ಪ್ರಜೆಗಳ ಕೈಗಳಿಂದ ಜಾರುತ್ತಿದೆ ಪ್ರಜಾತಂತ್ರ

Update: 2019-12-28 18:15 GMT

ಭಾರತದ ಸಾರ್ವಭೌಮ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಖಂಡಿಸುವುದು, ವಿರೋಧಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯ. ಪ್ರಜ್ಞೆಯೇ ಕಲುಷಿತವಾಗಿರುವ ಸಂದರ್ಭದಲ್ಲಿ ನಾಗರಿಕ ಸಮಾಜದ ಒಂದು ವರ್ಗ ಈ ಕರ್ತವ್ಯವನ್ನು ಮರೆತಿದೆ. ಪ್ರಜಾತಂತ್ರದ ವೌಲ್ಯಗಳು ಕೈಜಾರಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ.

70 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಭಾರತದ ಪ್ರಜಾತಂತ್ರ ಪರಿಪಕ್ವ ಆಗಬೇಕಿತ್ತು. ಭಾರತೀಯ ಉಪಖಂಡದಲ್ಲಿರುವ ಸಣ್ಣ ಪುಟ್ಟ ರಾಷ್ಟ್ರಗಳಿಗೆ ಭಾರತದ ಪ್ರಜಾತಂತ್ರ ವ್ಯವಸ್ಥೆ ಮಾದರಿಯಾಗಬೇಕಿತ್ತು. ಭಾರತೀಯ ಸಂವಿಧಾನದ ಮೂಲ ಆಶಯವೂ ಇದೇ ಆಗಿತ್ತಲ್ಲವೇ? ಭಾರತದ ಯಾವುದೇ ಪ್ರಜೆ ತಾನು ಭಾರತೀಯ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವುದೇ ಆದರೆ ಅದಕ್ಕೆ ಕಾರಣ ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂವಿಧಾನ, ಸಾಂವಿಧಾನಿಕ ಮೌಲ್ಯಗಳು ಮತ್ತು ಬಹುತ್ವದ ಪರಿಕಲ್ಪನೆ. ಈ ಚೌಕಟ್ಟಿನಿಂದ ಹೊರಬಂದು ಮತ್ತಾವುದೇ ಕಾರಣಗಳಿಗಾಗಿ ಬೆನ್ನು ತಟ್ಟಿಕೊಂಡರೆ ಅದು ಆತ್ಮದ್ರೋಹ ಎನಿಸಿಬಿಡುತ್ತದೆ. ಜಾತಿ ತಾರತಮ್ಯ, ಜಾತಿ ದೌರ್ಜನ್ಯ, ಜಾತಿ ಶೋಷಣೆ, ಮಹಿಳೆಯರ ಶೋಷಣೆ, ಶಿಶು ಹತ್ಯೆ, ಮತಾಂಧತೆ ಇವೆಲ್ಲವೂ ನಮ್ಮ ಬಾಯಿಗಳನ್ನು ಕಟ್ಟಿಹಾಕಿಬಿಡುತ್ತವೆ. ಶತಮಾನಗಳ ಹಿಂದಿನ ಕರ್ಮಠ ಸಂಪ್ರದಾಯದ ವಿಕೃತ ಮೌಲ್ಯಗಳು ಇಂದಿಗೂ ಜೀವಂತವಾಗಿರುವುದೇ ಅಲ್ಲದೆ ಪುನರುತ್ಥಾನದತ್ತ ಸಾಗುತ್ತಿರುವುದನ್ನು ಕಂಡರೆ ಭಾರತೀಯತೆಯ ಹೆಮ್ಮೆ ಕೊಂಚ ಹಿಂದಕ್ಕೆ ಸರಿದುಬಿಡುತ್ತದೆ. ಒಂದು ದೇಶದ ಶ್ರೇಷ್ಠತೆ ಕಾಣುವುದು ವಿಸ್ತರಿಸುವ ಗಡಿರೇಖೆಗಳಲ್ಲಿ ಅಲ್ಲ, ಗಡಿರೇಖೆಗಳೊಳಗಿನ ಸಮಾಜದ ಮೌಲ್ಯಗಳಲ್ಲಿ ಮತ್ತು ಮಾನವತೆಯ ಬೆಳಕಿನಲ್ಲಿ ಎನ್ನುವುದನ್ನು ಗಮನಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತ ಗೆಲುವಿನ ಆಶಯದೊಂದಿಗೇ ಬಹುಶಃ ಸೋಲಿನತ್ತ ವಾಲುತ್ತಿದೆ.

1947ರಲ್ಲಿ ಭಾರತ ಭೌಗೋಳಿಕವಾಗಿ ವಿಭಜನೆಯಾಗಿತ್ತು. ಇದು ಇತಿಹಾಸದ ದುರಂತವೇ ಸರಿ. ಆದರೆ ಇಂದು ಭೌಗೋಳಿಕವಾಗಿ ಸುರಕ್ಷಿತವಾಗಿರುವ ಭಾರತ ಬೌದ್ಧಿಕ ವಿಭಜನೆಯತ್ತ ಸಾಗುತ್ತಿದೆ. ಬಹುತ್ವ ಭಾರತದ ಕನಸು ಕಂಡು ವಿಶ್ವದ ಶ್ರೇಷ್ಠ ಸಂವಿಧಾನವನ್ನು ರಚಿಸಿದ ಸ್ವಾತಂತ್ರ ಪೂರ್ವದ ದಾರ್ಶನಿಕ ಮನಸ್ಸುಗಳು ತಮ್ಮ ಸಮಾಧಿ ಸ್ಥಿತಿಯಲ್ಲೂ ಘಾಸಿಗೊಳ್ಳುವಷ್ಟು ಮಟ್ಟಿಗೆ ನಾವು ಈ ದೇಶದ ತಾತ್ವಿಕ ನೆಲೆಯನ್ನು ಧ್ವಂಸ ಮಾಡಿಬಿಟ್ಟಿದ್ದೇವೆ. ಬ್ರಿಟಿಷ್ ವಸಾಹತು ಆಳ್ವಿಕೆಯ ವಿರುದ್ಧ ಹೋರಾಡಿದ ಚೇತನಗಳ ಅಸ್ತಿತ್ವವನ್ನೇ ನಿರಾಕರಿಸಿ ಶರಣಾಗತರ ವಿಕೃತ ಚಿಂತನೆಗಳನ್ನು ವೈಭವೀಕರಿಸಲಾಗುತ್ತಿದ್ದು, ದ್ವೇಷ ರಾಜಕಾರಣದ ದಾಳದಂತೆ ಬಳಸಲಾಗುತ್ತಿದೆ. ನಿರಾಕರಣೆಗೊಳಗಾಗುತ್ತಿರುವ ದಾರ್ಶನಿಕರ ಮಾನವೀಯ ಸಂವೇದನೆ ಮತ್ತು ಜನಪರ ಚಿಂತನೆಗಳು ಸಾಂಕೇತಿಕ ಪ್ರತಿಮೆಗಳಲ್ಲಿ ಹುದುಗಿಹೋಗುತ್ತಿರುವಂತೆಯೇ, ಈ ಚಿಂತನೆಗಳಿಂದ ರೂಪುಗೊಂಡಿದ್ದ ಬಹುತ್ವ ಭಾರತ ಛಿದ್ರವಾಗುತ್ತಿದೆ. ಹಂತಕರ ಚಿಂತನೆಗಳು ಸಮಕಾಲೀನ ಚಿಂತಕರ ಹಂತಕರನ್ನು ವ್ಯವಸ್ಥಿತವಾಗಿ ಪೋಷಿಸುತ್ತಿರುವಂತೆಯೇ ಭಾರತ ಹಂತ ಹಂತವಾಗಿ ತನ್ನ ಬಹುತ್ವದ ಪೊರೆಯನ್ನು ಕಳಚಿಕೊಳ್ಳುತ್ತಿದೆ. ಭಾರತೀಯ ಸಮಾಜದಲ್ಲಿ ಶತಮಾನಗಳಿಂದಲೂ ಸಾಂಪ್ರದಾಯಿಕ ಮತ್ತು ಮತಧಾರ್ಮಿಕ ನೆಲೆಯಲ್ಲಿ, ಸಾಂಸ್ಕೃತಿಕ ಚೌಕಟ್ಟಿನಲ್ಲಿ ಕಾಣಲಾಗುತ್ತಿರುವ ಸಾಂಸ್ಕೃತಿಕ ಸಮ್ಮೋಹನ ಪ್ರಕ್ರಿಯೆ ಇಂದು ರಾಜಕೀಯ ಸ್ವರೂಪ ಪಡೆದಿರುವುದೇ ಅಲ್ಲದೆ ಉನ್ಮತ್ತ ಮನಸ್ಸುಗಳನ್ನು ಸೃಷ್ಟಿಸುತ್ತಿದೆ. ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ದೌರ್ಜನ್ಯವನ್ನು ಸಂಪ್ರದಾಯ ಮತ್ತು ಆಚರಣೆಗಳ ನೆರಳಲ್ಲಿ ಶತಮಾನಗಳ ಕಾಲ ಸಮರ್ಥಿಸಿಕೊಂಡು ಬಂದಿರುವ ಭಾರತೀಯ ಸಮಾಜದ ಒಂದು ವರ್ಗ ಇಂದು ಆಡಳಿತ ವ್ಯವಸ್ಥೆಯ ಕ್ರೌರ್ಯ ಮತ್ತು ದೌರ್ಜನ್ಯವನ್ನು ಸಾಂಸ್ಕೃತಿಕ ರಾಜಕಾರಣದ ನೆರಳಲ್ಲಿ ಸಮರ್ಥಿಸಿಕೊಳ್ಳಲು ಸಜ್ಜಾಗಿದೆ. ಎರಡೂ ಸಂದರ್ಭಗಳಲ್ಲಿ ಸುಶಿಕ್ಷಿತ ಸಮಾಜವೇ ಸಮ್ಮೋಹನಕ್ಕೊಳಗಾಗಿ ತನ್ನ ಬೌದ್ಧಿಕ ಸ್ಥಿಮಿತ ಕಳೆದುಕೊಂಡಿರುವುದನ್ನು ಗಮನಿಸಬೇಕಿದೆ. ಭಾರತ ಹೀಗಿರಲಿಲ್ಲ. ಹೀಗಾಗುತ್ತದೆ ಎಂಬ ಆತಂಕವಿತ್ತು. ಆದರೆ ನಾಗರಿಕ ಸಮಾಜದ ಒಂದು ವರ್ಗ ತನ್ನ ಅಸ್ತಿತ್ವವನ್ನೇ ಮರೆತು ಸಮ್ಮ್ಮೋಹನಕ್ಕೊಳಗಾಗಿ ಉನ್ಮತ್ತ ಸ್ಥಿತಿಯಲ್ಲಿ ಅಂಧ ಅನುಕರಣೆಗೆ ಸಜ್ಜಾಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ನಮ್ಮ ಮುಂದಿರುವ ಕಂದಕಗಳನ್ನು ದಾಟಿ ನಡೆದುಬಿಡಬಹುದಾದ ಗುಂಡಿಗಳೆಂದು ಭಾವಿಸಿ ದಾಪುಗಾಲು ಹಾಕುತ್ತಿದ್ದೇವೆ. ನಿಂತ ನೆಲವೇ ಕುಸಿಯುತ್ತಿದ್ದರೂ ಶಿಥಿಲ ಕೊಂಬೆಗಳಿಗೆ ನೇತು ಹಾಕಿಕೊಂಡು ಸುರಕ್ಷತೆಯ ಕನಸು ಕಾಣುತ್ತಿದ್ದೇವೆ. 20ನೇ ಶತಮಾನದ ಆರಂಭದಲ್ಲಿ ಭಾರತ ಕಟ್ಟಿಕೊಂಡ ಕನಸಿನ ನಾಡು ಭಾರತೀಯ ಸಂವಿಧಾನದಲ್ಲಿ ಅಡಗಿದೆ. ಸಾವಿರಾರು ಭಾಷೆ, ನೂರಾರು ಜಾತಿ, ಹಲವು ಮತಧರ್ಮಗಳು ಮತ್ತು ಅಸಂಖ್ಯಾತ ಸಂಸ್ಕೃತಿಗಳನ್ನು ತನ್ನೊಳಗೆ ಸಲಹಿರುವ ಒಂದು ಭೂಪ್ರದೇಶವನ್ನು ಸಂರಕ್ಷಿಸಲು ಬೇಕಾದ ಸಲಕರಣೆಗಳು ಸಂವಿಧಾನದಲ್ಲಿ ಅಡಗಿವೆ. ಬಹುತ್ವ ಭಾರತ ಎನ್ನುವುದು ಭಾವನಾತ್ಮಕ ವಿಚಾರವಲ್ಲ. ಭಾರತದ ಬಹುತ್ವ ಇರುವುದು ಕೇವಲ ಮತಧರ್ಮಗಳಲ್ಲಿ ಅಲ್ಲ. ಉತ್ತರ ದಕ್ಷಿಣಗಳನ್ನು ಬೆಸೆಯುವ ಒಂದು ಎಳೆಯನ್ನು ಭಾರತದಲ್ಲಿ ಕಾಣುವುದೇ ಆದರೆ ಅದನ್ನು ಈ ದೇಶದ ಶ್ರಮಜೀವಿಗಳಲ್ಲಿ ಕಾಣಬೇಕಲ್ಲವೇ? ಅನ್ನ ಬೆಳೆವ ರೈತನಲ್ಲಿ ಕಾಣಬೇಕಲ್ಲವೇ ? ಈ ಎಳೆಯನ್ನು ಎಳೆಎಳೆದು, ಎಳೆಎಳೆದು ಕತ್ತರಿಸಿ, ತುಂಡರಿಸಿ ಭವಿಷ್ಯದ ವಿಷವೃಕ್ಷಗಳಿಗೆ ಬುನಾದಿ ನಿರ್ಮಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಭಾರತದ ಪ್ರಜಾತಂತ್ರ ಮತ್ತು ಸಾಮಾಜಿಕ ಬುನಾದಿ ಇಂದು ಶಿಥಿಲವಾಗುತ್ತಿರುವುದು ಜನಸಾಮಾನ್ಯರ ಕೃತ್ಯಗಳಿಂದಲ್ಲ, ಆಳುವ ವರ್ಗಗಳಿಂದ ಮತ್ತು ಆಳುವ ವರ್ಗಗಳನ್ನು ಪೋಷಿಸುವ ಪಟ್ಟಭದ್ರ ಹಿತಾಸಕ್ತಿಗಳಿಂದ. ಭಾರತದ ನೆಲ ಸಂಸ್ಕೃತಿಯನ್ನು, ಜನಸಂಸ್ಕೃತಿಯನ್ನು ಶಿಥಿಲಗೊಳಿಸುತ್ತಿರುವುದು ನೆಲ ಸಂಸ್ಕೃತಿಯ ಮೇಲೆ ತಮ್ಮ ಆಧಿಪತ್ಯದ ಸೌಧವನ್ನು ನಿರ್ಮಿಸಲು ಯತ್ನಿಸುತ್ತಿರುವ ಮತಧಾರ್ಮಿಕ ಗುಂಪುಗಳು. ಈ ಗುಂಪುಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಸಾಂಸ್ಕೃತಿಕ ನೆಲೆಗಳನ್ನು ಆಕ್ರಮಿಸಿರುವ ಕಾರ್ಪೊರೇಟ್ ಶಕ್ತಿಗಳು. ಈ ಎರಡು ಶಕ್ತಿಗಳ ಸಮ್ಮಿಲನದ ರಾಜಕೀಯ ಸ್ವರೂಪವನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಾಗಿಯೇ ಪ್ರಜಾತಂತ್ರ ವೌಲ್ಯಗಳು ನೇಪಥ್ಯಕ್ಕೆ ಸರಿದು ಉನ್ಮತ್ತ ರಾಜಕಾರಣ ಮುನ್ನೆಲೆಗೆ ಬಂದಿದೆ. ತನ್ನ ಶತಮಾನಗಳ ಇತಿಹಾಸದಲ್ಲಿ ಭಾರತ ಯಾವುದೇ ಕಾಲಘಟ್ಟದಲ್ಲೂ ಏಕಾಭಿಪ್ರಾಯದ ನೆಲೆಯಲ್ಲಿ ಕಾಣುವುದಿಲ್ಲ. ಆದರೆ ಎಷ್ಟೇ ಭಿನ್ನ ನೆಲೆಗಳು, ನಿಲುವುಗಳು ಇದ್ದರೂ ಭಾರತ ತನ್ನ ಮೂಲ ನೆಲೆ ಮತ್ತು ಸೆಲೆಯನ್ನು ಉಳಿಸಿಕೊಂಡು ಬಂದಿದೆ. ಇದಕ್ಕೆ ಕಾರಣ ತಳಮಟ್ಟದಲ್ಲಿ ಸ್ಥಾಪಿತವಾಗಿರುವ ಸಂವೇದನಾತ್ಮಕ ಸಮನ್ವಯ ಮತ್ತು ಸೌಹಾರ್ದ.

ಈ ಸಮನ್ವಯ ಮತ್ತು ಸೌಹಾರ್ದವನ್ನು ಸಂರಕ್ಷಿಸುವುದೇ ಸಂವಿಧಾನ ಕರ್ತೃಗಳ ಆದ್ಯತೆಯಾಗಿತ್ತು. ಸಂವಿಧಾನದಲ್ಲಿ ಜಾತ್ಯತೀತ ಎಂಬ ಪದವನ್ನು ಸೇರಿಸಿದ್ದು, ಸ್ವಾತಂತ್ರ ಬಂದ ಎರಡು ದಶಕಗಳ ನಂತರ ಆದರೆ ಜಾತ್ಯತೀತ ಆಶಯಗಳು ಸಂವಿಧಾನದ ತಳಹದಿಯಾಗಿತ್ತು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತದ ಸಂದರ್ಭದಲ್ಲಿ ಜಾತ್ಯತೀತತೆ ಎಂದರೆ ಹಿಂದೂ, ಮುಸ್ಲಿಮ್, ಕ್ರೈಸ್ತ ಎಂದು ಕಂಬ ಸುತ್ತುವುದು ಬೌದ್ಧಿಕ ದಾರಿದ್ರದ ಫಲ. ಮತಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ನೆಲೆಗಳನ್ನು ಮೀರಿದ ಜಾತ್ಯತೀತ ಧೋರಣೆಯನ್ನು ಭಾರತದ ಶ್ರಮಜೀವಿಗಳಲ್ಲಿ, ರೈತಾಪಿಯಲ್ಲಿ, ಕೆಳಸ್ತರದ ದುಡಿವ ಜೀವಗಳಲ್ಲಿ ಕಾಣುವ ಕಾಣ್ಕೆ ನಮ್ಮಲ್ಲಿರಬೇಕಾಗುತ್ತದೆ. ಕರ್ಮಠ ಜಾತಿ ಮನಸ್ಸುಗಳನ್ನು ಹೊರತುಪಡಿಸಿದರೆ ಭಾರತದ ನಾಗರಿಕರಲ್ಲಿ, ವಿಶೇಷವಾಗಿ ಶ್ರಮಜೀವಿಗಳಲ್ಲಿ ಈ ಮೌಲ್ಯಗಳನ್ನು ಇಂದಿಗೂ ಗುರುತಿಸಬಹುದು. ಅದರೆ ರಾಜಕೀಯ ನೆಲೆಯಲ್ಲಿ ಕಾಣುವ ಜಾತ್ಯತೀತತೆ ಇದೇ ಜಾತ್ಯತೀತ ಪ್ರಜೆಗಳನ್ನು ವಿಭಜಿಸಲು ಬಳಸಲಾಗುತ್ತಿರುವ ತಂತ್ರಗಳಾಗಿವೆ. ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಈ ದೇಶದ ಆಳುವ ವರ್ಗಗಳು ಎಲ್ಲ ಮತಧಾರ್ಮಿಕ ಆಚರಣೆಗಳನ್ನು ಸಂವಿಧಾನದ ಚೌಕಟ್ಟಿನಲ್ಲೇ ಆಚರಿಸುತ್ತಿವೆ. ಸರ್ವ ಧರ್ಮ ಸಮಭಾವದ ಹೆಸರಿನಲ್ಲಿ ಮತಧರ್ಮಗಳ ನಡುವೆ ತಾರತಮ್ಯ ನೀತಿಗಳನ್ನು ಅನುಸರಿಸುತ್ತಲೇ ಇವೆ. ಈಗ ಎರಡೂ ವ್ಯಾಖ್ಯಾನಗಳನ್ನು ಧ್ವಂಸ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ತಮ್ಮ ನಿತ್ಯ ಜೀವನದಲ್ಲಿ ಸದಾ ಜಾತ್ಯತೀತ ಮನಸ್ಸಿನಿಂದಲೇ ಬದುಕುವ ಶ್ರಮಜೀವಿಗಳನ್ನು ವಿಭಜಿಸುವ ತಂತ್ರಗಾರಿಕೆಯನ್ನು ಆಳುವ ವರ್ಗಗಳು ಎಷ್ಟು ವ್ಯವಸ್ಥಿತವಾಗಿ, ಎಷ್ಟು ಒಗ್ಗಟ್ಟಿನಿಂದ ಅನುಸರಿಸುತ್ತಿವೆ ಎಂದರೆ ನೇಗಿಲು ಹೊರುವ ಎತ್ತುಗಳೂ ಸಹ ಭಿನ್ನ ದಿಕ್ಕುಗಳಲ್ಲಿ ನಡೆಯುವಂತಾಗಿದೆ. ನೇಗಿಲು ನಿಯಂತ್ರಿಸುವ ಶಕ್ತಿಗಳು ಸದ್ದಿಲ್ಲದೆ ವಿಷಬೀಜಗಳನ್ನು ಬಿತ್ತುತ್ತಾ ತಾವೇ ನೊಗ ಹೊರಲು ಸಿದ್ಧವಾಗುತ್ತಿವೆ. ಇದರ ನೇರ ಪರಿಣಾಮವನ್ನು 2019ರ ಹಲವು ರಾಜಕೀಯ ಬೆಳವಣಿಗೆಗಳಲ್ಲಿ ಕಂಡಿದ್ದೇವೆ, ಕಾಣುತ್ತಿದ್ದೇವೆ. ದುಡಿಯುವ ವರ್ಗಗಳು ಶತಮಾನಗಳಿಂದ ಹೊರುತ್ತಿರುವ ನೇಗಿಲು ಇಂದು ಶಿಥಿಲವಾಗುತ್ತಿದೆ. ಉತ್ಪಾದನೆಯ ಬೀಜಾಂಕುರ ಸ್ಥಿತಿಯಿಂದ ಷೇರು ಮಾರುಕಟ್ಟೆಯ ಮೇಲಂತಸ್ತಿನವರೆಗೆ ಪಯಣಿಸುವ ಶ್ರಮಜೀವಿಗಳ ಬೆವರ ಹನಿಗಳು ಅಸ್ಮಿತೆಗಳ ಶಾಖದಲ್ಲಿ ಆವಿಯಾಗಿ ಹೋಗುತ್ತಿವೆ. ತಮ್ಮ ನೆತ್ತಿಯ ಮೇಲೆ ತೂಗಾಡುತ್ತಿರುವ ಕತ್ತಿಯ ಅಪಾಯವನ್ನೂ ಲೆಕ್ಕಿಸದೆ ಬೆವರಸಾಲೆಯನ್ನು ಒರೆಸಿಕೊಳ್ಳುತ್ತಾ ನೆಲ ಮುಟ್ಟಿದ ಬೆವರ ಹನಿಗಳನ್ನು ಮೆಟ್ಟುತ್ತಾ ವಿಶ್ವ ಮಾರುಕಟ್ಟೆಯ ನೇಣುಗಂಬಕ್ಕೆ ಕೊರಳನೊಡ್ಡಲು ಸಜ್ಜಾಗುತ್ತಿರುವ ಶ್ರಮಜೀವಿಗಳಿಗೆ ಬೆವರಿನಂಗಡಿಗಳ ಬಾಗಿಲುಗಳನ್ನೇ ಮುಚ್ಚಲಾಗುತ್ತಿದೆ. ತಮ್ಮ ಕರಾಳ ಭವಿಷ್ಯದತ್ತ ಹೆಮ್ಮೆಯಿಂದ ಸಾಗುತ್ತಿರುವ ದುಡಿವ ಜೀವಗಳ ಮನಸ್ಸುಗಳಲ್ಲಿ ಶ್ರಮದ ಅಸ್ಮಿತೆಗಳನ್ನು ಅಳಿಸಿಹಾಕಿ ಜಾತಿ, ಮತ, ಧರ್ಮ ಮತ್ತು ಭೌಗೋಳಿಕ ರಾಷ್ಟ್ರದ ಕಲ್ಪಿತ ಭಾವನೆಗಳನ್ನು ಬಿತ್ತಲಾಗುತ್ತಿದೆ. ಹಾಗಾಗಿಯೇ 30 ಲಕ್ಷ ರೈತರ ಪಾದಯಾತ್ರೆ ಸದ್ದಿಲ್ಲದೆ ಪರದೆಯ ಹಿಂದೆ ಸರಿದುಬಿಡುತ್ತದೆ, ಸಾರ್ವಜನಿಕರ ಗಮನಕ್ಕೇ ಬರದಂತೆ ಹುದುಗಿಹೋಗಿಬಿಡುತ್ತದೆ, ದೇಶದ ಲಾಂಛನ ಹೊತ್ತವರ ಕಣ್ಣಲ್ಲಿ ನಿಕೃಷ್ಟವಾಗಿಬಿಡುತ್ತದೆ. ನಾಳಿನ ಕೂಲಿಗಾಗಿ ಅಂಡಲೆಯುತ್ತಿರುವ ಕೋಟ್ಯಂತರ ಜೀವಗಳ ಬದುಕು ಮಾರುಕಟ್ಟೆಯ ಸರಕಿನಂತೆ ಬಿಕರಿಯಾಗಿಬಿಡುತ್ತದೆ.

ಈ ಬೆಳವಣಿಗೆಯ ನೇರ ಪರಿಣಾಮವನ್ನು ನವ ಉದಾರವಾದದ ನಾಲ್ಕನೇ ಔದ್ಯಮಿಕ ಕ್ರಾಂತಿ ಅಥವಾ ಡಿಜಿಟಲ್ ಕ್ರಾಂತಿಯ ಸಂದರ್ಭದಲ್ಲಿ ಕಾಣುತ್ತಿದ್ದೇವೆ. ಉತ್ಪಾದಕೀಯ ಶಕ್ತಿಗಳನ್ನು ಉತ್ಪಾದನೆಯ ಮೂಲ ನೆಲೆಯಿಂದಲೇ ಬೇರ್ಪಡಿಸುವ ಮೂಲಕ ಶಾಶ್ವತ ಕೂಲಿಗಳಾಗಿ ಪರಿವರ್ತಿಸುತ್ತಿರುವ ನವ ಉದಾರವಾದದ ಉಪಾಸಕರು ಭಾರತೀಯ ಸಂವಿಧಾನದ ಮೂಲ ಆಶಯವಾದ ಸಮ ಸಮಾಜದ ಕಲ್ಪನೆಯನ್ನೇ ನಾಶಪಡಿಸುತ್ತಿದ್ದಾರೆ. ಐದಾರು ದಶಕಗಳ ಕಾಲ ತಮ್ಮ ನೆತ್ತರು ಬೆವರು ಸುರಿಸಿ ತಾವೇ ನಿರ್ಮಿಸಿದ ಅಥವಾ ತಮ್ಮ ಪೂರ್ವಿಕರು ನಿರ್ಮಿಸಿದ ಸಮಾನತೆಯ ಸೌಧಗಳನ್ನು, ಶ್ರಮ ಫಲದ ಸೌಧಗಳನ್ನು ಹರಾಜು ಮಾರುಕಟ್ಟೆಯಲ್ಲಿ ಬಿಕರಿ ಮಾಡುತ್ತಿದ್ದರೂ ಪ್ರತಿರೋಧದ ದನಿಯನ್ನೂ ದಾಖಲಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶ ಎಂದರೆ ಮಣ್ಣಲ್ಲವೋ ಮನುಜರು ಎಂಬ ದಾರ್ಶನಿಕ ನುಡಿಗಳನ್ನು ಆಲಿಸುವ ಸಂಯಮವನ್ನೂ ಈ ದೇಶದ ಸುಶಿಕ್ಷಿತ ಮೇಲ್ವರ್ಗಗಳು ಕಳೆದುಕೊಂಡುಬಿಟ್ಟಿವೆ. ಹಾಗಾಗಿಯೇ ಒಂದು ಶತಮಾನದ ಕಾಲ ಹೋರಾಡಿ ಗಳಿಸಿದ ಸ್ವಾತಂತ್ರ ಮತ್ತು ಪ್ರಜಾಸತ್ತಾತ್ಮಕ ವೌಲ್ಯಗಳು ಕಣ್ಣೆದುರಿನಲ್ಲೇ ಕಳೆದುಹೋಗುತ್ತಿದ್ದರೂ ಭ್ರಮಾಲೋಕದ ಉನ್ಮಾದದಲ್ಲಿ ತೇಲುತ್ತಾ ನಿರ್ಲಿಪ್ತರಾಗಿವೆ, ನಿಷ್ಕ್ರಿಯವೂ ಆಗಿವೆ. ನಾವು ಏನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಪರಿವೆಯೇ ಇಲ್ಲದೆ ದ್ವೇಷ ರಾಜಕಾರಣದ ಬಲೆಗೆ ಸಿಲುಕಿರುವ ಒಂದು ವರ್ಗ ಕುರುಕ್ಷೇತ್ರದ ಅರ್ಜುನನಲ್ಲಿದ್ದ ಸಂವೇದನೆಯನ್ನೂ ಕಳೆದುಕೊಂಡುಬಿಟ್ಟಿದೆ. ಪರಿಣಾಮ, ಭ್ರಾತೃತ್ವದ ಸ್ಥಾನವನ್ನು ಬ್ರಾತೃಘಾತುಕತೆ ಆಕ್ರಮಿಸುತ್ತಿದೆ. ಸ್ನೇಹ, ಸಂಯಮ ಮತ್ತು ಸಹಬಾಳ್ವೆಯ ಮನಸ್ಸುಗಳಲ್ಲಿ ವೈರ, ದ್ವೇಷ, ಅಸೂಯೆ ಮತ್ತು ವಿಘಟನೆಯ ಭಾವನೆಗಳು ಮೊಳೆಯುತ್ತಿವೆ.

ಈ ಭಾವನೆಗಳು ಗಟ್ಟಿಯಾಗುತ್ತಿರುವುದರಿಂದಲೇ ಸಾವನ್ನು ಸಂಭ್ರಮಿಸುವ, ಹಿಂಸೆಯನ್ನು ಆರಾಧಿಸುವ ಮನೋಧರ್ಮ ಯುವ ಪೀಳಿಗೆಯನ್ನು ಆವರಿಸುತ್ತಿದೆ. ಹಿಂಸೆಯನ್ನು ಹಿಂಸೆಯ ಮೂಲಕವೇ ಎದುರಿಸುವ ವಿಕೃತ ನ್ಯಾಯ ವ್ಯವಸ್ಥೆಗಾಗಿ ಹಪಹಪಿಸುವ ಮನಸ್ಸುಗಳು ಹೆಚ್ಚಾಗುತ್ತಿವೆ. ಈ ಮನಸ್ಸುಗಳನ್ನು ಸೆಳೆಯಲು ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿರುವುದು ದುರಂತ. ಪ್ರಜಾತಂತ್ರ ವ್ಯವಸ್ಥೆಯ ಆಧಾರ ಸ್ತಂಭವಾಗಿರಬೇಕಾದ ಮುಖ್ಯವಾಹಿನಿಯ ಮಾಧ್ಯಮಗಳು ಬಹುತೇಕ ಇಂದು ಪ್ರಜೆಗಳ ದನಿಗಳಿಗೆ ದನಿಯಾಗುವ ಬದಲು ದಮನಿಸುವ ಶಕ್ತಿಗಳ ದನಿಗೆ ದನಿಗೂಡಿಸುತ್ತಿವೆ. ನಮ್ಮ ಮುಂದಿರುವ ಪ್ರಶ್ನೆ ಯಾವುದೋ ಒಂದು ಸಮುದಾಯ, ಧರ್ಮ ಅಥವಾ ಪ್ರಾಂತದ ಪ್ರಶ್ನೆಯಲ್ಲ. ಭೌಗೋಳಿಕ ಭಾರತದ ಪ್ರಶ್ನೆಯೂ ಅಲ್ಲ. ಇಂದು ನಾಗರಿಕ ಸಮಾಜದ ಮುಂದಿರುವುದು ಪ್ರಜಾತಂತ್ರ ಮೌಲ್ಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯ ಪ್ರಶ್ನೆ. ಈ ದೇಶದ ಸಾರ್ವಭೌಮ ಪ್ರಜೆಗಳು ತಮ್ಮ ಮೂಲಭೂತ ಪ್ರಜಾತಾಂತ್ರಿಕ ಹಕ್ಕುಗಳನ್ನೇ ಕಳೆದುಕೊಳ್ಳುತ್ತಿರುವುದನ್ನು ಒಂದೆಡೆ ಸಮರ್ಥಿಸಿಕೊಂಡರೆ ಮತ್ತೊಂದೆಡೆ ನಿಷ್ಕ್ರಿಯತೆಯಿಂದ ಸ್ವಾಗತಿಸಲಾಗುತ್ತಿದೆ. ಪ್ರತಿರೋಧ ಮತ್ತು ಪ್ರತಿಭಟನೆ ಪ್ರಜಾತಂತ್ರ ವ್ಯವಸ್ಥೆಯ ಅಂತಃಸತ್ವವನ್ನು ರಕ್ಷಿಸುವ ಸಾಧನಗಳು ಎನ್ನುವುದನ್ನೇ ಮರೆತು ಉನ್ಮತ್ತ ವಾತಾವರಣದಲ್ಲಿ ಸಾಗುತ್ತಿದ್ದೇವೆ.

ಪ್ರಭುತ್ವ ಎಂದಿಗೂ ಪ್ರತಿರೋಧವನ್ನು ಸಹಿಸಿಕೊಳ್ಳುವುದಿಲ್ಲ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಸಾರ್ವಭೌಮರಲ್ಲವೇ? ಇಲ್ಲಿ ಸಹಿಸಿಕೊಳ್ಳುವುದಷ್ಟೇ ಅಲ್ಲ ಪ್ರತಿರೋಧದ ದನಿಗಳನ್ನು ಆಲಿಸುವುದು ಪ್ರಭುತ್ವದ ಕರ್ತವ್ಯವಾಗುತ್ತದೆ. ತನ್ನ ಈ ಕರ್ತವ್ಯ ನಿಭಾಯಿಸುವುದರಲ್ಲಿ ಪ್ರಭುತ್ವ ವಿಫಲವಾದ ಎಲ್ಲ ಸಂದರ್ಭಗಳಲ್ಲೂ ಪ್ರಜೆಗಳ ಪ್ರತಿರೋಧದ ದನಿ ತೀವ್ರತೆ ಪಡೆದುಕೊಳ್ಳುತ್ತದೆ. ಕಳೆದ ಒಂದು ವರ್ಷದಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆ ಈ ಸಂದಿಗ್ಧತೆಯನ್ನು ಎದುರಿಸುತ್ತಿದೆ. ಪ್ರಜೆಗಳ ಸಂವಹನ ಸ್ವಾತಂತ್ರವನ್ನೇ ಕಸಿದುಕೊಳ್ಳಲಾಗುತ್ತಿದೆ. ಸಂವಹನಕ್ಕೆ ಮುಕ್ತರಾದವರನ್ನು ಇದು ಬಾಧಿಸುತ್ತಿಲ್ಲ. ಪಕ್ಕದ ಮನೆಯ ಕಿಚ್ಚು ನಮ್ಮ ಮನೆಗೆ ತಗಲುವುದಿಲ್ಲ ಎನ್ನುವ ಉದಾಸೀನತೆಯ ನಡುವೆ ಆ ಕಿಚ್ಚಿನ ಶಾಖದಿಂದಾದರೂ ಎಚ್ಚೆತ್ತುಕೊಳ್ಳುವ ಪ್ರಜ್ಞೆಯನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಅನ್ಯರ ಸಾವು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ, ಅನ್ಯರ ಸ್ವಾತಂತ್ರ ಹರಣವೂ ನಮ್ಮನ್ನು ಬಾಧಿಸುತ್ತಿಲ್ಲ. ಭಾರತದ ಸಾರ್ವಭೌಮ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಖಂಡಿಸುವುದು, ವಿರೋಧಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯ. ಪ್ರಜ್ಞೆಯೇ ಕಲುಷಿತವಾಗಿರುವ ಸಂದರ್ಭದಲ್ಲಿ ನಾಗರಿಕ ಸಮಾಜದ ಒಂದು ವರ್ಗ ಈ ಕರ್ತವ್ಯವನ್ನು ಮರೆತಿದೆ. ಪ್ರಜಾತಂತ್ರದ ವೌಲ್ಯಗಳು ಕೈಜಾರಿ ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಮತ್ತೊಂದೆಡೆ ಪ್ರತಿರೋಧದ ಜ್ವಾಲೆ ವ್ಯಾಪಿಸುತ್ತಿರುವುದನ್ನು ಕಾಣುತ್ತಿದ್ದೇವೆ. ನಾವು ಎಲ್ಲಿ ನಿಂತಿದ್ದೇವೆ ಎನ್ನುವುದೇ ನಾವು ಏನು ಎನ್ನುವುದನ್ನು ನಿರ್ಧರಿಸುತ್ತದೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News