ಪಾಕ್ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಏಳು ಮಂದಿ ಬಂಧನ

Update: 2019-12-21 03:59 GMT

ವಿಶಾಖಪಟ್ಟಣಂ: ಆನ್‌ಲೈನ್ ಸಂಪರ್ಕದ ಮೂಲಕ ಮಹಿಳೆಯೊಬ್ಬಳ ಆಮಿಷಕ್ಕೆ ಬಲಿಯಾಗಿ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಭಾರತೀಯ ನೌಕಾಪಡೆಯ ಏಳು ಮಂದಿ ಸೈನಿಕರು ಮತ್ತು ಮುಂಬೈ ಮೂಲದ ಹವಾಲಾ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆಂಧ್ರಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಎಂಟು ಮಂದಿಯನ್ನು ದೇಶದ ವಿವಿಧೆಡೆಗಳಲ್ಲಿ ಬಂಧಿಸಲಾಗಿದ್ದು, ವಿಜಯವಾಡದಲ್ಲಿ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ಜನವರಿ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಚೇರಿ ಗೌಪ್ಯ ಕಾಯ್ದೆ-1923ರ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ನೌಕಾಪಡೆಯ ಗುಪ್ತಚರ ವಿಭಾಗ ಮತ್ತು ಕೇಂದ್ರೀಯ ಭದ್ರತಾ ಏಜೆನ್ಸಿಗಳು ಸಂಯುಕ್ತವಾಗಿ ಆಪರೇಷನ್ ಡಾಲ್ಫಿನ್ ನೋಸ್ ಹೆಸರಿನಲ್ಲಿ ದೇಶವ್ಯಾಪಿ ಬೇಹುಗಾರಿಕೆ ತನಿಖೆ ನಡೆಸಿದ್ದವು.

ವಿಶಾಖಪಟ್ಟಣಂ, ಮುಂಬೈ ಹಾಗೂ ಕಾರವಾರ ನೆಲೆಗಳಲ್ಲಿ ನಿಯೋಜಿಸಲಾಗಿದ್ದ ಏಳು ಮಂದಿ ನೌಕಾಪಡೆ ಯೋಧರು 2018ರಿಂದಲೂ ಭಾರತೀಯ ಹಡಗುಗಳು ಮತ್ತು ಸಬ್‌ಮೆರಿನ್‌ಗಳ ಇರುವಿಕೆ ಬಗೆಗಿನ ಸೂಕ್ಷ್ಮ ಮಾಹಿತಿಯನ್ನು ಐಎಸ್‌ಐ ಏಜೆಂಟ್ ಒಬ್ಬನಿಗೆ ಸೋರಿಕೆ ಮಾಡುತ್ತಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ತನಿಖೆ ಮುಂದುವರಿದಿದ್ದು, ಇನ್ನೂ ಹಲವು ಮಂದಿ ಶಂಕಿತರನ್ನು ಪ್ರಶ್ನಿಸಲಾಗುತ್ತಿದೆ. ಹವಾಲಾ ದಂಧೆ ನಡೆಸುತ್ತಿದ್ದ ವ್ಯಕ್ತಿಯ ವಿಚಾರಣೆಯಿಂದ ಇನ್ನಷ್ಟು ದೊಡ್ಡ ದಂಧೆಯ ಸುಳಿವು ಸಿಗುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

2017ರಲ್ಲಿ ನೇಮಕಗೊಂಡ ಈ ನೌಕಾಪಡೆ ಯೋಧರನ್ನು ಮೂರರಿಂದ ನಾಲ್ಕು ಮಹಿಳೆಯರು ಸಂಪರ್ಕಿಸಿ, ಆನ್‌ಲೈನ್ ಸಂಬಂಧದ ಆಮಿಷ ಒಡ್ಡಿದ್ದಾರೆ. ಈ ಮಹಿಳೆಯರು ಐಎಸ್‌ಐ ಏಜೆಂಟ್ ಆಗಿರುವ ವ್ಯಾಪಾರಿಯೊಬ್ಬನಿಗೆ ಇವರನ್ನು ಪರಿಚಯಿಸಿದ್ದಾರೆ ಎಂದು ಹಿರಿಯ ಅಧಿಕಾರಿ ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News