ವರಿಷ್ಠರಿಗೆ ತಲೆನೋವಾದ ಶಿವಮೊಗ್ಗ ಗ್ರಾಮಾಂತರ, ಸೊರಬ ತಾಲೂಕು 'ಕಮಲ' ಮಂಡಲ ಅಧ್ಯಕ್ಷರ ಆಯ್ಕೆ

Update: 2019-12-30 18:19 GMT

ಶಿವಮೊಗ್ಗ, ಡಿ. 30: ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಾಗೂ ಸೊರಬ ತಾಲೂಕಿಗೆ ಸಂಬಂಧಿಸಿದ ಬಿಜೆಪಿ 'ಮಂಡಲ' ಅಧ್ಯಕ್ಷರ ಆಯ್ಕೆಯು, ಪಕ್ಷದ ಜಿಲ್ಲಾ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. 

ಗ್ರಾಮಾಂತರ ಕ್ಷೇತ್ರಕ್ಕೆ ಇಬ್ಬರು ಮಂಡಲ ಅಧ್ಯಕ್ಷರ ನೇಮಕಗೊಳಿಸಿದ ಬೆನಲ್ಲೇ, ಅಸಮಾಧಾನದ ಹೊಗೆ ಏಳಲಾರಂಭಿಸಿದೆ. ಇನ್ನೊಂದೆಡೆ ಸೊರಬ ತಾಲೂಕು ಮಂಡಲ ಅಧ್ಯಕ್ಷರ ಆಯ್ಕೆಯೂ ಅಕ್ಷರಶಃ ಕಗ್ಗಂಟಾಗಿ ಪರಿಣಮಿಸಿದ್ದು, ಇಲ್ಲಿಯವರೆಗೂ ಸರ್ವಸಮ್ಮತ ಆಯ್ಕೆ ಸಾಧ್ಯವಾಗಿಲ್ಲ. 

ವರಿಷ್ಠರಿಗೆ ದೂರು: ಶಿವಮೊಗ್ಗ ಗ್ರಾಮಾಂತರ ಅಸೆಂಬ್ಲಿ ಕ್ಷೇತ್ರದ ತಾಲೂಕು ಹಾಗೂ ಹೊಳೆಹೊನ್ನೂರು ಮಂಡಲಗಳ ಅಧ್ಯಕ್ಷರ ನೇಮಕ ಕುರಿತಂತೆ, ಕೆಲ ನಾಯಕರ ವೈಯಕ್ತಿಕ ಜಿದ್ದಾಜಿದ್ದಿ, ತಮ್ಮ ಬೆಂಬಲಿಗರಿಗೆ ಅವಕಾಶ ಕಲ್ಪಿಸಬೇಕೆಂಬ ಇರಾದೆಯ ಕಾರಣದಿಂದ, ಕಳೆದ ಕೆಲ ತಿಂಗಳುಗಳಿಂದ ಅಧ್ಯಕ್ಷರ ನೇಮಕ ಪ್ರಕ್ರಿಯೆ ನೆನೆಗುದಿಗೆ ಬೀಳುವಂತಾಗಿತ್ತು. ಬಣಗಳ ನಡುವೆ ಸಮನ್ವಯತೆ ಸಾಧಿಸುವ ಪಕ್ಷದ ಜಿಲ್ಲಾ ನಾಯಕರ ಪ್ರಯತ್ನಗಳು ಫಲ ನೀಡಿರಲಿಲ್ಲ ಎನ್ನಲಾಗಿದೆ. ಈ ಎಲ್ಲ ಗೊಂದಲಗಳ ನಡುವೆಯೇ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರವರು ಕಳೆದ ಕೆಲ ದಿನಗಳ ಹಿಂದೆ ಎರಡು ಮಂಡಲಗಳಿಗೆ ಅಧ್ಯಕ್ಷರ ನೇಮಿಸಿ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೆ ಅಸಮಾಧಾನದ ಹೊಗೆ ಏಳಲಾರಂಭಿಸಿದೆ. ಇದು ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. 

ಗ್ರಾಮಾಂತರ ಕ್ಷೇತ್ರದ ಕೆಲ ನಾಯಕರುಗಳು, ಅಧ್ಯಕ್ಷರುಗಳ ನೇಮಕಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಹಿರಿಯ ನಾಯಕರಿಗೆ ದೂರು ನೀಡಿದ್ದಾರೆ. ಮಂಡಲ ಅಧ್ಯಕ್ಷರ ನೇಮಕಕ್ಕೆ ತಕ್ಷಣವೇ ತಡೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿವೆ. 

ನೇಮಕವೇ ಕಗ್ಗಂಟು: ಸೊರಬ ತಾಲೂಕು ಮಂಡಲ ಅಧ್ಯಕ್ಷರ ನೇಮಕವು ಅಕ್ಷರಶಃ ಗೊಂದಲದ ಗೂಡಾಗಿ ಪರಿಣಮಿಸಿದೆ. ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಸ್ಥಳೀಯ ಪಕ್ಷದ ನಾಯಕರ ನಡುವೆ ಒಮ್ಮತದ ಅಭಿಪ್ರಾಯವಿಲ್ಲವಾಗಿದೆ. ತದ್ವಿರುದ್ದ ನಿಲುವು ಹಾಗೂ ಸಹಮತದ ಅಭಿಪ್ರಾಯ ವ್ಯಕ್ತವಾಗದಿರುವುದು ಆಯ್ಕೆಯು ಕಗ್ಗಂಟಾಗುವಂತಾಗಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ಪಕ್ಷದ ನಾಯಕರು ಹಲವು ಸುತ್ತಿನ ಸಭೆ ನಡೆಸಿದರೂ, ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಈ ನಡುವೆ ಆದಷ್ಟು ಶೀಘ್ರದಲ್ಲಿ ಗೊಂದಲ ಇತ್ಯರ್ಥಕ್ಕೆ ಮುಂದಾಗಬೇಕೆಂದು, ಸ್ಥಳೀಯ ಕಾರ್ಯಕರ್ತರು ಪಕ್ಷದ ಜಿಲ್ಲಾ ನಾಯಕರಿಗೆ ಒತ್ತಡ ಹೇರಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ. 

ಒಟ್ಟಾರೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಂಡಲಗಳ ಅಧ್ಯಕ್ಷರುಗಳ ನೇಮಕ ಬೆನ್ನಲ್ಲೆ ಅಸಮಾಧಾನ ಭುಗಿಲೆದ್ದಿದೆ. ಇನ್ನೊಂದೆಡೆ, ಸೊರಬಕ್ಕೆ ಸಂಬಂಧಿಸಿದಂತೆ ಆಯ್ಕೆಗೂ ಮುನ್ನವೇ ವಿವಾದ ತಲೆದೋರಿದೆ. ಈ ಗೊಂದಲವು ಮುಂದೆ ಇನ್ನ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

ಎಂಎಲ್‍ಎ-ಎಂಎಲ್‍ಸಿ ನಡುವೆ ಶೀತಲ ಸಮರ ?
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ನಡುವೆ, ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ-ಗೊಂದಲವಿದೆ ಎಂದು ಹೇಳಲಾಗಿದೆ. ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಕಾರಣದಿಂದಲೇ, ಗ್ರಾಮಾಂತರ ಕ್ಷೇತ್ರದ ಎರಡು ಮಂಡಲಗಳ ಅಧ್ಯಕ್ಷರ ನೇಮಕವು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. 

2-3 ಬಾರಿ ಚರ್ಚಿಸಿ ನಿರ್ಧರಿಸಲಾಗಿದೆ: ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ
ಶಿವಮೊಗ್ಗ ಗ್ರಾಮಾಂತರ ಮಂಡಲಗಳ ಅಧ್ಯಕ್ಷರ ನೇಮಕ ಕುರಿತಂತೆ ಕೆಲ ಪ್ರಮುಖರಲ್ಲಿ ಒಮ್ಮತ ವ್ಯಕ್ತವಾಗಿರಲಿಲ್ಲ. ಈ ಬಗ್ಗೆ ಎರಡ್ಮೂರು ಬಾರಿ ಸಭೆ ಸೇರಿ ಚರ್ಚಿಸಲಾಗಿತ್ತು. ಸಂಘಟನೆ ಗಮನದಲ್ಲಿಟ್ಟುಕೊಂಡು ಅಧ್ಯಕ್ಷರ ನೇಮಕ ಮಾಡಲಾಗಿದೆ. ಬೂತ್ ಸಮಿತಿ ಸದಸ್ಯರ ಸಭೆಯ ನಂತರ ಅಧ್ಯಕ್ಷರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಅಧ್ಯಕ್ಷರುಗಳ ನೇಮಕಕ್ಕೆ ರಾಜ್ಯ ಸಮಿತಿಯಿಂದ ತಡೆ ಬಂದಿದೆ ಎಂಬುವುದರ ಬಗ್ಗೆ ತಮಗೆ ಯಾವುದೇ ಮಾಹಿತಿಯೂ ಇಲ್ಲ. ಸೊರಬ ಮಂಡಲ ಅಧ್ಯಕ್ಷರ ನೇಮಕದ ಬಗ್ಗೆ ಸ್ಥಳೀಯ ಶಾಸಕರ ಜೊತೆಯೂ ಚರ್ಚಿಸಲಾಗಿದೆ. ಆದಷ್ಟು ಶೀಘ್ರವೇ, ಅಲ್ಲಿಗೂ ಮಂಡಲ ಅಧ್ಯಕ್ಷರ ನೇಮಿಸಲಾಗುವುದು' ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News