ಸಾವರ್ಕರ್ ಕುರಿತ ಕೈಪಿಡಿ ನಿಷೇಧಿಸಲು ಸಾವರ್ಕರ್ ಮೊಮ್ಮಗ ಆಗ್ರಹ

Update: 2020-01-03 16:38 GMT

ಹೊಸದಿಲ್ಲಿ, ಜ. 3: ಹಿಂದೂ ಮಹಾಸಭಾದ ಸಹ ಸಂಸ್ಥಾಪಕ ವಿನಾಯಕ ದಾಮೋದರ್ ಸಾವರ್ಕರ್‌ಗೆ ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯೊಂದಿಗೆ ದೈಹಿಕ ಸಂಬಂಧ ಇತ್ತು ಎಂದು ಪ್ರತಿಪಾದಿಸುವ ಕಾಂಗ್ರೆಸ್‌ನ ಕೈಪಿಡಿಯನ್ನು ನಿಷೇಧಿಸುವಂತೆ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಶುಕ್ರವಾರ ಮಧ್ಯಪ್ರದೇಶ ಸರಕಾರವನ್ನು ಆಗ್ರಹಿಸಿದ್ದಾರೆ.

ಶಿಬಿರದ ವೇಳೆ ಈ ಕೈಪಿಡಿ ವಿತರಿಸಿರುವುದರಿಂದ ಕಾಂಗ್ರೆಸ್ ಸೇವಾ ದಳದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಹೇಳಿದ್ದಾರೆ. ‘‘ಸಾವರ್ಕರ್ ಮಾನ ಹಾನಿಗೆ ಕಾಂಗ್ರೆಸ್ ಯತ್ನಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ವಿರುದ್ಧ ಅನಗತ್ಯದ ಆರೋಪಗಳನ್ನು ಮಾಡುವ ಮೂಲಕ ದೇಶದಲ್ಲಿ ಅರಾಜಕತೆ ಹರಡಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ. ಕಾಂಗ್ರೆಸ್ ಸೇವಾ ದಳದ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಅದರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’’ ಎಂದು ರಂಜಿತ್ ಸಾವರ್ಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ಐಪಿಸಿಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಧ್ಯಪ್ರದೇಶ ಸರಕಾರ ಈ ಕೈಪಿಡಿಯನ್ನು ನಿಷೇಧಿಸಬೇಕು’’ ಎಂದು ಅವರು ಹೇಳಿದರು. ‘ವೀರ ಸಾವರ್ಕರ್ ಕಿತ್ನೆ ವೀರ್ ?’ ಶೀರ್ಷಿಕೆಯುಳ್ಳ ಕೈಪಿಡಿಯನ್ನು ಕಾಂಗ್ರೆಸ್‌ನ ಸೇವಾ ದಳದ 10 ದಿನಗಳ ಶಿಬಿರದಲ್ಲಿ ವಿತರಿಸಲಾಗಿತ್ತು. ಪುರಾವೆಗಳ ಆಧಾರದಲ್ಲಿ ಲೇಖಕರು ಈ ಪುಸ್ತಕ ಬರೆದಿದ್ದಾರೆ ಎಂದು ಕಾಂಗ್ರೆಸ್ ಸೇವಾದಳದ ರಿಷ್ಠ ಲಾಲ್‌ಜಿ ದೇಸಾಯಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News