ಜೀವಸೆಲೆಯೇ ಕಾಣಿಸದ ಚಿತ್ರ 'ರಾಜೀವ'

Update: 2020-01-04 17:44 GMT

ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ರಾಜೀವನ ಪಾತ್ರವನ್ನು ಸ್ಫೂರ್ತಿಯಾಗಿ ಇರಿಸಿಕೊಂಡು ಮಾಡಿರುವ ಚಿತ್ರವೆಂದು ರಾಜೀವ ಚಿತ್ರದ ನಿರ್ದೇಶಕರು ಹೇಳಿದ್ದರು. ಆದರೆ ಚಿತ್ರ ನೋಡಿದ ಬಳಿಕ ಇದು ಕಾಗೆ ಬಂಗಾರ ಎಂದು ಹೇಳುತ್ತಿದ್ದಾನೆ ಪ್ರೇಕ್ಷಕ.

ರೈತನ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಚಿತ್ರ ಒಪ್ಪಿಕೊಂಡಿದ್ದಾರೆ ಎಂದು ಆರಂಭದಲ್ಲಿ ನಗರದ ಕಾಲೇಜೊಂದರಲ್ಲಿ ಐಎಎಸ್ ವಿದ್ಯಾರ್ಥಿಯಾಗಿರುವ ರಾಜೀವನನ್ನು ತೋರಿಸಲಾಗುತ್ತದೆ. ಕೊನೆಯಲ್ಲಿ ರೈತನಾಗುತ್ತಾನೆ ಎಂದು ಮೊದಲೇ ನಿರೀಕ್ಷೆ ಮಾಡಬಹುದು. ಇದನ್ನು ಆರಂಭದಲ್ಲೇ ಕೊಡುತ್ತಾರೆ ನಿರ್ದೇಶಕರು. ಹಳ್ಳಿ ಮನೆಯಲ್ಲಿ ತಂದೆ ಸಾವಿಗೀಡಾದ ಸುದ್ದಿ ಕೇಳಿ ನಾಯಕ ಅತ್ತ ತೆರಳುತ್ತಾನೆ. ತಂದೆಯದು ಸಹಜ ಸಾವಲ್ಲ ಎನ್ನುವುದರ ಅರಿವಾದಾಗ, ಅವರು ಆತ್ಮಹತ್ಯೆ ಮಾಡಲು ಏನು ಕಾರಣವಿತ್ತು ಎಂದು ತಿಳಿದುಕೊಳ್ಳುತ್ತಾನೆ. ಇನ್ನೊಂದು ಟ್ವಿಸ್ಟ್ ಎನ್ನುವಂತೆ ತಂದೆಯ ಆತ್ಮಹತ್ಯೆಗೆ ರೈತ ಬದುಕಿನ ಸೋಲು ಕಾರಣವಾಗಿರುವುದಿಲ್ಲ. ಹಾಗಂತ ವೈರಿಗಳನ್ನು ಪತ್ತೆ ಮಾಡಿದ ರಾಜೀವ ಅವರ ಹಿಂದೆಯೂ ಬೆನ್ನಟ್ಟಿ ಹೋಗುವುದಿಲ್ಲ! ಕತೆಯಲ್ಲಿ ಆತನ ತಮ್ಮಂದಿರ ಎಂಟ್ರಿಯಾಗುತ್ತದೆ. ಪ್ರೇಯಸಿ ಬರುತ್ತಾಳೆ. ಪ್ರೇಯಸಿ ಸಾಯುತ್ತಾಳೆ. ಹೀಗೆ ಯಾವ ಘಟನೆ ಕೂಡ ಮನಸ್ಸಿಗೆ ತಾಕದ ಮಾದರಿಯಲ್ಲಿ ನಡೆಯುತ್ತಾ ಸಾಗುತ್ತದೆ.

 ನಟನಾಗಿ ಮಯೂರ್ ಅವರು ರಾಜೀವನಾಗಿ ಮತ್ತು ಆತನ ತಂದೆ ಭೀಮಣ್ಣನ ಎರಡು ಕಾಲಘಟ್ಟದ ನೋಟಗಳಲ್ಲಿ ಕಾಣಿಸಿದ್ದಾರೆ. ಅದಕ್ಕಾಗಿ ಅವರು ಹೆಚ್ಚು ಶ್ರಮ ಪಟ್ಟಿರುವಂತೆ ಕಾಣಿಸುವುದಿಲ್ಲ. ರಾಜೀವನ ಪ್ರೇಯಸಿಯಾಗಿ ಅಕ್ಷತಾ ಶ್ರೀಧರ ಶಾಸ್ತ್ರಿ ನಟಿಸಿದ್ದಾರೆ. ಪ್ರೇಯಸಿಯಾಗಿದ್ದಾಗ ಅಥವಾ ಪತ್ನಿಯಾದ ಮೇಲೆಯೂ ನಾಯಕನೊಂದಿಗೆ ಆಪ್ತವೆನಿಸುವ ಯಾವುದೇ ಸನ್ನಿವೇಶಗಳು ಚಿತ್ರದಲ್ಲಿ ಬಾರದ ಕಾರಣ ಆಕೆಯ ಕೊಲೆ ಕೂಡ ಒಂದು ಗಂಭೀರತೆ ಪಡೆಯುವುದಿಲ್ಲ! ಕೊನೆಯಲ್ಲಿ ಒಬ್ಬ ಶ್ರಮಿಕ ಅಣ್ಣನನ್ನು ಅರ್ಥೈಸದೆ ಕೆಟ್ಟದಾರಿ ಹಿಡಿಯುವ ತಮ್ಮಂದಿರು ಕ್ಲೈಮ್ಯಾಕ್ಸ್ ನಲ್ಲಿ ಬದಲಾಗುವಂಥ ಹಳೆಯ ಶೈಲಿಯ ಚಿತ್ರವಾಗಿ ಸಮಾಪ್ತಗೊಳ್ಳುತ್ತದೆ.

ಸಹೋದರರ ಪಾತ್ರವನ್ನು ನವನಟರಿಬ್ಬರಿಂದ ಚೆನ್ನಾಗಿ ಮಾಡಿಸಿದ್ದಾರೆ ನಿರ್ದೇಶಕರು. ದ್ವೇಷ ಮತ್ತು ತಿಕ್ಕಲುತನ ಬೆರೆತ ಊರಗೌಡನಾಗಿ ಶಂಕರ್ ಅಶ್ವಥ್ ಆಕರ್ಷಕವಾಗಿ ನಟಿಸಿದ್ದಾರೆ. ಅವರ ಪುತ್ರನ ಪಾತ್ರದಲ್ಲಿ ವರ್ಧನ್ ತೀರ್ಥಹಳ್ಳಿಯವರ ನಟನೆ ಕೂಡ ಅಷ್ಟೇ ಗಮನಾರ್ಹವಾಗಿದೆ. ಹಾಸ್ಯದಲ್ಲಿ ಹೊಸ ಕಲಾವಿದರನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದ್ದರೂ ಸನ್ನಿವೇಶಗಳು ಕೆಟ್ಟದಾಗಿ ಮೂಡಿ ಬಂದಿವೆ. ಮುಖ್ಯಮಂತ್ರಿಯ ಪಾತ್ರದ ಮೂಲಕ ಮಗನ ಚಿತ್ರದಲ್ಲಿ ಅತಿಥಿ ನಟನಾಗಿರುವ ಮದನ್ ಪಟೇಲ್ ಪಾತ್ರಕ್ಕೆ ಘನತೆ ನೀಡಿದ್ದಾರೆ. ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಆಕರ್ಷಕ. ನವನಟಿ ಶ್ರಾವ್ಯಗಣಪತಿ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಗಟ್ಟಿಯಾದ ಚಿತ್ರಕತೆ ಮತ್ತು ರೈತರ ಬದುಕಿನ ಕುರಿತಾದ ಪರಿಣಾಮಕಾರಿ ಸನ್ನಿವೇಶಗಳು ಇಲ್ಲದಿರುವುದು ಸಿನೆಮಾದ ಪ್ರಮುಖ ಕೊರತೆ. ಕೌಟುಂಬಿಕ ಚಿತ್ರಗಳನ್ನು ಇಷ್ಟಪಡುವವರಿಗೆ ಚಿತ್ರ ನೋಡಿಸಿಕೊಂಡು ಹೋದರೆ ಅಚ್ಚರಿ ಇಲ್ಲ.

ತಾರಾಗಣ: ಮಯೂರ್ ಪಟೇಲ್, ಅಕ್ಷತಾ ಶ್ರೀಧರ ಶಾಸ್ತ್ರಿ, ಶಂಕರ್ ಅಶ್ವಥ್
ನಿರ್ದೇಶಕ: ಫ್ಲೈಯಿಂಗ್ ಕಿಂಗ್ ಮಂಜು
ನಿರ್ಮಾಣ: ಬಿ.ಎಮ್. ರಮೇಶ್, ಕಿರಣ್ ಕುಮಾರ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News