ಸಮಸ್ಯೆ ಸೃಷ್ಟಿಸಲು ಜನರಿಗೆ ನಾವೇ ಅವಕಾಶ ನೀಡಿದೆವು: ಪಶ್ಚಿಮಬಂಗಾಳದ ಬಿಜೆಪಿ ನಾಯಕ

Update: 2019-12-27 18:54 GMT

ಕೋಲ್ಕತ್ತಾ, ಡಿ. 27: ಮಾಧ್ಯಮಗಳು ಸುದ್ದಿಗಳಿಗಾಗಿ ಎದುರು ನೋಡುತ್ತಿದ್ದುದರಿಂದ ಸಮಸ್ಯೆ ಸೃಷ್ಟಿಸಲು ಜನರಿಗೆ ನಮ್ಮ ಪಕ್ಷವೇ ಅವಕಾಶ ನೀಡಿದೆ ಎಂದು ಬಿಜೆಪಿಯ ಪಶ್ಚಿಮಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೂರ್ವ ಮಿಡ್ನಾಪುರ ಜಿಲ್ಲೆಯ ಕೋಂಟೈಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುವುದಕ್ಕಿಂತ ಗಂಟೆಗೆ ಮುನ್ನ ಪಕ್ಷದ ಸ್ಥಳೀಯ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭ ಅವರು ಈ ಹೇಳಿಕೆ ನೀಡಿದರು. ‘‘ಅವರು (ತೃಣಮೂಲ ಕಾಂಗ್ರೆಸ್) ಸಮಸ್ಯೆ ಸೃಷ್ಟಿಸಲಿದ್ದಾರೆ. ನಾವು ಕೂಡ ಸಮಸ್ಯೆ ಸೃಷ್ಟಿಸಲಿದ್ದೇವೆ. ಇದು ಬಂಗಾಳದ ರಾಜಕಾರಣದ ಲಕ್ಷಣ. ನಾವು ಎಲ್ಲದಕ್ಕೂ ಸಿದ್ದರಾಗಿದ್ದೇವೆ. ನೀವು (ಪತ್ರಕರ್ತರು) ಸುದ್ದಿಗಾಗಿ ಎದುರು ನೋಡುತ್ತಿರುತ್ತೀರಿ. ಅದಕ್ಕಾಗಿಯೇ ನಾವು ಸಮಸ್ಯೆ ಸೃಷ್ಟಿಸಲು ಜನರಿಗೆ ಅವಕಾಶ ನೀಡಿರುವುದು’’ ಎಂದು ಘೋಶ್ ಹೇಳಿದ್ದಾರೆ.

 ಘೋಶ್ ಅವರ ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ‘‘ಎಲ್ಲಾ ರಾಜ್ಯಗಳಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಆದುದರಿಂದ ಹಿಂಸಾಚಾರದ ಮೂಲಕ ಪಶ್ಚಿಮಬಂಗಾಳದ ಮೇಲೆ ನಿಯಂತ್ರಣ ಸ್ಥಾಪಿಸಲು ಬಿಜೆಪಿ ಬಯಸುತ್ತಿದೆ. ಅವರಿಗೆ (ಘೋಶ್) ಪಶ್ಚಿಮಬಂಗಾಳದ ರಾಜಕೀಯ ಸಂಸ್ಕೃತಿ ತಿಳಿದಿಲ್ಲ’’ ಎಂದು ಸಚಿವ ಹಾಗೂ ಟಿಎಂಸಿ ನಾಯಕ ತಾಪಸ್ ರಾಯ್ ಹೇಳಿದ್ದಾರೆ. ಇಂತಹ ರಾಜಕೀಯವನ್ನು ಜನರು ಒಪ್ಪಿಕೊಳ್ಳಲಾರರು. ತೀವ್ರ ಆಸಕ್ತಿ ಸೃಷ್ಟಿಸಲು ದಿಲೀಪ್ ಘೋಶ್ ಮೂರ್ಖರಂತೆ ಮಾತನಾಡುತ್ತಿದ್ದಾರೆ ಎಂದು ಸಿಪಿಐ (ಮಾಕ್ಸಿಸ್ಟ್) ಶಾಸಕ ಸುಜನ್ ಚಕ್ರವರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News