ಎನ್‌ಆರ್‌ಸಿ ವಿರೋಧಿ ಕರಪತ್ರ ವಿತರಣೆ: ಮೂವರು ಸಾಮಾಜಿಕ ಕಾರ್ಯಕರ್ತರ ಬಂಧನ

Update: 2020-01-03 14:46 GMT

ಲಕ್ನೋ,ಡಿ.3: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಕರಪತ್ರಗಳನ್ನು ವಿತರಿಸುವ ಮೂಲಕ ಜನರ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ಮೂವರು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದ ಹಿಂದಿನ ದಿನವಾದ ಡಿಸೆಂಬರ್ 18ರಂದು ನಾರಿಯಾ ತಿರಾಹಾ ಪ್ರದೇಶದ ರಸ್ತೆಯೊಂದರಲ್ಲಿ ಎಸೆಯಲ್ಪಟ್ಟಿದ್ದ ಕರಪತ್ರಗಳನ್ನು ಪೊಲೀಸರು ಪತ್ತೆಹಚ್ಚಿದ್ದರು. ಅದನ್ನು ವಿತರಿಸುತ್ತಿದ್ದವರು ಪರಾರಿಯಾಗಿದ್ದರು. ಕರಪತ್ರದಲ್ಲಿ ನಮೂದಿಸಲಾಗಿದ್ದ ದೂರವಾಣಿ ಸಂಖ್ಯೆಯು ಸಾಮಾಜಿಕ ಕಾರ್ಯಕರ್ತರಾದ ಮನೀಶ್ ಶರ್ಮಾ, ಅನೂಪ್ ಶ್ರಮಿಕ್ ಹಾಗೂ ಎಸ್‌ಪಿ ರಾಯ್ ಅವರದ್ದೆಂದು ಪೊಲೀಸರು ಜನವರಿ 2ರಂದು ಪತ್ತೆಹಚ್ಟಿದ್ದರು. ಆನಂತರ ಈ ಮೂವರ ವಿರುದ್ಧ ಭಾರತೀಯ ದಂಡಸಂಹಿತೆಯ 153ಎ ಹಾಗೂ 153ಬಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು.

   ಡಿಸೆಂಬರ್ 19ರಂದು ಪ್ರತಿಭಟನೆ ನಡೆಸುವಂತೆ ಕರೆಪತ್ರದಲ್ಲಿ ಕರೆ ನೀಡಲಾಗಿತ್ತು. ಸಂವಿಧಾನ ವಿರೋಧಿ ಹಾಗೂ ಬಡವರ ವಿರೋಧಿಯಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಹಿಪಡೆಯಬೇಕೆಂದು ಕರಪತ್ರದಲ್ಲಿ ಆಗ್ರಹಿಸಲಾಗಿತ್ತು. ಕಾಯ್ದೆಯ ವಿರುದ್ಧ ಪ್ರತಿಭಟಿಸಲು ಅಶ್ಫಾಖುಲ್ಲಾ ಖಾನ್ ಹಾಗೂ ರಾಮ್‌ಪ್ರಸಾದ್ ಬಿಸ್ಮಿಲ್ ಅವರ ಬಲಿದಾನದ ವರ್ಷಾಚರಣೆಯ ದಿನದಂದು ಬೆನಿಯಾಭಾಗ್‌ನಲ್ಲಿ ಸಭೆಸೇರುವಂತೆ ಕರೆ ನೀಡಲಾಗಿತ್ತು.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಿಂದಾಗಿ ಜನಸಾಮಾನ್ಯರಿಗಾದ ಬವಣೆಗಳನ್ನು ಕರಪತ್ರದಲ್ಲಿ ವಿವರಿಸಲಾಗಿತ್ತು. ಆ ರಾಜ್ಯದಲ್ಲಿ ಸುಮಾರು 15 ಲಕ್ಷ ಹಿಂದೂಗಳು ಹಾಗೂ 4 ಲಕ್ಷ ಮುಸ್ಲಿಮರನ್ನು ಎನ್‌ಆರ್‌ಸಿಯಿಂದ ಹೊರಗಿಡಲಾಗಿತ್ತು. ಒಂದು ವೇಳೆ ಇದನ್ನು ದೇಶಾದ್ಯಂತ ಜಾರಿಗೊಳಿಸಿದಲ್ಲಿ, ಎಷ್ಟು ಕೋಟಿ ಹಿಂದೂಗಳು ಹಾಗೂ ಮುಸ್ಲಿಮರು ಬಂಧನಕೇಂದ್ರಗಳಲ್ಲಿ ನರಕಯಾತನೆಯೊಂದಿಗೆ ಉಳಿದುಕೊಳ್ಳುವುದನ್ನು ಊಹಿಸಿ ಎಂದು ಪತ್ರದಲ್ಲಿ ಹೇಳಲಾಗಿತ್ತು.

ಸಿಎಎ ಹಾಗೂ ಎನ್‌ಆರ್‌ಸಿ ಸಂವಿಧಾನದ ಜಾತ್ಯತೀತ ಸಿದ್ಧಾಂತಕ್ಕೆ ವಿರುದ್ಧವಾದುದಾಗಿವೆ ಎಂದು ಕರಪತ್ರ ಬಣ್ಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News