ಕಾವ್ಯದ ನಶೆ ಮಿರ್ಝಾ ಗಾಲಿಬ್

Update: 2020-01-04 18:33 GMT

                ಡಾ.ಕೆ. ಷರೀಫಾ

ಗಾಲಿಬನ ಪ್ರೀತಿಯ ದಿಲ್ಲಿಯ ಅವನತಿಯ ಯಾತನಾಮಯ ಕ್ಷಣಗಳಲ್ಲಿ ಬಹಳ ನೋವನ್ನನುಭವಿಸುತ್ತಾನೆ. ಸಿಪಾಯಿದಂಗೆಯ ನಂತರವೂ ಗಾಲಿಬನ ಸಾಹಿತ್ಯ ಹೆಚ್ಚಾಗಿ ಪತ್ರಗಳ ರೂಪದಲ್ಲಿ ಸಂಗ್ರಹವಾಗಿದೆ. ಪ್ರಭುತ್ವದ ಕೊಲೆಗಳಿಗೆ ಬೆದರಿದ ಗಾಲಿಬ್ ಆ ನೋವನ್ನು ತನ್ನ ಪತ್ರಗಳಲ್ಲಿ ತೋಡಿಕೊಂಡನು. ಕೊನೆಯವರೆಗೂ ಗಾಲಿಬ್ ಯಾವುದೇ ಮತಕ್ಕೆ ಧರ್ಮಕ್ಕೆ ಮತ್ತು ಪಂಥಕ್ಕೆ ಜೋತುಬಿದ್ದವನಲ್ಲ.

ಭಾರತೀಯ ಸಾಹಿತ್ಯ ಇತಿಹಾಸದಲ್ಲಿ ಮಿರ್ಝಾ ಗಾಲಿಬ್ (1797-1869) ಒಂದು ದೊಡ್ಡ ಹೆಸರು. ಮತಾತೀತ ಸೂಫಿ ಸಂತನಂತೆ ಬದುಕಿದ ಗಾಲಿಬನ ಕಾವ್ಯ ಬಹು ಲೋಕಪ್ರಿಯ. ಲೋಕದ ಅಪರೂಪದ ಕವಿಗಳಲ್ಲಿ ಗಾಲಿಬನನ್ನು ಪರಿಗಣಿಸಲಾಗುತ್ತದೆ. ಕಾವ್ಯ ಲೋಕದ ಮನೆಮಾತಾಗಿರುವ ಈ ಮಾಂತ್ರಿಕ ಎಲ್ಲರಿಗೂ ಚಿರಪರಿಚಿತ. ಕಾವ್ಯ ಚರಿತ್ರೆಯಲ್ಲಿಯೇ ಗಾಲಿಬ್ ಬಹಳ ಎತ್ತರದ ಹೆಸರು. ಅವನೊಬ್ಬ ಅವಧೂತನಂತೆ ಬದುಕಿದ ಸೂಫೀ ಸಂತ. ಆತ ಈ ಲೋಕವನ್ನಗಲಿ ಇಂದಿಗೆ 150 ವರ್ಷಗಳು ಗತಿಸಿದವು. 19ನೇ ಶತಮಾನದಲ್ಲಿ ಭಾರತ ಕಂಡ ಅತ್ಯಂತ ಶ್ರೇಷ್ಠಕವಿಯಿವನು. ಇವನು ಬದುಕಿದ್ದಂತಹ ಏಳು ದಶಕಗಳೂ ಭಾರತದ ಇತಿಹಾಸದಲ್ಲಿ ಅತ್ಯಂತ ಸಂಕಟದ ಕಾಲವಾಗಿತ್ತು. ಅದು ಆಗಿನ ಕಾಲದ ಯಾವೊಬ್ಬ ಕವಿಗೂ ಅನುಕೂಲಕರವಾದ ಕಾಲವಾಗಿರಲಿಲ್ಲ. ಅದು ಬ್ರಿಟಿಷರು ಸಂಪೂರ್ಣ ಇಂಡಿಯಾವನ್ನು ಆವರಿಸಿಕೊಂಡ ಕಾಲವಾಗಿತ್ತು. ಇಂಡಿಯಾದ ಇಡೀ ಬದುಕು ತ್ರಸ್ತಗೊಂಡಿತ್ತು. ನಾಗರಿಕ ಬದುಕು ತಲ್ಲಣಗೊಂಡಿತ್ತು. ಗಾಲಿಬ್ ನೆಲೆಸಿದ್ದ ಆ ಕಾಲದ ದಿಲ್ಲಿ ನೀಲಿ ಕಣ್ಣಿನ ಗಿಡುಗ, ಬ್ರಿಟಿಷರ ದಾಳಿಗೆ ಬಸವಳಿದು ಹೊಗಿತ್ತು. ಸಾಮ್ರಾಜ್ಯಗಳು ಮೊೆದ ದಿಲ್ಲಿಯಲ್ಲಿ ಅರಸರ ಆಳ್ವಿಕೆ ಕೊನೆಗೊಳ್ಳುತ್ತಿತ್ತು. ಬ್ರಿಟಿಷ್ ದರ್ಬಾರು ಆಗಲೇ ಆರಂಭವಾಗಿತ್ತು. ಭಾರತದ ಮೇಲೆ ಬ್ರಿಟಿಷರು ತಮ್ಮ ಬಿಗಿ ಹಿಡಿತವನ್ನು ಸ್ಥಾಪಿಸುತ್ತಿದ್ದ ಕಾಲ ಅದಾಗಿತ್ತು.

ಗಾಲಿಬ್ ಬದುಕಿದ್ದು ಇಂತಹ ರಾಜಕೀಯ ಮತ್ತು ಸಾಂಸ್ಕೃತಿಕ ಲೋಕದ ಸಂಕ್ರಮಣದ ಕಾಲದಲ್ಲಿ. ಆಗ ಗಾಲಿಬನ ಸುತ್ತಲೂ ಅನೇಕ ಸಾವುಗಳ, ಕಗ್ಗೊಲೆಗಳ ಸರಮಾಲೆಯಿತ್ತು. ಅಂತಹ ಸಂಕೀರ್ಣ ಸಮಯದಲ್ಲಿಯೇ ಈಗ ಪ್ರಚಲಿತವಿರುವ ಭಾರತೀಯ ಸಮಾಜ ರೂಪುಗೊಂಡಿದ್ದು. ಇಂತಹ ವಿಷಮ ಪರಿಸ್ಥಿತಿಯ ಕುರಿತು ಗಾಲಿಬನು ಬದುಕಿದ್ದ ಸಾಕ್ಷಿಪ್ರಜ್ಞೆಯಾಗಿದ್ದನು. ಗಾಲಿಬ್ ಕಾಲದ ಭಾರತದಲ್ಲಿ ಅದೇ ತಾನೆ ಮೊಗಲ್ ಸಾಮ್ರಾಜ್ಯ ಪತನವಾಗುತ್ತಿತ್ತು. ಅಧಿಕಾರ ಲಾಲಸೆಗಾಗಿ ನಿರಂತರ ಹೋರಾಟಗಳು ನಡೆಯುತ್ತಿದ್ದವು. ರಾಜಕೀಯ ಅನಿಶ್ಚಿತತೆ, ಅರಾಜಕತೆ, ಹಿಂಸೆಗಳು ಸಮಾಜದಲ್ಲಿ ತಾಂಡವವಾಡುತ್ತಿದ್ದವು. ಆಗಿನ ಭಾರತದ ರಾಜಕೀಯ ಜೀವನ ವಿಶಾಲ ತಳಹದಿಯ ಮೇಲೆ ರೂಪು ಗೊಂಡಿರಲಿಲ್ಲ. ಆಳರಸರು, ಶ್ರೀಮಂತರು, ಸೈನ್ಯಾಧಿಕಾರಿಗಳು ಅಧಿಕಾರಕ್ಕಾಗಿ ಜೂಜಾಡುತ್ತಿದ್ದ ಕಾಲ ಅದಾಗಿತ್ತು. ವೈಯಕ್ತಿಕ ಮೇಲ್ಮೆಗಾಗಿ ಒಬ್ಬರನ್ನೊಬ್ಬರು ಹೊಂಚು ಹಾಕುತ್ತಿದ್ದರು. ಒಟ್ಟಾರೆ ಸಮುದಾಯದ ಚಿಂತನೆ ಅಲ್ಲಿ ಇರಲಿಲ್ಲ. ಕೇವಲ ವೈಯಕ್ತಿಕತೆಯನ್ನು ಮೊೆಯುವ ಕಾಲ ಅದಾಗಿತ್ತು.

ಇಂದಿನ ಅಸ್ಮಿತೆಗಳಾದ ಹಿಂದೂ, ‘ಭಾರತೀಯ, ಜನಾಂಗ’, ‘ಭಾಷೆ’ ಎಂಬ ಅಸ್ಮಿತೆಗಳು ಆಗಲೇ ನಿರ್ಮಾಣವಾಗತೊಡಗಿದ್ದವು. ‘ಹಿಂದೂ ಎಂಬ ಪರಿಕಲ್ಪನೆ ಒಂದು ಧರ್ಮವಾಗಿ ರೂಪುಗೊಂಡದ್ದೂ ಇದೇ ಕಾಲದಲ್ಲಿ’’ ಎಂದು ನಿಕಲಸ್ ಡರ್ಕ್ಸ ಹೇಳುತ್ತಾನೆ. ಭಾರತ ಬದಲಾಗುತ್ತಿದ್ದ ಸಂಕೀರ್ಣ ಸಾಮಾಜಿಕ ಹಾಗೂ ರಾಜಕೀಯ ಅಧಿಕಾರಕ್ಕಾಗಿ ನಿರಂತರ ಸಂಘರ್ಷ ನಡೆಸುತ್ತಿದ್ದ ಕಾಲ ಅದಾಗಿತ್ತು. ಗಾಲಿಬ್ ಬದುಕಿದ ಒಟ್ಟು ಎಪ್ಪತ್ತೆರಡು ವರ್ಷಗಳ ಅವಧಿಯು ನಿರಂತರ ಬ್ರಿಟೀಷರ ಕ್ರೌರ್ಯಕ್ಕೆ ನಲುಗಿದ ಯಾತನಾಮಯ ಪಯಣವಾಗಿತ್ತು. ಮೊಗಲ್ ಸಾಮ್ರಾಜ್ಯದ ಸೂರ್ಯ ಮುಳುಗುವುದರ ಮುನ್ಸೂಚನೆ ಗಾಲಿಬನಿಗೆ ಸಿಕ್ಕಿತ್ತು. 1854 ರಲ್ಲಿ ಗಾಲಿಬ್ ತನ್ನ ಗೆಳೆಯ ಕವಿ ಜುನೂನ್‌ಗೆ ಬರೆದ ಪತ್ರದಲ್ಲಿ ಹೇಳತ್ತಾನೆ. ಕೆಂಪು ಕೋಟೆಯ ಒಳಗೆ ಕೆಲವು ರಾಜಕುಮಾರರು ಆಗೀಗ ಕಲೆತು ತಮ್ಮ ಕವಿತೆಗಳನ್ನು ಓದುತ್ತಾರೆ. ಒಮ್ಮೊಮ್ಮೆ ನಾನೂ ಅಂಥ ಗೋಷ್ಠಿಗಳಿಗೆ ಹೋಗುತ್ತೇನೆ. ಸಮಕಾಲೀನ ಸಮಾಜ ಅದೃಶ್ಯವಾಗುವ ಹಂತದಲ್ಲಿದೆ. ಕವಿಗಳ ಮುಂದಿನ ಗೋಷ್ಠಿ ಯಾವಾಗಲೋ ಅಥವಾ ಅವರು ಮತ್ತೊಮ್ಮೆ ಒಟ್ಟಿಗೆ ಕಲೆಯುತ್ತಾರೋ ಇಲ್ಲವೋ, ಯಾರಿಗೆ ಗೋತ್ತು? ಎಂದು ಮೊಗಲ್ ಸಾಮ್ರಾಜ್ಯದ ಸೂರ್ಯ ಅಸ್ತಂಗತವಾಗುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದ ಗಾಲಿಬ್‌ಹೀಗೆ ಹೇಳುತ್ತಿದ್ದ .ದಿಲ್ಲಿಯಲ್ಲಿ ಬ್ರಿಟಿಷರು ಭಾರತದಲ್ಲಿ ಹಿಂದೆಂದೂ ಕಾಣದ ಹಿಂಸೆ, ಕ್ರೌರ್ಯ, ಮತ್ತು ದಂಗೆಗಳನ್ನು ನಡೆಸಿದರು. ಅವರು ಮೊಗಲ್‌ರ ರಾಜಮನೆತನವನ್ನು ಪತನಗೊಳಿಸಿದರು. ಮೊಗಲರ ಕೊನೆಯ ಅರಸ ಬಹಾದ್ದೂರ ಷಾ ಜಫರ್‌ನನ್ನು ಗಡಿಪಾರು ಮಾಡಿದರು. ಸಿಡಿಲಿಗೂ ಬೆಚ್ಚದ ಕೆಂಪುಕೋಟೆಯ ಸೋಲರಿಯದ ರಾಜಮನೆತನವನ್ನು ಬ್ರಿಟಿಷರು ಛಿದ್ರ ಮಾಡಿದರು. ಇದನ್ನೆಲ್ಲ ಪ್ರೇಕ್ಷಕನಾಗಿ ನೋಡುತ್ತಿದ್ದ ಗಾಲಿಬ್ ಕಾಲಜ್ಞಾನಿಯಾಗಿದ್ದ. ಸಿಪಾಯಿ ದಂಗೆಯ ಸಾಕ್ಷಿಪ್ರಜ್ಞೆಯಾಗಿದ್ದ. ಅದನ್ನು ತನ್ನ ಕಾವ್ಯದಲ್ಲಿ ಹೀಗೆ ಹೇಳುತ್ತಾನೆ.

‘‘ಆಜಂ ದೊರೆಗಳ ನಿಶಾನೆಗಳಿಂದ

ಮುತ್ತುಗಳನ್ನೆಲ್ಲ ಕಿತ್ತುಕೊಂಡಿದ್ದಾರೆ

ಅವುಗಳ ಬದಲಿಗೆ ನನಗೆ ನೀಡಿದ್ದಾರೆ

ಸಂಪತ್ತನ್ನು ಚೆಲ್ಲಾಡುವಂಥ ಈ ಲೇಖನಿಯನ್ನು’’

ಗಾಲಿಬ್ ತನ್ನ ಕಾಲದ ಅಭದ್ರತೆ, ರಾಜಕೀಯ ಕ್ಲೇಷ, ಛಿದ್ರವಾಗುತ್ತಿರುವ ಸಾಂಸ್ಕೃತಿಕ ಲೋಕವನ್ನು ಸೂಚಿಸುವ ಕಾವ್ಯವನ್ನು ರಚಿಸಿದ್ದಾನೆ. ದಿಲ್ಲಿಯ ಮೇಲೆ ಬ್ರಿಟಿಷರು ಹಿಡಿತ ಸಾಧಿಸಿದರು. ಆನಂತರವೇ ನರಮೇಧಕ್ಕೆ ಆರಂಭವಿಟ್ಟುಕೊಂಡಿತು. ಇಂತಹ ಕಾಲಘಟ್ಟದಲ್ಲಿ ಬದುಕಿದ್ದ ಗಾಲಿಬ್‌ನಲ್ಲಿ ಒಬ್ಬ ಅಪ್ಪಟ ಪ್ರೇಮಿ ಅಡಗಿರುವಂತೆ ಒಬ್ಬ ಮೇರು ಚಿಂತಕ, ವೇದಾಂತಿ ಮತ್ತು ಒಬ್ಬ ದಾರ್ಶನಿಕ ಅಡಗಿರುವುದು ನಿಜ . ವಿಶ್ವದ ಈ ಮಹಾಕವಿ ಅನುಕೂಲಸ್ಥರ ಕುಟುಂಬದಲ್ಲಿ ಹುಟ್ಟಿದ್ದರೂ ಹಸಿವಿನಲ್ಲೇ ಸತ್ತು ಹೋದವನು. ಉರ್ದು, ಪರ್ಶಿಯನ್ ಭಾಷೆಗಳಲ್ಲಿ ಕಾವ್ಯ ರಚಿಸಿ ಲೋಕಮಾನ್ಯನಾದವನು.

ಇವನ ಜನನ ಕ್ರಿ.ಶ.1797 ರಲ್ಲಿ ಡಿಸೆಂಬರ್ 27 ರಂದು ಪ್ರೀತಿಗೆ ಇನ್ನೊಂದು ಹೆಸರಾದ ಆಗ್ರಾದಲ್ಲಿ ಆಯಿತು. ಮಿರ್ಝಾ ಅಸದುಲ್ಲಾಖಾನ್ ಗಾಲಿಬ್ ಇವರ ಪೂರ್ಣ ಹೆಸರು. ಇವರ ಕಾವ್ಯನಾಮ ಅಸದ್. ಗಾಲಿಬನ ಅಜ್ಜನಾದ ಮಿರ್ಝಾ ಕುಕಾನ್ ಬೇಗ್ ಖಾನ್ ಹಾಗೂ ಚಿಕ್ಕಪ್ಪ ನಸ್ರುಲ್ಲಾಖಾನ್ ಬೇಗ್ ಮತ್ತು ಗಾಲಿಬ್‌ನ ತಂದೆ ಅಬ್ದುಲ್ಲಾ ಬೇಗ್ ಖಾನ್‌ರೊಂದಿಗೆ ಆಗ್ರಾ ಪಟ್ಟಣಕ್ಕೆ ಬಂದು ನೆಲೆಸಿದ್ದರು. 18ನೇ ಶತಮಾನದ ಅಂತ್ಯದಲ್ಲಿ ಜೀವನೋಪಾಯದ ಶೋಧನೆಯಲ್ಲಿ ಮಧ್ಯ ಮತ್ತು ಪಶ್ಚಿಮ ಏಶಿಯಾದ ಜನರು ಭಾರತಕ್ಕೆ ವಲಸೆ ಬಂದಿದ್ದರು. ಗಾಲಿಬನ ತಾತ ಮಿರ್ಝಾ ಕುಕಾನ್ ಬೇಗ್ ಕೂಡ ಒಬ್ಬ. ಇವನು ಸಮರಕಂದದಿಂದ ಆಗಿನ ಭಾರತದ ಅವಿಭಾಜ್ಯ ಅಂಗವಾಗಿದ್ದ ಲಾಹೋರಿಗೆ ಬಂದನು. ಅಲ್ಲಿಯ ಮುಯಿನುಲ್-ಮಲ್ಕ್‌ನ ಸೈನ್ಯವನ್ನು ಸೇರಿದ. ಕುಕಾನ್ ಬೇಗ್‌ನಿಗೆ ಇಬ್ಬರು ಮಕ್ಕಳಿದ್ದರು. ಗಾಲಿಬ್‌ನ ತಂದೆ ಮಿರ್ಝಾ ಅಬ್ದುಲ್ಲಾ ಬೇಗ್ ಹಾಗೂ ಗಾಲಿಬನ ಚಿಕ್ಕಪ್ಪ ಮಿರ್ಝಾ ನಸ್ರುಲ್ಲಾ ಬೇಗ್. ಮಿರ್ಝಾ ಅಬ್ದುಲ್ಲಾ ಬೇಗ್ ಖಾನ್ ಯಶಸ್ವಿ ಸೈನಿಕನಾಗದೇ ಹೋದ. ಅವನು ಹೈದರಾಬಾದಿನ ನಿಝಾಮರ ಸೈನ್ಯವನ್ನು ಸೇರಿದ, ಆನಂತರದಲ್ಲಿ ಅಳ್ವಾರದ ರಾಜನಾದ ಬಖ್ತಾವರಸಿಂಗ್‌ನಲ್ಲಿ ಸೇವೆಯಲ್ಲಿದ್ದಾಗ 1802ರಲ್ಲಿ ಕೊಲ್ಲಲ್ಪಟ್ಟ. ಆಗ ಗಾಲಿಬ್‌ನಿಗೆ ಕೇವಲ 5 ವರ್ಷ ವಯಸ್ಸು. ಮಿರ್ಝಾ ಅಬ್ದುಲ್ಲಾ ಬೇಗ್‌ನಿಗೆ 3 ಜನ ಮಕ್ಕಳಿದ್ದರು.

   

ದೊಡ್ಡವಳು ಹೆಣ್ಣು ಮಗಳು, ಎರಡನೆಯವನೇ ಮಿರ್ಝಾ ಅಸದುಲ್ಲಾ ಬೇಗ್ ಖಾನ್. ಅವನೇ ಗಾಲಿಬ್ ಕಾವ್ಯ ನಾಮದಿಂದ ಹೆಸರು ಮಾಡಿದ. ಅವನಿಗಿಂತ ಚಿಕ್ಕವನು ಮಿರ್ಝಾ ಯೂಸೂಫ್. ಲೋಹಾರ್ ನವಾಬರು ಗಾಲಿಬ್ ಅವರ ಹತ್ತಿರದ ಸಂಬಂಧಿಕರಾಗಿದ್ದರು. 1806ರಲ್ಲಿ ಆಗ್ರಾ ಪಟ್ಟಣವನ್ನು ಬ್ರಿಟಿಷರ ಪಾಲಾಗಿತ್ತು. ಆಗ ಗಾಲಿಬನ ಚಿಕ್ಕಪ್ಪ ನಸ್ರುಲ್ಲಾಬೇಗ್‌ನಿಗೆ ತಿಂಗಳಿಗೆ 1700 ರೂಪಾಯಿ ಗೌರವಧನವನ್ನು ನಿಗದಿಪಡಿಸಿದ ಬ್ರಿಟಿಷರು ಅವನನ್ನು ಆಗ್ರಾಕೋಟೆಯ ರಾಜ್ಯಪಾಲರನ್ನಾಗಿ ನೇಮಿಸಿದ್ದರು. ತನ್ನ ತಂದೆಯಂತೆಯೇ ಚಿಕ್ಕಪ್ಪನೂ ಸಹ ಆಕಸ್ಮಿಕ ಮರಣ ಹೊಂದಿದನು. ಇದರಿಂದ ಗಾಲಿಬ್ ಅಕ್ಷರಶ: ಅನಾಥನಾದನು. ನಂತರ ತಾಯಿಯ ತಂದೆಯ (ತಾತನ) ಮನೆಯಲ್ಲಿಯೇ ತಾಯಿಯೊಂದಿಗೆ ವಾಸಿಸತೊಡಗಿದ. ಅಜ್ಜನ ಮನೆಯ ಶ್ರೀಮಂತ ವಾತಾವರಣದಲ್ಲಿಯೇ ಬೆಳೆಯತೊಡಗಿದ ಗಾಲಿಬನಿಗೆ ಉತ್ತಮ ಶಿಕ್ಷಣವೂ ದೊರೆಯಿತು. ಮೀರ್ ಅಝಂ ಅಲಿ ಎಂಬವರು ನಡೆಸುತ್ತಿದ್ದ ಮದ್ರಸಾದಲ್ಲಿ, ಆಗಿನ ಖ್ಯಾತ ಪಂಡಿತರಾದ ಶೇಖ ಮುಜ್ದಾಂ ಕೈಕೆಳಗೆ ಗಾಲಿಬ್ ಅರೇಬಿಕ್, ಪರ್ಶಿಯನ್, ವೈದ್ಯಶಾಸ್ತ್ರ, ಖಗೋಳಶಾಸ್ತ್ರ, ತತ್ವಶಾಸ್ತ್ರ ಮತ್ತು ತರ್ಕಶಾಸ್ತ್ರಗಳನ್ನು ಅಧ್ಯಯನ ಮಾಡಿದನು. ಅರೇಬಿಕ್ ಮತ್ತು ಪರ್ಶಿಯನ್ ಭಾಷೆಯ ಸಾಹಿತ್ಯದಲ್ಲಿ ವಿದ್ವಾಂಸನಾಗಿದ್ದ ಅಬ್ದುಲ್ ಸಮದ್ ಎಂಬ ವಿಧ್ವಾಂಸರು ಇವರ ತಾತನ ಮನೆಯಲ್ಲಿ 1811 ರಿಂದ 1812 ರವರೆಗೆ ನೆಲೆನಿಂತು ಗಾಲಿಬ್‌ನಿಗೆ ಅರೇಬಿಕ್ ಮತ್ತು ಪರ್ಶಿಯನ್ ಸಾಹಿತ್ಯದ ವ್ಯಾಕರಣ, ಕಾವ್ಯರಚನೆ ಮುಂತಾದ ಕಾವ್ಯದ ಮೂಲ ಜ್ಞಾನವನ್ನು ನೀಡಿ ಭವಿಷ್ಯದಲ್ಲಿ ಗಾಲಿಬ್ ಹೆಸರಾಂತ ಕಾವ್ಯ ಪ್ರೇಮಿಯಾಗಲು ಕಾರಣವಾಯಿತು. ಗಾಲಿಬ್‌ನ ಬಾಲ್ಯದಲ್ಲಿಯೇ ಅವನಲ್ಲಿ ಕಾವ್ಯ ಮೋಹತ್ವ ಕಂಡು ಬಂದಿತು. ತನ್ನ ಒಂಬತ್ತನೇ ವರ್ಷ ವಯಸ್ಸಿನಲ್ಲಿಯೇ ಗಾಲಿಬ್ ಕಾವ್ಯ ರಚಿಸುತ್ತಿದ್ದ. ಅದನ್ನು ನೋಡಿದ ಆಗಿನ ಖ್ಯಾತ ಸಾಹಿತಿ ಮೀರ್ ತಖಿ ಮೀರ್ ಹೀಗೆ ಹೇಳುತ್ತಾರೆ. ಈ ಹುಡುಗನಿಗೆ ಸೂಕ್ತ ವಿದ್ವಾಂಸರ ಸಲಹೆ, ಮಾರ್ಗದರ್ಶನ ಸಿಕ್ಕರೆ ಈತನ ಕಾವ್ಯಕ್ಕೆ ಉಜ್ವಲ ಭವಿಷ್ಯವಿದೆ ಎಂದು ಭವಿಷ್ಯ ನುಡಿದಿದ್ದ ಮೀರರ ಮಾತು ಮುಂದೆ ನಿಜವಾಯಿತು. ಗಾಲಿಬ್ 1810 ರಲ್ಲಿ ಪ್ರತಿಷ್ಠಿತ ನವಾಬ್ ಇಲಾಹಿ ಬಕ್ಷ್‌ಖಾನ್‌ರವರ ಪುತ್ರಿ ಉಮ್ರಾವ್ ಬೇಗಂ ಅವರನ್ನು ವಿವಾಹವಾಗಿದ್ದರಿಂದ ಕಾವ್ಯ ರಚನೆ ಇನ್ನೂ ಸುಗಮವಾಗಿ ಸಾಗಿತು. ಅವರ ಪತ್ನಿ ನವಾಬ್ ಮನೆತನಕ್ಕೆ ಸೇರಿದವರಾಗಿದ್ದರು. ಇವರ ಪತ್ನಿ ಸಂಪ್ರದಾಯ ನಿಷ್ಠೆ ಸದಾ ದೇವರ ಪ್ರಾರ್ಥನೆ, ಉಪವಾಸ, ಕುರ್‌ಆನ್ ಪಠಣ ಮತ್ತು ಧರ್ಮಗ್ರಂಥಗಳ ಪಠಣದಲ್ಲಿ ಮುಳುಗಿರುತ್ತಿದ್ದಳು. ಅವನ ಕಷ್ಟ ಕಾಲದಲ್ಲಿ ತಾಯಿ ಅಥವಾ ಪತ್ನಿಯೇ ಅವನಿಗೆ ಆಸರೆಯಾಗಿದ್ದರು. ದಿಲ್ಲಿಯ ಮೊಗಲರ ಆಸ್ಥಾನ ಕವಿಯಾಗಿಯೂ, ಉತ್ತಮ ಬರಹಗಾರರೆಂದು ಹೆಸರು ಮಾಡಿದ ಇವರ ಮಾವ (ಹೆಂಡತಿಯ ತಂದೆ) ನವಾಬ್ ಇಲಾಹಿ ಬಕ್ಷ ಖಾನ್ ಅವರೊಂದಿಗೆ ಅನೇಕ ಬಾರಿ ದಿಲ್ಲಿಯ ಮೊಗಲರ ದರ್ಬಾರುಗಳಿಗೆ ಭೇಟಿ ನೀಡುತ್ತಿದ್ದ. ಆಗ ದಿಲ್ಲಿಯ ಖ್ಯಾತ ಕವಿಗಳಾದ ಮೀರ್ ಮತ್ತು ಸೌದ್ ಇಬ್ಬರೂ ದಿಲ್ಲಿಯ ರಾಜಕೀಯ ಅಸ್ಥಿರತೆಯಿಂದಾಗಿ ದಿಲ್ಲಿ ತೊರೆದು ಲಕ್ನೋದ ನವಾಬನ ಆಶ್ರಯ ಪಡೆದಿದ್ದರು. ಮೊಗಲರ ಹಿಡಿತ ದಿಲ್ಲಿಯ ಮೇಲೆ ಕ್ಷೀಣಿಸುತ್ತಾ ಬಂದಿತು. ಸ್ವಲ್ಪ ಸ್ವಲ್ಪವಾಗಿ ಇದರ ರಾಜಕೀಯ ಸೂತ್ರಗಳ ಹಿಡಿತ ಬ್ರಿಟೀಷರ ಕೈಗೆ ವರ್ಗಾವಣೆಯಾಯಿತು. ಕೇವಲ ಹೆಸರಿಗೆ ಮಾತ್ರ ಮೊಗಲ್ ದೊರೆಗಳು ಉಳಿದುಕೊಂಡು ಅಡಳಿತ ಸೂತ್ರ ಬ್ರಿಟಿಷರ ಕೈಗೆ ಹೋಗಿ ದೊರೆಗಳು ಕೇವಲ ಮಾಸಾಶನದಲ್ಲಿ ಬದುಕುವಂತಾಯಿತು. ಇಂತಹ ವಿಷಮ ಪರಿಸ್ಥಿತಿಯಲ್ಲಿ 1815 ರಲ್ಲಿ ದಿಲ್ಲಿಗೆ ಗಾಲಿಬನ ಪ್ರವೇಶವಾಯಿತು. ಆಗಲೇ ಗಾಲಿಬನು ಚಾಂದನಿ ಚೌಕ್ ಬಳಿ ಆಗಿನ ಪ್ರತಿಷ್ಠಿತರು ವಾಸಿಸುವ ಸ್ಥಳದಲ್ಲಿ ತನಗಾಗಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡನು. ಮಿರ್ಝಾಗಾಲಿಬ್ ತನ್ನ ಪತ್ನಿಯೊಂದಿಗೆ ದಿಲ್ಲಿಯಲ್ಲಿ ಹೊಸ ಬದುಕು ಪ್ರಾರಂಭಿಸಿದನು. ನಂತರದಲ್ಲಿ ಅವನಿಗೆ ಷರಾಬಿನ ಗೀಳು ಅಂಟಿಕೊಂಡಿತು. ಆತ ತನ್ನ ಹವ್ಯಾಸಗಳ ಮೇಲೆ ಹಿಡಿತವಿಟ್ಟಿದ್ದರೆ ಬಹಳ ಉತ್ತಮ ಬದುಕು ಸಾಗಿಸಬಹುದಿತ್ತು. ಆಗಿನ ಕಾಲದಲ್ಲಿಯೇ ಅವನಿಗೆ ಸಿಗುತ್ತಿದ್ದ ಬ್ರಿಟಿಷ್ ಸರಕಾರದ ಪಿಂಚಣಿ 62.50ರೂ. ಮತ್ತು ಆಸ್ಥಾನ ಕವಿಯಾಗಿದ್ದುದರಿಂದ ಸಿಗುತ್ತಿದ್ದ ಗೌರವ ಸಂಭಾವನೆಯಲ್ಲಿ ಸುಖಮಯ ಜೀವನ ಸಾಗಿಸಬಹುದಿತ್ತು. ಗಾಲಿಬನ ಏಳು ಮಕ್ಕಳೂ ಸಹ ಒಂದು ವರ್ಷ ತುಂಬುವುದರೊಳಗೆ ನಿಧನರಾಗುತ್ತಿದ್ದುದು ಗಾಲಿಬನಿಗೆ ಚಿಂತೆಗೀಡು ಮಾಡಿತು. ಹುಟ್ಟಿನಿಂದ ಗಾಲಿಬ್ ಮುಸ್ಲಿಮ್ ಜನಾಂಗದಲ್ಲಿ ಹುಟ್ಟಿದ್ದರೂ ಅವನ ಕಾವ್ಯ ಮಾತ್ರ ಎಲ್ಲ ಜಾತಿ, ಧರ್ಮಗಳ ಎಲ್ಲೆ ಮೀರಿ ನಿಂತ ಮೇರು ಪರ್ವತ. ಅವನೊಂದು ಪ್ರಾಂತ, ದೇಶ, ಭಾಷೆ, ಅಥವಾ ಜನಾಂಗಕ್ಕೆ ಸೀಮಿತವಾದ ಕವಿಯಲ್ಲ. ಅವನೊಬ್ಬ ಯಾವ ಪೂರ್ವಾಗ್ರಹಗಳೂ ಇಲ್ಲದೇ ಎಲ್ಲರಿಗೂ ನಿಲುಕುವಂತಹ ಕವಿ. ಸಾಂಸ್ಥಿಕ ಧರ್ಮಗಳ ಸಂಕುಚಿತ ಭಾವನೆ, ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ಮೀರಿ ನಿಲ್ಲುತ್ತಿದ್ದ ಗಾಲಿಬ್.

‘‘ಕಾಬಾದಲ್ಲಿ ನಾನು ಶಂಖ ಊದುತ್ತೇನೆ

ದೇವಾಲಯದಲ್ಲಿ ನಾನು ಇಹ್ರಾಮ್ ತೊಟ್ಟು ನಿಲ್ಲುತ್ತೇನೆ’’

ಅಂದರೆ ನಾನು ಹಿಂದೂಗಳ ಪೂಜಾ ಸಮಯದಲ್ಲಿ ಊದುವ ಶಂಖವನ್ನೂ ಊದುತ್ತೇನೆ. ಅದೇ ಮಂದಿರದಲ್ಲಿ ಹಜ್ ಯಾತ್ರೆಗೆಂದು ತೊಡುವ ಪವಿತ್ರ ಉಡುಪು ‘ಇಹ್ರಾಮ್’ ಎಂಬ ಉಡುಗೆಯನ್ನು ತೊಟ್ಟು ನಿಲ್ಲುತ್ತೇನೆಂಬ ದಾರ್ಷ್ಟವನ್ನೂ ತೋರುತ್ತಾನೆ. ಹಿಂದು-ಮುಸ್ಲಿಮ್ ಎಂಬ ಅಂತರವನ್ನು ಮೀರಿ ನಿಲ್ಲುವ ಅಪ್ಪಟ ಮನುಷ್ಯ ಗಾಲಿಬ್. ಅವನಲ್ಲಿ ಉದಾತ್ತವಾದ ಮಾನವೀಯ ದರ್ಶನ ಮೇಳೈಸಿತ್ತು. ಗಾಲಿಬನ ಮತಾತೀತ ನಂಬಿಕೆ, ನಡವಳಿಕೆಗಳು, ಕ್ರಾಂತಿಕಾರಿ ಮನೋಧರ್ಮದ ಕಾರಣಕ್ಕಾಗಿಯೇ ಧರ್ಮಾತೀತವಾಗಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಪಡೆದಿದ್ದ. ತನ್ನ ಸುರಪಾನದ, ಹೆಣ್ಣಿನ ಮೋಹದ ಬಗ್ಗೆ, ಜಾತ್ಯತೀತ ನಿಲುವುಗಳ ಬಗ್ಗೆ ಯಾವ ಮುಜುಗುರವೂ ಇಲ್ಲದೇ ಮನಬಿಚ್ಚಿ ಮಾತನಾಡುತ್ತಿದ್ದ. ಮೂರ್ತಿಪೂಜೆ, ಡಂಬಾಚಾರದ ಭಕ್ತಿ ಇವುಗಳನ್ನೆಂದೂ ನಂಬುತ್ತಿರಲಿಲ್ಲ. ಅವನು ಸಮಾಜದ ಯಾವುದೇ ಕಟ್ಟುಪಾಡು, ಬಂಧನಗಳಿಗೆ ಶರಣಾಗಿ ಬದುಕಲಿಲ್ಲ. ಧಾರ್ಮಿಕ ಆಚಾರ ವಿಚಾರಗಳನ್ನು ತಿರಸ್ಕರಿಸಿದರೂ ಅವನ ಆಳದಲ್ಲಿ ಮಾನವ ಬಂಧುತ್ವ, ಮಾನವೀಯ ಸಂವೇದನೆಗಳನ್ನು ಎಲ್ಲಿಯೂ ಬಿಟ್ಟುಕೊಡಲಿಲ್ಲ. ‘‘ಪೂಜೆ ಮತ್ತು ಭಕ್ತಿಯ ಸಲ್ಲಕ್ಷಣ ನನಗೆಲ್ಲ ಗೊತ್ತು

ಆದರೆ ಅವುಗಳಿಗೆಲ್ಲ ನನ್ನ ಮನ ಒಗ್ಗುವುದಿಲ್ಲ

ಯಾವ ಮುಖವಿಟ್ಟುಕೊಂಡು ಕಾಬಾಕ್ಕೆ ಹೋಗುತ್ತಿ ಗಾಲಿಬ್,

ಯಾವತ್ತೂ ನೀನು ಪರಿತಪಿಸಿಯೇ ಇಲ್ಲವಲ್ಲ.?’’

ಗಾಲಿಬನ ಕಾವ್ಯ ಮಾತು, ನಡೆ, ಹೇಳಿಕೆಗಳು ಮತ್ತು ಜೀವನಶೈಲಿಗಳು ಅನೇಕ ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿದ್ದವು. ಅವನೊಬ್ಬ ಮುಸ್ಲಿಮನಾಗಿ ಹುಟ್ಟಿದ್ದರೂ, ಎಂದಿಗೂ ಧಾರ್ಮಿಕ ಚೌಕಟ್ಟಿನಲ್ಲಿ ಬದುಕಲಿಲ್ಲ. ಧರ್ಮಾತೀತ ನೆಲೆಗಳಲ್ಲಿಯೇ ಉಸಿರಾಡಿದ. ರಮಝಾನಿನ ಉಪವಾಸ ಕೂಡ ಆತ ಮಾಡುತ್ತಿರಲಿಲ್ಲ. ಧರ್ಮಾಚರಣೆಗಳನ್ನು, ಧಾರ್ಮಿಕ ನಂಬಿಕೆಗಳನ್ನು ಆತ ಗೇಲಿ ಮಾಡುತ್ತಿದ್ದ. ತಾನು ಕುಡಿಯುತ್ತಿದ್ದುದರಿಂದ ಅರ್ಧ ಮುಸ್ಲಿಮ್ ಮಾತ್ರ ಆಗಿರುವೆನೆಂದು ಯಾವ ಮುಲಾಜೂ ಇಲ್ಲದೇ ಮಾತಾಡುತ್ತಿದ್ದ. ಧಾರ್ಮಿಕ ಬಹಿಷ್ಕಾರದ ಮತ್ತು ಅವನಿಗಿರುವ ತಿರಸ್ಕಾರವನ್ನು ಹೊರಗೆಡಹಲು ಆತ ತನ್ನ ಕಾವ್ಯದಲ್ಲಿ ಬಹಿರಂಗಪಡಿಸಿದ್ದಾನೆ. ಮದಿರೆಗೆ ಸಂಬಂಧಿಸಿದಂತೆ ಬಹಳಷ್ಟು ಬಾರಿ ಉದ್ದೇಶಪೂರ್ವಕವಾಗಿಯೇ ಧಾರ್ಮಿಕ ಸಂಕೇತಗಳನ್ನು ಬಳಸುತ್ತಾನೆ.

‘‘ಕಾಬಾದಲ್ಲಿ ಪ್ರದಕ್ಷಿಣೆ ಹಾಕಬೇಕಾಗಿಲ್ಲ ನಾನು

ಝಂಝಂನಲ್ಲಿ ಸಮರ್ಪಿಸಿಕೊಳ್ಳಬೇಕಾಗಿಲ್ಲ,

ನನ್ನ ಯಾತ್ರಾವಸ್ತ್ರ ಮದಿರೆಯಲ್ಲಿ

ತೊಯ್ದು ತೊಪ್ಪೆಯಾಗಿ ಹೋಗಿದೆ.’’

   ಹೀಗೆ ಒಂದು ಧರ್ಮದ ಪವಿತ್ರ ಸ್ಥಳವನ್ನು ಮತ್ತು ಧಾರ್ಮಿಕ ಪವಿತ್ರ ಗುರುತು,ಸಂಕೇತಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸುತ್ತಾನೆ. ಕಾಬಾದ ಬಳಿ ಇರುವ ಬಾವಿಯ ಪವಿತ್ರ ನೀರಿಗೆ ಝಂಝಂ ಎಂದು ಕರೆಯುತ್ತಾರೆ. ಹಜ್ ಯಾತ್ರೆಗೆಂದು ಹೋದವರು ಆ ಸ್ಥಳದಲ್ಲಿ ಸ್ವಲ್ಪ ಹೊತ್ತು ವಿರಮಿಸಿ ಮುಂದೆ ಹೋಗುತ್ತಾರೆ. ಈ ಕಾಬಾಕ್ಕೆ ಪ್ರದಕ್ಷಿಣೆ ಹಾಕುವ ಮುಂಚೆ ಯಾತ್ರಿಕರು ಧರಿಸುವ ಈ ಪವಿತ್ರ ಉಡುಪಿಗೆ ಇಹ್ರಾಮ್ ಅಥವಾ ಯಾತ್ರಾ ವಸ್ತ್ರವೆಂದು ಕರೆಯುತ್ತಾರೆ. ಗಾಲಿಬನಿಗೆ ಮಧ್ಯವೆಂದರೆ ಪಂಚ ಪ್ರಾಣ. ಅವನು ಮಿತಿಮೀರಿ ಕುಡಿಯುತ್ತಿರಲಿಲ್ಲವಾದರೂ, ಕುಡಿತ ಕೊನೆಯವರೆಗೂ ಅವನ ಸಂಗಾತಿಯಾಗಿತ್ತು. ತನ್ನ ಕುಡಿತವನ್ನು ಸಮರ್ಥಿಸಿಕೊಳ್ಳಲು ಆತ ಹೇಳುತ್ತಿದ್ದ. ಗಾಲಿಬ್ ಹೇಳುತ್ತಾನೆ ಓ ದಯಾಮಯನದ ಸೃಷ್ಟಿಕರ್ತನೆ /ಸ್ವರ್ಗ ಲೋಕದಲ್ಲಿರುವ/ನಿನ್ನ ಮಧುರಸಕ್ಕೆ/ಪಾವಿತ್ರತೆ ಎಲ್ಲಿಂದ ಬಂತು? ಎಂದು ದೇವರನ್ನೇ ಪ್ರಶ್ನಿಸುವ ಎದೆಗಾರಿಕೆ ಗಾಲಿಬನಿಗೆ ಇತ್ತು.

‘‘ನಮ್ಮ ಹೃದಯದ ಮೇಲೆ ದು:ಖದ ಗಾಯಗಳಿವೆ

 ಮಧ್ಯ ಒಂದೇ ಮದ್ದು

ಗಾಯಗೊಂಡವರ ಪಾಲಿಗೆ

ಈ ನ್ಯಾಯಬದ್ಧ, ನ್ಯಾಯ ಬಾಹಿರಗಳ ಚರ್ಚೆ ಎಲ್ಲ ಯಾತಕ್ಕೆ?’’

ಅವನ ಕಾವ್ಯ, ತತ್ವಶಾಸ್ತ್ರ, ಧರ್ಮಶಾಸ್ತ್ರ, ನೀತಿಶಾಸ್ತ್ರ, ವ್ಯಾಕರಣ, ಶಾಸ್ತ್ರೀಯ ಸಾಹಿತ್ಯ, ಇತಿಹಾಸದ ಆಳವಾದ ಜ್ಞಾನವನ್ನು ವ್ಯಕ್ತಪಡಿಸುತ್ತವೆ. ಗಾಲಿಬನ ಕಾವ್ಯದ ಮೇಲೆ ಪರ್ಶಿಯನ್ ಪ್ರಬಾವ ದಟ್ಟವಾಗಿರುವುದನ್ನು ಕಾಣಬಹುದಾಗಿದೆ. ಉರ್ದುವಿನ ಛಂದಸ್ಸು, ಕಾವ್ಯ ಪ್ರಕಾರ, ಪದಪ್ರಯೋಗ,ವಿಷಯ ಮಂಡನೆ ಇತ್ಯಾದಿಗಳ ಮೇಲೆ ಪರ್ಶಿಯನ್ ಕಾವ್ಯ ಮೀಮಾಂಸೆಯ ಗಾಢ ಪ್ರಭಾವಕ್ಕೆ ಒಳಗಾದಂತಿದೆ.

‘‘ಯೇ ಮಸಾಯಿಲ್-ಎ-ತಸವ್ವಪ್, ಯೇ ತೆರಾ ಬಯಾನ್ ಗಾಲಿಬ್.

ತುಝೆ ಹಮ್ ವಲೀ ಸಮಝತೆ ಜೋ ನ ಬಾದಖ್ವಾರ್ ಹೋತಾ’’

 ಜಗತ್ತಿಗೆ ಗೊತ್ತಿದೆ ಗಾಲಿಬ್ ಸೋಮರಸ ಪ್ರೀಯ ಎಂದು. ಆದರೆ ಅವನು ಷರಾಬಿನ ದಾಸನಾದರೇನಂತೆ ಅವನ ಅನೇಕ ಕಾವ್ಯವನ್ನು ಒಬ್ಬ ಸಂತ ಮಾತ್ರ ಬರೆಯಲು ಸಾಧ್ಯವಾಗುವಂತಿವೆ. ಆ ಬರಹಗಳು ಧರ್ಮಸೂಕ್ಷ್ಮತೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟ ತತ್ವಶಾಸ್ತ್ರಗಳಾಗಿವೆ. ಅವನ ಕವಿತೆಗಳು ತತ್ವಶಾಸ್ತ್ರವೂ ಹೌದು, ಒಬ್ಬ ಸಂತ ಮಾತ್ರ ಬರೆಯಬಲ್ಲ ಕಾವ್ಯವೂ ಹೌದು. ಅದಕ್ಕಾಗಿಯೇ ಗಾಲಿಬ್ ಎಲ್ಲ ಭಾಷೆಯ ಕವಿಗಳನ್ನೂ ಪ್ರಭಾವಿಸಿದ್ದಾನೆ.

ಗಾಲಿಬನ ಪ್ರೀತಿಯ ದಿಲ್ಲಿಯ ಅವನತಿಯ ಯಾತನಾಮಯ ಕ್ಷಣಗಳಲ್ಲಿ ಬಹಳ ನೋವನ್ನನುಭವಿಸುತ್ತಾನೆ. ಸಿಪಾಯಿದಂಗೆಯ ನಂತರವೂ ಗಾಲಿಬನ ಸಾಹಿತ್ಯ ಹೆಚ್ಚಾಗಿ ಪತ್ರಗಳ ರೂಪದಲ್ಲಿ ಸಂಗ್ರಹವಾಗಿದೆ. ಪ್ರಭುತ್ವದ ಕೊಲೆಗಳಿಗೆ ಬೆದರಿದ ಗಾಲಿಬ್ ಆ ನೋವನ್ನು ತನ್ನ ಪತ್ರಗಳಲ್ಲಿ ತೋಡಿಕೊಂಡನು. ಕೊನೆಯವರೆಗೂ ಗಾಲಿಬ್ ಯಾವುದೇ ಮತಕ್ಕೆ ಧರ್ಮಕ್ಕೆ ಮತ್ತು ಪಂಥಕ್ಕೆ ಜೋತುಬಿದ್ದವನಲ್ಲ.

   ‘‘ಸಾಯುತ್ತಿರುವ ನನ್ನ ಉಸಿರು ಹೊರಟು ಹೋಗಲು ತಯಾರಾಗಿದೆ ಗೆಳೆಯರೇ, ಈಗ ದೇವರು ಕೇವಲ ದೇವರು ಮಾತ್ರ ಇದ್ದಾನೆ.’’ ಎಂದು ಹೇಳುತ್ತಾ ಅವನು ಕೊನೆಯುಸಿರೆಳೆದ ಎಂಬುದನ್ನು ಎ.ಎ.ಬೇಗ್ ಅವರು ರಚಿಸಿದ ಪುಸ್ತಕದ ಪುಟ 369 ರಲ್ಲಿ ದಾಖಲಿಸಿದ್ದಾರೆ. 1869ರ ಫೆಬ್ರವರಿ 15ರಂದು ಅವನು ನಿಧನನಾದನು. ಅಂದು ಮಧ್ಯಾಹ್ನ ಲಾಹೋರು ಮನೆತನದ ಸ್ಮಶಾನದಲ್ಲಿ ಹಝರತ್ ನಿಝಾಮುದ್ದೀನ್ ಜೌಲಿಯಾರ ಸಮಾಧಿಯ ಬಳಿ ಗಾಲಿಬನನ್ನೂ ಸಮಾಧಿ ಮಾಡಲಾಯಿತು. ಮುಸ್ಲಿಮ್ ವಿಧಿ ವಿಧಾನಗಳ ಪ್ರಕಾರ ಅವನನ್ನು ದಫನ್ ಮಾಡಲಾಯಿತು. ಇದು ಕಾವ್ಯ ಲೋಕದ ಗಾರುಡಿಗನ ಅಂತ್ಯ. ಆ ಕಾಲದಿಂದ ಇಲ್ಲಿಯವರೆಗಿನ ಕವಿಗಳ ಮೇಲೆ ಪ್ರಭಾವ ಬೀರಿದ ಕಾವ್ಯ ಲೋಕದ ಸೂರ್ಯ ಅಸ್ತಂಗತನಾಗಿ 150 ವರ್ಷಗಳು ಕಳೆದಿವೆ.

Writer - ಡಾ.ಕೆ. ಷರೀಫಾ

contributor

Editor - ಡಾ.ಕೆ. ಷರೀಫಾ

contributor

Similar News