ಕಾಂಗ್ರೆಸ್ ತೊರೆದ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ
Update: 2019-12-26 08:44 GMT
ಹೊಸದಿಲ್ಲಿ, ಡಿ.26: ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಸಾವಿತ್ರಿಬಾಯಿ ಫುಲೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಮುಖ ದಲಿತ ನಾಯಕಿಯಾಗಿರುವ ಫುಲೆ ಕಳೆದ ವರ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿ ದಿನ ಬಿಜೆಪಿಯ ಮೂಲ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು, ಆಡಳಿತ ಪಕ್ಷವು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.
ಬಳಿಕ ಕಾಂಗ್ರೆಸ್ ಸೇರಿದ್ದ ಅವರು ಇದೀಗ ಕಾಂಗ್ರೆಸ್ ನಲ್ಲಿ ತನ್ನ ಧ್ವನಿ ಕೇಳುತ್ತಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್ ತೊರೆದಿದ್ದಾರೆ.
ಬಿಎಸ್ಪಿಯ ನಾಯಕಿ ಮಾಯಾವತಿಗೆ ನಿಕಟವಾಗಿದ್ದ ಸಾವಿತ್ರಿ ಪುಲೆ 2000 ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2002, 2007 ಮತ್ತು 2012 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2012 ರಲ್ಲಿ ಜಯ ಗಳಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.