ಉತ್ತರ ಚಳಿಗೆ ತತ್ತರ

Update: 2019-12-28 18:12 GMT

ಹೊಸದಿಲ್ಲಿ,ಡಿ.28: ಚಳಿಯ ತೀವ್ರತೆಗೆ ಉತ್ತರ ಭಾರತ ತತ್ತರಿಸಿದ್ದು,ಶನಿವಾರ ಹಲವಾರು ಸ್ಥಳಗಳಲ್ಲಿ ಪ್ರಸಕ್ತ ಋತುವಿನ ಕನಿಷ್ಠ ತಾಪಮಾನಗಳು ದಾಖಲಾಗಿದ್ದವು. ದಿಲ್ಲಿಯಲ್ಲಿ ತಾಪಮಾನ 2.4 ಡಿ.ಸೆ.ಗೆ ಕುಸಿದಿದ್ದು, ದಟ್ಟಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿದ್ದರಿಂದ ವಾಯು,ರೈಲು ಮತ್ತು ರಸ್ತೆ ಸಂಚಾರಗಳು ವಿಳಂಬಗೊಂಡಿದ್ದವು. ಹೊಸ ವರ್ಷದ ಆಗಮನದವರೆಗೂ ಇದೇ ಸ್ಥಿತಿ ಮುಂದುವರಿಯುವ ಲಕ್ಷಣಗಳಿವೆ.

ದಿಲ್ಲಿಯಿಂದ ನಾಲ್ಕು ವಿಮಾನಯಾನಗಳ ಸಂಚಾರ ಮಾರ್ಗಗಳನ್ನು ಬದಲಿಸಲಾಗಿತ್ತು. ಕಳಪೆ ಗೋಚರತೆಯಿಂದಾಗಿ 24 ರೈಲುಗಳು 2ರಿಂದ 5 ಗಂಟೆ ಕಾಲ ವಿಳಂಬವಾಗಿ ಚಲಿಸಿದವು.

ಹರ್ಯಾಣದ ರೇವಾರಿ ಜಿಲ್ಲೆಯಲ್ಲಿ ದಟ್ಟ ಮಂಜಿನಿಂದಾಗಿ ದಿಲ್ಲಿ-ಜೈಪುರ ಹೆದ್ದಾರಿಯಲ್ಲಿ 15 ವಾಹನಗಳು ಸರಣಿ ಅಪಘಾತದಲ್ಲಿ ಸಿಲುಕಿದ್ದು ಇಬ್ಬರು ಮೃತಪಟ್ಟಿದ್ದಾರೆ ಮತ್ತು 12 ಜನರು ಗಾಯಗೊಂಡಿದ್ದಾರೆ.

ಹರ್ಯಾಣ ಮತ್ತು ಪಂಜಾಬಿನ ಹಲವೆಡೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 7ರಿಂದ 8 ಡಿ.ಸೆ.ಕಡಿಮೆಯಾಗಿತ್ತು. ಹಿಸ್ಸಾರ್‌ನಲ್ಲಿ ತಾಪಮಾನ 0.2 ಡಿ.ಸೆ.ಗೆ ಕುಸಿದಿತ್ತು ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ದಿಲ್ಲಿಯಲ್ಲಿ ಶನಿವಾರ ಬೆಳಿಗ್ಗೆ ತಾಪಮಾನ 2.4 ಡಿ.ಸೆ.ಗೆ ಕುಸಿದಿದ್ದು 2013,ಡಿ.30ರಂದು ರಾಜಧಾನಿಯು ಈ ಮಟ್ಟದ ತಾಪಮಾನಕ್ಕೆ ಸಾಕ್ಷಿಯಾಗಿತ್ತು.

ದಿಲ್ಲಿಯ ಕೆಲವು ಭಾಗಗಳಲ್ಲಿ ತಾಪಮಾನವು 2 ಡಿ.ಸೆ.ಗೂ ಕೆಳಗೆ ಕುಸಿದಿದ್ದು, 1901ರ ನಂತರ ಅತ್ಯಂತ ಚಳಿಯ ಡಿಸೆಂಬರ್ ಎಂಬ ದಾಖಲೆ ಸೃಷ್ಟಿಸಲು ದಿಲ್ಲಿ ಸಜ್ಜಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹಿಮಾಚಲ ಪ್ರದೇಶದ ಹಲವಾರು ಕಡೆಗಳಲ್ಲಿ ಶನಿವಾರ ತಾಪಮಾನ ಶೂನ್ಯಕ್ಕೂ ಕೆಳಗೆ ಕುಸಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News