ಅಧಿಕಾರ ಸಿಗದ ಕಾರಣ ಬಿಜೆಪಿಗೆ ಅಸೂಯೆ: ಆದಿತ್ಯ ಠಾಕ್ರೆ

Update: 2019-12-28 16:08 GMT

ಮುಂಬೈ, ಡಿ. 28: ತನ್ನ ಹಳೆಯ ಮಿತ್ರ ಪಕ್ಷ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಆದಿತ್ಯ ಠಾಕ್ರೆ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಇದ್ದುದರಿಂದ ಅದು ಶಿವಸೇನೆ ವಿರುದ್ಧ ಅಸೂಯೆಪಟ್ಟುಕೊಳ್ಳುತ್ತಿದೆ ಎಂದಿದ್ದಾರೆ.

‘‘ಅವರಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಹತಾಶರಾಗಿದ್ದಾರೆ. ನಾನು ಅವರಿಗೆ ಬರ್ನಲ್ ಹಚ್ಚಿಕೊಳ್ಳುವಂತೆ ಸೂಚಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ. “ನಮಗೆ ಅವರ ನೋವು ಅರ್ಥವಾಗುತ್ತದೆ. ಆದರೆ, ನಾವು ನಮ್ಮನ್ನು ನಂಬಿದ ಜನರಿಗಾಗಿ ಕೆಲಸ ಮಾಡುವ ದಿಶೆಯಲ್ಲಿ ಗಮನ ಕೇಂದ್ರೀಕರಿಸಿದ್ದೇವೆ. ಜನರ ಸಾಲ ಮನ್ನಾ, 10 ರೂಪಾಯಿಗೆ ಆಹಾರ, ಮನೆ ಒದಗಿಸುವ ನಮ್ಮ ಭರವಸೆ ಈಡೇರಿಸಲು ನಾವು ಆರಂಭಿಸಿದ್ದೇವೆ” ಎಂದು ಠಾಕ್ರೆ ಹೇಳಿದ್ದಾರೆ.

“ಮಹಾ ವಿಕಾಸ ಅಘಾಡಿ ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ. ಅಲ್ಲದೆ, ನಾವು ಇಂತಹ ಟ್ರೋಲ್‌ಗಳನ್ನು ನಿವಾರಿಸಬೇಕಿದೆ. ಅವರು ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ ನಮ್ಮನ್ನು ಟ್ರೋಲ್ ಮಾಡುತ್ತಿದ್ದಾರೆ. ಆದುದರಿಂದ ಅವರು ಟ್ರೋಲ್ ಮಾಡುವ ಮೂಲಕ ಕಾರ್ಯನಿರತರಾಗಿರಲಿ. ಅವರು ಇಂಟರ್‌ನೆಟ್ ಸ್ಥಗಿತಗೊಳಿಸಿದ ಸ್ಥಳದಿಂದ ನಮ್ಮನ್ನು ಟ್ರೋಲ್ ಮಾಡುತ್ತಿದ್ದಾರೆ. ಅವರು ಮೊಬೈಲ್ ಫೋನ್ ಬಳಸಲು ಅವಕಾಶ ನೀಡುವುದು ಒಳ್ಳೆಯದು. ಅವರು ಅದನ್ನು ನಿರಂತರ ಮಾಡಲಿ. ಅವರು ಅಧಿಕಾರದಲ್ಲಿ ಇಲ್ಲ. ಆದುದರಿಂದ ಅವರು ನಮ್ಮ ಬಗ್ಗೆ ಅಸೂಯೆ ಪಟ್ಟುಕೊಳ್ಳುತ್ತಿದ್ದಾರೆ” ಎಂದರು

ಶಿವಸೇನೆ ಕಾರ್ಯಕರ್ತರು ವ್ಯಕ್ತಿಯೋರ್ವನ ಕೇಶಮುಂಡನ ಮಾಡಿರುವ ವಾಡಾಲಾ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಟ್ರೋಲರ್‌ಗಳು ಶಿವಸೇನೆಯನ್ನು ಮಾತ್ರ ಟ್ರೋಲ್ ಮಾಡುತ್ತಿಲ್ಲ. ಅವರು ಮಹಿಳೆಯರು ಹಾಗೂ ಪತ್ರಕರ್ತೆಯರನ್ನು ಕೂಡ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಆಕ್ರೋಶಗೊಂಡಾಗ ಟ್ರೋಲ್ ಮಾಡುವುದು ಸಹಜ. ಆದರೆ, ಕೋಪಗೊಳ್ಳದಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ. ಯಾಕೆಂದರೆ, ಅವರಿಗೆ ಅಧಿಕಾರ ಸಿಕ್ಕಿಲ್ಲ. ಆದುದರಿಂದ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಆದಿತ್ಯ ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News