​ಬೆಂಗಳೂರಿನ 54 ಯಾತ್ರಿಗಳು ಇರಾಕ್‌ನಲ್ಲಿ ಅತಂತ್ರ

Update: 2019-12-27 03:56 GMT

ಬೆಂಗಳೂರು : ಇರಾಕ್‌ಗೆ ಯಾತ್ರೆ ಕರೆದೊಯ್ದ ಟೂರ್ ಆಪರೇಟರ್ ಅರ್ಧದಲ್ಲಿ ಕೈಬಿಟ್ಟ ಕಾರಣದಿಂದ ಬೆಂಗಳೂರಿನಿಂದ ಯಾತ್ರೆ ತೆರಳಿದ್ದ 54 ಮಂದಿ ಬಾಗ್ದಾದ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಈ ಪೈಕಿ ಬಹುತೇಕ ಮಂದಿ ವೃದ್ಧರಾಗಿದ್ದು, ಇವರೆಲ್ಲ ಬಾಗ್ದಾದ್‌ನ ಹಝ್ರತ್ ಶೇಖ್ ಅಬ್ದುಲ್‌ ಖಾದಿರ್ ಜಿಲಾನಿ ಮಸೀದಿಗೆ ಯಾತ್ರೆ ಕೈಗೊಂಡಿದ್ದರು.

ಬೆಂಗಳೂರಿನ ಕಬ್ಬನ್‌ಪೇಟೆ ಮುಖ್ಯರಸ್ತೆಯ ಅಲ್ ಫಾಝಿಲ್ ಟೂರ್ಸ್‌ ಆ್ಯಂಡ್ ಟ್ರಾವಲ್ಸ್‌ನ ಫಹೀಮ್ ಬಾಷಾ ವಿರುದ್ಧ ಈ ಸಂಬಂಧ ದೂರು ದಾಖಲಾಗಿದೆ.

ಪೊಲೀಸರ ಪ್ರಕಾರ, 54 ಯಾತ್ರಾರ್ಥಿಗಳು ಡಿ. 7ರಂದು ಬೆಂಗಳೂರಿನಿಂದ ಬಾಗ್ದಾದ್‌ಗೆ ತೆರಳಿದ್ದರು. ಆದರೆ ಅವರೊಂದಿಗೆ ಹೋಗಿದ್ದ ಟೂರ್ ಆಪರೇಟರ್ ಬಾಗ್ದಾದ್‌ನಲ್ಲಿ ನಾಪತ್ತೆಯಾಗಿದ್ದಾನೆ. ಆತ ಯಾತ್ರಿಗಳಿಗೆ ವಸತಿ ವ್ಯವಸ್ಥೆಯನ್ನೂ ಮಾಡಿಲ್ಲ ಹಾಗೂ ವಾಪಾಸು ಭಾರತಕ್ಕೆ ಬರಲು ಟಿಕೆಟ್ ಕೂಡಾ ಕಾಯ್ದಿರಿಸಿಲ್ಲ ಎನ್ನುವುದು ತಿಳಿದುಬಂದಿದೆ. ಯಾತ್ರಿಗಳು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಈ ಬಗ್ಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

ಈ ಸಂಬಂಧ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 420ರ ಅನ್ವಯ ವಂಚನೆ ಪ್ರಕರಣ ದಾಖಲಿಸಲಾಗಿದೆ.

ಈಗಾಗಲೇ 15 ಯಾತ್ರಿಗಳಿಗೆ ಮರುಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಲಾಗಿದ್ದು, ಉಳಿದವರಿಗೂ ವ್ಯವಸ್ಥೆ ಮಾಡುವುದಾಗಿ ಆಪರೇಟರ್ ತಮಗೆ ಹೇಳಿದ್ದಾಗಿ ಅಝೀಮ್ ವಿವರಿಸಿದ್ದಾರೆ. ಇದಕ್ಕಾಗಿ ಸಮಯಾವಕಾಶ ಕೋರಿದ್ದು, ಇದಕ್ಕೆ ಆಪರೇಟರ್ ವಿಫಲವಾದಲ್ಲಿ ಆಯೋಗವು ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಯಾತ್ರಿಗಳ ಸುರಕ್ಷಿತ ವಾಪಸ್ಸಾತಿಗೆ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಫಹೀಮ್, ಪ್ರತಿ ಯಾತ್ರಿಯಿಂದ 15 ದಿನಗಳ ಪ್ರವಾಸಕ್ಕಾಗಿ ತಲಾ 65 ಸಾವಿರ ರೂ. ಸಂಗ್ರಹಿಸಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News