ಬಾಂಗ್ಲಾದಲ್ಲಿ ಉತ್ತರ ಪ್ರದೇಶ ಕಂಡ ಇಮ್ರಾನ್ ಖಾನ್!

Update: 2020-01-04 04:22 GMT

ಹೊಸದಿಲ್ಲಿ, ಜ.4: ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಲು ಹೊರಟ ಪಾಕಿಸ್ತಾನಿ ಪ್ರಧಾನಿ ಇಮ್ರಾನ್‌ ಖಾನ್ ಟ್ವೀಟ್ ಮಾಡಿದ ವೀಡಿಯೊ ವಾಸ್ತವವಾಗಿ ಬಾಂಗ್ಲಾದೇಶದ್ದು ಹಾಗೂ ಏಳು ವರ್ಷ ಹಳೆಯದು ಎನ್ನುವುದು ದೃಢಪಟ್ಟಿದೆ.

ಪಾಕಿಸ್ತಾನದ ನಂಕಾನಾ ಸಾಹಿನ್‌ನಲ್ಲಿ ಗುರುದ್ವಾರ ಧ್ವಂಸ ಪ್ರಕರಣದಿಂದಾಗಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಇಮ್ರಾನ್‌ಖಾನ್ ಟ್ವೀಟ್ ಮಾಡಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ಇಮ್ರಾನ್‌ಖಾನ್ ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಮುಸ್ಲಿಮರ ವಿರುದ್ಧ ಪೊಲೀಸರು ಉತ್ತರ ಪ್ರದೇಶದಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸರಣಿ ಟ್ವೀಟ್ ಮಾಡಲಾಗಿತ್ತು. "ಇಂಡಿಯನ್ ಪೊಲೀಸ್ ಪೊಗ್ರೋಮ್ ಅಗನೆಸ್ಟ್ ಮುಸ್ಲಿಂಸ್ ಇನ್ ಯುಪಿ" ಎಂಬ ಶೀರ್ಷಿಕೆಯೊಂದಿಗೆ ಸಮವಸ್ತ್ರದಲ್ಲಿದ್ದವರು ವ್ಯಕ್ತಿಯೊಬ್ಬನನ್ನು ಥಳಿಸುತ್ತಿರುವ ವೀಡಿಯೊ ಟ್ವೀಟ್ ಮಾಡಿದ್ದರು.

ಟ್ವಿಟ್ಟರ್ ಬಳಕೆದಾರರು ತಕ್ಷಣವೇ ಇದನ್ನು ಪತ್ತೆ ಮಾಡಿ ಇದು 2013ರಲ್ಲಿ ಹೆಫಾಝತ್-ಇ-ಇಸ್ಲಾಮ್ 3ರಲ್ಲಿ ಬಾಂಗ್ಲಾದೇಶ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಬಹಿರಂಗಪಡಿಸಿದರು. ಉತ್ತರ ಪ್ರದೇಶ ಪೊಲೀಸರು ಕೂಡಾ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನಿ ಪ್ರಧಾನಿ ನಕಲಿ ವಿಡಿಯೊ ಟ್ವೀಟ್ ಮಾಡಿ ಭಾರತದ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ತಕ್ಷಣ ಆ ಟ್ವೀಟ್ ಕಿತ್ತುಹಾಕಲಾಗಿದೆ. ಸುಳ್ಳು ಸುದ್ದಿ ಹಬ್ಬಿಸುವ ಇಮ್ರಾನ್ ಪ್ರಯತ್ನವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಟೀಕಿಸಿದೆ. "ಟ್ವೀಟ್ ಫೇಕ್ ನ್ಯೂಸ್. ಗೆಟ್ ಕಾಟ್. ಡಿಲೀಟ್ ಟ್ವೀಟ್, ರಿಪೀಟ್" ಎಂದು "ಓಲ್ಡ್ ಹ್ಯಾಬಿಟ್ಸ್ ಡೈ ಹಾರ್ಡ್" ಹ್ಯಾಷ್‌ಟ್ಯಾಗ್‌ನಡಿ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News