ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ: ಸಂಪುಟ ವಿಸ್ತರಣೆ ಬಗ್ಗೆ ಶಿವಸೇನೆ

Update: 2020-01-02 18:53 GMT

ಮುಂಬೈ, ಜ.2: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ(ಎಂವಿಎ) ಸರಕಾರದ ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ.

ಖಾತೆ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ನ ಮುಖಂಡರೊಳಗೆ ಅಸಮಾಧಾನ ಹೊಗೆಯಾಡಿದೆ. ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೊರಾಟ್ ಮಧ್ಯೆ ಕಂದಾಯ ಖಾತೆಗೆ ತಿಕ್ಕಾಟ ನಡೆದಿದೆ. ಈ ವಿಷಯ ಯಾವ ರೀತಿ ಇತ್ಯರ್ಥವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಸಂಪುಟ ವಿಸ್ತರಣೆಯ ಬಳಿಕ ಮೂರೂ ಪಕ್ಷದ ಶಾಸಕರಲ್ಲಿ ಅಸಮಾಧಾನ ಮೂಡಿದೆ. ಸಂಪುಟ ವಿಸ್ತರಣೆಯ ಬಳಿಕ ಅಸಮಾಧಾನ ಮಾಮೂಲು ವಿಷಯವಾಗಿದೆ. ಈ ಹಿಂದಿನ ಬಿಜೆಪಿ ನೇತೃತ್ವದ ಸರಕಾರದಲ್ಲೂ ಇದು ನಡೆದಿದೆ. ಆದರೆ ಇದನ್ನು ಮರೆತಂತೆ ನಾಟಕವಾಡುತ್ತಿರುವ ಬಿಜೆಪಿ, ಈಗ ಎದ್ದಿರುವ ಅಸಮಾಧಾನದ ಬಗ್ಗೆ ಖುಷಿ ಪಡುತ್ತಾ ಸಂಭ್ರಮಿಸುತ್ತಿದೆ ಎಂದು ಶಿವಸೇನೆ ಟೀಕಿಸಿದೆ.

 ಕಾಂಗ್ರೆಸ್ ಮುಖಂಡ ಸಂಗ್ರಾಮ್ ಥೋಪ್ಟೆ ಬೆಂಬಲಿಗರು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ದಾಂಧಲೆಯನ್ನು ಟೀಕಿಸಿರುವ ಶಿವಸೇನೆ, ಈ ಹಿಂದೆ ಶಿವಸೇನೆಯ ಕಾರ್ಯಕರ್ತರ ಪ್ರತಿಭಟನೆಯನ್ನು ‘ಗೂಂಡಾ ಕೃತ್ಯ’ ಎಂದು ಟೀಕಿಸಿದ್ದ ಕಾಂಗ್ರೆಸ್ ಮುಖಂಡರ ಬೆಂಬಲಿಗರು ಈಗ ಅದನ್ನೇ ಮಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಗೆ ಹೇಳಿಸಿದ್ದಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News