ಮತ್ತೆ ಖಗೋಳ ಕೌತುಕಕ್ಕೆ ಸಾಕ್ಷಿಯಾಗುತ್ತಿರುವ ಕಂಕಣ ಸೂರ್ಯ ಗ್ರಹಣ

Update: 2019-12-24 18:31 GMT

ಡಿ.26ರ ಕಂಕಣ ಸೂರ್ಯ ಗ್ರಹಣ ಕೇರಳದ ಕಣ್ಣೂರಿನಲ್ಲಿ ಶೇ. 93 ಗೋಚರಿಸಲಿದೆ. ಇಲ್ಲಿ ಮುಂಜಾನೆ 8:05 ಗಂಟೆಗೆೆ ಸ್ಪರ್ಶಕಾಲ ನಿಗದಿಯಾದರೆ 11:05 ಗಂಟೆಗೆ ಅಂತ್ಯಕಾಲ, ಒಟ್ಟು 3:00 ಗಂಟೆಗಳ ಕಾಲ ಗ್ರಹಣ ವೀಕ್ಷಿಸಬಹುದು. ಕರ್ನಾಟಕದ ಕಲಬುರಗಿಯಲ್ಲಿ ಶೇ. 77 ಗೋಚರಿಸಲಿದೆ. ಇಲ್ಲಿ ಮುಂಜಾನೆ 8:06 ಗಂ.ಗೆ ಸ್ಪರ್ಶ ಕಾಲ ಆರಂಭವಾದರೆ 11:06 ಗಂ.ಗೆ ಅಂತ್ಯಕಾಲ, ಒಟ್ಟು 2:59 ಗಂಟೆಗಳ ಕಾಲ ಗ್ರಹಣ ಸಂಭವಿಸಲಿದೆ. ಮೈಸೂರಿನಲ್ಲಿ ಶೇ.93.5 ಗ್ರಹಣ ಗೋಚರಿಸಲಿದೆ. ಇಲ್ಲಿ ಮುಂಜಾನೆ 8:05 ಗಂಟೆಗೆ ಸ್ಪರ್ಶಕಾಲ ಶುರುವಾದರೆ 11:09 ಗಂ.ಗೆ ಅಂತ್ಯಕಾಲ. ಒಟ್ಟಾರೆ 3:03 ಗಂ. ಗ್ರಹಣ ಸಂಭವಿಸಲಿದೆ. ಇನ್ನು ಕೊನೆಯದಾಗಿ ಬೆಂಗಳೂರಿನಲ್ಲಿ ಶೇ. 90 ಗ್ರಹಣ ವೀಕ್ಷಿಸಬಹುದು. ಇಲ್ಲಿ ಪ್ರಾತಃಕಾಲ 8:06 ಗಂಟೆಗೆ ಸ್ಪರ್ಶ ಕಾಲ ಆರಂಭವಾದರೆ 11:11 ಗಂಟೆಗೆ ಗ್ರಹಣದ ಅಂತ್ಯ ಕಾಲ. ಒಟ್ಟು 3:04 ಗಂಟೆಗಳ ಕಾಲ ಗ್ರಹಣ ವೀಕ್ಷಿಸಬಹುದು.

ಒಂದು ಬಾಹ್ಶಾಕಾಶ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಖಗೋಳಶಾಸ್ತ್ರೀಯ ವಿದ್ಯಮಾನವೇ ಗ್ರಹಣ. ಸುಲಭವಾಗಿ ಹೇಳಬೇಕೆಂದರೆ ಗ್ರಹಣ ಒಂದು ನೆರಳು-ಬೆಳಕಿನ ಆಟ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ. ಇಲ್ಲಿ ಮುಖ್ಯವಾಗಿ ಗ್ರಹಣದಲ್ಲಿ ಎರಡು ವಿಧಗಳು. ಒಂದು ಸೂರ್ಯಗ್ರಹಣ, ಇನ್ನೊಂದು ಚಂದ್ರ ಗ್ರಹಣ: ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆಯೇ ಸೂರ್ಯ ಗ್ರಹಣ. ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆಯೇ ಚಂದ್ರ ಗ್ರಹಣ.

ಈ ಸಾರಿ ಕ್ರಿಸ್ಮಸ್ ಹಬ್ಬದ ಮರುದಿನವೇ ಪ್ರಜ್ವಲಿಸುವ ಸೂರ್ಯ ಉಂಗುರ ತೊಡಲಿದ್ದಾನೆ. ಅಂದರೆ ಕಂಕಣ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಹಿಂದೆ ಸೂರ್ಯನಿಗೆ ಕಂಕಣ ಗ್ರಹಣವು 1748ರಲ್ಲಿ ಸಂಭವಿಸಿತ್ತು. ಇನ್ನು ಮುಂದೆ 2064ರಲ್ಲಿ ಸಂಭವಿಸಲಿದೆ ಎಂದು ಲೆಕ್ಕಿಸಲಾಗಿದೆ! ಸೂರ್ಯ ಗ್ರಹಣವು ಇದೇ ಡಿಸೆಂಬರ್ 26ರಂದು ಮುಂಜಾನೆ 8.05ಕ್ಕೆ ಗ್ರಹಣ ಆರಂಭವಾಗಿ 11.04ಕ್ಕೆ ಬಿಡಲಿದೆ. ಸುಮಾರು 2 ಗಂಟೆ 59 ನಿಮಿಷಗಳ ಕಾಲ ಗ್ರಹಣ ಕಾಲವಿರುತ್ತದೆ.

ಕರ್ನಾಟಕದಲ್ಲಿ ನಾವು ಈ ಸಾರಿ ಕಂಕಣ ಸೂರ್ಯ ಗ್ರಹಣವನ್ನು ವೀಕ್ಷಿಸುವ ಅವಕಾಶ ತಪ್ಪಿಸಿಕೊಂಡರೆ ಮುಂದೆ ಈ ವಿದ್ಯಮಾನ ಸಂಭವಿಸುವುದು 2064 ಫೆಬ್ರವರಿ 17ರಲ್ಲಿ! ಆಗ ಭೂಮಿಯಲ್ಲಿ ಈಗಿರುವ ಹೆಚ್ಚಿನವರು ಇರಲಿಕ್ಕಿಲ್ಲ. ಹಾಗೆಂದರೆ ಅಲ್ಲಿಯವರೆಗೆ ಭೂಮಿಯ ಮೇಲೆ ಸೂರ್ಯಗ್ರಹಣ ಸಂಭವಿಸುವುದೇ ಇಲ್ಲ ಎಂದಲ್ಲ. ಪ್ರಪಂಚದ ಇತರ ಭೂಭಾಗಗಳಲ್ಲಿ ಗ್ರಹಣಗಳಾಗುತ್ತವೆ. ಸದ್ಯ ನಡೆಯಲಿರುವ ಈ ಕಂಕಣ ಸೂರ್ಯಗ್ರಹಣವು ಭಾರತದಲ್ಲಿ ಮೊದಲಿಗೆ ಕೇರಳದಲ್ಲಿ ಗೋಚರಿಸಲಿದೆ. ನಂತರ ಕರ್ನಾಟಕ, ತಮಿಳುನಾಡಿನಲ್ಲೂ ಕಾಣಿಸಿಕೊಳ್ಳಲಿದೆ. ಮೊದಲು ಕೇರಳದ ಕಣ್ಣೂರು, ಕಲ್ಲಿಕೋಟೆ, ತಮಿಳುನಾಡಿನ ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ಉದಕಮಂಡಲ, ಕರ್ನಾಟಕದ ಮಂಗಳೂರು, ಮೈಸೂರಿನಲ್ಲಿ ಉಂಗುರಧಾರಿಯಾಗಿ ಸೂರ್ಯ ಕಾಣಿಸಿಕೊಳ್ಳಲಿದ್ದಾನೆ.

ಸರಿಸುಮಾರು ಶೇ. 92 ಸೂರ್ಯನನ್ನು ಆವರಿಸುವ ಈ ಕಂಕಣ ಸೂರ್ಯ ಗ್ರಹಣವು ಭಾರತದಲ್ಲಷ್ಟೇ ಅಲ್ಲದೆ ಒಮಾನ್, ಸೌದಿ ಅರೇಬಿಯಾ, ಯು.ಎ.ಇ, ಸಿಂಗಾಪುರ, ಶ್ರೀಲಂಕಾ ಇನ್ನೂ ಮುಂತಾದ ದೇಶಗಳಲ್ಲಿ ಕಾಣಸಿಗಲಿದೆ.

1980ರಲ್ಲಿ ಕಾರವಾರದಲ್ಲಿ ಸಂಪೂರ್ಣ ಖಗ್ರಾಸ ಸೂರ್ಯಗ್ರಹಣ ಸಂಭವಿಸಿತ್ತು. ಆದರೆ, ಗ್ರಹಣ ವೀಕ್ಷಣೆ ಅಪಾಯಕಾರಿ ಎಂಬ ಭಯ ಆ ದಿನಗಳಲ್ಲಿ ಮನೆಮಾಡಿದ್ದ ಕಾರಣ, ಬಹುತೇಕರು ಕಿಟಕಿ, ಬಾಗಿಲು ಮುಚ್ಚಿಕೊಂಡು ಮನೆಯೊಳಗೆ ಆಶ್ರಯ ಪಡೆದಿದ್ದರು. 1994ರಲ್ಲಿ ಉತ್ತರ ಭಾರತದಲ್ಲಿ ಖಗ್ರಾಸ ಸೂರ್ಯಗ್ರಹಣ ಸಂಭವಿಸಿ, ಕರ್ನಾಟಕದಲ್ಲಿ ಪಾರ್ಶ್ವ ಗ್ರಹಣವಾಗಿತ್ತು. ಆಗ ಹೆಚ್ಚಿನ ಜನರಲ್ಲಿ ಅರಿವು ಮೂಡಿಸಿ, ಅವರು ಸುರಕ್ಷಿತವಾಗಿ ಗ್ರಹಣ ನೋಡುವ ಅವಕಾಶವನ್ನು ವಿಜ್ಞಾನ ಸಂಘಟನೆಗಳು ಮಾಡಿದ್ದವು. ಕಳೆದ 20 ವರ್ಷಗಳಲ್ಲಿ ಭೂಮಿಯ ಮೇಲೆ ವೀಕ್ಷಿಸಲ್ಪಟ್ಟ ಒಟ್ಟು 52 ಸೂರ್ಯ ಗ್ರಹಣಗಳಲ್ಲಿ, 18 ಕಂಕಣ ಸೂರ್ಯ ಗ್ರಹಣಗಳಾಗಿದ್ದು ವಿಶೇಷ. ಉಳಿದಂತೆ ಪೂರ್ಣ ಇಲ್ಲವೆ ಪಾರ್ಶ್ವ ಗ್ರಹಣಗಳು. ಸೂರ್ಯೋದಯಕ್ಕೆ ಮೊದಲೇ ಅಥವಾ ಸೂರ್ಯಾಸ್ತವಾಗುವಾಗಲೂ ಸೂರ್ಯನು ಗ್ರಹಣಗ್ರಸ್ತನಾಗಿರುವುದು ಕಂಡುಬಂದಿತ್ತು.

ಇದೇ ಡಿ.26 ರಂದು ನಡೆಯಲಿರುವ ಕಂಕಣ ಸೂರ್ಯಗ್ರಹಣದ ವಿಶೇಷವೆಂದರೆ, ಕರಾವಳಿಯಲ್ಲಿ ಪೂರ್ಣ ಕಂಕಣ ಗ್ರಹಣ ಕಾಣಿಸಲಿದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಶೇ. 90ರಷ್ಟು ಕಂಡುಬರಲಿದೆ. ಈ ನೆರಳು ಬೆಳಕಿನಾಟವನ್ನು ವೀಕ್ಷಿಸಿ, ವಿಜ್ಞಾನದ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶ ರಾಜ್ಯದ ಜನರಿಗೆ ದೊರೆಯಲಿದೆ. ಸೂರ್ಯನ ಸುತ್ತಲೂ ಸುತ್ತುವ ಭೂಮಿ ಮತ್ತು ಭೂಮಿಯ ಸುತ್ತಲೂ ಸುತ್ತುವ ಚಂದ್ರನ ಚಲನೆಯ ಸಂದರ್ಭದಲ್ಲಿ ಭೂಮಿ, ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ. ಹಾಗೆ ನೋಡಿದರೆ, ಪ್ರತಿ ಅಮಾವಾಸ್ಯೆಯಂದು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನಾದರೂ ಅವುಗಳ ಚಲನೆಯ ಪಥವು ನಿರ್ದಿಷ್ಟ ಕೇಂದ್ರದಲ್ಲಿ ಸಂಧಿಸಿದಾಗ ಮಾತ್ರ ಗ್ರಹಣವಾಗುತ್ತದೆ. ನಮ್ಮ ಸೌರವ್ಯೆಹದ ವ್ಯವಸ್ಥೆ ಅಚ್ಚರಿದಾಯಕ. ಸೂರ್ಯನಿಗಿಂತ 400 ಪಟ್ಟು ಚಿಕ್ಕವನಾದ ಚಂದ್ರ, ಸೂರ್ಯಗ್ರಹಣದ ದಿನ ಭೂಮಿಯಿಂದ ನೋಡಿದರೆ ಸೂರ್ಯ ಬಿಂಬವನ್ನು ಸಂಪೂರ್ಣ ಮರೆಮಾಡುತ್ತಾನೆ. ಸೂರ್ಯ ಮತ್ತು ಚಂದ್ರ ಒಂದೇ ಅಳತೆಯಲ್ಲಿ ಕಾಣುತ್ತಾರೆ. ಭೂಮಿಯ ಕಾಲುಭಾಗದಷ್ಟಿರುವ ಚಂದ್ರನನ್ನು ಭೂಮಿಯು ಚಂದ್ರಗ್ರಹಣದ ಸಂದರ್ಭದಲ್ಲಿ ಸರಿಯಾಗಿ ಮರೆಮಾಡುತ್ತದೆ. ಮೂರರ ಗಾತ್ರಗಳಲ್ಲಿ ಅಗಾಧ ವ್ಯತ್ಯಾಸವಿದ್ದರೂ ನಮಗೆ ಮೂರೂ ಆಕಾಶಕಾಯಗಳು ಒಂದೇ ಗಾತ್ರದಲ್ಲಿ ಕಾಣುವುದಕ್ಕೆ ಅವುಗಳ ನಡುವಿನ ಅಂತರವೇ ಕಾರಣ.

 ಚಂದ್ರ ಕಕ್ಷೆ ದೀರ್ಘವೃತ್ತಾಕಾರದಲ್ಲಿದೆ. ಕಾರಣ ಆತ ಕೆಲವೊಮ್ಮೆ ಭೂಮಿಗೆ ಸಮೀಪವೂ ಇನ್ನು ಕೆಲವು ಸಾರಿ ಭೂಮಿಯಿಂದ ದೂರ ಸರಿದಂತೆಯೂ ಕಾಣಸಿಗುತ್ತಾನೆ. ಚಂದ್ರ ಭೂಮಿಗೆ ತೀರ ಹತ್ತಿರ ಬಂದಾಗ ಅಂದರೆ 2,25,623 ಮೈಲುಗಳಷ್ಟು. ಒಂದಿಷ್ಟು ದೂರ ಹೋದಾಗ ಅಂದರೆ ಸುಮಾರು 2,52,088 ಮೈಲುಗಳು. ಚಂದ್ರ ಭೂಮಿಗೆ ಸಮೀಪವಿದ್ದಾಗ ಖಗ್ರಾಸ ಸೂರ್ಯ ಗ್ರಹಣ ಸಂಭವಿಸುತ್ತದೆ. ಅದೇ ಚಂದ್ರ ಭೂಮಿಯಿಂದ ದೂರ ಸರಿದಾಗ ಆಂಶಿಕ ಇಲ್ಲವೇ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತದೆ. ಕಂಕಣಗ್ರಹಣದಲ್ಲಿ ಚಂದ್ರಬಿಂಬ ಸೂರ್ಯಬಿಂಬದ ಅಂಚನ್ನು ಮಾತ್ರ ತೆರಪು ಬಿಟ್ಟು ಉಳಿದ ಮಧ್ಯ ಭಾಗವನ್ನು ನಮ್ಮ ದೃಷ್ಟಿಯಿಂದ ಮರೆಮಾಡುವ ಒಂದು ವಿಶೇಷ ಪರಿಸ್ಥಿತಿ (ಆನ್ನುಲರ್ ಎಕ್ಲಿಪ್ಸ್), ಸೂರ್ಯಗ್ರಹಣದ ವೇಳೆ ಚಂದ್ರನ ಕಪ್ಪುಬಿಂಬವನ್ನು ಆವರಿಸಿದ ಸೂರ್ಯಬಿಂಬವು ಬಳೆಯಂತೆ ಪ್ರಜ್ವಲಿಸುತ್ತದೆ. ಸೂರ್ಯಬಿಂಬದ ಹೊಳೆವ ಭಾಗ ಒಂದು ಬಳೆಯಂತೆ ಕಾಣುವುದರಿಂದ ಈ ಹೆಸರು ಬಂದಿದೆ. ಚಂದ್ರ ಗ್ರಹಣದಲ್ಲಿ ಕಂಕಣಗ್ರಹಣ ಸಂಭವಿಸುವುದಿಲ್ಲ. ಸೂರ್ಯಚಂದ್ರರ ಗಾತ್ರದಲ್ಲಿನ ತೀವ್ರವ್ಯತ್ಯಾಸ ಸೂರ್ಯ-ಭೂಮಿ ದೂರದ ಅಗಾಧತೆ ಹಾಗೂ ಚಂದ್ರ-ಭೂಮಿ ಸಾಮೀಪ್ಯ ಈ ಕಾರಣಗಳಿಂದ ಅಪೂರ್ವವಾಗಿ ಭೂಮಿಯ ಮೇಲಣ ಕೆಲವು ಪ್ರದೇಶಗಳಲ್ಲಿ ಕಂಕಣ ಗ್ರಹಣ ಕೇವಲ ಕೆಲವು ನಿಮಿಷಗಳ ಕಾಲ ಕಾಣಿಸಿಕೊಳ್ಳುವುದುಂಟು. ಯಾವುದೇ ಪ್ರದೇಶದಲ್ಲಿ ಸೂರ್ಯಗ್ರಹಣ ದರ್ಶನವೇ ಒಂದು ಅಪೂರ್ವ ಘಟನೆ. ಅದರಲ್ಲೂ ಕಂಕಣಗ್ರಹಣ ತೀರ ವಿರಳ.

 ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಸೂರ್ಯಗ್ರಹಣವನ್ನು ಹಾಗೆ ನೋಡಬಾರದು. ಗ್ರಹಣಕಾಲದಲ್ಲಿ ಮಾತ್ರವಲ್ಲ, ಮುಂಜಾನೆ ಮತ್ತು ಸಂಜೆಯ ಸಮಯ ಹೊರತುಪಡಿಸಿ ಬೇರೆ ಯಾವ ಸಮಯದಲ್ಲೂ ಸೂರ್ಯನನ್ನು ನೇರವಾಗಿ ನೋಡಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಗ್ರಹಣವಾಗುವುದನ್ನು ನೇರವಾಗಿ ನೋಡಲು ಪ್ರಯತ್ನಿಸಿದರೆ ಕಣ್ಣಿಗೆ ಅಪಾಯ. ಕಾರಣ ಸೂರ್ಯನಿಂದ ಅಪಾಯಕಾರಿ ಕಿರಣಗಳು ಹೊರಹೊಮ್ಮುತ್ತಿರುತ್ತವೆ. ಅವುಗಳು ಕಣ್ಣಿನ ಮೇಲೆ ನೇರವಾಗಿ ಬಿದ್ದು, ದೃಷ್ಟಿ ದೋಷಕ್ಕೆ ಎಡೆಮಾಡಿಕೊಡುತ್ತವೆ. ಸುರಕ್ಷಿತ ಕನ್ನಡಕಗಳ ಮೂಲಕ, ಬಾಲ್ ಮಿರರ್, ಸೂಜಿರಂಧ್ರ ಕ್ಯಾಮರಾ (ಪಿನ್ ಹೋಲ್ ಕ್ಯಾಮರಾ) ಮೂಲಕ ಸೂರ್ಯನ ಬೆಳಕನ್ನು ಪರದೆ ಅಥವಾ ಗೋಡೆಯ ಮೇಲೆ ಮೂಡಿಸಿ ಗ್ರಹಣವನ್ನು ವೀಕ್ಷಿಸಬಹುದು. ಅಲ್ಲದೇ ಒಂದು ಕನ್ನಡಿಗೆ ಕಪ್ಪುಕಾಗದ ಹಚ್ಚಿ, ಕಾಗದದ ಮಧ್ಯ ಸಣ್ಣ ರಂಧ್ರ ಮಾಡಿ, ಸೂರ್ಯಬಿಂಬದ ಪ್ರಕಾಶವನ್ನು ಗೋಡೆಗೆ ಬೀಳುವಂತೆ ಮಾಡಿ ನೋಡಬಹುದು, ಪೂರ್ತಿ ಡೆವಲಪ್ ಮಾಡಿದ ಗಿ-ರೇ ಫಿಲಮ್‌ಗಳನ್ನು ಒಂದರ ಮೇಲೊಂದು ಇರಿಸಿ ಗ್ರಹಣ ಮಧ್ಯಕಾಲದಲ್ಲಿ ನೋಡಬಹುದು, ಆದರೆ ಪೂರ್ತಿ ಡೆವಲಪ್ ಆದ ಗಿ-ರೇ ಫಿಲಮ್‌ಗಳು ದೊರಕುವುದು ಕಷ್ಟ. ಹಾಗಾಗಿ ಈ ರೀತಿಯಾಗಿ ನೋಡದಿದ್ದರೆ ಸುರಕ್ಷಿತ, ವೆಲ್ಡಿಂಗ್ ಗ್ಲಾಸ್‌ಗಳ ಮೂಲಕವೂ ಗ್ರಹಣ ನೋಡಬಹದು. ಸಮೀಪದ ಗ್ರಹಣ ವೀಕ್ಷಣಾಲಯದಲ್ಲೂ ಸೂಕ್ತ ವೈಜ್ಞಾನಿಕ ಉಪಕರಣಗಳ ಮೂಲಕ ವೀಕ್ಷಿಸಬಹುದು. ಗ್ರಹಣ ವೀಕ್ಷಣೆಯ ಇನ್ನೊಂದು ಸುರಕ್ಷಿತ ಮಾರ್ಗವೆಂದರೆ ಟಿವಿಯಲ್ಲಿ ಗ್ರಹಣ ವೀಕ್ಷಣಾ ಕೇಂದ್ರಗಳಿಂದ ನೇರ ಪ್ರಸಾರವಾಗುವ ಕಾರ್ಯಕ್ರಮ ಇಲ್ಲವೇ ಮೊಬೈಲ್‌ನಲ್ಲೂ ಸಹ ನೋಡಿ ಕಣ್ತುಂಬಿಕೊಳ್ಳಬಹುದು. ಆದರೆ ಸ್ವಚ್ಛಂದ ಪರಿಸರದಲ್ಲಿ ನೋಡಿದಂತಹ ಅನುಭವ ಈ ಟಿವಿ ಮೊಬೈಲ್‌ಗಳಿಂದ ಸಿಗದು.

balachandra1944@gmail.com  ಗ್ರಹಣಗಳ ಕುರಿತು ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಕೇಂದ್ರದ ಗೌರವ ನಿರ್ದೇಶಕರೂ ಹಾಗೂ ಪ್ರತಿಷ್ಠಿತ ‘ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ’(ನಿಯಾಸ್)ಯಲ್ಲಿ ಗೌರವ ಫೆಲೋ ಆಗಿದ್ದ ಡಾ.ಎಸ್. ಬಾಲಚಂದ್ರರಾವ್ ಅವರು ನಮ್ಮ ಪೂರ್ಜರು ಸಂಸ್ಕೃತ ಭಾಷೆಯಲ್ಲಿ ಬರೆದಿಟ್ಟಂತಹ ಹಲವಾರು ವಿಜ್ಞಾನ, ಖಗೋಳ ಶಾಸ್ತ್ರ, ಗಣಿತಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳೆರಡರಲ್ಲೂ ಅನುವಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಡಾ.ಪದ್ಮಜಾ ವೇಣುಗೋಪಾಲ್ ಹಾಗೂ ಡಾ.ಎಸ್.ಬಾಲಚಂದ್ರರಾವ್ ಅವರು ಬರೆದಿರುವ ‘ಎಕ್ಲಿಪ್ಸಸ್ ಇನ್ ಇಂಡಿಯನ್ ಆಸ್ಟ್ರೊನೊಮಿ’ ಎಂಬ ಪುಸ್ತಕವು ಸಂಪೂರ್ಣವಾಗಿ ಈ ಗ್ರಹಣಗಳ ಕುರಿತಾಗಿದೆ. ನಮ್ಮ ಪೂರ್ವಜರು ಬರೆದಿಟ್ಟ ವಿಜ್ಞಾನ-ತಂತ್ರಜ್ಞಾನ, ಗಣಿತ ಸಂಬಂಧಿ ವಿಚಾರಗಳು, ಸಂಶೋಧನೆಗಳು ಹೇಗಿದ್ದವು ಎಂಬ ಜ್ಞಾನವನ್ನು ಎಲ್ಲರಿಗೂ ಮುಟ್ಟಿಸುವ ಕೆಲಸವನ್ನು ತಮ್ಮ ಈ ಇಳಿವಯಸ್ಸಿನಲ್ಲೂ ಬಾಲಚಂದ್ರರಾವ್ ಅವರು ಮಾಡುತ್ತಿದ್ದಾರೆಂಬುದೇ ಕನ್ನಡಿಗರಾದ ನಮಗೊಂದು ಹೆಮ್ಮ್ಮೆಯ ಸಂಗತಿ.( ಡಾ.ಎಸ್.ಬಾಲಚಂದ್ರರಾವ್ ಅವರನ್ನು ಸಂಪರ್ಕಿಸಲು ಮೊ.ಸಂ : 9741411480 ).

ಖಗೋಳ ಶಾಸ್ತ್ರಜ್ಞರಿಗೆ ಗ್ರಹಣಗಳೆಂದರೆ ಪ್ರಯೋಗ ಕೈಗೊಳ್ಳಲು ಒದಗಿಬಂದಿರುವ ಅತ್ಯಮೂಲ್ಯ ಕ್ಷಣ. ಅದಕ್ಕೆಂದೇ ಎಕ್ಲಿಪ್ಸ್ ಆಬ್ಸರ್‌ವೇಟರಿ ಸ್ಥಳಗಳಿಗೆ ತಿಂಗಳುಗಳ ಮೊದಲೇ ಹೋಗಿ ತಯಾರಿ ನಡೆಸಿರುತ್ತಾರೆ. ಗ್ರಹಣವು ಬೆಳಕು, ಓಜೋನ್ ಪದರ, ಜೀವಸಂಕುಲ, ಗಿಡಮರಬಳ್ಳಿಗಳ ಮೇಲೆ ಪರಿಣಾಮ ಬೀರುತ್ತದೆಂದು ಅರಿತು ಹತ್ತು ಹಲವು ಪ್ರಯೋಗಗಳನ್ನು ಆ ಕ್ಷಣದಲ್ಲಿ ಕೈಗೊಳ್ಳುತ್ತಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ 1868ರಲ್ಲಿ ಪೂರ್ಣ ಸೂರ್ಯಗ್ರಹಣ ವೀಕ್ಷಿಸಿ ಬ್ರಿಟನ್‌ನ ವಿಜ್ಞಾನಿಗಳು ಕೈಗೊಂಡ ಪ್ರಯೋಗದಿಂದ ಸೂರ್ಯನ ಅಂಗಳದಲ್ಲಿ ಪ್ರಮುಖವಾಗಿ ಹೀಲಿಯಂ (He ) ಅನಿಲ ಧಾತು ಇರುವುದು ಪತ್ತೆಯಾಯಿತು. ಇಂದಿಗೆ ನೂರು ವರ್ಷಗಳ ಹಿಂದೆ ಅಂದರೆ 1919ರ ಮೇ ತಿಂಗಳಿನಲ್ಲಿ ನಡೆದ ಪೂರ್ಣ ಸೂರ್ಯಗ್ರಹಣದಂದು ವಿಜ್ಞಾನಿ ಐನ್‌ಸ್ಟೀನ್‌ರ ಸಾಮಾನ್ಯ ಸಾಪೇಕ್ಷ ಸಿದ್ಧಾಂತಕ್ಕೆ ಪುರಾವೆ ದೊರಕಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ನಮ್ಮ ಭಾರತದ ಹೆಮ್ಮೆಯ ಪ್ರಾಚೀನ ಖಗೋಳ ಶಾಸ್ತ್ರಜ್ಞ, ಗಣಿತಜ್ಞ ಆರ್ಯಭಟನು ಗ್ರಹಣಗಳ ಕುರಿತು ವೈಜ್ಞಾನಿಕ ದಾಖಲೆಗಳನ್ನು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದು ವಿಶೇಷ ಮತ್ತು ಕುತೂಹಲ, ಏಕೆಂದರೆ ಆಗ ಈಗಿರುವಷ್ಟು ವೈಜ್ಞಾನಿಕ ಉಪಕರಣಗಳು ಲಭ್ಯವಿರಲಿಲ್ಲ. ಆದರೂ ಆರ್ಯಭಟ ನಿಖರವಾಗಿ ಗ್ರಹಣಗಳು ಆಗುವ ಬಗೆಯನ್ನು ಕೇವಲ ಆಕಾಶ ವೀಕ್ಷಣೆ ಹಾಗೂ ಗಣಿತದ ಮೂಲಕ ತಿಳಿಸಿದ್ದನು.

  ಕೆಲವು ಸಂಪ್ರದಾಯವಾದಿಗಳು ಗ್ರಹಣ ಕಾಲದಲ್ಲಿ ಆಹಾರವಾಗಲೀ ನೀರಾಗಲೀ ಯಾವುದನ್ನು ಸೇವಿಸಬೇಡಿರೆಂದು ಹೇಳುತ್ತಿರುವುದುಂಟು. ಇದು ಸರಿಯಾದ ಕ್ರಮವಲ್ಲ. ಗ್ರಹಣ ಕಾಲದಲ್ಲಿ ಭೂಮಿಯ ಮೇಲೆ ಕೆಲವು ಸೂಕ್ಷ್ಮ ಜೀವಿಗಳ ಕಾರ್ಯ ಚಟುವಟಿಕೆಗಳು ಹೆಚ್ಚಾಗಬಹುದು. ಇದರಿಂದೇನು ಅಷ್ಟೊಂದು ತೊಂದರೆ ಯಾಗದು. ಈ ಭಯವನ್ನು ಹೋಗಲಾಡಿಸಲು ಗ್ರಹಣವನ್ನು ಸುರಕ್ಷಿತವಾಗಿ ತೋರಿಸುವುದರ ಜತೆಗೆ, ಸಾಮೂಹಿಕವಾಗಿ ಆಹಾರ ಸೇವಿಸುವ ವ್ಯವಸ್ಥೆಯನ್ನು ಹಿಂದೆ ಮಾಡಲಾಗಿತ್ತು ಮತ್ತು 26ರಂದು ರಾಜ್ಯದ ಕೆಲವೆಡೆ ಮಾಡಲಾಗುತ್ತಿದೆ. ವೈಜ್ಞಾನಿಕ ಚಿಂತಕ, ವಿಚಾರವಾದಿಯಾಗಿದ್ದ ಎಚ್.ನರಸಿಂಹಯ್ಯ ನವರು ಈ ಹಿಂದೆ, ಗ್ರಹಣ ಕಾಲದಲ್ಲಿ ಆಹಾರವು ವಿಷವಾಗುತ್ತದೆ ಎಂಬ ತಪ್ಪುನಂಬಿಕೆಯನ್ನು ಹೋಗಲಾಡಿಸಲು ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಡಲೆಪುರಿ ಸೇವಿಸುತ್ತಾ ಎಲ್ಲರೊಂದಿಗೆ ಗ್ರಹಣ ವೀಕ್ಷಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಕೇರಳದಲ್ಲಂತೂ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿ, ಎಲ್ಲ ಶಾಲೆಗಳಲ್ಲಿಯೂ ಪೋಷಕರ ಸಮಿತಿಗಳನ್ನೊಳಗೊಂಡು ಈ ‘ಸೂರ್ಯೋತ್ಸವ’ ನಡೆಸಿ, ಗ್ರಹಣ ವೀಕ್ಷಣೆ ಜೊತೆಗೆ ಆಹಾರ ಸೇವಿಸಿ ಸಂಭ್ರಮಿಸಲು ಕರೆ ನೀಡಿದೆ. ನಮ್ಮ ರಾಜ್ಯದಲ್ಲಿಯೂ ಇಂತಹ ಕ್ರಮಕ್ಕೆ ಸರಕಾರ ಮುಂದಾಗುತ್ತದೆಯೋ ಕಾದು ನೋಡಬೇಕಿದೆ. ಅದೇನೇ ಇರಲಿ, ಮಕ್ಕಳಲ್ಲಂತೂ ಈ ಆಕಾಶ ವೀಕ್ಷಣಾ ಕುತೂಹಲ ಇದ್ದೇ ಇರುತ್ತದೆ. ಆದರೆ ಇತ್ತೀಚೆಗೆ ಮೊಬೈಲ್ ಬಂದಂದಿನಿಂದ ಅವರು ಬಿಡುವಿನ ಸಮಯವನ್ನು ಮೊಬೈಲ್ ಎಂಬ ಮಾಯಾಂಗನೆಯ ಜತೆಯೇ ಕಳೆಯುತ್ತಿದ್ದಾರೆ. ಇದನ್ನು ತಪ್ಪಿಸಿ ಪ್ರಕೃತಿಯಲ್ಲಾಗುತ್ತಿರುವ ಗ್ರಹಣದಂತಹ ಅಪರೂಪದ ವಿದ್ಯಮಾನಗಳನ್ನು ವೀಕ್ಷಿಸಲು ತಿಳಿಸಿ, ಅವರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ನಮ್ಮನಿಮ್ಮೆಲ್ಲರ ಜವಾಬ್ದಾರಿ.

Writer - ಎಲ್. ಪಿ. ಕುಲಕರ್ಣಿ, ಬಾದಾಮಿ

contributor

Editor - ಎಲ್. ಪಿ. ಕುಲಕರ್ಣಿ, ಬಾದಾಮಿ

contributor

Similar News

ಜಗದಗಲ
ಜಗ ದಗಲ