ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್‌ಘಾಟ್‌ ನಲ್ಲಿ ಪ್ರತಿಭಟನೆ

Update: 2019-12-23 18:12 GMT

ಹೊಸದಿಲ್ಲಿ, ಡಿ. 23: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಿಲ್ಲಿಯಲ್ಲಿರುವ ಮಹಾತ್ಮಾ ಗಾಂಧಿ ಅವರ ಸ್ಮಾರಕ ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂವಿಧಾನದ ಪ್ರಸ್ತಾವನೆ ಓದಿದರು.

ಕಮಲ್‌ನಾಥ್ (ಮಧ್ಯಪ್ರದೇಶ) ಹಾಗೂ ಅಶೋಕ್ ಗೆಹ್ಲೋಟ್ (ರಾಜಸ್ಥಾನ) ಅವರಂತಹ ಮುಖ್ಯಮಂತ್ರಿಗಳನ್ನು ಒಳಗೊಂಡ ಕಾಂಗ್ರೆಸ್‌ನ ಸತ್ಯಾಗ್ರಹ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಹೆಸರಲ್ಲಿ ನಾವು ಸಂವಿಧಾನ ರಕ್ಷಿಸುವುದಾಗಿ ಭರವಸೆ ನೀಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಿಜೆಪಿ ಸರಕಾರದ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನ ಹರಡುತ್ತಿದೆ. ದೇಶಾದ್ಯಂತದ ಜನರು ಮುಖ್ಯವಾಗಿ ಯುವ ಜನರು ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. ಕಾನೂನೂ ಹಾಗೂ ಸುವ್ಯವಸ್ಥೆ ಹೆಸರಿನಲ್ಲಿ ನಾಗರಿಕರ ವಿರುದ್ಧ ವಿವೇಚನಾರಹಿತವಾಗಿ ಪೊಲೀಸ್ ಪಡೆ ಬಳಸುವುದನ್ನು ಕಾಂಗ್ರೆಸ್ ಖಂಡಿಸಿದೆ. ಇಂದು ಬೆಳಗ್ಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಸಂವಿಧಾನವನ್ನು ಓದುವಂತೆ ಯುವಜನರಿಗೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News