ಈ ಆಸ್ಪತ್ರೆಯಲ್ಲಿ ತಿಂಗಳಲ್ಲಿ 91 ಶಿಶುಗಳು ಮೃತ್ಯು

Update: 2019-12-30 17:37 GMT
ಸಾಂದರ್ಭಿಕ ಚಿತ್ರ

ಕೋಟಾ (ರಾಜಸ್ಥಾನ), ಡಿ. 30: ರಾಜಸ್ಥಾನದ ಕೋಟಾದಲ್ಲಿರುವ ಜೆ.ಕೆ. ಲೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಮೃತಪಟ್ಟ ಶಿಶುಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ ಚಿಕಿತ್ಸೆ ಸಂದರ್ಭ 12ಕ್ಕೂ ಅಧಿಕ ಶಿಶುಗಳು ಸಾವನ್ನಪ್ಪಿವೆ. ಇದರೊಂದಿಗೆ ಡಿಸೆಂಬರ್ ತಿಂಗಳಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.

ಆಸ್ಪತ್ರೆಯಲ್ಲಿ ಡಿಸೆಂಬರ್‌ನಲ್ಲಿ ಶುಕ್ರವಾರದ ವರೆಗೆ 77 ಶಿಶುಗಳು ಮೃತಪಟ್ಟಿದ್ದವು. ಕಳೆದ ಒಂದು ವಾರದಲ್ಲಿ 12ಕ್ಕೂ ಅಧಿಕ ಶಿಶುಗಳು ಸಾವನ್ನಪ್ಪಿವೆ. ಒಂದು ವರ್ಷದಲ್ಲಿ 940 ಶಿಶುಗಳು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನವಜಾತ ಶಿಶುಗಳ ಸಾವಿನ ಪ್ರಕರಣಗಳ ತನಿಖೆ ನಡೆಸಲು ತಜ್ಞ ವೈದ್ಯರು ಹಾಗೂ ವಿಷಯ ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯೊಂದನ್ನು ರೂಪಿಸಿದ್ದಾರೆ.

ಇಂತಹ ಘಟನೆಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲು ಶೀಘ್ರ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದ್ದಾರೆ. ಡಾ. ಅಮರ್‌ಜೀತ್ ಮೆಹ್ತಾ, ಡಾ. ರಾಮ್‌ಬಾಬು ಶರ್ಮಾ ಹಾಗೂ ಡಾ. ಸುನೀಲ್ ಭಟ್ನಗರ್ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ಎರಡು ದಿನಗಳ ಒಳಗೆ ವರದಿ ಸಲ್ಲಿಸಲಿದೆ ಎಂದು ರಾಜಸ್ಥಾನದ ವೈದ್ಯಕೀಯ ಶಿಕ್ಷಣದ ಕಾರ್ಯದರ್ಶಿ ವೈಭವ್ ಗಲರಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News