ಸಿಎಎ ಪ್ರತಿಭಟನಾಕಾರರನ್ನು ಜೈಲಿಗೆ ಕಳುಹಿಸಿದ್ದಕ್ಕೆ ಕ್ಷಮೆ ಯಾಚಿಸಿ: ಉ.ಪ್ರ.ಸರಕಾರಕ್ಕೆ ಮಾಯಾವತಿ ಆಗ್ರಹ

Update: 2020-01-05 17:33 GMT

ಲಕ್ನೋ, ಜ.5: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನಾಕಾರರನ್ನು ಯಾವುದೇ ತನಿಖೆ ನಡೆಸದೆ ಜೈಲಿಗೆ ತಳ್ಳಿದ್ದಕ್ಕಾಗಿ ಸಾರ್ವಜನಿಕರ ಕ್ಷಮೆ ಯಾಚಿಸುವಂತೆ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ರವಿವಾರ ಉತ್ತರ ಪ್ರದೇಶ ಸರಕಾರವನ್ನು ಆಗ್ರಹಿಸಿದ್ದಾರೆ.

ಸರಕಾರದ ಕ್ರಮವು ನಾಚಿಗೆಗೇಡಿನದು ಮತ್ತು ಖಂಡನೀಯ ಎಂದೂ ಅವರು ಟ್ವೀಟ್‌ನಲ್ಲಿ ಬಣ್ಣಿಸಿದ್ದಾರೆ.

ಲಕ್ನೋದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಸದಫ್ ಜಾಫರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಮತ್ತು ಇತರ 13 ಜನರಿಗೆ ಶನಿವಾರ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಮಾಯಾವತಿಯವರ ಹೇಳಿಕೆ ಹೊರಬಿದ್ದಿದೆ.

ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮತ್ತು ಪ್ರತಿಭಟನೆಗಳಲ್ಲಿ ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ನ್ಯಾಯಯುತ ಪರಿಹಾರವನ್ನು ಒದಗಿಸುವಂತೆಯೂ ಮಾಯಾವತಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

 ಬಿಎಸ್‌ಪಿ ನಿಯೋಗವೊಂದು ಸೋಮವಾರ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆದ ಘರ್ಷಣೆಗಳ ಕುರಿತು ನ್ಯಾಯಾಂಗ ವಿಚಾರಣೆಯನ್ನು ಕೋರಿ ಅಹವಾಲು ಸಲ್ಲಿಸಲಿದೆ ಎಂದು ಮಾಯಾವತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News