲಾಖೆಗಳು ಅದರ ಮೇಲೆ ನಿಗಾ ಇರಿಸಲಾಗಲಿಲ್ಲವೆಂಬ ಅತ್ಯಂತ ಅಸಂಬದ್ಧ ವಿಷಯವನ್ನು ಮಾಧ್ಯಮಗಳು ವರದಿ ಮಾಡಿವೆ. ತಮ್ಮಲ್ಲಿ ನೋಂದಣಿ ಮಾಡಿಕೊಂಡಿರುವ ಘಟಕಗಳ ಉಸ್ತುವಾರಿಯನ್ನು ಮಾತ್ರ ತಾವು ಮಾಡಲು ಸಾಧ್ಯವೆಂದು ಒಬ್ಬ ಹಿರಿಯ ಸರಕಾರಿ ಅಧಿಕಾರಿ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮ ವರದಿಗಳ ಪ್ರಕಾರ ಅನಾಜ್ ಮಂಡಿ ಕಟ್ಟಡವು ಮಿಶ್ರ ಭೂಬಳಕೆಗೆ ಅನುಮತಿ ನೀಡಲಾಗಿದ್ದ ಜನವಸತಿ ಪ್ರದೇಶದಲ್ಲಿದೆ. ಆದರೆ ಕೇವಲ ನೆಲ ಅಂತಸ್ತಿನಲ್ಲಿ ಮಾತ್ರ ಇವಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಇಡೀ ಕಟ್ಟಡವನ್ನೇ ಈ ಉತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗಿತ್ತು ಹಾಗೂ ಆ ಘಟಕವು ಪೌರಾಡಳಿತದಿಂದಾಗಲೀ ಅಥವಾ ಸರಕಾರದಿಂದಾಗಲೀ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ನಡೆಯುತ್ತಿತ್ತು. ಅದು ಅಗ್ನಿ ಶಾಮಕ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನೂ ಪಡೆದುಕೊಂಡಿರಲಿಲ್ಲ ಮತ್ತು ಸ್ಥಳೀಯ ಪೌರಾಡಳಿತವು ಕಟ್ಟಡ ವಿನ್ಯಾಸಕ್ಕೂ ಅನುಮತಿ ನೀಡಿರಲಿಲ್ಲ. ಕಾರ್ಮಿಕರು ಮಲಗುತ್ತಿದ್ದ ಪ್ರದೇಶವನ್ನೂ ಒಳಗೊಂಡಂತೆ ಇಡೀ ಆವರಣದಲ್ಲಿ ಕಾಗದ, ಪ್ಲಾಸ್ಟಿಕ್ ಮತ್ತು ರೆಕ್ಸಿನ್‌ಗಳಂಥ ಸುಲಭವಾಗಿ ದಹಿಸಬಲ್ಲ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಒಟ್ಟುಮಾಡಿಡಲಾಗಿತ್ತು.

ಡಿಸೆಂಬರ್ 8ರ ಬೆಂಕಿ ದುರಂತ ಸಂಭವಿಸಿದ ಕೂಡಲೇ ರಾಜಕಾರಣಿಗಳು ಮತ್ತು ಪಕ್ಷಗಳು ನಗದು ಪರಿಹಾರ ಘೋಷಿಸುವ ಮತ್ತು ಪರಸ್ಪರರನ್ನು ದೂಷಿಸುವ ಸ್ಪರ್ಧೆಯನ್ನು ಪ್ರಾರಂಭಿಸಿವೆ. ಇದು ಸಾರ್ವಜನಿಕ ಅನಾಹುತ ಮತ್ತು ಅವಘಡಗಳು ಸಂಭವಿಸಿದಾಗಲೆಲ್ಲಾ ನಡೆಯುವ ರೂಢಿಗತ ವಿದ್ಯಮಾನವೇ ಆಗಿಬಿಟ್ಟಿದೆ. ಚುನಾವಣಾ ಸಮಯದಲ್ಲಿ ಇದೇ ಪಕ್ಷಗಳೇ ಅನಧಿಕೃತ ಕೊಳೆಗೇರಿಗಳು ಮತ್ತು ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಬೇಕೆಂದು ಹುಯಿಲಿಡುತ್ತವೆ. ಆದರೆ ಅಗ್ನಿ ಶಾಮಕ ವಾಹನಗಳ ಮತ್ತು ಉಪಕರಣಗಳಂಥ ಸುರಕ್ಷತಾ ಮೂಲಭೂತ ಸೌಕರ್ಯಗಳನ್ನು ಒದಗಿಸುವವಿಷಯದ ಬಗ್ಗೆ ಮಾತ್ರ ಯಾವ ಗಮನವನ್ನೂ ವಹಿಸುವುದಿಲ್ಲ.

ಮಾಧ್ಯಮಗಳಿಗಾಗಲೀ ಅಥವಾ ನಾಗರಿಕ ಸಮಾಜಕ್ಕಾಗಲೀ ಅನಾಜ್ ಮಂಡಿ ಬೆಂಕಿ ದುರಂತದಂಥ ಅವಘಡಗಳಲ್ಲಿ ಬಲಿಯಾದವರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುವ ಮನಸ್ಸಾಗಲೀ ಸಮಯವಾಗಲೀ ಇಲ್ಲ. ದಿಲ್ಲಿಯ ಮತ್ತೊಂದು ಭೀಕರ ಅಗ್ನಿ ದುರಂತವಾದ ಉಪಹಾರ್ ಸಿನೆಮಾ ಮಂದಿರದ ಅಗ್ನಿ ದುರಂತಕ್ಕೆ ಬಲಿಯಾದವರ ಕುಟುಂಬಗಳು ನ್ಯಾಯ ಪಡೆಯಲು ಸುದೀರ್ಘ 18 ವರ್ಷಗಳ ಕಾಲ ನಿರಂತರ ಕಾನೂನು ಸಮರ ನಡೆಸುವ ಧೈರ್ಯವನ್ನು ತೋರಿದ್ದರು. ಆದರೆ ಅಂತಿಮ ಪಲಿತಾಂಶವು ಅವರ ಆಕ್ರೋಶ ಮತ್ತು ತಾಳ್ಮೆಗಳನ್ನು ಲೇವಡಿ ಮಾಡುವಂತಿತ್ತು. ಅನಾಜ್ ಮಂಡಿ ದುರಂತಕ್ಕೆ ಬಲಿಯಾದವರನ್ನೂ ಸಹ ಕೆಲವೇ ದಿನಗಳಲ್ಲಿ ಮರೆತುಹೋಗುತ್ತೇವೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News

ಜಗದಗಲ
ಜಗ ದಗಲ