6 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿ, 90 ವರ್ಷದ ವೃದ್ಧರಿಗೆ ನೋಟಿಸ್ ಜಾರಿಗೊಳಿಸಿದ ಉ.ಪ್ರದೇಶ ಪೊಲೀಸರು

Update: 2020-01-03 09:19 GMT

ಲಕ್ನೋ: ಉತ್ತರ ಪ್ರದೇಶದ ವಿವಿಧೆಡೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ದಮನಿಸಲು ಬಲಪ್ರಯೋಗ ನಡೆಸಿದ ರಾಜ್ಯ ಪೊಲೀಸರ ಕ್ರಮ ವಿವಾದಕ್ಕೀಡಾಗಿದೆ. ಇನ್ನೊಂದೆಡೆ ಪ್ರತಿಭಟನೆ ನಡೆಸಿ ಶಾಂತಿಗೆ ಭಂಗ ತರುವ ಸಾಧ್ಯತೆಯಿದೆಯೆಂದು ಫಿರೋಝಾಬಾದ್ ಪೊಲೀಸರಿಂದ ನೋಟಿಸ್ ಪಡೆದ ಹಲವರಲ್ಲಿ ಮೃತ ವ್ಯಕ್ತಿಯೊಬ್ಬರೂ ಸೇರಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗಳ ನಂತರ ಪೊಲೀಸರು ಸುಮಾರು 200 ಮಂದಿಗೆ ಐಪಿಸಿ ಸೆಕ್ಷನ್ 107/16 ಅನ್ವಯ ನೋಟಿಸ್ ಜಾರಿಗೊಳಿಸಿದ್ದರು. ಈ 200 ಮಂದಿಯಲ್ಲಿ ಆರು ವರ್ಷಗಳ ಹಿಂದೆ ಮೃತಪಟ್ಟ ಬನ್ನೇ ಖಾನ್ ಹೆಸರು ಕೂಡ ಇದೆ. ಇದನ್ನು ದೃಢೀಕರಿಸಿದ ಖಾನ್ ಅವರ ಪುತ್ರ ಮುಹಮ್ಮದ್ ಸರ್ಫರಾಝ್, ಪೊಲೀಸರು ಸರಿಯಾಗಿ ಪರಾಮರ್ಶಿಸಿ ಇಂತಹ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ತಮ್ಮ ತಂದೆಯ ಮರಣ ಪ್ರಮಾಣಪತ್ರವೂ ತಮ್ಮ ಬಳಿಯಿದೆ ಎಂದು ಅವರು ತಿಳಿಸಿದ್ದಾರೆ.

ಖಾನ್ ಹೊರತಾಗಿ ಕೆಲ 90 ವರ್ಷದ ದಾಟಿದ ವ್ಯಕ್ತಿಗಳಿಗೂ ನೋಟಿಸ್ ಜಾರಿಯಾಗಿದೆ. ಇವರ ಪೈಕಿ 93 ವರ್ಷದ  ಸಮಾಜ ಸೇವಕ ಫಸಾಹತ್ ಮೀರ್ ಖಾನ್ ಕೂಡ ಒಬ್ಬರು.

"ಮೀರ್ ಖಾನ್ ಒಬ್ಬ ಸಮಾಜ ಸೇವಕ ಹಾಗೂ ರಾಷ್ಟ್ರಪತಿ ಭವನದಲ್ಲಿ ಹಿಂದೆ ಮಾಜಿ ರಾಷ್ಟ್ರಪತಿ ಕಲಾಂ ಅವರನ್ನು ಭೇಟಿಯಾಗಿದ್ದರು. ಅವರಿಗೆ ಇಂತಹ ನೋಟಿಸ್ ಏಕೆ ಜಾರಿಗೊಳಿಸಲಾಗಿದೆ ಎಂದು ತಿಳಿದಿಲ್ಲ'' ಎಂದು ಅವರ ಪುತ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಪಟ್ಟಿಯಲ್ಲಿರುವವರಿಗೆ ಸರಕಾರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ರೂ 10 ಲಕ್ಷ ಬಾಂಡ್ ಸಲ್ಲಿಸಿ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಹೇಳಲಾಗಿದೆ. "ಆದರೆ ಪಟ್ಟಿಯಲ್ಲಿ ಕೆಲವು ಅಮಾಯಕರ ಹೆಸರು ಪ್ರಮಾದದಿಂದ ಸೇರಿಕೊಂಡಿದೆ. ಶಾಂತಿ ಕಾಪಾಡಲು ಬಹಳಷ್ಟು ಒತ್ತಡವಿತ್ತು. ವಿವಿಧ ಠಾಣೆಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿತ್ತು'' ಎಂದು ಫಿರೋಝಾಬಾದ್ ಮ್ಯಾಜಿಸ್ಟ್ರೇಟ್ ಕುನ್ವರ್ ಪಂಕಜ್ ಸಿಂಗ್ ಹೇಳಿದ್ದಾರೆ. ಪಟ್ಟಿಯಲ್ಲಿ ಹೆಸರಿರುವ ಅಮಾಯಕ ಹಿರಿಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಸ್ಥಳೀಯ ಮಸೀದಿಯಲ್ಲಿ 58 ವರ್ಷ ಸೇವೆ ಸಲ್ಲಿಸಿದ್ದ 90 ವರ್ಷದ ಶುಫಿ ಅನ್ಸಾ ಹುಸೇನ್ ಎಂಬವರಿಗೂ ನೋಟಿಸ್ ಜಾರಿಯಾಗಿದೆ ಎಂದು ಇನ್ನೊಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News