ಹೊಸವರ್ಷದ ಆರಂಭ ಸಂಕಲ್ಪ ಮಾಡಿ

Update: 2020-01-04 18:55 GMT

ಅಧ್ಯಯನ ಮತ್ತು ಅರಿವು

ಪೋಷಕರು, ಶಿಕ್ಷಕರು ಮತ್ತು ಮಕ್ಕಳು ಹೊಸವರ್ಷದ ಆರಂಭದಲ್ಲಿ ಬಹಳ ಗಂಭೀರವಾಗಿ ಮಾಡಬೇಕಾದಂತಹ ಕೆಲಸವಿದೆ. ಅದು ಹೊಸವರ್ಷದ ಸಂಕಲ್ಪ. ಮನೆಯಲ್ಲಿ ತಂದೆ, ತಾಯಿ, ಕುಟುಂಬದ ಇನ್ನಿತರ ಸದಸ್ಯರು ಮತ್ತು ಮಕ್ಕಳು ಡೈನಿಂಗ್ ಟೇಬಲ್ ಮೇಲೋ ಅಥವಾ ಇನ್ನಾವುದಾದರೂ ಸಾಮಾನ್ಯವಾಗಿ ಕೂಡುವಂತಹ, ಕೂರುವಂತಹ ಜಾಗದಲ್ಲಿ, ಹಾಗೆಯೇ ಶಾಲೆಯಲ್ಲಿಯೂ ಕೂಡ ತರಗತಿಯಲ್ಲಿ ಮಕ್ಕಳೊಂದಿಗೆ ಸಂಕಲ್ಪಗಳನ್ನು ಮಾಡುವ ಮತ್ತು ಅದರ ಪಟ್ಟಿ ತಯಾರಿಸುವ ಕೆಲಸ ಮಾಡಬೇಕು.

ಮಕ್ಕಳಿಗೆ ಸಂಕಲ್ಪ ಮಾಡಿಸುವುದರಿಂದ ಹಲವು ಅನುಕೂಲಗಳಿವೆ.

ಮೊದಲನೆಯದಾಗಿ ಮಕ್ಕಳಿಗೆ ಹೀಗೆ ಸಂಕಲ್ಪವೊಂದನ್ನು ಮಾಡಬಹುದೆಂಬ ಪರಿಕಲ್ಪನೆ ಬೆಳೆಯುತ್ತದೆ. ತಾವೊಂದು ಕೆಲಸವನ್ನು ಮಾಡಬೇಕಾದರೆ ತಾವೇ ಮನಸ್ಸು ಮಾಡಬೇಕು. ಅದಕ್ಕಾಗಿ ತಾವೇ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಅರಿವು ಮೂಡುತ್ತದೆ. ಇದರಿಂದ ತನ್ನ ಕೆಲಸದ ಜವಾಬ್ದಾರಿಯನ್ನು ತಾನೇ ಹೊತ್ತುಕೊಳ್ಳುವ ಮತ್ತು ಅದಕ್ಕಾಗಿ ತಾನೇ ಕೆಲಸ ಮಾಡುವ ಮಾನಸಿಕ ಸಿದ್ಧತೆ ಉಂಟಾಗುತ್ತದೆ.

ತಾವು ಏನು ಮಾಡಬೇಕು ಮತ್ತು ಏನು ಮಾಡುತ್ತೇವೆ ಎಂಬುದರ ಬಗ್ಗೆ ಸ್ಪಷ್ಟತೆ ಉಂಟಾಗುತ್ತದೆ.

ಸಂಕಲ್ಪಮಾಡಿಕೊಳ್ಳುವುದು ಎಂದರೆ ತನ್ನದೇ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಅರಿಯುವುದು. ಸಾಮರ್ಥ್ಯವನ್ನು ಒರೆಗೆ ಹಚ್ಚುವ ಮತ್ತು ಅದನ್ನು ಹೆಚ್ಚಿಸಿಕೊಳ್ಳುವ ದಿಕ್ಕಿನಲ್ಲಿ ಕೆಲಸ ಮಾಡುವುದು ಒಂದಾದರೆ, ದೌರ್ಬಲ್ಯವನ್ನು ತಿಳಿದು ಅದನ್ನು ಇಲ್ಲವಾಗಿಸಿಕೊಳ್ಳುವ ಮತ್ತು ಅದನ್ನು ಮೀರುವ ದಿಕ್ಕಿನಲ್ಲಿ ಕೆಲಸ ಮಾಡುವುದೂ ಒಂದು ಮುಖ್ಯವಾದ ಅಂಶ. ವ್ಯಕ್ತಿತ್ವ ವಿಕಸನದಲ್ಲಿ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ಅರಿಯುವುದು ಬಹು ಮುಖ್ಯವಾದ ಘಟ್ಟ.

ತಾವೇ ಇಷ್ಟಪಟ್ಟ ಕೆಲಸಕ್ಕೆ ಯೋಜನೆಗಳನ್ನು ಮಾಡುವುದು, ಯೋಚನೆಗಳನ್ನು ಮಾಡುವುದು, ಅದಕ್ಕೆ ಬೇಕಾದ ವಸ್ತುಗಳನ್ನು ಮತ್ತು ಸನ್ನಿವೇಶಗಳನ್ನು ಒದಗಿಸಿಕೊಳ್ಳುವುದು; ಹೀಗೆ ಕಾರ್ಯ ಸಾಧನೆಗೆ ಬೇಕಾದ ಅಗತ್ಯಗಳ ಬಗ್ಗೆ ಮಕ್ಕಳು ಸ್ವತಂತ್ರವಾಗಿಯೂ ಮತ್ತು ಆಸಕ್ತಿಯಿಂದಲೂ ಯೋಜಿಸತೊಡಗುತ್ತಾರೆ. ಇದರ ಅಭ್ಯಾಸ ಅವರ ಸಮಗ್ರ ವಿಕಸನಕ್ಕೆ ಸಹಾಯವಾಗುತ್ತದೆ.

ಗೊತ್ತುಗುರಿ ಇಲ್ಲದೇ ಮನೆಯಲ್ಲಿ ಹೇಳಿದ್ದಾರೆಂದೋ, ಶಿಕ್ಷಕರು ಒತ್ತಾಯಿಸುತ್ತಾರೆಂದೋ ಯಾಂತ್ರಿಕವಾಗಿ ಕೆಲಸ ಮಾಡುವ ಬದಲು ತಮ್ಮ ಇಚ್ಛೆಯನ್ನು ಅದರಲ್ಲಿ ಹೊಂದುತ್ತಾರೆ. ಯಾರೋ ಹೇಳಿದ್ದಾರೆಂದು ಏನೋ ಮಾಡುವುದಕ್ಕಿಂತ ತಮ್ಮ ಇಚ್ಛೆಯಿಂದ ಆ ಕೆಲಸ ಮಾಡುವುದರಲ್ಲಿ ವೌಲ್ಯವೂ ಇರುತ್ತದೆ ಮತ್ತು ಅದರ ಫಲವೂ ಉತ್ತಮವಾಗಿರುತ್ತದೆ.

ಸಂಕಲ್ಪದ ವಿಧಗಳು

ಮಕ್ಕಳಿಗೆ ಮೊದಲು ಸಂಕಲ್ಪಗಳಲ್ಲಿ ಇರುವ ವಿಧಗಳನ್ನು ತಿಳಿಸಿದರೆ ಅವರಿಗೆ ತಾವು ಯಾವ ಯಾವ ಬಗೆಯ ಸಂಕಲ್ಪಗಳನ್ನು ಮಾಡಿಕೊಳ್ಳಬಹುದೆಂದು ತಿಳಿಸಿದಂತಾಗುತ್ತದೆ.

ವ್ಯಕ್ತಿಗತವಾದ ಸಂಕಲ್ಪಗಳು: ಇದರಲ್ಲಿ ದಿನವೂ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳುತ್ತೇನೆ, ವ್ಯಾಯಾಮ ಮಾಡುತ್ತೇನೆ, ಇಂತಿಷ್ಟು ಸಮಯ ಖಂಡಿತ ಓದುತ್ತೇನೆ, ಕೆಲಸವನ್ನು ಮುಂದೂಡುವುದಿಲ್ಲ, ನನ್ನ ಕೋಣೆಯ, ವಾಹನದ ಸ್ವಚ್ಛತೆ ಕಾಪಾಡುತ್ತೇನೆ, ದೇಹದ ತೂಕ ಇಳಿಸುತ್ತೇನೆ; ಇತ್ಯಾದಿ ಹತ್ತು ಹಲವು. ಇದರಲ್ಲಿ ಕೆಲಸವನ್ನು ನಿಯಮಿತಗೊಳಿಸಿಕೊಂಡು, ಶಿಸ್ತನ್ನು ರೂಢಿಸಿಕೊಂಡು ತನ್ನ ವ್ಯಕ್ತಿತ್ವದ, ಬದುಕಿನ ಮತ್ತು ವೃತ್ತಿಪರತೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಸಂಕಲ್ಪವೆನ್ನುವುದೇ ವ್ಯಕ್ತಿಗತವಾಗಿರುವುದು. ಆದರೆ ಅವುಗಳಲ್ಲಿ ಕೆಲವೊಂದನ್ನು ಬಹಿರಂಗವಾಗಿ ಹೇಳಲಾಗುವುದಿಲ್ಲ.

ಖಾಸಗಿ ಸಂಕಲ್ಪಗಳು: ಕೆಲವೊಂದು ನಮ್ಮದೇ ದೋಷಗಳನ್ನು ನಾವು ತಿಳಿದಿರುತ್ತೇವೆ. ಅವುಗಳು ಹೊರಗಿನ ಜನಕ್ಕಿರಲಿ, ಮನೆಯವರಿಗೂ ತಿಳಿದಿರುವುದಿಲ್ಲ. ಅವುಗಳಲ್ಲಿ ಗುಪ್ತದ್ವೇಷ ಮತ್ತು ಅಸೂಯೆಗಳಿರಬಹುದು, ಸುಪ್ತಕಾಮನೆಗಳಿರಬಹುದು. ಕೆಲವೊಮ್ಮೆ ನಾವೇ ಒಪ್ಪದ ನಮ್ಮ ಚಟಗಳಿರಬಹುದು. ಇವುಗಳನ್ನು ಹೊರಗೆ ಹೇಳದಿದ್ದರೂ ಅದರ ನಿವಾರಣೆಗೆ ಸಂಕಲ್ಪ ಮಾಡಿಕೊಂಡು ಕೆಲಸ ಮಾಡುವುದರಿಂದ ಮನಸ್ಸು ಮುಕ್ತವಾಗಿ ಆಲೋಚನೆಗಳು ಆರೋಗ್ಯಕರವಾಗಿರಲು ಸಾಧ್ಯ.

ಶೈಕ್ಷಣಿಕ ಸಂಕಲ್ಪಗಳು: ಕಲಿಕೆಯ ಕುರಿತಾಗಿ ಸಾಧಿಸಬೇಕಾದ ಮಟ್ಟಗಳನ್ನು ತಲುಪಲು ಮಾಡುವ ಸಂಕಲ್ಪಗಳು.

ಆರ್ಥಿಕ ಸಂಕಲ್ಪಗಳು: ಈ ವರ್ಷ ವಾಹನ ಕೊಳ್ಳುವ, ಮನೆ ಕಟ್ಟುವಂತಹ ದುಡಿಯುವ ಮಂದಿ ಮಾಡುವಂತಹ ಸಂಕಲ್ಪ. ಆದರೆ ಸ್ವಲ್ಪ ಬೆಳೆದ ಮಕ್ಕಳಿಗೂ ತಮ್ಮದೇ ರೀತಿಯಲ್ಲಿ ಉತ್ಪಾದನೆಗಳನ್ನು ಆರ್ಥಿಕವಾಗಿ ಸ್ಥಿರಗೊಳಿಸಿಕೊಳ್ಳುವ ಯೋಜನೆಗಳನ್ನು ವ್ಯವಸ್ಥೆಗೊಳಿಸಬಹುದು. ಉದಾಹರಣೆಗೆ ತಮ್ಮ ಪೈಂಟಿಂಗ್, ಇತರ ಕಲಾಕೃತಿಗಳನ್ನು ರಚಿಸುವ, ಕರಕುಶಲವಸ್ತುಗಳನ್ನು ತಯಾರಿಸುವ ಅವನ್ನು ಮಾರುವ ದಿಕ್ಕಿನಲ್ಲಿ ಪ್ರೋತ್ಸಾಹಿಸಬಹುದು.

ಸಾಮೂಹಿಕ ಸಂಕಲ್ಪಗಳು: ಮನೆಯಲ್ಲಿ ಕೆಲವು ವಿಷಯಗಳ ಬಗ್ಗೆ ಒಟ್ಟಾಗಿ ನಿರ್ಧಾರವನ್ನು ತೆಗೆದುಕೊಂಡು ಆ ಕೆಲಸವನ್ನು ಸರತಿಯಂತೆ ಮಾಡುವ ಯೋಜನೆ. ಹಾಗೆಯೇ ಶಾಲೆಯಲ್ಲಿ ತಂಡಗಳಲ್ಲಿ ಒಟ್ಟಾರೆ ನಿರ್ಧರಿಸಿ ಕೆಲಸ ಮಾಡುವುದು. ಅವುಗಳು ತೋಟದ ಅಭಿವೃದ್ಧಿಯಾಗಿರಬಹುದು, ಆವರಣದ ಶುಚಿತ್ವವಾಗಿರಬಹುದು, ಅತಿಥಿ ಸತ್ಕಾರವಾಗಿರಬಹುದು, ಮುದ್ದಿನ ಪ್ರಾಣಿಗಳನ್ನು ನೋಡಿಕೊಳ್ಳುವುದಾಗಿರಬಹುದು.

ಸಂಕಲ್ಪ ಮಾಡುವುದು ಹೇಗೆ?

ನಮ್ಮ ಕಳೆದ ದಿನಗಳಲ್ಲಿ ಎದುರಿಸಿರುವ ವೈಫಲ್ಯಗಳನ್ನು ಗುರುತು ಮಾಡಿಕೊಂಡು, ಆ ವೈಫಲ್ಯಗಳನ್ನು ಒಪ್ಪಿಕೊಂಡು ಅದನ್ನು ಈ ಮುಂದಿನ ಸಮಯದಲ್ಲಿ ಸಫಲಗೊಳಿಸಿಕೊಳ್ಳುವ ಸಂಕಲ್ಪ.

ಚಂದ್ರಯಾನ, ಮಂಗಳಯಾನದಂತೆ ಅತಿರೇಕದ, ಪ್ರಾಯೋಗಿಕವಲ್ಲದ ಅತ್ಯುತ್ಸಾಹದ ಸಂಕಲ್ಪಗಳನ್ನು ಮಾಡಿಕೊಳ್ಳುವುದು ಬೇಡ.

ಕೆಲಸಕ್ಕೆ ಸಮಯದ ವಿನಿಯೋಗವನ್ನು ಗಮನದಲ್ಲಿಟ್ಟುಕೊಂಡೇ ಸಂಕಲ್ಪ ಮಾಡಬೇಕು. ಇಲ್ಲವಾದರೆ ಮಾಡಿಕೊಂಡ ಸಂಕಲ್ಪಗಳು ವಿಫಲವಾದ ನಿರಾಶೆಯಿಂದ ಮುಂದೆ ಸಂಕಲ್ಪಗಳನ್ನೇ ಮಾಡಿಕೊಳ್ಳಲಾಗದೇ ಹೋಗಬಹುದು.

ಮಕ್ಕಳಿಗೆ ಅಮೂಲ್ಯ ಮತ್ತು ಅಗತ್ಯ ಎನ್ನಿಸುವುದನ್ನು ಅವರು ಮಾಡಿಕೊಳ್ಳಲಿ. ಇಂತದ್ದನ್ನು ಮಾಡಿಕೋ, ಅಂತದ್ದನ್ನು ಮಾಡಿಕೋ ಎಂದು ನಿರ್ದೇಶನಗಳನ್ನು ಕೊಡುವುದು ಬೇಡ. ಅವರು ಸಲಹೆ, ಸೂಚನೆ ಬಯಸಿದರೆ ಹೇಳಿ. ಆದರೆ ತಾವಾಗಿ ಹಿರಿಯರು ಮಕ್ಕಳಿಗೆ ತಮ್ಮ ಒಲವು ನಿಲುವುಗಳಿಗೆ ತಕ್ಕಂತೆ ಅವರು ಸಂಕಲ್ಪ ಮಾಡುವಂತೆ ಒತ್ತಾಯಿಸಬಾರದು.

ಮುಕ್ತವಾದ ಸಂಕಲ್ಪವಾದರೆ ಎಲ್ಲರಿಗೂ ಹೇಳಿ ಅದಕ್ಕೆ ಸಹಕಾರ ಬಯಸಬಹುದು. ಹಾಗೆಯೇ ತಾವು ಅದನ್ನು ಪಾಲಿಸಲು ಎಡವಿದರೆ, ಮರೆತರೆ ಇತರರು ಎಚ್ಚರಿಸಬಹುದು. ಒಂದು ವೇಳೆ ಗುಪ್ತವಾದ ಸಂಕಲ್ಪವಾದರೆ ತಾವೇ ಎಚ್ಚರದಿಂದ ಅದನ್ನು ಈಡೇರುವಂತೆ ನೋಡಿಕೊಳ್ಳಬೇಕು.

ಆಶಾಭಾವನೆಗಳನ್ನು, ಸಕಾರಾತ್ಮಕ ಧೋರಣೆಗಳನ್ನು, ಒಳಿತಿನ ಆಲೋಚನೆಗಳನ್ನು ಬಲಪಡಿಸುವ, ಜೀವನದ ಗುಣಮಟ್ಟವನ್ನು, ಕಾರ್ಯಕ್ಷಮತೆಯನ್ನು ವೃದ್ಧಿಸುವ, ಬದ್ಧತೆ ಮತ್ತು ಶ್ರದ್ಧೆಯನ್ನು ಗಾಢಗೊಳಿಸುವ ಸಂಕಲ್ಪಗಳನ್ನು ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ಕನಿಷ್ಟ ಪಕ್ಷ ಆರು ವಾರಗಳ ಕಾಲ ಎಚ್ಚರಿಕೆಯಿಂದ ಸಂಕಲ್ಪವನ್ನು ಕಾಪಾಡಿಕೊಂಡರೆ, ಮುಂದೆ ಅದು ಯಶಸ್ವಿಯಾಗಿ ಗುರಿ ಮುಟ್ಟುತ್ತದೆ. ಕೇಡಿನ, ಸೇಡಿನ ಮತ್ತು ಸಂಕುಚಿತವಾದ ಸಂಕಲ್ಪಗಳನ್ನು ಮಾಡಿಕೊಳ್ಳಬಾರದು

ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು ಮತ್ತು ತನ್ನ ದೌರ್ಬಲ್ಯವನ್ನು ಗಮನಿಸಿಕೊಂಡು ಸಂಕಲ್ಪ ಮಾಡಿಕೊಳ್ಳಬೇಕೇ ಹೊರತು, ಯಾರೋ ಒಬ್ಬರ ಮೇಲಿನ ಪೈಪೋಟಿ, ಹಟ ಇತ್ಯಾದಿಗಳನ್ನು ಸಂಕಲ್ಪಗಳು ಆಧರಿಸಿರಬಾರದು. ಸ್ಪರ್ಧೆ ತನ್ನೊಳಗೆ ಇರಬೇಕೇ ಹೊರತು, ಬೇರೆಯವರನ್ನು ತುಳಿಯಲೂ ಅಲ್ಲ, ಮೀರಿಸಲೂ ಅಲ್ಲ.

ಒಟ್ಟಾರೆ ಸಂಕಲ್ಪಗಳನ್ನು ಮಾಡಿಕೊಂಡು, ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವ ಮಾದರಿಯನ್ನು ಹಿರಿಯರು ಮಕ್ಕಳ ಮುಂದಿಡಬೇಕು. ಅವುಗಳು ಎಷ್ಟರಮಟ್ಟಿಗೆ ಈಡೇರುವುದು ಎಂಬುದು ಎರಡನೆಯ ವಿಷಯ. ಆದರೆ, ಇದರಿಂದ ಮಕ್ಕಳು ಹಾಗೂ ಹಿರಿಯರು ಭರವಸೆ, ಆತ್ಮವಿಶ್ವಾಸಗಳೊಂದಿಗೆ ತಮ್ಮ ವ್ಯಕ್ತಿತ್ವ ಮತ್ತು ಕಾರ್ಯವೈಖರಿಯ ಗುಣಮಟ್ಟ ಹೆಚ್ಚಿಸಿಕೊಳ್ಳಲೂ ಅಂತೆಯೇ ಸಾಧಿಸಲೂ ಸಾಧ್ಯ ಎಂಬುದು ಪ್ರಾಥಮಿಕ ಅಂಶ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News