ಎನ್‌ಆರ್‌ಸಿಯನ್ನು ಸದ್ಯಕ್ಕೆ ತಡೆಹಿಡಿಯುವ ಸುಳಿವು ನೀಡಿದ ಮೋದಿ ಹೇಳಿಕೆ

Update: 2019-12-23 17:27 GMT

ಹೊಸದಿಲ್ಲಿ,ಡಿ.23: ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಬಗ್ಗೆ ತನ್ನ ಸರಕಾರವೆಂದೂ ಚರ್ಚಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು ಈ ವಿವಾದಾತ್ಮಕ ಕಾಯ್ದೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ಜಾರಿಯಿಂದ ಸರಕಾರವು ಹಿಂದೆ ಸರಿಯಬಹುದು ಮತ್ತು ಬಿಜೆಪಿಯು ಸದ್ಯಕ್ಕೆ ಈ ವಿಷಯವನ್ನು ಹಿನ್ನೆಲೆಗೆ ತಳ್ಳಬಹುದು ಎಂಬ ಸುಳಿವುಗಳನ್ನು ನೀಡಿದೆ.

 ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಅನುಷ್ಠಾನಿಸಲಾಗುವುದು ಎಂದು ಗೃಹಸಚಿವ ಅಮಿತ್ ಶಾ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರು ಒತ್ತಿ ಹೇಳುತ್ತಿರುವ ಹಿನ್ನೆಲೆಯಲ್ಲಿ ರವಿವಾರ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಪಕ್ಷವು ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿಗೆ ಪರಸ್ಪರ ಸಂಬಂಧವಿಲ್ಲ ಮತ್ತು ಎನ್‌ಆರ್‌ಸಿಯಿಂದ ತನ್ನ ಸರಕಾರವು ಅಂತರವನ್ನು ಕಾಯ್ದುಕೊಂಡಿದೆ ಎಂಬ ಮೋದಿಯವರ ಹೇಳಿಕೆಗಳು ಹೊರಬಿದ್ದಿವೆ.

ಸಿಎಎ ವಿರುದ್ಧ ವ್ಯಾಪಕ ಪ್ರತಿಭಟನೆ ತಮಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಒಪ್ಪಿಕೊಂಡಿರುವ ಕೆಲವು ಬಿಜೆಪಿ ನಾಯಕರು,ಸಮಾಜದ ಒಂದು ವರ್ಗದಲ್ಲಿ,ವಿಶೇಷವಾಗಿ ಮುಸ್ಲಿಮರಲ್ಲಿ ಎನ್‌ಆರ್‌ಸಿ ಕುರಿತು ಭೀತಿಯು ಭಾವನೆಗಳನ್ನು ಕೆರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದನ್ನು ಬೆಟ್ಟು ಮಾಡಿದ್ದಾರೆ.

ಎನ್‌ಆರ್‌ಸಿಯನ್ನು ಸಿಎಎನಿಂದ ಪ್ರತ್ಯೇಕಿಸುವ ಮತ್ತು ತನ್ನ ಸರಕಾರವು ಎನ್‌ಆರ್‌ಸಿ ಜಾರಿಯ ಬಗ್ಗೆ ಈವರೆಗೆ ಯೋಚಿಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಪರಿಸ್ಥಿತಿಯನ್ನು ಶಮನಿಸಲು ಮುಂದಾಗಿದ್ದಾರೆ ಎಂದೂ ಈ ನಾಯಕರು ಹೇಳಿದ್ದಾರೆ.

ಇಂತಹ ಸ್ಥಿತಿಯಲ್ಲಿ ಎನ್‌ಆರ್‌ಸಿ ಭವಿಷ್ಯದ ಕುರಿತು ಪ್ರಶ್ನೆಗೆ ಬಿಜೆಪಿ ನಾಯಕರೋರ್ವರು ರ್ಯಾಲಿಯಲ್ಲಿ ಮೋದಿಯವರ ಹೇಳಿಕೆಯ ಬಳಿಕ ಸ್ಪಷ್ಟ ಸಂದೇಶ ಹೊರಬಿದ್ದಿದ್ದು,ಪಕ್ಷದ ನಾಯಕರು ಸದ್ಯೋಭವಿಷ್ಯದಲ್ಲಿ ಈ ವಿಷಯವನ್ನು ಕೆದಕುವುದಿಲ್ಲ ಎಂಬ ಸುಳಿವನ್ನು ನೀಡಿದೆ ಎಂದು ಉತ್ತರಿಸಿದರು.

ನುಸುಳುವಿಕೆಯನ್ನು ತಡೆಯಲು ದೇಶದಲ್ಲಿ ಹಂತಹಂತವಾಗಿ ಎನ್‌ಆರ್‌ಸಿ ಜಾರಿಗೊಳಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದನ್ನು ಇಲ್ಲಿ ಗಮನಿಸಬಹುದು.

2021ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಎನ್‌ಆರ್‌ಸಿಯು ಬಿಜೆಪಿಯ ಪ್ರಮುಖ ಚುನಾವಣಾ ವಿಷಯವಾಗಿದೆ.

ಸಿಎಎ ಮತ್ತು ಎನ್‌ಆರ್‌ಸಿ ಟೀಕಾಕಾರರು ಈ ಕಾಯ್ದೆಗಳು ತಾರತಮ್ಯದಿಂದ ಕೂಡಿವೆ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ಬಳಕೆಯಾಗಬಹುದು ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News