ಇಂಗ್ಲಿಷ್ ಶಿಕ್ಷಣ ಪಡೆದವರು ಕ್ರಿಶ್ಚಿಯನ್ ಆಗುತ್ತಾರೆಯೇ?

Update: 2019-12-19 18:56 GMT

ಉತ್ತಮ ಮಟ್ಟದ ಶಿಕ್ಷಣ ಹಳ್ಳಿಗಳಿಗೆ ಬಂದಾಗ ಬಂಗಲೆಗಳಲ್ಲಿ ವಾಸಿಸುವ ಶ್ರೀಮಂತರು ಹೇಗೆ ವರ್ತಿಸುತ್ತಾರೆ ನೋಡಿ. ಇಂಗ್ಲಿಷ್ ಶಿಕ್ಷಣ ಪಡೆದವರು ಕ್ರಿಶ್ಚಿಯನ್ನರಾಗುತ್ತಾರೆ ಎಂದು ಬಲಪಂಥೀಯ ಶಕ್ತಿಗಳು ವಿಷ ಹರಡುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಎಡಪಂಥೀಯ ಮೇಲ್ಜಾತಿಗಳ ಜನ ಹಾಗೂ ಅನುಯಾಯಿಗಳು ಕೂಡ ಈಗ ಸೂಪರ್ ಬಲಪಂಥೀಯರ ಹಾಗೆ ವರ್ತಿಸುತ್ತಿದ್ದಾರೆ

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವ ವಿಷಯದಲ್ಲಿ ದೃಢ ನಿರ್ಧಾರ ತಳೆದು, 2020-21ರಿಂದ ಈ ಹೊಸ ಶಿಕ್ಷಣ ಕಾರ್ಯಕ್ರಮ ಜಾರಿಗೊಳಿಸಲು ಆಜ್ಞೆಗಳನ್ನು ಹೊರಡಿಸಿದರು. ಅಂದಿನಿಂದ, ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆಯುವುದನ್ನು ವಿರೋಧಿಸುವ ಶಕ್ತಿಗಳು ಒಂದು ಹೊಸ ಸಿದ್ಧಾಂತವನ್ನು ಪ್ರತಿನಿಧಿಸುತ್ತಿವೆ. ಈ ಶಕ್ತಿಗಳು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ಎಲ್ಲ ಪಕ್ಷಗಳಲ್ಲೂ ಮಾಧ್ಯಮ ಉದ್ಯಮಗಳ ಮುಖ್ಯಸ್ಥರಿಂದ ಹಿಡಿದು ಎಡಪಂಥದ ಸಿದ್ಧಾಂತವಾದಿಗಳವರೆಗೂ ಹರಡಿಕೊಂಡಿವೆ.

ಇಂಗ್ಲಿಷ್ ಶಿಕ್ಷಣ ಪಡೆದವರೆಲ್ಲರೂ ಕ್ರಿಶ್ಚಿಯನ್ನರಾಗುತ್ತಾರೆ ಎಂಬುದೇ ಈ ಶಕ್ತಿಗಳು ಪ್ರತಿಪಾದಿಸುತ್ತಿರುವ ಆಘಾತಕಾರಿಯಾದ ಹೊಸ ಸಿದ್ಧಾಂತ.

ಇದು ನಿಜವಾದಲ್ಲಿ, ಇಷ್ಟರೊಳಗಾಗಿ ಅಮರಾವತಿಯ ಎಲ್ಲ ಶ್ರೀಮಂತರು, ಬಂಜಾರಾ ಹಿಲ್ ಬಂಗಲೆಗಳಲ್ಲಿ ವಾಸಿಸುತ್ತಿರುವ, ಜುಬಿಲಿ ಹಿಲ್‌ನಲ್ಲಿರುವ ಎಲ್ಲರೂ ಕ್ರಿಶ್ಚಿಯನ್ನರಾಗಿ ಬಿಡುತ್ತಿದ್ದರು. ಹಾಗೆಯೇ ಗ್ರೇಟರ್ ಕೈಲಾಶ್ ಖಾನ್ ಮಾರ್ಕೆಟ್(ದಿಲ್ಲಿ)ನ ಭಾರತದ ಬುದ್ಧಿಜೀವಿಗಳು ಮತ್ತು ವಾಣಿಜ್ಯ ದೊರೆಗಳು, ಮುಂಬೈಯ ಮರೀನ್ ಡ್ರೈವ್ ನೆಕ್‌ಲೆಸ್ ಬೀಚ್ ನಿವಾಸಿಗಳು, ಚೆನ್ನೈನ ಅಯ್ಯರ್ ಮತ್ತು ಅಯ್ಯಂಗಾರ್ ಕಾಲೋನಿ ನಿವಾಸಿಗಳು ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿರುತ್ತಿದ್ದರು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ನಮ್ಮ ಉದಾರವಾದಿ ಹಾಗೂ ಎಡ ಕಾಮ್ರೇಡ್‌ಗಳು ಕ್ರಿಶ್ಚಿಯನ್ನರಾಗಿ ಬಿಡುತ್ತಿದ್ದರು. ಅವರ ಚುನಾವಣಾ ಚಿಹ್ನೆ ಕತ್ತಿ ಮತ್ತು ತೆನೆಯಾಗದೆ ಶಿಲುಬೆಯಾಗಿರುತ್ತಿತ್ತು.

ಉತ್ತಮ ಮಟ್ಟದ ಶಿಕ್ಷಣ ಹಳ್ಳಿಗಳಿಗೆ ಬಂದಾಗ ಬಂಗಲೆಗಳಲ್ಲಿ ವಾಸಿಸುವ ಶ್ರೀಮಂತರು ಹೇಗೆ ವರ್ತಿಸುತ್ತಾರೆ ನೋಡಿ. ಇಂಗ್ಲಿಷ್ ಶಿಕ್ಷಣ ಪಡೆದವರು ಕ್ರಿಶ್ಚಿಯನ್ನರಾಗುತ್ತಾರೆ ಎಂದು ಬಲಪಂಥೀಯ ಶಕ್ತಿಗಳು ವಿಷ ಹರಡುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಎಡಪಂಥೀಯ ಮೇಲ್ಜಾತಿಗಳ ಜನ ಹಾಗೂ ಅನುಯಾಯಿಗಳು ಕೂಡ ಈಗ ಸೂಪರ್ ಬಲಪಂಥೀಯರ ಹಾಗೆ ವರ್ತಿಸುತ್ತಿದ್ದಾರೆ.

ಮಹಾತ್ಮಾ ಗಾಂಧಿ ಅವರಿಂದ ಆರಂಭಿಸಿ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಜ್ಯೋತಿ ಬಸು, ನಂಬೂದಿರಿಪಾಡ್, ಇಂದ್ರಜಿತ್ ಗುಪ್ತಾ, ಸೀತಾರಾಮ್ ಯೆಚೂರಿ, ಪ್ರಕಾಶ್ ಕಾರಟ್, ಬೃಂದಾ ಕಾರಟ್‌ರವರೆಗೆ ಎಲ್ಲರೂ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿತವರು. ಇಷ್ಟೇ ಅಲ್ಲ, ಬಲಪಂಥೀಯವಾದ ಲಾಲ್‌ಕೃಷ್ಣ ಅಡ್ವಾಣಿ, ಅರುಣ್ ಶೌರಿ, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್‌ರವರು ಮತ್ತು ಆಧುನಿಕ ಮಾರುಕಟ್ಟೆ ಹಾಗೂ ಮಾಧ್ಯಮದ ಮೋದಿಯವರ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಬುದ್ಧಿಜೀವಿಗಳು ಇಂಗ್ಲಿಷ್ ಮಾಧ್ಯಮ ಶಿಕ್ಷಣ ಪಡೆದವರು ಹಾಗೂ ಒಟ್ಟಾರೆಯಾಗಿ ಕ್ರಿಶ್ಚಿಯನ್ ವಿರೋಧಿ ನಿಲುವಿನವರು.

ಬಲಪಂಥೀಯರ ಹೀರೋ ವೀರ ಸಾವರ್ಕರ್ ಅವರು ಗೋಪಾಲಕೃಷ್ಣ ಗೋಖಲೆ ಮತ್ತು ಬಾಲಗಂಗಾಧರ್ ತಿಲಕ್ ಕಲಿತ ಪೂನಾದ ಫರ್ಗ್ಯೂಸನ್ ಕಾಲೇಜಿನಲ್ಲಿ ಕಲಿತವರು. ಬಾಂಬೆ ಪ್ರಾಂತದಲ್ಲಿ ಫರ್ಗ್ಯೂಸನ್ ಕಾಲೇಜು ಅತ್ಯುತ್ತಮ ಇಂಗ್ಲಿಷ್ ಮಾಧ್ಯಮ ಕಾಲೇಜು ಆಗಿತ್ತು. ಶ್ಯಾಮ ಪ್ರಸಾದ್ ಮುಖರ್ಜಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು. ಇಂಗ್ಲಿಷ್ ಮಾಧ್ಯಮ ಶಿಕ್ಷಣ ಜನರನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವುದಾಗಿದ್ದಲ್ಲಿ ಇವರಲ್ಲಿ ಬಹುತೇಕ ವ್ಯಕ್ತಿಗಳು ಪ್ಯಾಸ್ಟರ್, ಬಿಷಪ್‌ಗಳಾಗುತ್ತಿದ್ದರು; ಬದಲಾಗಿ ಇವರೆಲ್ಲ ಏನಾಗಿದ್ದರು, ಏನಾಗಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ.

ಹೀಗಿರುವಾಗ ಈ ಎಲ್ಲ ಹಿಂದೂ ನಾಯಕರನ್ನು ಅನುಸರಿಸುವ ಇಂದಿನ ನಾಯಕರು ಬಡವರ ಮಕ್ಕಳು ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತಾಗ ಮಾತ್ರ ಕ್ರಿಶ್ಚಿಯನ್ನರಾಗುತ್ತಾರೆ ಎಂದು ಯಾಕೆ ತಿಳಿದಿದ್ದಾರೆ? ಈ ವಾದ ಎಲ್ಲಿಂದ ಬರುತ್ತದೆ? ಇದು ಸಮಾನತೆಯ ಕುರಿತ ಆಳವಾದ ಒಂದು ಭಯದಿಂದ ಬರುವ ವಾದ. ಬಡವರ ಮಕ್ಕಳಿಗೆ ಶೈಕ್ಷಣಿಕ ಸಮಾನತೆ ದೊರೆತಲ್ಲಿ ಅವರು ಶ್ರೀಮಂತರಿಗೆ ಸಮಾನವಾಗಿ ನಿಂತು ಸವಾಲೊಡ್ಡುತ್ತಾರೆಂಬ ಭಯ ಹೀಗೇ ವಾದಿಸುವವರಿಗಿದೆ.

ಸಮಾನತೆಗಾಗಿ ನಡೆಸಿದ ಹೋರಾಟದ ಇತಿಹಾಸದಲ್ಲಿ ಮನುಕುಲ ಸಾಕಷ್ಟು ರಕ್ತ ಹರಿಸಿದೆ ದೇವರ ಮುಂದೆ ಸಮಾನತೆಗಾಗಿ ಜಮೀನಿನ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಲೇ ಬಂದಿದೆ ಭಾರತದಲ್ಲಿ ಜಾಮೀನಿಗಾಗಿ ನಡೆಸಿದ ಹೋರಾಟದಲ್ಲಿ ಗರಿಷ್ಠ ಸಂಖ್ಯೆಯ ಜೀವ ಹಾನಿಯಾಗಿದೆ. ತೆಲಂಗಾಣ ಸಶಸ್ತ್ರ ಹೋರಾಟದಿಂದ ನಕ್ಸಲ್ ಬಾರಿ, ಶ್ರೀಕಾಕುಳಂ ಹೋರಾಟಗಳ ವರೆಗೆ ಜಮೀನಿಗಾಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಅವರು ಬಯಸಿದ ಸಮಾನತೆ ಸಾಧ್ಯವಾಗಲಿಲ್ಲ.

ಕಮ್ಯುನಿಸ್ಟ್ ಸಿದ್ಧಾಂತವು ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಕ್ರಾಂತಿ ಬರುತ್ತದೆಂದು ಊಹಿಸಿರಲಿಲ್ಲ. ಹಿಂದುತ್ವ ಸಿದ್ಧಾಂತಕ್ಕೆ ಯಾವುದೇ ತಾಂತ್ರಿಕ ಹಾಗೂ ಭಾಷಾ ವೈಜ್ಞಾನಿಕ ಕ್ರಾಂತಿ ಬೇಕಾಗಿಲ್ಲ. ಆದರೆ ಅಂತರ್ ರಾಷ್ಟ್ರೀಯತೆಯಲ್ಲಿ ನಂಬಿಕೆಯಿಟ್ಟಿದ್ದ ಎಡಪಂಥೀಯರು ಈ ಮಟ್ಟಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು ಕ್ರಿಶ್ಚಿಯನ್ನರಾಗುತ್ತಾರೆ ಎಂದು ಹೇಳುವ ಮಟ್ಟಕ್ಕೆ ಯಾಕೆ ಇಳಿದರು?

ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಕ್ರಾಂತಿಗಳು ಹೋರಾಟದ ಮೂಲಕ, ರಕ್ತ ಹರಿಸುವ ಮೂಲಕ ಬಂದ ಕಾಂತಿಯಲ್ಲಿ ಇವುಗಳು ಉತ್ತಮ ಶಾಲೆ ಕಾಲೇಜು, ವಿಶ್ವವಿದ್ಯಾನಿಲಯಗಳ ಮೂಲಕ, ಇಂಗ್ಲಿಷ್ ಶಿಕ್ಷಣದ ಮೂಲಕ ಆದ ಕ್ರಾಂತಿಗಳು. ತೆಲುಗು, ತಮಿಳು ಅಥವಾ ಹಿಂದಿ ಮೂಲಕ ಬಂದ ಕ್ರಾಂತಿಗಳಲ್ಲ.

ಈ ಹೊಸ ಕ್ರಾಂತಿಗಳ ಇತಿಹಾಸವನ್ನು ಹಿಂದುತ್ವ ಶಕ್ತಿಗಳು ಅರ್ಥ ಮಾಡಿಕೊಳ್ಳಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ‘‘ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿ’’ ಎನ್ನುವ ಕಮ್ಯುನಿಸ್ಟರು ಒಂದು ಸಾಮಾನ್ಯ ಜಾಗತಿಕ ಭಾಷೆ (ಇಂಗ್ಲಿಷ್) ಇಲ್ಲದೆ ಅವರು ಒಗ್ಗಟ್ಟಾಗುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಲ್ಲವೇ?

ತೆಲಂಗಾಣದ ಹಳ್ಳಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಸರಕಾರಿ ಶಾಲೆಗಳು ಮತ್ತು ಆ ಶಾಲೆಗಳಲ್ಲಿ ಕಲಿಯುವ ಮಕ್ಕಳ ತಾಯಂದಿರ ಖಾತೆಗಳಲ್ಲಿ 15,000 ರೂಪಾಯಿ ಅಲ್ಲಿ ರಕ್ತರಹಿತ ಕ್ರಾಂತಿಯನ್ನೇ ತರಲಿದೆ.

ಕೃಪೆ: thehindu.com

Writer - ಕಾಂಚ ಐಲಯ್ಯ ಶೆಫರ್ಡ್

contributor

Editor - ಕಾಂಚ ಐಲಯ್ಯ ಶೆಫರ್ಡ್

contributor

Similar News

ಜಗದಗಲ
ಜಗ ದಗಲ