ಖಾತೆ ಸಿಗದ ಆಕ್ರೋಶ: ಶಿವಸೇನೆಯ ಶಾಸಕ ಅಬ್ದುಲ್ ಸತ್ತಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ?

Update: 2020-01-04 09:35 GMT

ಮುಂಬೈ, ಜ.4: ಮರಾಠವಾಡ ವಲಯದ ಔರಂಗಾಬಾದ್ ಜಿಲ್ಲೆಯ ಸಿಲ್ಲೊಡ್ ವಿಧಾನಸಭೆಯ ಶಿವಸೇನೆಯ ಶಾಸಕ ಅಬ್ದುಲ್ ಸತ್ತಾರ್ ಮಹಾ ವಿಕಾಸ ಅಘಾಡಿ ಸರಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

 ಅಸೆಂಬ್ಲಿ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷದಿಂದ ಶಿವಸೇನೆಗೆ ಪಕ್ಷಾಂತರವಾಗಿದ್ದ ಸತ್ತಾರ್ ಇತ್ತೀಚೆಗೆ ವಿಸ್ತರಣೆಯಾದ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿಕೂಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯ ಸಚಿವ ಸಂಪುಟದಲ್ಲಿ ತನಗೆ ಸರಿಯಾದ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ನಾವು ಈ ತನಕ ಸತ್ತಾರ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದು ಶಿವಸೇನೆಯ ಹಿರಿಯ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ.

ಪಕ್ಷದ ಇನ್ನೋರ್ವ ಹಿರಿಯ ನಾಯಕ, ಸಂಸದ ಸಂಜಯ್ ರಾವತ್ ಈ ಕುರಿತು ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅಬ್ದುಲ್ ಸತ್ತಾರ್ ಅವರೊಂದಿಗೆ ಮಾತನಾಡಲಿದ್ದಾರೆ. ಯಾವುದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯಾದಾಗ ಕೆಲವು ನಾಯಕರು ಅಸಮಾಧಾನ ಹೊರಹಾಕುತ್ತಾರೆ. ಇದು ಮಹಾ ವಿಕಾಸ್ ಅಘಾಡಿ. ಶಿವಸೇನೆಯ ಸರಕಾರವಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅವರು ಹೊರಗಿನಿಂದ ಬಂದವರಾಗಿದ್ದರೂ ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News