ಮಾರುಕಟ್ಟೆಗೆ 1160 ಟನ್ ವಿದೇಶಿ ಈರುಳ್ಳಿ ಆಗಮನ; ಕುಸಿಯದ ಧಾರಣೆ

Update: 2019-12-27 18:05 GMT

ಹೊಸದಿಲ್ಲಿ,ಡಿ.27: ಗಗನಕ್ಕೇರಿರುವ ನೀರುಳ್ಳಿ ಧಾರಣೆಗೆ ಕಡಿವಾಣ ಹಾಕಲು ಮಾರುಕಟ್ಟೆಗೆ ಆಮದು ಈರುಳ್ಳಿ ಗಣನೀಯ ಪ್ರಮಾಣದಲ್ಲಿ ಆಗಮಿಸತೊಡಗಿದೆಯಾದರೂ, ಅದರ ರಿಟೇಲ್ ದರ ಶುಕ್ರವಾರವೂ ಪ್ರತಿ ಕೆ.ಜಿ.ಗೆ 150 ರೂ.ನಲ್ಲಿ ಸ್ಥಿರಗೊಂಡಿದೆ.

ಮಹಾನಗರಗಳ ಪೈಕಿ ಕೋಲ್ಕತಾದಲ್ಲಿ ನೀರುಳ್ಳಿ ಬೆಲೆ ಕೆ.ಜಿ.ಗೆ 120 ರೂ. ಆಗಿದ್ದರೆ, ದಿಲ್ಲಿ ಹಾಗೂ ಮುಂಬೈನಲ್ಲಿ 102 ಮತ್ತು ಚೆನ್ನೈನಲ್ಲಿ ಕೆ.ಜಿ.ಗೆ 80 ರೂ.ಆಗಿದೆ.

ಆಮದು ನೀರುಳ್ಳಿ ಮಾರುಕಟ್ಟೆಗೆ ಆಗಮಿಸತೊಡಗಿದೆ. ಈಗಾಗಲೇ 1160 ಟನ್ ಆಮದು ನೀರುಳ್ಳಿ ಭಾರತವನ್ನು ತಲುಪಿದೆ. ಮುಂದಿನ 3-4 ದಿನಗಳಲ್ಲಿ 10,560 ಟನ್ ಆಮದು ನೀರುಳ್ಳಿ ದಾಸ್ತಾನು ಆಗಮಿಸುವ ನಿರೀಕ್ಷೆಯಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟರ್ಕಿ,ಈಜಿಪ್ಟ್ ಹಾಗೂ ಅಫ್ಘಾನಿಸ್ತಾನಗಳಿಂದ ಕೆಂಪು ಹಾಗೂ ಹಳದಿ ನೀರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದ್ದು, ಅವು ಹಡಗಗುಳ ಮೂಲಕ ಮುಂಬೈ ದಾಸ್ತಾನಿನಲ್ಲಿ ಬಂದಿಳಿದಿರುವುದಾಗಿ ಅವರು ಹೇಳಿದ್ದಾರೆ.

 2019-20ರ (ಜುಲೈ-ಜೂನ್) ಖಾರಿಫ್ ಋತುವಿನಲ್ಲಿ ಈರುಳ್ಳಿ ಉತ್ಪಾದನೆಯಲ್ಲಿ ಶೇ.25 ರಷ್ಟು ಕುಸಿತವುಂಟಾಗಿದ್ದರಿಂದ ಧಾರಣೆಯಲ್ಲಿ ಏರಿಕೆಯಾಗಿದೆಯೆನ್ನಲಾಗಿದೆ. ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿನ ಮುಂಗಾರಿನ ಆಗಮನದಲ್ಲಿ ವಿಳಂಬ ಹಾಗೂ ಆನಂತರ ವಿಪರೀತವಾಗಿ ಸುರಿದ ಮಳೆ, ಈರುಳ್ಳಿ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ.

2015-16ರ ಸಾಲಿನಲ್ಲಿಯೂ ಈರುಳ್ಳಿ ಬೆಲೆಯಲ್ಲಿ ತೀವ್ರ ಏರಿಕೆಯಾದಾಗ ಭಾರತವು 1187 ಟನ್ ಈರುಳ್ಳಿಯನ್ನು ಆಮದು ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News