ಕೇಸರಿ ವಸ್ತ್ರಧಾರಿಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ ಜೆಎಂಎಂ ಕಾರ್ಯಾಧ್ಯಕ್ಷ

Update: 2019-12-19 03:38 GMT

ರಾಂಚಿ, ಡಿ.19: ''ಕೇಸರಿ ವಸ್ತ್ರಧಾರಿಗಳು ವಿವಾಹವಾಗುವುದು ಕಡಿಮೆ; ಅತ್ಯಾಚಾರ ನಡೆಸುವುದು ಹೆಚ್ಚು'' ಎಂದು ಹೇಳುವ ಮೂಲಕ ಜಾರ್ಖಂಡ್ ಮುಕ್ತಿ ಮೋರ್ಚಾ ಕಾರ್ಯಾಧ್ಯಕ್ಷ ಹೇಮಂತ್ ಸೊರೆನ್ ವಿವಾದಕ್ಕೆ ಸಿಲುಕಿದ್ದಾರೆ.

ಸೊರೆನ್ ಹೇಳಿಕೆಯನ್ನು ಆಡಳಿತಾರೂಢ ಬಿಜೆಪಿ ಕಟುವಾಗಿ ಟೀಕಿಸಿದ್ದು, ಜೆಎಂಎಂ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

"ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಕೂಡಾ ಜಾರ್ಖಂಡ್‌ನಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಲಾಗಿದೆ. ಈ ಬಿಜೆಪಿಯವರು ಸಾಮಾನ್ಯವಾಗಿ ವಿವಾಹವಾಗುವುದಿಲ್ಲ; ಕೇಸರಿ ವಸ್ತ್ರ ಧರಿಸಿರುತ್ತಾರೆ, ಇವರು ಪುತ್ರಿ ಹಾಗೂ ಸೊಸೆಯಂದಿರ ಮೇಲೆ ಅತ್ಯಾಚಾರ ಎಸಗುತ್ತಾರೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಇಂಥವರಿಗೆ ನಾವು ಮತ ಹಾಕಬೇಕೇ" ಎಂದು ಸೊರೆನ್ ಅವರು ಪಾಕೂರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಬುಧವಾರ ಪ್ರಶ್ನಿಸಿದರು. ಈ ಸಂದರ್ಭ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ ವೇದಿಕೆಯಲ್ಲಿದ್ದರು.

ಈ ಭಾಷಣದ ವೀಡಿಯೊ ತುಣುಕನ್ನು ಪುರಾವೆಯಾಗಿ ನೀಡಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಜೆಎಂಎಂ ನಾಯಕನ ಹೇಳಿಕೆ ಕೋಟ್ಯಂತರ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ. "ಪ್ರಿಯಾಂಕಾ ಗಾಂಧಿ ಈ ವೇಳೆ ವೇದಿಕೆಯಲ್ಲಿದ್ದರೂ, ಹೀಗೆ ಹೇಳದಂತೆ ಅವರನ್ನು ತಡೆದಿಲ್ಲ; ಅಂದರೆ ಈ ಹೇಳಿಕೆಗೆ ಪ್ರಿಯಾಂಕಾ ಒಪ್ಪಿಗೆಯೂ ಇದೆ ಎಂದರ್ಥ. ಹೇಮಂತ್ ಸೊರೆನ್ ಹಾಗೂ ಪ್ರಿಯಾಂಕಾ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಿಸಬೇಕು" ಎಂದು ಬಿಜೆಪಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News