ವರ್ಗಾವಣೆಗಾಗಿ ಭಾರೀ ಲಂಚ: ಹೊಸ ವಿವಾದದಲ್ಲಿ ಉ.ಪ್ರದೇಶ ಪೊಲೀಸ್ ಇಲಾಖೆ

Update: 2020-01-04 17:35 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ. 4: ಪೊಲೀಸ್ ನಿಯೋಜನೆ ಸುತ್ತ ಲಂಚದ ದಂಧೆ ಕುರಿತು ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ ಬಳಿಕ ತನ್ನನ್ನು ಸೆಕ್ಸ್ ಸಂಭಾಷಣೆ ವೀಡಿಯೊದಲ್ಲಿ ಸಿಲುಕಿಸಲಾಗಿದೆ ಎಂದು ನೋಯ್ಡಾ‌ದ ಹಿರಿಯ ಪೊಲೀಸ್ ಅಧೀಕ್ಷಕ ವೈಭವ್ ಕೃಷ್ಣ ಹೇಳಿರುವುದರಿಂದ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಆತಂಕಕ್ಕೆ ಒಳಗಾಗಿದೆ.

ಪೊಲೀಸ್ ನಿಯೋಜನೆ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿ ಹಾಗೂ ವರ್ಗಾವಣೆ ಕೋರುವವರ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿರುವ ಪತ್ರಕರ್ತರ ನಡುವಿನ ದೂರವಾಣಿ ಸಂಭಾಷಣೆಯ ರೆಕಾರ್ಡ್ ಅನ್ನು ತಾನು ಮುಖ್ಯಮಂತ್ರಿ ಕಚೇರಿಗೆ ನೀಡಿದ್ದೇನೆ ಎಂದು ವೈಭವ್ ಕೃಷ್ಣ ಹೇಳಿದ್ದಾರೆ. ಆದರೆ, ಈ ಹಗರಣದಲ್ಲಿ ಭಾಗಿಯಾಗಿರುವ ಯಾವೊಬ್ಬ ಪೊಲೀಸ್ ಅಧಿಕಾರಿಯ ಹೆಸರು ಹಾಗೂ ರೆಕಾರ್ಡಿಂಗ್ ಅನ್ನು ಎಲ್ಲಿಂದ ಪಡೆದುಕೊಳ್ಳಲಾಗಿದೆ ಎಂಬುದನ್ನು ಅವರು ಹೇಳಿಲ್ಲ.

ವೈಭವ್ ಕೃಷ್ಣ ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದ ಪತ್ರಗಳ ಪ್ರತಿಯನ್ನು ಶುಕ್ರವಾರ ಬೆಳಗ್ಗೆ ಹಲವು ಪತ್ರಕರ್ತರು ಪಡೆದಿದ್ದರು. ನೋಯ್ಡಾದಲ್ಲಿ ಆಗಸ್ಟ್ 23ರಂದು ಕೆಲವು ಪತ್ರಕರ್ತರು ಸೇರಿದಂತೆ ನಾಲ್ವರ ಬಂಧನವಾಗಲು ಕಾರಣವಾದ ಪ್ರಕರಣದ ಕುರಿತ ತನಿಖೆ ಸಂದರ್ಭ ನಡೆದಿರುವ ಭ್ರಷ್ಟಾಚಾರದ ವಿವರಗಳನ್ನು ಈ ಪತ್ರ ಉಲ್ಲೇಖಿಸಿತ್ತು. ರಾಜ್ಯಸರಕಾರಕ್ಕೆ ಬರೆದ ರಹಸ್ಯ ಪತ್ರವನ್ನು ಸೋರಿಕೆ ಮಾಡಿದ ಕುರಿತು ವಿವರಣೆ ನೀಡುವಂತೆ ಉತ್ತರಪ್ರದೇಶ ಡಿಜಿಪಿ ಒ.ಪಿ. ಸಿಂಗ್ ಶುಕ್ರವಾರ ವೈಭವ್ ಕೃಷ್ಣ ಅವರಿಗೆ ಸೂಚಿಸಿದ್ದರು.

 ಲಕ್ನೋದಲ್ಲಿ ದಿಢೀರ್ ಪತ್ರಿಕಾಗೋಷ್ಠಿ ಏರ್ಪಡಿಸಿದ ಡಿಜಿಪಿ ಒ.ಪಿ. ಸಿಂಗ್, ರಹಸ್ಯ ಪತ್ರವನ್ನು ಸಾಮೂಹಿಕ ಸೋರಿಕೆ ಮಾಡುವ ಮೂಲಕ ಸೇವಾ ನಿಯಮಗಳನ್ನು ಗಾಳಿಗೆ ತೂರಿರುವ ಕುರಿತು ವೈಭವ್ ಕೃಷ್ಣ ಅವರು 15 ದಿನಗಳ ಒಳಗೆ ವಿವರಣೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ. ಈ ನಡುವೆ ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಆರೋಪಿಸಿ ಸರಕಾರದ ಎಲ್ಲ ಸರಕಾರಿ ಇಲಾಖೆಗಳ ಕಾರ್ಯವೈಖರಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

 ‘‘ರಾಜ್ಯ ಭ್ರಷ್ಟಾಚಾರ ಹಾಗೂ ಲಂಚದಿಂದ ತೊಂದರೆಗೆ ಒಳಗಾಗಿದೆ. ಸರಕಾರದ ಎಲ್ಲ ಇಲಾಖೆಗಳ ಕಾರ್ಯ ವೈಖರಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಆಗ ಮಾತ್ರ ಜನರನ್ನು ಈ ಸಮಸ್ಯೆಯಿಂದ ಪಾರು ಮಾಡಲು ಸಾಧ್ಯ’’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ. 2019ರ ಆರಂಭದಲ್ಲಿ ನೋಯ್ಡಾದ ಹಿರಿಯ ಪೊಲೀಸ್ ಅಧೀಕ್ಷಕ ಕೃಷ್ಣಾ ಉತ್ತರಪ್ರದೇಶ ಪೊಲೀಸ್ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದ್ದರು. ನಿಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ರಾಜಕೀಯ ಸಂಪರ್ಕ ಇರುವ ಖಾಸಗಿ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ತಿಳಿಸಿದ್ದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲವು ಅತಿಸೂಕ್ಷ್ಮ ಪ್ರಕರಣಗಳ ವರದಿಯನ್ನು ಅವರು ಲಕ್ನೋದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News