ರಾತ್ರಿ ನಿದ್ರೆ ಕಸಿಯುವ ಇನ್‌ಸೋಮ್ನಿಯಾ
ಇನ್‌ಸೋಮ್ನಿಯಾ ಅಥವಾ ನಿದ್ರಾಹೀನತೆಯು ನಿದ್ರೆಗೆ ಸಂಬಂಧಿಸಿದ ರೋಗವಾಗಿದ್ದು, ಹೆಸರೇ ಸೂಚಿಸುವಂತೆ ಇದರಿಂದ ಬಳಲುತ್ತಿರುವ ವ್ಯಕ್ತಿಗೆ ರಾತ್ರಿ ನಿದ್ರೆ ಮಾಡುವುದು ಕಷ್ಟವಾಗುತ್ತದೆ. ಈ ಕಾಯಿಲೆಯು ವ್ಯಕ್ತಿಯನ್ನು ಬೆಳಗ್ಗೆ ಬೇಗನೆ ಏಳುವಂತೆ ಮಾಡುತ್ತದೆ ಮತ್ತು ಉತ್ತಮ ನಿದ್ರೆಯಿಂದ ವಂಚಿತಗೊಳಿಸುತ್ತದೆ. ಹೀಗಾಗಿ ವ್ಯಕ್ತಿಯು ದಿನವಿಡೀ ದಣಿವನ್ನು ಅನುಭವಿಸುತ್ತಿರುತ್ತಾನೆ. ಇದು ದೈನಂದಿನ ಕೆಲಸಕಾರ್ಯಗಳಿಗೂ ವ್ಯತ್ಯಯವನ್ನುಂಟು ಮಾಡುತ್ತದೆ. ಹೀಗಾಗಿ ಇನ್‌ಸೋಮ್ನಿಯಾ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಇನ್‌ಸೋಮ್ನಿಯಾ ಅಲ್ಪಾವಧಿ ಮತ್ತು ದೀರ್ಘಾವಧಿಗೆ ಅಥವಾ ಖಾಯಂ ಆಗಿ ಕಾಡುತ್ತದೆ. ಮೂರು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ವಾರದಲ್ಲಿ ಕನಿಷ್ಠ ಮೂರು ರಾತ್ರಿ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಅದನ್ನು ದೀರ್ಘಕಾಲಿಕ ಇನ್‌ಸೋಮ್ನಿಯಾ ಎನ್ನಲಾಗುತ್ತದೆ.
ಇನ್‌ಸೋಮ್ನಿಯಾದ ವಿಧಗಳು ಮತ್ತು ಕಾರಣಗಳು
ಹೆಚ್ಚಿನ ಒತ್ತಡ, ತಲ್ಲಣ, ನಿರಂತರ ಪ್ರವಾಸ ಮತ್ತು ಅನಿಯಮಿತ ಕಾರ್ಯ ವೇಳಾಪಟ್ಟಿ ಇತ್ಯಾದಿಗಳಿಂದ ನಿದ್ರೆ ಬಾರದಿದ್ದಾಗ ಅದನ್ನು ಪ್ರೈಮರಿ ಇನ್‌ಸೋಮ್ನಿಯಾ ಎಂದು ಕರೆಯಲಾಗುತ್ತದೆ. ಸ್ಲೀಪ್ ಆಪ್ನಿಯಾದಂತಹ ನಿದ್ರೆಗೆ ಸಂಬಂಧಿಸಿದ ವೈಕಲ್ಯಗಳು ಮತ್ತು ಸಂಧಿವಾತ, ತಲೆನೋವು, ಅತಿಯಾದ ಮದ್ಯಪಾನ, ಹೆಚ್ಚು ಕೆಫೀನ್ ಸೇವನೆ ಇವುಗಳಿಂದ ನಿದ್ರಾಹೀನತೆಯುಂಟಾದರೆ ಅದನ್ನು ಸೆಕೆಂಡರಿ ಇನ್‌ಸೋಮ್ನಿಯಾ ಎನ್ನಲಾಗುತ್ತದೆ.
ಅತಿಯಾದ ಪ್ರಮಾಣದಲ್ಲಿ ಔಷಧಿಗಳ ಸೇವನೆ ಅಥವಾ ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ಸೇವಿಸದಿರುವುದು, ಶಬ್ದ, ಬೆಳಕು ಮತ್ತು ಅತಿಯಾದ ತಾಪಮಾನಕ್ಕೆ ಒಡ್ಡಿಕೊಳ್ಳುವಿಕೆ, ಖಿನ್ನತೆ ಮತ್ತು ಆಘಾತದ ನಂತರದ ಒತ್ತಡ, ಥೈರಾಯ್ಡಿ ಸಮಸ್ಯೆಗಳು, ಅಸ್ತಮಾ, ಆತಂಕ ಇತ್ಯಾದಿಗಳು, ನೋವು ಅಥವಾ ಜೀವಕ್ಕೆ ಕಿರಿಕಿರಿ, ಪ್ರಯಾಣ ಅಥವಾ ಕೆಲಸದ ಪಾಳಿಗಳ ಬದಲಾವಣೆಗಳಿಂದ ನಿಯಮಿತ ನಿದ್ರೆಗೆ ವ್ಯತ್ಯಯ ಇವುಗಳು ಇನ್‌ಸೋಮ್ನಿಯಾಕ್ಕೆ ಕಾರಣವಾಗುತ್ತವೆ.
ಮನಃಸ್ಥಿತಿಯಲ್ಲಿ ಬದಲಾವಣೆಗಳು, ಪ್ರೇರಣೆಯ ಕೊರತೆ, ಏಕಾಗ್ರತೆ ಕುಂಠಿತ, ಜ್ಞಾಪಕ ಶಕ್ತಿ ಸಮಸ್ಯೆಗಳು ಇತ್ಯಾದಿಗಳಿಗೆ ನಿದ್ರಾಹೀನತೆಯು ಕಾರಣವಾಗುತ್ತದೆ.
ಇನ್‌ಸೋಮ್ನಿಯಾ ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ?
ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಗಳ ಮಟ್ಟ,ಔಷಧಿಗಳ ಬಳಕೆ, ಮದ್ಯಪಾನ,ತಂಬಾಕು ಸೇವನೆ ಇತ್ಯಾದಿಗಳು ನಿದ್ರೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿವೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಇನ್‌ಸೋಮ್ನಿಯಾ ಇದೆಯೇ ಎಂದು ತಿಳಿಯಲು ಬೊಜ್ಜು ಮತ್ತು ಸ್ಲೀಪ್ ಆಪ್ನ್ನಿಯಾ ರೋಗ ನಿರ್ಧಾರಗಳೂ ಅಗತ್ಯವಾಗಬಹುದು.
ಇನ್‌ಸೋಮ್ನಿಯಾಕ್ಕೆ ಏನು ಚಿಕಿತ್ಸೆ?
ಅಲ್ಪಾವಧಿಯ ನಿದ್ರಾಹೀನತೆಗೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ಉತ್ತಮ ನಿದ್ರೆಯ ಪದ್ಧತಿ, ಜೀವನಶೈಲಿಯಲ್ಲಿ ಸುಧಾರಣೆ, ಊಟ ಮತ್ತು ನಿದ್ರೆಗೆ ತೆರಳುವುದರ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರ, ನಿಯಮಿತ ವ್ಯಾಯಾಮ ಮತ್ತು ಮನೆಯಲ್ಲಿ ಉಲ್ಲಸಿತ ವಾತಾವರಣದ ಸೃಷ್ಟಿ ಇವುಗಳ ಮೂಲಕ ಇನ್‌ಸೋಮ್ನಿಯಾವನ್ನು ನಿಭಾಯಿಸಬಹುದು. ಈ ಸರಳ ಉಪಾಯಗಳು ಫಲ ನೀಡದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಅವರು ಸಮಸ್ಯೆಯನ್ನು ಅರಿತುಕೊಂಡು ನಿದ್ರೆಯ ಮಾತ್ರೆಗಳು, ಶಾಮಕಗಳು, ಖಿನ್ನತೆ ನಿರೋಧಕ ಔಷಧಿಗಳು ಇತ್ಯಾದಿಗಳನ್ನು ಶಿಫಾರಸು ಮಾಡಬಹುದು. ಇವುಗಳನ್ನು ವೈದ್ಯರ ಸಲಹೆಯಿಲ್ಲದೆ ಎಂದೂ ಸೇವಿಸಬಾರದು.
ದೀರ್ಘಕಾಲಿಕ ಇನ್‌ಸೋಮ್ನಿಯಾಕ್ಕೆ ಬಿಹೇವಿಯರಲ್ ಥೆರಪಿಯಂತಹ ಸೂಕ್ತ ಚಿಕಿತ್ಸೆಯು ಅಗತ್ಯವಾಗುತ್ತದೆ.