ಬ್ಯಾಂಕಿಗೆ 110 ಕೋ.ರೂ.ವಂಚನೆ: ಮಾರುತಿಯ ಮಾಜಿ ಎಂಡಿ ಖಟ್ಟರ್ ವಿರುದ್ಧ ಪ್ರಕರಣ ದಾಖಲು

Update: 2019-12-24 14:20 GMT
file photo

ಹೊಸದಿಲ್ಲಿ,ಡಿ.24: ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 110 ಕೋ.ರೂ.ಗಳ ಸಾಲಕ್ಕೆ ಸಂಬಂಧಿಸಿದಂತೆ ಮಾರುತಿ ಸುಝುಕಿಯ ಮಾಜಿ ಆಡಳಿತ ನಿರ್ದೇಶಕ ಜಗದೀಶ ಖಟ್ಟರ್ ಅವರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ದುರ್ವರ್ತನೆ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ.

ಅಂದ ಹಾಗೆ ಈ ಪ್ರಕರಣಕ್ಕೂ ಮಾರುತಿ ಸುಝುಕಿಗೂ ಯಾವುದೇ ಸಂಬಂಧವಿಲ್ಲ. 2007ರ ಅಂತ್ಯದಲ್ಲಿ ಮಾರುತಿ ಸುಝುಕಿಯನ್ನು ತೊರೆದ ಬಳಿಕ ಖಟ್ಟರ್ ಸ್ಥಾಪಿಸಿದ್ದ ‘ಕಾರ್ನೇಷನ್ ಆಟೋ ಇಂಡಿಯಾ ಪ್ರೈ.ಲಿ.’ ಕಂಪನಿಯು ಪಡೆದುಕೊಂಡಿದ್ದ ಸಾಲಕ್ಕೆ ಸಂಬಂಧಿಸಿದೆ.

ಕಾರ್ನೇಷನ್ ಆಟೋದ ಎಂಡಿ ಖಟ್ಟರ್ ಅವರು ಪಿಎನ್‌ಬಿಯ ಅನಾಮಿಕ ಸಿಬ್ಬಂದಿಗಳೊಂದಿಗೆ ಕ್ರಿಮಿನಲ್ ಒಳಸಂಚು ನಡೆಸಿ ಬ್ಯಾಂಕಿನಿಂದ 110 ಕೋ.ರೂ.ಸಾಲವನ್ನು ಪಡೆದುಕೊಂಡು ಅದನ್ನು ಮರುಪಾವತಿಸದೆ ಬ್ಯಾಂಕನ್ನು ವಂಚಿಸಿದ್ದಾರೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಬೆಟ್ಟು ಮಾಡಿದೆ.

  ಕಂಪನಿಯು ಪಡೆದುಕೊಂಡಿದ್ದ ಸಾಲಗಳಿಗೆ ಭದ್ರತೆಯಾಗಿ ಅಡಮಾನವಿರಿಸಲಾಗಿದ್ದ ಸರಕುಗಳನ್ನು ಬ್ಯಾಂಕಿನ ಅನುಮತಿ ಪಡೆದುಕೊಳ್ಳದೆ ಕಂಪನಿ ಮತ್ತು ಖಟ್ಟರ್ ಮೋಸದಿಂದ ಮಾರಾಟ ಮಾಡಿದ್ದಾರೆ ಮತ್ತು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕಂಪನಿಗೆ ಸೇರಿದ 66.92 ಕೋ.ರೂ.ಮೌಲ್ಯದ ಸ್ಥಿರಾಸ್ತಿಗಳನ್ನು ಬ್ಯಾಂಕಿನ ಅನುಮತಿಯಿಲ್ಲದೆ 4.5 ಕೋ.ರೂ.ಗೆ ಮಾರಾಟ ಮಾಡಲಾಗಿದೆ ಮತ್ತು ಈ ಹಣವನ್ನು ಬ್ಯಾಂಕಿಗೆ ಜಮೆ ಮಾಡಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಖಟ್ಟರ್ ಭಾರತದ ಉದ್ಯಮ ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಗಣ್ಯ ವ್ಯಕ್ತಿಯಾಗಿದ್ದಾರೆ. ಆದರೆ ಅವರು ಸ್ಥಾಪಿಸಿದ್ದ ಕಾರ್ನೇಷನ್ ಆಟೋ ಯಶಸ್ಸು ಕಂಡಿಲ್ಲ,ಭಾರೀ ನಷ್ಟವನ್ನು ಅನುಭವಿಸಿರುವ ಅದು ಖಾಸಗಿ ಹೂಡಿಕೆದಾರರ ಬಂಡವಾಳವನ್ನು ಗುಡಿಸಿಹಾಕಿದೆ.

ವಾಹನ ತಯಾರಿಕೆ ಕಂಪನಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಾರ್ನೇಷನ್ ಕಂಪನಿಯ ಆಸ್ತಿಗಳನ್ನು ಖರೀದಿಸಲಿದೆ ಎಂದು 2018,ಡಿಸೆಂಬರ್‌ನಲ್ಲಿ ವರದಿಗಳು ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News