ಎನ್ ಪಿಆರ್ ಕೈಪಿಡಿಯಲ್ಲಿ ಮುಸ್ಲಿಮರ ಹಬ್ಬಗಳು ಯಾಕಿಲ್ಲ?: ಕೇಂದ್ರ ಗೃಹ ಸಚಿವಾಲಯ ಪ್ರತಿಕ್ರಿಯಿಸಿದ್ದು ಹೀಗೆ...

Update: 2019-12-30 17:03 GMT

ಹೊಸದಿಲ್ಲಿ: ರಾಷ್ಟ್ರಾದ್ಯಂತ ಪೌರತ್ವ ಕಾಯ್ದೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಇತ್ತೀಚೆಗೆ ಸರಕಾರ ಅಧಿಕಾರಿಗಳಿಗಾಗಿ ಬಿಡುಗಡೆಗೊಳಿಸಿರುವ ಎನ್ ಪಿಆರ್ 2020 ಕೈಪಿಡಿ ವಿವಾದ ಸೃಷ್ಟಿಸಿದೆ. ಕೈಪಿಡಿಯಲ್ಲಿ ಹಿಂದೂ, ಸಿಖ್ ಮತ್ತು ಕ್ರೈಸ್ತ ಧರ್ಮಗಳ ಹಬ್ಬಗಳ ಕ್ಯಾಲೆಂಡರ್ ಇದ್ದು, ಇದರಲ್ಲಿ ಮುಸ್ಲಿಮರ ಒಂದೇ ಒಂದು ಹಬ್ಬದ ಹೆಸರೂ ಇಲ್ಲ ಎನ್ನುವ ಆರೋಪ ಕೇಳಿ ಬರುತ್ತಿವೆ.

ಆದರೆ ಈ ಎಲ್ಲಾ ಹಬ್ಬಗಳನ್ನು ವ್ಯಕ್ತಿಯೊಬ್ಬ ಯಾವಾಗ ಜನಿಸಿದ್ದು ಎಂದು ತಿಳಿಯಲು ಬಳಸಲಾಗುತ್ತದೆ ಹೊರತು ಬೇರೆ ಯಾವುದೇ ಉದ್ದೇಶಕ್ಕಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

"ಎನ್ ಪಿಆರ್ ನಲ್ಲಿ ಸಂಗ್ರಹಿಸುವ ಪ್ರಮುಖ ಮಾಹಿತಿಗಳಲ್ಲಿ ಜನ್ಮ ದಿನಾಂಕವೂ ಒಂದಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ, ವ್ಯಕ್ತಿಯೊಬ್ಬನ ಜನ್ಮ ದಿನಾಂಕ ತಿಳಿದಿರುವುದಿಲ್ಲ. ಕೆಲವೊಮ್ಮೆ ಪೌರನೊಬ್ಬನಿಗೆ ಖಚಿತ ಜನ್ಮ ದಿನಾಂಕ ಗೊತ್ತಿರುವುದಿಲ್ಲ. ಜನ್ಮ ಪ್ರಮಾಣಪತ್ರ, ಶಾಲೆಯ ವರ್ಗಾವಣೆ ಪತ್ರ, ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಪಾಸ್ ಪೋರ್ಟ್ ಮುಂತಾದವುಗಳ ಮೂಲಕ ಜನ್ಮ ದಿನಾಂಕ ಪಡೆಯಬಹುದು. ಕೆಲವೊಂದು ಪ್ರಕರಣಗಳಲ್ಲಿ ಜಾತಕದಲ್ಲೂ ಜನ್ಮ ದಿನಾಂಕವಿರುತ್ತದೆ. ಒಂದು ವೇಳೆ ಅದು ಸ್ಥಳೀಯ ಕ್ಯಾಲೆಂಡರ್ ಪ್ರಕಾರ ಇದ್ದರೆ, ನೀವು ಅದನ್ನು ಇಂಗ್ಲಿಷ್ ಕ್ಯಾಲೆಂಡರ್ ಗೆ ಪರಿವರ್ತಿಸಬೇಕು" ಎಂದು ಕೈಪಿಡಿಯಲ್ಲಿ ಬರೆಯಲಾಗಿದೆ.

ಅನುಬಂಧ 3ರಲ್ಲಿ ಇಂಗ್ಲಿಷ್ ಕ್ಯಾಲೆಂಡರ್ ಮತ್ತು ಸ್ಥಳೀಯ ಕ್ಯಾಲೆಂಡರ್ ಗಳಾದ ಶಕ, ಇಸ್ಲಾಮಿಕ್, ವಿಕ್ರಮ್ ಸಮ್ವತ್ ಮತ್ತು ಬೆಂಗಾಲಿ ಕ್ಯಾಲೆಂಡರ್ ಗಳ ಪ್ರಕಾರ ವರ್ಷಗಳನ್ನು ನೀಡಲಾಗಿದೆ.

"ಮಾಹಿತಿದಾರನು ಜನನ ವರ್ಷವನ್ನು ಮಾತ್ರ ತಿಳಿಸಿದರೆ ಮತ್ತು ತಿಂಗಳಿನ ಬಗ್ಗೆ ಖಚಿತತೆ ಇಲ್ಲದೆ ಇದ್ದರೆ, ಮಳೆಗಾಲಕ್ಕಿಂತ ಮೊದಲು ಅಥವಾ ನಂತರ ಜನನವಾಯಿತೇ ಎಂದು ಪ್ರಶ್ನಿಸಿ, ಮಳೆಗಾಲಕ್ಕಿಂತ ಮೊದಲು ಜನಿಸಿದ್ದರೆ, ಹೊಸ ವರ್ಷ, ಗುರು ಗೋವಿಂದ್ ಸಿಂಗ್ ಜಯಂತಿ, ಮಕರ ಸಂಕ್ರಾಂತಿ, ಪೊಂಗಲ್, ಗಣರಾಜ್ಯೋತ್ಸವ, ಬಸಂತ್ ಪಂಚಮಿ, ಮಹರ್ಷಿ ದಯಾನಂದ್ ಸರಸ್ವತಿ ಜಯಂತಿ, ಮಹಾ ಶಿವರಾತ್ರಿ, ಹೋಲಿ, ಗುಡಿ ಪದ್ವಾ, ರಾಮನವಮಿ, ವೈಶಾಖಿ, ಬಿಹು, ಮಹಾಬೀರ್ ಜಯಂತಿ, ಗುಡ್ ಫ್ರೈಡೆ, ಬುದ್ಧ ಪೂರ್ಣಿಮಾ ಇವುಗಳಲ್ಲಿ ಯಾವುದಾದರೂ ಹಬ್ಬದ ಸಂದರ್ಭ ಜನಿಸಿದ್ದರೇ ಎಂದು ಪ್ರಶ್ನಿಸಿ ತಿಂಗಳನ್ನು ಅಂದಾಜಿಸಿ" ಎಂದು ಕೈಪಿಡಿಯಲ್ಲಿ ತಿಳಿಸಲಾಗಿದ್ದು, ಮಳೆಗಾಲದ ನಂತರ ಜನಿಸಿದ್ದರೆ ಎಂದು ಬರೆದು ಇತರ ಹಬ್ಬಗಳ ಹೆಸರುಗಳನ್ನು ಇದೇ ರೀತಿ ಬರೆಯಲಾಗಿದೆ.

ಅನುಬಂಧ 5ರಲ್ಲಿ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ 30 ಪ್ರಮುಖ ಹಬ್ಬಗಳ ಪಟ್ಟಿಯನ್ನು ನೀಡಲಾಗಿದೆ. ಹಿಂದೂ ಮತ್ತು ಸಿಖ್ ಹಬ್ಬಗಳು, ಕ್ರಿಸ್ ಮಸ್ ಮತ್ತು ಗುಡ್ ಫ್ರೈಡೆ ಈ ಪಟ್ಟಿಯಲ್ಲಿದ್ದರೂ , ಮುಸ್ಲಿಮರ ಒಂದೇ ಒಂದು ಹಬ್ಬವೂ ಇದರಲ್ಲಿಲ್ಲ. ಮೊಹರ್ರಂ, ಈದುಲ್ ಫಿತ್ರ್, ಈದುಲ್ ಅಝ್ ಹಾ ಸೇರಿದಂತೆ ಭಾರತದಲ್ಲಿ ಮುಸ್ಲಿಮರ 5 ಹಬ್ಬಗಳು ರಾಷ್ಟ್ರೀಯ ರಜೆಗಳಾಗಿವೆ.

ಇದೇ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ firstpost.comಗೆ ನೀಡಿದ ಪ್ರತಿಕ್ರಿಯೆ ಹೀಗಿದೆ.

"ಇದೇ ರೀತಿಯ ಅನುಬಂಧವನ್ನು 2011ರ ಗಣತಿ ಮತ್ತು 2010ರ ಎನ್ ಪಿಆರ್ ಗೆ ಬಳಸಲಾಗಿತ್ತು" ಎಂದು ಗೃಹ ಸಚಿವಾಲಯ ತಿಳಿಸಿದ್ದು, ವ್ಯಕ್ತಿಯೊಬ್ಬನ ಜನ್ಮ ದಿನಾಂಕ ತಿಳಿದಿರದೇ ಇದ್ದರೆ ಹಬ್ಬಗಳ ಸಮಯವನ್ನು ನೆನಪಿಸಿಕೊಂಡು ಜನ್ಮ ದಿನಾಂಕವನ್ನು ಅಂದಾಜಿಸಲು ಹೀಗೆ ಮಾಡಲಾಗಿದೆ ಎಂದಿದೆ. ಇದೇ ರೀತಿಯ ಕ್ಯಾಲೆಂಡರನ್ನು 2011ರಲ್ಲೂ ಬಳಸಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News