ಎನ್‍ಪಿಆರ್ ಗಾಗಿ 3,941 ಕೋಟಿ ರೂ.ಗೂ ಅಧಿಕ ಮೊತ್ತ ನಿಗದಿ: ಕೇಂದ್ರ ಸಂಪುಟದ ಒಪ್ಪಿಗೆ

Update: 2019-12-24 14:17 GMT

ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಅಥವಾ ಎನ್‍ ಪಿಆರ್ ಅಪ್ಡೇಟ್ ಮಾಡಲು 3,941 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಮೀಸಲಿರಿಸಲು  ಕೇಂದ್ರ ಸಚಿವ ಸಂಪುಟ  ಮಂಗಳವಾರ ಅನುಮೋದನೆ ನೀಡಿದೆ. ಎನ್‍ ಪಿಆರ್ ಪ್ರಕ್ರಿಯೆ ಮುಂದಿನ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು ದೇಶದ 'ಸಾಮಾನ್ಯ ನಿವಾಸಿಗಳ' ರಿಜಿಸ್ಟರ್ ಇದಾಗಿದೆ.

ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಆರು ತಿಂಗಳಿನಿಂದ ವಾಸವಾಗಿದ್ದರೆ ಅಥವಾ ಆ ಪ್ರದೇಶದಲ್ಲಿ  ಮುಂದಿನ ಆರು ತಿಂಗಳು ವಾಸವಾಗಲಿದ್ದರೆ ಆತನನ್ನು `ಸಾಮಾನ್ಯ ನಿವಾಸಿ' ಎಂದು ಎನ್‍ ಪಿಆರ್‍ ಗಾಗಿ ವ್ಯಾಖ್ಯಾನಿಸಲಾಗುತ್ತದೆ.

ಎನ್‍ ಪಿಆರ್‍ ಗೆ  ದತ್ತಾಂಶವನ್ನು 2010ರಲ್ಲಿ ಸಂಗ್ರಹಿಸಲಾಗಿತ್ತು. ಈ ದತ್ತಾಂಶವನ್ನು 2015ರಲ್ಲಿ ಮನೆ ಮನೆ ಭೇಟಿ ಮೂಲಕ ಅಪ್ಡೇಟ್ ಮಾಡಲಾಗಿತ್ತು. ಇದೀಗ ಎನ್‍ ಪಿಆರ್‍ ಅನ್ನು ಜನಗಣತಿ 2021ರ  ಮನೆ ಮನೆ ಭೇಟಿ  ಪ್ರಕ್ರಿಯೆಯ ಜತೆಗೆ ಮುಂದಿನ ವರ್ಷದ ಎಪ್ರಿಲ್‍ ನಿಂದ ಸೆಪ್ಟೆಂಬರ್ ತನಕ ಅಸ್ಸಾಂ ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಎನ್‍ಪಿಆರ್ ನೋಂದಣಿ ಕಡ್ಡಾಯವಾಗಿದೆ.

ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯೂ ಕಡ್ಡಾಯವಾಗಿ ಎನ್‌ಪಿಆರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಜನಗಣತಿ ಮೂಲಕ ನಡೆಸುವ ಎನ್‌ಪಿಆರ್ ಪ್ರಕ್ರಿಯೆ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸುವಲ್ಲಿ ಪ್ರಥಮ ಹಂತವಾಗಿದೆ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿಯೇ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಎನ್‌ಪಿಆರ್ ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಿದೆ. ಪೌರತ್ವ ಕಾಯ್ದೆ ತಿದ್ದುಪಡಿ ಹಿನ್ನೆಲೆಯಲ್ಲಿ ಮೂಡಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಎನ್‌ಆರ್‌ಸಿಗೆ ಪೂರ್ವಸಿದ್ಧತೆಯಾಗಿರುವ ಎನ್‌ಪಿಆರ್ ನವೀಕರಣ ಪ್ರಕ್ರಿಯೆಗೆ ಸಹಕರಿಸದಿರಲು ಸರಕಾರ ನಿರ್ಧರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎನ್‌ಪಿಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರಕಾರದ ಅನುಮತಿಯಿಲ್ಲದೆ ಈ ಪ್ರಕ್ರಿಯೆ ಮುಂದುವರಿಯದು ಎಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಅಸ್ಸಾಂ ಹೊರತುಪಡಿಸಿ ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020ರ ಎಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಎನ್‌ಪಿಆರ್ ಪ್ರಕ್ರಿಯೆ ನಡೆಯಲಿದೆ. ಯುಪಿಎ ಮೈತ್ರಿಕೂಟದ ದ್ವಿತೀಯ ಅವಧಿಯಲ್ಲಿ (2010ರಲ್ಲಿ) ಎನ್‌ಪಿಆರ್ ಮಾಹಿತಿಯನ್ನು ಪ್ರಥಮ ಬಾರಿಗೆ ಸಂಗ್ರಹಿಸಲಾಗಿತ್ತು. 2015ರಲ್ಲಿ ಮನೆಮನೆಗೆ ತೆರಳಿ ಗಣತಿ ನಡೆಸುವ ಮೂಲಕ ಎನ್‌ಪಿಆರ್ ಅನ್ನು ಪ್ರಥಮ ಬಾರಿಗೆ ನವೀಕರಿಸಲಾಗಿತ್ತು. ಇದರ ಡಿಜಿಟಲೀಕರಣ ಕಾರ್ಯ ಈಗ ಪೂರ್ಣಗೊಂಡಿದೆ. ಮುಂದಿನ ಕ್ರಮವಾಗಿ 2020ರಲ್ಲಿ ಎನ್‌ಪಿಆರ್ ಅನ್ನು ನವೀಕರಿಸಲು ಸರಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News