ಕಳೆದುಹೋದ ದಶಕದಲ್ಲಿ ಕಳೆದುಕೊಂಡದ್ದೇನು?
ಸದ್ದಿಲ್ಲದೆ ಕಳೆದುಹೋಗುತ್ತಿರುವ ಪ್ರಜಾತಂತ್ರ ವ್ಯವಸ್ಥೆಯ ಸೂಕ್ಷ್ಮ ತಂತುಗಳನ್ನು ಹಿಡಿದಿಡುವ ಪ್ರಯತ್ನಗಳು ಸುಶಿಕ್ಷಿತ ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ವಿದ್ರೋಹದಂತೆ ಕಾಣುತ್ತಿದೆ. ಆದ್ದರಿಂದಲೇ ಅಸಹಜ ಸಾವು ನಮ್ಮ ಪ್ರಜ್ಞೆಯನ್ನು ಕದಡುತ್ತಿಲ್ಲ, ಹತ್ಯಾಕಾಂಡಗಳು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ, ದೌರ್ಜನ್ಯಗಳು ನಮ್ಮ ಮನಸ್ಸುಗಳನ್ನು ಘಾಸಿಗೊಳಿಸುತ್ತಿಲ್ಲ.
ಮನುಕುಲ ಮತ್ತೊಂದು ನವ ದಶಕದ ಹೊಸ್ತಿಲಲ್ಲಿದೆ. ಭಾರತ ಮತ್ತೊಂದು ದಶಕದತ್ತ ಕಾತರದಿಂದ ನೋಡುತ್ತಲೇ ಹೊಸ ವರ್ಷಾಚರಣೆಯ ರಾತ್ರಿಯನ್ನು ಕಳೆದು 2020ರ ನವ ವರ್ಷಕ್ಕೆ ಸ್ವಾಗತ ಕೋರುತ್ತಿದೆ. ಕಳೆದ ಒಂದು ದಶಕದಲ್ಲಿ ಭಾರತ ಬದಲಾಗಿದೆ. ಭಾರತೀಯರು ಬದಲಾಗಿದ್ದಾರೆ. ಭಾರತದ ಮನಸ್ಸುಗಳು ಬದಲಾಗಿವೆ. ಆದರೆ ಭಾರತದ ಪುರಾತನ ಸಮಾಜೋ ಸಾಂಸ್ಕೃತಿಕ ವ್ಯವಸ್ಥೆ ಬದಲಾವಣೆಯ ಹಾದಿಯ ನಡುವಿನಲ್ಲೇ ಹಿಮ್ಮುಖವಾಗಿ ಚಲಿಸುತ್ತಾ ಜಡತ್ವದತ್ತ ಸಾಗುತ್ತಿದೆ. ಯಾವುದೇ ದೇಶದ, ಸಮಾಜದ ಮುನ್ನಡೆಯಲ್ಲಿ ಒಂದು ದಶಕ ನಿರ್ಣಾಯಕವಾಗಿ ಪರಿಣಮಿಸುತ್ತದೆ. 2010-20ರ ದಶಕ ಭಾರತದ ಮಟ್ಟಿಗೆ ನಿರ್ಣಾಯಕವೇನೋ ಆಗಿದೆ ಆದರೆ ಇದು ಭಾರತದ ಮೂಲ ಸ್ವರೂಪವನ್ನೇ ವಿಕೃತಗೊಳಿಸುವುದರಲ್ಲಿ ಯಶಸ್ವಿಯಾಗಿದೆ. 60 ವರ್ಷಗಳಲ್ಲಿ ಸಾಧಿಸಲಾಗದುದನ್ನು ಐದು ವರ್ಷಗಳಲ್ಲಿ ಸಾಧಿಸುವ ಛಲ, ಹುಮ್ಮಸ್ಸು ನಿಜಕ್ಕೂ ಫಲ ನೀಡಿದೆ. ಏಕೆಂದರೆ ಸ್ವಾತಂತ್ರ್ಯೋತ್ತರ ಭಾರತದ ಮೊದಲ ಅರವತ್ತು ವರ್ಷಗಳಲ್ಲಿ ಕಂಡರಿಯದ ಸಾಂಸ್ಕೃತಿಕ ಪಲ್ಲಟಗಳು, ಸಾಮಾಜಿಕ ವಿಕೃತಿಗಳು, ರಾಜಕೀಯ ತಲ್ಲಣಗಳು ಈ ದಶಕದಲ್ಲಿ ತಲೆದೋರಿವೆ. ನಿಜ ಭಾರತ ಬದಲಾಗಿದೆ. ಬದಲಾದ ಭಾರತದಲ್ಲಿ ಮನಸ್ಸುಗಳೂ ಬದಲಾಗಿವೆ. ದುರಂತ ಎಂದರೆ ಈ ಬದಲಾವಣೆ ಭಾರತವನ್ನು ಎರಡು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ದಿದೆ.
ಒಂದು ಭೂ ಪ್ರದೇಶದ ಲಕ್ಷಾಂತರ ಜನರನ್ನು ಐದು ತಿಂಗಳ ಕಾಲ ಸಂವಹನದ ಹಕ್ಕುಗಳೂ ಇಲ್ಲದಂತೆ ಬಂಧನದಲ್ಲಿಟ್ಟಿದ್ದರೂ ನಿರುಮ್ಮಳವಾಗಿರುವ ಒಂದು ಸಮಾಜವನ್ನು 21ನೆಯ ಶತಮಾನದ ಮೂರನೆಯ ದಶಕದಲ್ಲಿ ಹೇಗೆ ಊಹಿಸಿಕೊಳ್ಳಲು ಸಾಧ್ಯ? ಇದು ನಮ್ಮಲ್ಲಿ ಸಾಧ್ಯವಾಗಿದೆ. ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭೂ ಪ್ರದೇಶದಲ್ಲಿರುವ ಅಮಾಯಕ ಪ್ರಜೆಗಳು ನಮ್ಮವರಾಗದೆ ಇರುವುದು ಭಾರತದ ನಾಗರಿಕ ಸಮಾಜದ ಬದಲಾದ ಪ್ರಜ್ಞೆಯ ಕುರುಹಾಗಿದೆ. ಕಳೆದ ಒಂದು ದಶಕದ ಭಾರತವನ್ನು ನೋಡುವಾಗ ಇದು ನಮ್ಮ ಪ್ರಜ್ಞೆಯನ್ನು ಕೊಂಚಮಟ್ಟಿಗಾದರೂ ಕದಡದೆ ಇದ್ದರೆ ನಾವು, ಪ್ರಜಾತಂತ್ರ ಮೌಲ್ಯಗಳ ಪರಿವೆಯೇ ಇಲ್ಲದಿದ್ದ ಕಾಲಕ್ಕೆ ಜಾರಿಬಿಟ್ಟಿದ್ದೇವೆ ಎಂದೇ ಅರ್ಥ. ಮುನ್ನಡೆಯ ಮಾರ್ಗವನ್ನು ನಿರ್ಧರಿಸುವ ಮುನ್ನ ಹಿಂಬದಿಯ ಹೆಜ್ಜೆ ಗುರುತುಗಳನ್ನು ಗಮನಿಸದಿದ್ದರೆ ನಮ್ಮ ಪ್ರಜ್ಞೆ ಜಡಗಟ್ಟಿಬಿಡುತ್ತದೆ. ಜಡಗಟ್ಟಿದ ಪ್ರಜ್ಞೆ ಹಿಮ್ಮುಖ ಚಲನೆಯ ಪರಿಚಾರಕರಿಗೆ ಪ್ರಬಲ ಅಸ್ತ್ರವಾಗಿಬಿಡುತ್ತದೆ. ಈಗಾಗಲೇ ಭಾರತದ ಸಮಾಜೋ ಸಾಂಸ್ಕೃತಿಕ ಬದುಕು ಇದನ್ನು ಅನುಭವಿಸಿದೆ. ಕಾಶ್ಮೀರದ ಜನತೆಯ ಉಸಿರುಗಟ್ಟಿದ ಸಂದರ್ಭದಲ್ಲಿ ವಾಸ್ತವಕ್ಕೆ ವಿಮುಖರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟವರು ಇಂದು ತಮ್ಮ ಮೊಬೈಲ್ ನೆಟ್‌ವರ್ಕ್ ಮತ್ತು ಅಂತರ್ಜಾಲ ಸಂಪರ್ಕವನ್ನು ಪ್ರತಿಕ್ಷಣವೂ ಕಾತರದಿಂದ ಗಮನಿಸುವ ಹಂತ ತಲುಪಿರುವುದು ನಮ್ಮ ಕಣ್ಣೆದುರಿನ ಸತ್ಯ. ಪ್ರಜಾತಂತ್ರದ ಕತ್ತುಹಿಸುಕುವ ಪ್ರಯತ್ನಗಳನ್ನು ಮನರಂಜನೆಯಂತೆ ನೋಡುವ ಮನಸ್ಥಿತಿಯಲ್ಲಿರುವ ಸಮಾಜದ ಒಂದು ವರ್ಗ ಈಗ ದಿನನಿತ್ಯ ತಮ್ಮ ಸಂವಹನದ ಹಕ್ಕು ಇರುವುದೋ ಇಲ್ಲವೋ ಎಂದು ಗಮನಿಸುವ ಹಂತ ತಲುಪಿದೆ.
ಈ ಹಿನ್ನೆಲೆಯಲ್ಲೇ ಹತ್ತು ವರ್ಷಗಳ ಹೆಜ್ಜೆಗುರುತುಗಳ ಅವಲೋಕನ ಮಾಡಿದಾಗ ಸಹಜವಾಗಿ ಕಣ್ಣೆದುರು ನಿಲ್ಲುವ ಒಂದು ವಿದ್ಯಮಾನ ಎಂದರೆ ಭಾರತೀಯ ಸಮಾಜದಲ್ಲಿ ಹೆಚ್ಚಾಗುತ್ತಿರುವ ಕ್ರೌರ್ಯ, ಹಿಂಸೆ, ಅಸೂಯೆ, ದ್ವೇಷ, ಮತ್ಸರ ಮತ್ತು ಆಕ್ರಮಣಕಾರಿ ಮನೋಭಾವ. ನಿಜ ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಭಯೋತ್ಪಾದಕ ದಾಳಿಗಳು ನಡೆದಿಲ್ಲ, ಪುಲ್ವಾಮ ಹೊರತುಪಡಿಸಿ. ಒಂದೆರಡು ಸರ್ಜಿಕಲ್ ಸ್ಟ್ರೈಕ್ ಹೊರತುಪಡಿಸಿ ಯಾವುದೇ ಯುದ್ಧ ಭೀತಿ ಎದುರಾಗಿಲ್ಲ. ಬೃಹತ್ ಪ್ರಮಾಣದ ಕೋಮು ದಂಗೆಗಳು ಸಂಭವಿಸಿಲ್ಲ, ಮುಝಫ್ಫರ್‌ನ್ನು ಹೊರತುಪಡಿಸಿ. ಆದರೆ ಈ ರೀತಿಯ ಸಮೂಹ ಕೃತ್ಯಗಳಿಗಿಂತಲೂ ಹೆಚ್ಚು ಅಪಾಯಕಾರಿಯಾದ ಘಟನೆಗಳನ್ನು ಕಂಡಿದ್ದೇವೆ. ನಿರ್ಭಯಾ ಘಟನೆ ಆರಂಭವಾದ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಭಾರತವನ್ನು ತಲೆತಗ್ಗಿಸುವಂತೆ ಮಾಡಿವೆ. ನಿರ್ಭಯಾಳಿಂದ ದಿಶಾರವರೆಗೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯದ ಹಲವು ಆಯಾಮಗಳನ್ನು ಭಾರತದ ಪುರುಷ ಸಮಾಜ ಪ್ರದರ್ಶಿಸುತ್ತಾ ಬಂದಿದೆ. ಅಪರಾಧ ಮತ್ತು ಶಿಕ್ಷೆಯ ದ್ವಂದ್ವದ ನಡುವೆ ಮಾನವ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುವ ಭಾರತದ ನಾಗರಿಕ ಸಮಾಜ ಆತ್ಮವಿಮರ್ಶೆ ಮತ್ತು ಆತ್ಮಾವಲೋಕನದ ಗೊಡವೆಗೇ ಹೋಗದೆ ಗತಕಾಲದ ವೈಭವದಲ್ಲಿ ಮೆರೆಯಲು ಯತ್ನಿಸುತ್ತಿದೆ. ಪುಲ್ವಾಮದಲ್ಲಿ ಮಡಿದ 59 ಯೋಧರು ಹೇಗೆ ಮಡಿದರು ಎಂದು ಪ್ರಶ್ನಿಸುವ ದನಿಯನ್ನೂ ಕಳೆದುಕೊಂಡು ನಿಷ್ಕ್ರಿಯವಾಗಿರುವ ನಾಗರಿಕ ಸಮಾಜ ವರ್ಷಾಂತ್ಯದಲ್ಲಿ ಎನ್‌ಕೌಂಟರ್ ಸಂಸ್ಕೃತಿಯನ್ನು ವಿಜೃಂಭಿಸುವ ಮೂಲಕ ತನ್ನ ಅಂತರಾಳವನ್ನು ಹೊರಗೆಡಹಿದೆ.
ಸ್ವತಂತ್ರ ಭಾರತದ ಮೊದಲ ಆರು ದಶಕಗಳಲ್ಲಿ ಜನಸಾಮಾನ್ಯರು ಹೋರಾಟಗಳ ಮೂಲಕ ಗಳಿಸಿದ ಹಕ್ಕುಗಳನ್ನು ಕಳೆದ ಒಂದು ದಶಕದಲ್ಲಿ ಸದ್ದಿಲ್ಲದೆ ಕಳೆದುಕೊಂಡಿದ್ದೇವೆ. ಆಹಾರ, ಶಿಕ್ಷಣ, ಉದ್ಯೋಗ ಮತ್ತು ಬದುಕು, ನಾಗರಿಕ ಸೌಕರ್ಯ, ಮೂಲ ಸೌಕರ್ಯಗಳು ಮಾರುಕಟ್ಟೆಯ ಕಪಾಟುಗಳಲ್ಲಿ ದೊರೆಯುವ ವಸ್ತುಗಳಾಗಿ ಪರಿಣಮಿಸಿವೆ. ಮನುಷ್ಯನ ಮೂಲಭೂತ ಹಕ್ಕು ಆಹಾರ. ಆದರೆ ಇಂದು ಆಹಾರದ ಹಕ್ಕು ನಿಯಂತ್ರಣಕ್ಕೊಳಪಟ್ಟಿದೆ. ಅಸಾಂವಿಧಾನಿಕ, ಅಗೋಚರ ಶಕ್ತಿಗಳು ಮನುಷ್ಯನ ಆಹಾರ ಸೇವನೆಯನ್ನೂ ನಿಯಂತ್ರಿಸುವ ಕ್ರೂರ ವ್ಯವಸ್ಥೆ ಅನಾವರಣಗೊಂಡಿದ್ದನ್ನು ದಾದ್ರಿಯ ಅಖ್ಲಾಕ್‌ರ ಮೂಲಕ ಕಂಡಿದ್ದೇವೆ. ಈ ಕ್ರೌರ್ಯವನ್ನು ಮೀರಿಸುವಂತಹ ಅಟ್ಟಹಾಸದ ನಗೆಯನ್ನು ಉನಾ ಗ್ರಾಮದ ಜಾತಿದೌರ್ಜನ್ಯದಲ್ಲಿ ಕಂಡಿದ್ದೇವೆ. 2016ರಲ್ಲಿ ನಡೆದ ಅಮಾನ್ಯೀಕರಣ ಪ್ರಕ್ರಿಯೆಯನ್ನು ಒಂದು ರೂಪಕದಂತೆ ನೋಡಿದಾಗ ನಾವು ಸ್ವತಂತ್ರ ಭಾರತದ ಶಿಲ್ಪಿಗಳು ಕಂಡಂತಹ ಎಲ್ಲ ಕನಸುಗಳನ್ನೂ ಅಪಮೌಲ್ಯಗೊಳಿಸಿರುವುದನ್ನು ಗಮನಿಸಬಹುದು. ಪ್ರಜಾತಂತ್ರದ ಕತ್ತು ಹಿಸುಕುವ ಪ್ರಯತ್ನಗಳನ್ನೂ ‘‘ದೇಶದ ಹಿತಾಸಕ್ತಿಯ’’ ದೃಷ್ಟಿಯಿಂದ ಸ್ವಾಗತಿಸುವ ವಿಶಿಷ್ಟ ವಿಕೃತ ಬೆಳವಣಿಗೆಗೆ ಕಳೆದ ಒಂದು ದಶಕ ಸಾಕ್ಷಿಯಾಗಿದೆ.
ನಾವು ಕಳೆದುಕೊಂಡಿರುವುದೇನು? ಈ ಪ್ರಶ್ನೆ ಎದುರಾದಾಗ ಹಲವಾರು ವಿಚಾರಗಳು ಮುಖಾಮುಖಿಯಾಗುತ್ತವೆ. ಏಕೆ ಕಳೆದುಕೊಂಡಿದ್ದೇವೆ? ಈ ಪ್ರಶ್ನೆಗೆ ಉತ್ತರ ಶೋಧಿಸುವಾಗ ಮುಖಾಮುಖಿಯಾದ ವಿಚಾರಗಳು ಮತ್ತಷ್ಟು ಜಟಿಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮೂಲತಃ ಕಳೆದ ಒಂದು ದಶಕದಲ್ಲಿ ಭಾರತದ ನಾಗರಿಕ ಸಮಾಜ ತನ್ನ ಮೂಲ ಸೆಲೆಯನ್ನು ಕಳೆದುಕೊಂಡಿದೆ, ತನ್ನ ಸಂವೇದನೆಯನ್ನು ಕಳೆದುಕೊಂಡಿದೆ, ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ, ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿದೆ. ಹಾಗಾಗಿಯೇ ಒಂದಾದ ಮೇಲೊಂದರಂತೆ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದ್ದರೂ ನಮ್ಮ ಪ್ರಜ್ಞೆ ನಿಷ್ಕ್ರಿಯತೆಯಿಂದ ಹೊರಬರುತ್ತಿಲ್ಲ. ಹೊರಬಂದ ಮನಸ್ಸುಗಳು ಅನ್ಯಗ್ರಹ ಜೀವಿಗಳಂತೆ ಗೋಚರಿಸುತ್ತಿವೆ. ಸದ್ದಿಲ್ಲದೆ ಕಳೆದುಹೋಗುತ್ತಿರುವ ಪ್ರಜಾತಂತ್ರ ವ್ಯವಸ್ಥೆಯ ಸೂಕ್ಷ್ಮ ತಂತುಗಳನ್ನು ಹಿಡಿದಿಡುವ ಪ್ರಯತ್ನಗಳು ಸುಶಿಕ್ಷಿತ ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ವಿದ್ರೋಹದಂತೆ ಕಾಣುತ್ತಿದೆ. ಆದ್ದರಿಂದಲೇ ಅಸಹಜ ಸಾವು ನಮ್ಮ ಪ್ರಜ್ಞೆಯನ್ನು ಕದಡುತ್ತಿಲ್ಲ, ಹತ್ಯಾಕಾಂಡಗಳು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ, ದೌರ್ಜನ್ಯಗಳು ನಮ್ಮ ಮನಸ್ಸುಗಳನ್ನು ಘಾಸಿಗೊಳಿಸುತ್ತಿಲ್ಲ.
ಈ ಸಂದಿಗ್ಧತೆಯನ್ನು ದಾಟಿ ಭಾರತದ ಜನಸಾಮಾನ್ಯರು ತಮ್ಮ ಅಂತರಾಳದ ಆಕ್ರೋಶವನ್ನು ಹೊರಗೆಡಹುತ್ತಿರುವುದನ್ನು ಕಳೆದ ಒಂದು ತಿಂಗಳ ದೇಶವ್ಯಾಪಿ ಪ್ರತಿಭಟನೆಗಳಲ್ಲಿ ಗುರುತಿಸಬಹುದು. ಈ ಪ್ರತಿರೋಧದ ದನಿಗಳಿಗೆ ಮಾನ್ಯತೆ ನೀಡುವ ಸೌಜನ್ಯ ಮತ್ತು ಸಂವೇದನೆಯನ್ನು ಆಡಳಿತ ವ್ಯವಸ್ಥೆ ಕಳೆದುಕೊಂಡಿದ್ದರೂ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ದಿಟ್ಟ ಹೋರಾಟ ನಡೆಸಿರುವ ದೇಶದ ಅಸಂಖ್ಯಾತ ಜನತೆ ಈ ದೇಶದಲ್ಲಿ ಇನ್ನೂ ಉಸಿರಾಡಲು ಅವಕಾಶ ಇದೆ ಎಂದು ನಿರೂಪಿಸುತ್ತಿದ್ದಾರೆ. ಸೌಜನ್ಯ, ಸಭ್ಯತೆ ಮತ್ತು ಸಂವೇದನೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಜನಪ್ರತಿನಿಧಿಗಳ ನಡುವೆಯೇ ಜನಾಭಿಪ್ರಾಯ ಮತ್ತು ಜನತಂತ್ರದ ಉಳಿವಿಗಾಗಿ ಶ್ರಮಿಸುವ ಜಟಿಲ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ 2019 ಒಂದು ಸ್ಪಷ್ಟ ಭೂಮಿಕೆಯನ್ನು ಒದಗಿಸಿದೆ. ನಾಲ್ಕು ದಶಕಗಳ ಬಳಿಕ ದೇಶದ ವಿದ್ಯಾರ್ಥಿ ಯುವಜನರ ದನಿ ಮೊಳಗುತ್ತಿರುವುದು ಆಶಾಭಾವನೆಯನ್ನು ಮೂಡಿಸುವಂತಿದೆ. ಈ ದನಿಗಳನ್ನು ದಮನಿಸುವ ಪ್ರಯತ್ನಗಳು ಅಷ್ಟೇ ಆತಂಕವನ್ನೂ ಹುಟ್ಟಿಸುವಂತಿದೆ.
ನಿಜ ಕಳೆದ ಒಂದು ದಶಕದಲ್ಲಿ ಭಾರತ ಮುನ್ನಡೆದಿದೆ, ಸದೃಢ ಭಾರತದ ಕನಸು ನನಸಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಆದರೆ ಆಂತರಿಕವಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಪರಿಕರಗಳು ಕೃಷವಾಗುತ್ತಿರುವುದನ್ನು ಗಮನಿಸಬೇಕಿದೆ. ಶತಮಾನಗಳಿಂದಲೂ ಭಾರತದ ಸದೃಢತೆಯನ್ನು ಕಾಪಾಡಿಕೊಂಡು ಬಂದಿರುವುದು ಆಳೆತ್ತರದ ಬೇಲಿಗಳಲ್ಲ ಅಥವಾ ಸಶಕ್ತ ಸೇನೆ ಅಲ್ಲ. ಸುತ್ತಲಿನ ಗಡಿ ರೇಖೆಗಳೂ ಅಲ್ಲ. ಆಂತರಿಕವಾಗಿ ಭಾರತವನ್ನು ಕಾಪಾಡಿಕೊಂಡು ಬಂದಿರುವುದು ಈ ದೇಶದ ಬಹುಮುಖಿ ಸಂಸ್ಕೃತಿ, ಬಹುತ್ವದ ಮನಸ್ಸುಗಳು ಮತ್ತು ಈ ಮನಸ್ಸುಗಳಿಗೆ ನೆಲೆಯಾಗಿರುವ ಶ್ರಮಜೀವಿಗಳು. ಕಳೆದ ಒಂದು ದಶಕದಲ್ಲಿ ಈ ಶ್ರಮಜೀವಿಗಳೇ ಹೆಚ್ಚಿನ ದೌರ್ಜನ್ಯಕ್ಕೊಳಗಾಗಿರುವುದು ಎಲ್ಲ ಪ್ರಜ್ಞಾವಂತರನ್ನು ಕಾಡಬೇಕಿರುವ ಸವಾಲು. ಜಾತಿ, ಮತಧರ್ಮ ಮತ್ತು ಸಂಸ್ಕೃತಿಯ ಎಳೆಗಳು ಭಾರತದ ಬಹುತ್ವ ಪರಂಪರೆಯನ್ನು ಬೆಸೆಯುವ ನೂಲುಗಳನ್ನು ಶಿಥಿಲಗೊಳಿಸುವ ಆಯುಧಗಳಾಗಿ ಪರಿಣಮಿಸಿವೆ. ಈ ಆಯುಧಗಳನ್ನು ಹೊತ್ತ ಉನ್ಮತ್ತ ಮನಸ್ಸುಗಳು ಈ ದೇಶದ ನೆಲ ಸಂಸ್ಕೃತಿಯ ಮೇಲೆ ಆಧಿಪತ್ಯ ಸಾಧಿಸಲು ಯತ್ನಿಸುತ್ತಿವೆ.
2020ರ ಹೊಸ ದಶಕದ ಹೊಸ್ತಿಲಲ್ಲಿರುವ ಭಾರತೀಯ ಸಮಾಜ ಈ ಆಧಿಪತ್ಯ ರಾಜಕಾರಣದ ವಾರಸುದಾರರ ವಿರುದ್ಧ ಸೆಣಸಬೇಕಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸೌಹಾರ್ದ ಮತ್ತು ಮನುಜ ಪ್ರೀತಿಗಾಗಿ ಹಂಬಲಿಸುವ ಕೋಟ್ಯಂತರ ಮನಸ್ಸುಗಳನ್ನು ಸದೃಢ ಭಾರತದ ನಿರ್ಮಾಣದತ್ತ ಕರೆದೊಯ್ಯಬೇಕಾದರೆ 1947ರ ಸಂದರ್ಭದ ಕನಸುಗಳನ್ನು ಮತ್ತೊಮ್ಮೆ ಪುನರುಚ್ಚರಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದೇವೆ. ಕಳೆದುಹೋದ ದಶಕದಲ್ಲಿ ಕಳೆದುಕೊಂಡ ಮೌಲ್ಯಗಳನ್ನು ಮತ್ತೊಮ್ಮೆ ಕಳೆದುಕೊಳ್ಳದೆ ದೃಢ ನಿಶ್ಚಯದಿಂದ ಮುನ್ನಡೆಯುವ ಸಂಕಲ್ಪದೊಂದಿಗೆ ಪ್ರಜಾಸತ್ತೆಯ ಉಸಿರನ್ನು ಹಸಿರಾಗಿರಿಸುವತ್ತ ಕಾರ್ಯಪ್ರವೃತ್ತರಾಗೋಣ.