ದೇಶದಲ್ಲಿ ಅರ್ಧದಷ್ಟು ಬಿಸಿಯೂಟ ಕಳಪೆ !

Update: 2020-01-05 03:34 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದ 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುಟ್ಟ ಮಕ್ಕಳಿಗೆ ಪೂರೈಕೆಯಾಗುವ ಅರ್ಧದಷ್ಟು ಬಿಸಿಯೂಟ ಸೂಕ್ತ ಪೌಷ್ಟಿಕ ಮಾನದಂಡಕ್ಕೆ ಅನುಸಾರವಾಗಿಲ್ಲ ಎಂಬ ಆತಂಕಕಾರಿ ಆಂಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಕಳೆದ ನವೆಂಬರ್‌ನಲ್ಲಿ ಇಲಾಖೆ 11 ರಾಜ್ಯಗಳಲ್ಲಿ ಸುಮಾರು 28 ಲಕ್ಷ ಮಕ್ಕಳಿಗೆ ಪೂರೈಕೆಯಾಗುವ 162 ಆಹಾರ ಮಾದರಿ ಗಳನ್ನು ಪರೀಕ್ಷೆಗೆ ಗುರಿಪಡಿಸಿತ್ತು. ಈ ಪೈಕಿ 79 ಮಾದರಿಗಳು ಪೂರಕ ಪೌಷ್ಟಿಕ ಯೋಜನೆ (ಎಸ್‌ಎನ್‌ಪಿ) ಯಡಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಗುಣಮಟ್ಟಕ್ಕೆ ಅನುಸಾರವಾಗಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದ್ದು, ಈ ವರದಿ "ಹಿಂದೂಸ್ತಾನ್ ಟೈಮ್ಸ್"ಗೆ ಲಭ್ಯವಾಗಿದೆ.

ಎನ್‌ಎನ್‌ಪಿ ಯೋಜನೆಯಡಿ ಮೂರು ವರ್ಗದ ಅಂದರೆ 6 ತಿಂಗಳಿನಿಂದ 3 ವರ್ಷ, 3 ರಿಂದ 6 ವರ್ಷ ಹಾಗೂ ಪ್ರಾಥಮಿಕ, ಪೂರ್ವ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಲಾಗುತ್ತದೆ. ಮಧ್ಯಾಹ್ನದೂಟ ಹಾಗೂ ಉಚಿತವಾಗಿ ಮನೆಗೆ ಪಡಿತರ ವಿತರಿಸುವ ವ್ಯವಸ್ಥೆ ಇದೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬಿಸಿಯೂಟ ಹೆಸರಿನಲ್ಲಿ ಕೇವಲ ಗಂಜಿ ಮತ್ತು ಉಪ್ಪು ವಿತರಿಸಲಾಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಇಲಾಖೆ ಈ ದೇಶವ್ಯಾಪಿ ಸಮೀಕ್ಷೆ ನಡೆಸಿತ್ತು.

ಎನ್‌ಎನ್‌ಪಿ ಮಾರ್ಗಸೂಚಿ ಅನ್ವಯ, ಆರು ತಿಂಗಳಿಂದ ಮೂರು ವರ್ಷದವರೆಗಿನ ಮಕ್ಕಳ ಮನೆಗಳಿಗೆ ಪಡಿತರ ಪೂರೈಸಲಾಗು ತ್ತದೆ. ಮೂರರಿಂದ ಆರು ವರ್ಷದ ಮಕ್ಕಳಿಗೆ ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನಕ್ಕೆ ಬಿಸಿಯೂಟ ಒದಗಿಸಲಾಗುತ್ತದೆ. ಇದರಲ್ಲಿ ಕನಿಷ್ಠ 500 ಕಿಲೋಕ್ಯಾಲರಿ ಹಾಗೂ 12-15 ಗ್ರಾಂ ಪ್ರೊಟೀನ್ ಇರಬೇಕು. ಆರು ತಿಂಗಳಿನಿಂದ ಆರು ವರ್ಷ ವರೆಗಿನ ಅಪೌಷ್ಟಿಕ ಮಕ್ಕಳಿಗೆ 800 ಕಿಲೋಕ್ಯಾಲರಿ ಹಾಗೂ 20-25 ಗ್ರಾಂ ಪ್ರೊಟೀನ್ ನೀಡಬೇಕು. ಈ ಎರಡು ವರ್ಗದ ಮಕ್ಕಳ ಪ್ರತಿ ಊಟಕ್ಕಾಗಿ ಸರ್ಕಾರಗಳು ಕ್ರಮವಾಗಿ 8 ರೂ. ಹಾಗೂ 12 ರೂ. ವೆಚ್ಚ ಮಾಡಬೇಕು.

ದೆಹಲಿ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಪಂಜಾಬ್, ಛತ್ತೀಸ್‌ಗಢ, ಚಂಡೀಗಢ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಮೇಘಾಲಯದಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ ಕಿಲೋಕ್ಯಾಲರಿ ಹಾಗೂ ಪ್ರೊಟೀನ್ ಎರಡೂ ಮಾನದಂಡಗಳಲ್ಲಿ ಬಹುತೇಕ ಮಾದರಿಗಳು ಕಳಪೆಯಾಗಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News