ಪಶ್ಚಿಮ ಬಂಗಾಳ, ಮಹಾರಾಷ್ಟ್ರ ನಂತರ ಕೇರಳದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿದ ಸರಕಾರ

Update: 2020-01-03 09:16 GMT

ಹೊಸದಿಲ್ಲಿ: ಗಣರಾಜ್ಯೋತ್ಸವ ಪರೇಡಿಗೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯಗಳ ಟ್ಯಾಬ್ಲೋಗಳನ್ನು ಈಗಾಗಲೇ ತಿರಸ್ಕರಿಸಿರುವ ಕೇಂದ್ರ ರಕ್ಷಣಾ ಸಚಿವಾಲಯ ಇದೀಗ ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ತಿರಸ್ಕರಿಸಿದೆ.

ಕೇರಳದ ಪ್ರಸ್ತಾವಿತ ಟ್ಯಾಬ್ಲೋ ಅಲ್ಲಿನ ಸಾಂಪ್ರದಾಯಿಕ ಕಲೆ ಹಾಗೂ ಸಂಸ್ಕೃತಿಯಾದ ಥೆಯ್ಯಂ ಹಾಗೂ ಕಲಾಮಂಡಲಂ ಅನ್ನು ಬಿಂಬಿಸುವ ಉದ್ದೇಶ ಹೊಂದಿತ್ತು.

ಕೇರಳದ ಟ್ಯಾಬ್ಲೋ ಪ್ರಸ್ತಾವ ತಿರಸ್ಕರಿಸಿರುವ  ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಕೇರಳ ಕಾನೂನು ಸಚಿವ ಎ ಕೆ ಬಾಲನ್ ಆರೋಪಿಸಿದ್ದಾರೆ.

"ಕೇಂದ್ರ ಸರಕಾರದ ನಿರ್ಧಾರ ದುರದೃಷ್ಟಕರ ಎಂದು ಬಣ್ಣಿಸಿದ ಅವರು  ಕೇರಳದ ಸಾಂಸ್ಕೃತಿಕ ಸೊಗಡನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದ ಟ್ಯಾಬ್ಲೋವನ್ನು ಅವರೇಕೆ  ತಿರಸ್ಕರಿಸುತ್ತಿದ್ದಾರೆ?'' ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ರಾಜ್ಯಗಳ ಟ್ಯಾಬ್ಲೋ ಪ್ರಸ್ತಾವ ತಿರಸ್ಕರಿಸಿದ್ದಕ್ಕೆ ಶಿವಸೇನೆ, ಟಿಎಂಸಿ ಹಾಗೂ ರಾಷ್ಟ್ರೀಯ ಜನತಾ ದಳ ಈಗಾಗಲೇ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಗಣರಾಜ್ಯೋತ್ಸವ ಪರೇಡಿಗೆ ಕೇಂದ್ರ ಒಟ್ಟು 22 ಟ್ಯಾಬ್ಲೋ ಪ್ರಸ್ತಾವಗಳನ್ನು ಆರಿಸಿದೆ. ಇದರಲ್ಲಿ 16 ಟ್ಯಾಬ್ಲೋಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳದ್ದಾಗಿದ್ದರೆ, ಆರು ಟ್ಯಾಬ್ಲೋಗಳು ವಿವಿಧ ಇಲಾಖೆಗಳು ಹಾಗೂ ಸಚಿವಾಲಯಗಳದ್ದಾಗಿವೆ.

ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸಗಢ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಹಾಗೂ ಉತ್ತರ ಪ್ರದೇಶದ ಟ್ಯಾಬ್ಲೋ ಪ್ರಸ್ತಾವಗಳಿಗೆ ಕೇಂದ್ರದ ಅನುಮೋದನೆ ದೊರೆತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News