ಜಾರ್ಖಂಡ್‌ನ ಮತದಾರರು ಮೋದಿ, ಶಾ ಅಹಂಕಾರವನ್ನು ಧ್ವಂಸ ಮಾಡಿದ್ದಾರೆ: ಎನ್‌ಸಿಪಿ

Update: 2019-12-23 15:38 GMT

ಮುಂಬೈ, ಡಿ. 23: ಜಾರ್ಖಂಡ್‌ನ ಜನರು ಮೋದಿ ಜಿ, ಅಮಿತ್ ಶಾ ಹಾಗೂ ಬಿಜೆಪಿಯ ದುರಹಂಕಾರವನ್ನು ಧ್ವಂಸ ಮಾಡಿದ್ದಾರೆ. ಪ್ರಜಾಪ್ರಭುತ್ವ ಜಯ ಗಳಿಸಿದೆ ಎಂದು ಎನ್‌ಸಿಪಿಯ ಮುಖ್ಯ ವಕ್ತಾರ ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ಭಾವನಾತ್ಮಕ ವಿಷಯಗಳನ್ನು ಆಧಾರವಾಗಿರಿಸಿ ಅಮಿತ್ ಶಾ ನೇತೃತ್ವದ ಪಕ್ಷದಿಂದ ಜನರನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದನ್ನು ಜಾರ್ಖಂಡ್ ವಿಧಾನಸಭೆ ಚುನಾವಣೆ ತೋರಿಸಿದೆ ಎಂದು ಶಿವಸೇನೆ ಹೇಳಿದೆ. ಮಹಾರಾಷ್ಟ್ರದ ನಂತರ ಜಾರ್ಖಂಡ್‌ನ ಸಾಧನೆಯ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಶಿವಸೇನೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾದ ಬಳಿಕ ಜಾರ್ಖಂಡ್‌ನಲ್ಲಿ ಕೂಡ ಬಿಜೆಪಿ ವಿಫಲವಾಗಿರುವುದರಿಂದ, ಜನರು ಅಮಿತ್ ಶಾ ನೇತೃತ್ವದ ಪಕ್ಷದ ಮೇಲೆ ನಂಬಿಕೆ ಇರಿಸಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ ಎಂದು ಶಿವಸೇಸೇನೆಯ ವಕ್ತಾರ ಮನೀಸಾ ಕಾಯಂಡೆ ತಿಳಿಸಿದ್ದಾರೆ. ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೂಡ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಜಾರ್ಖಂಡ್‌ನಲ್ಲಿ ಬುಡಕಟ್ಟು ಹಾಗೂ ಬಡ ಜನರು ಅಮಿತ್ ಶಾ ನೇತೃತ್ವದ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರ್ಖಂಡ್‌ಗೆ ನೆರವು ನೀಡುತ್ತದೆ ಎಂದು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಲಾಗಿತ್ತು. ಆದರೆ, ಜಾರ್ಖಂಡ್‌ನ ಬಡ ಹಾಗೂ ಆದಿವಾಸಿ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಎಂಎಂ ಸರಕಾರ ಇಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News