ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

Update: 2019-12-19 19:03 GMT

ಲಕ್ನೋ, ಡಿ. 19: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭ ಗುಂಡು ತಗಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದ ವರಲ್ಲಿ ಓರ್ವ ಲಕ್ನೋದಲ್ಲಿ ಬುಧವಾರ ಮೃತಪಟ್ಟಿದ್ದಾನೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರಪ್ರದೇಶದಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಡೆದ ದಾಂಧಲೆ, ಬೆಂಕಿ ಹಚ್ಚುವಿಕೆ ಹಾಗೂ ಕಲ್ಲು ತೂರಾಟದ ಬಳಿಕ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು ಹಾಗೂ ಅಶ್ರುವಾಯು ಶೆಲ್ ಸಿಡಿಸಿದ್ದರು. ಇದರಿಂದ ಹಲವರು ಗಾಯಗೊಂಡಿದ್ದರು ಎನ್ನಲಾಗಿತ್ತು.

ಗುಂಡಿನಿಂದ ಗಾಯಗೊಂಡಿದ್ದ ಮುಹಮ್ಮದ್ ವಕೀಲ್ (25) ಮೃತಪಟ್ಟಿದ್ದಾರೆ ಎಂದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದ ತುರ್ತು ನಿಗಾ ಕೇಂದ್ರದ ಸಂದೀಪ್ ತಿವಾರಿ ಹೇಳಿದ್ದಾರೆ. ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಒಬ್ಬರು ಗುಂಡು ತಗಲಿ ಗಾಯಗೊಂಡವರು ಎಂದು ಅವರು ಹೇಳಿದ್ದಾರೆ. ಲಕ್ನೋದ ಮುಖ್ಯವಾಗಿ ಹಳೇ ನಗರ ಪ್ರದೇಶದಲ್ಲಿ ಗುರುವಾರ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದರು. ಪೊಲೀಸ್ ಹೊರಠಾಣೆ ಹಾಗೂ ಹಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ಜಿಲ್ಲಾ ದಂಡಾಧಿಕಾರಿ ಕಚೇರಿಗೆ ಸಮೀಪ ಇರುವ ಪರಿವರ್ತನ ಚೌಕ್‌ನಲ್ಲಿರುವ ರಾಜ್ಯ ಸ್ವಾಮಿತ್ವದ ಬಸ್‌ಸ್ಟಾಂಡ್‌ಗೆ ಹಾಗೂ ಸತ್ಕಂದ ಪ್ರದೇಶದಲ್ಲಿರುವ ಪೊಲೀಸ್ ಹೊರಠಾಣೆಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದರು. ಹಳೆ ಲಕ್ನೋದ ಮಾದೇಗಂಜ್‌ನಲ್ಲಿ ಇನ್ನೊಂದು ಪೊಲೀಸ್ ಹೊರಠಾಣೆಗೆ ಪ್ರತಿಭಟನಕಾರರು ಹಾನಿ ಉಂಟು ಮಾಡಿದರು. ಪೊಲೀಸ್ ಹೊರಠಾಣೆಯ ಹೊರಗೆ ನಿಲ್ಲಿಸಿದ್ದ ವಾಹನಗಳನ್ನು ಪ್ರತಿಭಟನಕಾರರು ಧ್ವಂಸಗೊಳಿಸಿದ ಬಳಿಕ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು.

‘‘ನಾವು 55 ಮಂದಿಯನ್ನು ಬಂಧಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದೇವೆ. ನಾವು ಯಾರನ್ನೂ ಬಿಡುವುದಿಲ್ಲ. ನಮ್ಮ ಕಡೆಯಿಂದ ಯಾವುದೇ ಗುಂಡು ಹಾರಾಟ ನಡೆದಿಲ್ಲ. ನಾವು ತನಿಖೆ ನಡೆಸಲಿದ್ದೇವೆ’’ ಎಂದು ಉತ್ತರಪ್ರದೇಶದ ಪೊಲೀಸ್ ವರಿಷ್ಠ ಒ.ಪಿ. ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News