ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಜಾರಿ : ಮೋದಿಗೆ ತದ್ವಿರುದ್ಧ ಹೇಳಿಕೆ ನೀಡಿದ ಶಿವರಾಜ್ ಸಿಂಗ್ ಚೌಹಾಣ್

Update: 2019-12-24 14:36 GMT

ಜೈಪುರ,ಡಿ.24: ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಜಾರಿಗೊಳಿಸಲಾಗುವುದು,ಆದರೆ ಚರ್ಚೆಗಳ ನಂತರವಷ್ಟೇ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಸಿಂಗ್ ಚೌಹಾಣ್ ಅವರು ಹೇಳಿದ್ದು,ಇದು ಪ್ರಧಾನಿ ಮೋದಿಯವರ ಹೇಳಿಕೆಗೆ ತದ್ವಿರುದ್ಧವಾಗಿದೆ.

ರವಿವಾರ ದಿಲ್ಲಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಮೋದಿ,ಸರ್ವೋಚ್ಚ ನ್ಯಾಯಾಲಯದ ಆದೇಶದಿಂದಾಗಿ ಅಸ್ಸಾಮಿನಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸಲಾಗಿದೆ ಮತ್ತು ಅದನ್ನು ರಾಷ್ಟ್ರಾದ್ಯಂತ ಜಾರಿಗೊಳಿಸುವ ಯೋಜನೆಯನ್ನು ತನ್ನ ಸರಕಾರವು ಹೊಂದಿಲ್ಲ. 2014ರಲ್ಲಿ ತನ್ನ ಸರಕಾರವು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಎನ್‌ಆರ್‌ಸಿ ಬಗ್ಗೆ ಎಂದಿಗೂ ಚರ್ಚಿಸಿಲ್ಲ ಎಂದು ಹೇಳಿದ್ದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಹಾಣ್, ರಾಷ್ಟ್ರಾದ್ಯಂತ ಎನ್‌ಆರ್‌ಸಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮೋದಿ ಸರಕಾರವು ಉದ್ದೇಶಿಸಿದ್ದರೆ ಕಾಂಗ್ರೆಸ್ ಪಕ್ಷವು ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಗೊಂದಲಗಳನ್ನು ಸೃಷ್ಟಿಸುತ್ತಿದೆ. ಎನ್‌ಆರ್‌ಸಿ ಕುರಿತು ಚರ್ಚೆಗಳು ನಡೆಯುತ್ತಿವೆ ಮತ್ತು ಸಲಹೆಗಳನ್ನು ಕೋರಲಾಗಿದೆ,ಆದರೆ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ವಿವರವಾದ ಚರ್ಚೆಗಳ ಬಳಿಕ ಎನ್‌ಆರ್‌ಸಿ ಜಾರಿಗೊಳ್ಳಲಿದೆ ಎಂದು ತಿಳಿಸಿದರು.

ಸಿಎಎ ಅನ್ನು ವಿರೋಧಿಸುತ್ತಿರುವ ಬಿಜೆಪಿಯೇತರ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಮುಖ್ಯಮಂತ್ರಿಗಳ ಪ್ರತಿಭಟನೆಗಳ ಹೊರತಾಗಿಯೂ ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೊಳಿಸಲಾಗು ವುದು. ಸಿಎಎ ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಸಂಸತ್ತಿನಿಂದ ಅಂಗೀಕಾರಗೊಂಡ ಕಾಯ್ದೆಯಾಗಿದೆ. ಈ ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೊಳಿಸದಿದ್ದರೆ,ಹಾಗೆ ಮಾಡಿಸಲು ಇತರ ಮಾರ್ಗಗಳೂ ಇವೆ ಎಂದರು.

ಮೋದಿ ಅವರನ್ನು ವಲಸಿಗರ ‘ದೇವರು ’ ಎಂದು ಬಣ್ಣಿಸಿದ ಚೌಹಾಣ್, ಕಾಂಗ್ರೆಸ್‌ಎಂದೂ ವಲಸಿಗರ ಸಂಕಷ್ಟವನ್ನು ಅರ್ಥ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News